

ತುಮಕೂರು: ಮೊನ್ನೆಮೊನ್ನೆಯಷ್ಟೇ ಯಕ್ಷಗಾನ ಕಲಾವಿದರು ರಂಗಸ್ಥಳದಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಇಂದು ವ್ಯಕ್ತಿಯೊಬ್ಬರು ಮೈದಾನದಲ್ಲಿ ಆಡುತ್ತಿರುವಾಗ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಆತಂಕವನ್ನು ಮೂಡಿಸಿದೆ.
ಬೆಂಗಳೂರು ಭುವನೇಶ್ವರಿ ನಗರ ನಿವಾಸಿ ರಮೇಶ್ಕುಮಾರ್ (36) ಎಂಬಾತ ಮೃತಪಟ್ಟ ವ್ಯಕ್ತಿ. ರಮೇಶ್ಕುಮಾರ್ ಹಾಗೂ ಅವರ ತಂಡ ಕ್ರಿಕೆಟ್ ಆಟಡಲೆಂದು ಪಟ್ಟಣದ ಹೊರ ವಲಯದ ಗಿರಿಗೌಡನಪಾಳ್ಯ ಮೈದಾನಕ್ಕೆ ಇಂದು ಬಂದಿದ್ದು, ಕ್ರಿಕೆಟ್ ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ರಮೇಶ್ಕುಮಾರ್ ಬ್ಯಾಟಿಂಗ್ ಮಾಡಿ ರನ್ಗಾಗಿ ಓಡುವ ವೇಳೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದರು. ಕೂಡಲೇ ಸಹ ಆಟಗಾರರು ರಕ್ಷಣೆಗೆ ಧಾವಿಸಿದ್ದರು. ಆದರೆ ಅಷ್ಟರಲ್ಲಿ ರಮೇಶ್ಕುಮಾರ್ ಮೃತಪಟ್ಟಿದ್ದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.