ಮೊದಲ ಪತಿಯ ಮರಣದ ಬಳಿಕ ಎರಡನೇ ಮದುವೆಯಾಗಿದ್ದಕ್ಕೆ ಸಾರ್ವಜನಿಕವಾಗಿ ಥಳಿಸಿ ತಲೆ ಬೋಳಿಸಿದ್ರು!

Crime
Published on

ಗಾಂಧಿನಗರ: ಮಹಿಳೆಗೆ ಮದುವೆಯಾಗಿ ಗಂಡ ಇರುವಾಗಲೇ ಕಿರುಕುಳ ಎದುರಿಸಬೇಕಾದ ಪ್ರಸಂಗ ಅದೆಷ್ಟೋ ಸಲ ಬಂದಿರುತ್ತದೆ. ಇನ್ನು ಪತಿ ತೀರಿ ಹೋದರೆಂದರೆ ಆ ಪರಿಸ್ಥಿತಿ ಊಹಿಸಿಕೊಳ್ಳಲಿಕ್ಕೂ ಭಯಂಕರವಾಗಿರುತ್ತದೆ. ಅಂಥ ಒಂದು ಭಯಂಕರ ತೊಂದರೆಯನ್ನು ಮಹಿಳೆಯೊಬ್ಬಳು ತನ್ನ ಸಂಬಂಧಿಕರಿಂದಲೇ ಅನುಭವಿಸಬೇಕಾಗಿ ಬಂದ ಪ್ರಕರಣವೊಂದು ನಡೆದಿದೆ.

ಗುಜರಾತ್​ನ ಅಮ್ರೇಲಿ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಭಾರಿ ಸಂಕಷ್ಟವನ್ನು ಎದುರಿಸಿದ್ದಾಳೆ. ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಆಕೆಗೆ ಗಂಡನ ಮನೆಯರು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ, ತಲೆಯನ್ನು ಬೋಳಿಸಿ ಅವಮಾನಕ್ಕೊಳಪಡಿಸಿದ ದೌರ್ಜನ್ಯ ನಡೆಸಿದ್ದಾರೆ. ಅಷ್ಟಕ್ಕೂ ಆಕೆಗೆ ಈ ಎಲ್ಲ ಕಷ್ಟವನ್ನು ಅವರು ನೀಡಿದ್ದು ಎರಡನೇ ಮದುವೆಯಾದಳು ಎಂಬ ಒಂದೇ ಕಾರಣಕ್ಕಾಗಿ.

35 ವರ್ಷದ ಈ ಮಹಿಳೆಯ ಪತಿ ತೀರಿಹೋಗಿದ್ದು, ಈಕೆ ಎರಡನೇ ಮದುವೆಯಾಗಿದ್ದಳು. ಮೊದಲ ಪತಿಯಿಂದ ಈಕೆಗೆ ನಾಲ್ವರು ಮಕ್ಕಳಿದ್ದು, ಆ ಪೈಕಿ ಒಬ್ಬರ ಆರೈಕೆಯನ್ನು ತನ್ನ ಮೊದಲ ಗಂಡನ ಮನೆಯವರಲ್ಲಿ ಮಾಡಲು ಕೋರಿಕೊಂಡಿದ್ದಳು. ಆದರೆ ಮೊದಲ ಗಂಡನ ಮನೆಯವರು ಇದರಿಂದ ಸಿಟ್ಟಿಗೆದ್ದು, ಆಕೆಯನ್ನು ಬಹಿರಂಗವಾಗಿ ಥಳಿಸಿ, ತಲೆಯನ್ನು ಬೋಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net