ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

heart feb 17 2020
Published on

ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಇದೇ ವಿಚಾರವಾಗಿ ಸಮೀಕ್ಷೆಯೊಂದು ನಡೆದಿದ್ದು, ಅದರ ಫಲಿತಾಂಶ ಮತ್ತಷ್ಟು ಆತಂಕವನ್ನು ಉಂಟಾಗಿಸಿದೆ.

ಲೋಕಲ್​ಸರ್ಕಲ್​ ಎಂಬ ಕಮ್ಯುನಿಟಿ ಸೋಷಿಯಲ್ ಮೀಡಿಯಾ ಪ್ಲ್ಯಾಟ್​ಫಾರ್ಮ್​ ಭಾರತದಲ್ಲಿ ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 51ರಷ್ಟು ಮಂದಿಯ ಆಪ್ತವರ್ಗದಲ್ಲಿನ ಒಬ್ಬರು ಅಥವಾ ಹೆಚ್ಚು ಮಂದಿ ಕಳೆದ 2 ವರ್ಷಗಳಿಂದ ಈಚೆಗೆ ಹೃದಯ, ಬ್ರೇನ್​ಸ್ಟ್ರೋಕ್​, ನರಸಂಬಂಧಿತ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ, ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಈ ಪ್ರಮಾಣ ಶೇ. 31ರಿಂದ ಶೇ. 51ಕ್ಕೆ ಹೆಚ್ಚಳಗೊಂಡಿದೆ ಎಂಬುದು ಸಮೀಕ್ಷೆಯಲ್ಲಿ ಬಯಲಾಗಿದೆ.

ಈ ಅನಾರೋಗ್ಯಕ್ಕೆ ಒಳಗಾದವರ ಪೈಕಿ ಕೋವಿಡ್​ ಬಾಧಿತರು, ಬಾಧಿತರಲ್ಲದವರು ಹಾಗೂ ಲಸಿಕೆ ಪಡೆದವರೂ ಇದ್ದಾರೆ. ಆದರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 62 ಜನರ ಆಪ್ತವರ್ಗದಲ್ಲಿ ಅನಾರೋಗ್ಯಕ್ಕೆ ಒಳಗಾದವರು ಎರಡೂ ಡೋಸ್ ಲಸಿಕೆ ತೆಗೆದುಕೊಂಡಿರುವವರು ಎಂಬ ಅಂಶ ಕಂಡುಬಂದಿದೆ. ಇನ್ನು ಸಿಂಗಲ್​ ಡೋಸ್ ಪಡೆದವರಲ್ಲಿ ಈ ಪ್ರಮಾಣ ಶೇ. 11 ಹಾಗೂ ಲಸಿಕೆ ಪಡೆಯದೇ ಇದ್ದವರಲ್ಲಿ ಶೇ. 8 ಎಂದೂ ಈ ಸಮೀಕ್ಷೆ ಬಹಿರಂಗಪಡಿಸಿದೆ.

ಅಲ್ಲದೆ ಸಮೀಕ್ಷೆಯಲ್ಲಿನ ಶೇ. 61 ಮಂದಿ ಹೇಳುವ ಪ್ರಕಾರ ಅನಾರೋಗ್ಯಕ್ಕೆ ತುತ್ತಾದ ಆಪ್ತವರ್ಗದವರು ಒಮ್ಮೆಯಾದರೂ ಕೋವಿಡ್​ಗೆ ಒಳಗಾಗಿದ್ದರು. ಕೋವಿಡ್​ಗೆ ಒಳಗಾಗದೆ ಈ ಥರ ಅನಾರೋಗ್ಯಕ್ಕೆ ತುತ್ತಾದವರೂ ಆಪ್ತವರ್ಗದಲ್ಲಿ ಇದ್ದಾರೆ ಎಂದು ಶೇ. 28 ಮಂದಿ ಹೇಳಿಕೊಂಡಿದ್ದಾರೆ. ದೇಶದ 357 ಜಿಲ್ಲೆಗಳಲ್ಲಿನ 32 ಸಾವಿರ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು ಲೋಕಲ್​ಸರ್ಕಲ್​ ಹೇಳಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net