ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ; ಒಂದೇ ವಾರದಲ್ಲಿ ದಿನ ಬಿಟ್ಟು ದಿನ 3 ಮಕ್ಕಳು ಹೃದಯಾಘಾತದಿಂದ ಸಾವು

Heart Attack
Published on

ಶಿವಮೊಗ್ಗ: ದೇಶಾದ್ಯಂತ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಇಂದು ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಬರೀ ನಾಲ್ಕು ದಿನಗಳಲ್ಲೇ ಮೂವರು ಚಿಕ್ಕ ಮಕ್ಕಳು ಹೃದಯಾಘಾತದಿಂದ ಸತ್ತಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಹೋಬಳಿ ಎಣ್ಣೆಕೊಪ್ಪ ಗ್ರಾಮದಲ್ಲಿ ಈ ಸಾವು ಸಂಭವಿಸಿದೆ. ಆನವಟ್ಟಿ ಜೂನಿಯರ್ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಬಾಲಕ. ಇಂದು ಬೆಳಗ್ಗೆ ಮನೆಯಲ್ಲಿ ಶಾಲೆಗೆ ರೆಡಿಯಾಗುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡ ಈತನನ್ನು ಕೂಡಲೇ ಎಣ್ಣೆಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಬಾಲಕ ಹೃದಯಾಘಾತದಿಂದಾಗಿ ಸಾವಿಗೀಡಾಗಿದ್ದ ಎಂದು ಡಾ.ಸುಭಾಷ್​​ಚಂದ್ರ ಖಚಿತಪಡಿಸಿದ್ದರು.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ನಿವಾಸಿ, ಕೊಪ್ಪದ ಭಾರತಮಾತ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೀರ್ತನ್ (12) ಜ. 7ರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದ. ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್​ನ ಕೃಷ್ಣಾಪುರ 7ನೇ ಬ್ಲಾಕ್​ ನಿವಾಸಿ ಅಬ್ದುಲ್​ ರೆಹಮಾನ್​ ಎಂಬುವರ ಪುತ್ರ, 8ನೇ ತರಗತಿ ವಿದ್ಯಾರ್ಥಿ ಮೊಹಮದ್​ ಹಸೀನ್​(14) ಸೋಮವಾರ(ಜ.9) ಬೆಳಗ್ಗೆ ಶಾಲೆಗೆ ಹೊರಡಲೆಂದು ಸಿದ್ಧವಾಗಿದ್ದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಹಸೀನ್​ನನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಹೀಗೆ ಇದೊಂದು ವಾರದಲ್ಲೇ ದಿನ ಬಿಟ್ಟು ದಿನ ಒಬ್ಬರಂತೆ ಚಿಕ್ಕಮಕ್ಕಳು ಹೃದಯಾಘಾತಕ್ಕೆ ಒಳಗಾಗಿ ಸತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net