More

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಬೆಂಗಳೂರು: ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಎದೆನೋವು ಕಾಣಿಸಿಕೊಂಡು ನಟ ಪುನೀತ್​ ರಾಜ್​ಕುಮಾರ್​ ಹೃದಯಸ್ತಂಭನದಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಶನಿವಾರ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗಲೇ 35 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಜಿಮ್​ಗೆ ಹೋಗುವವರಲ್ಲಿ ಆತಂಕ ಹೆಚ್ಚಿಸಿದೆ.

    ಮಂಗಳೂರು ಮೂಲದ ವಿನಯಾ ವಿಠಲ್​ (35) ಮೃತ ಮಹಿಳೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅವಿವಾಹಿತೆಯಾಗಿದ್ದ ವಿನಯಾ, ಮಲ್ಲೇಶಪಾಳ್ಯದ ಬಾಡಿಗೆ ಮನೆಯಲ್ಲಿ 2 ವರ್ಷದಿಂದ ಒಂಟಿಯಾಗಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಹಿನ್ನೆಲೆ ದೃಢೀಕರಣ ವಿಭಾಗದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನೆಯ ಸಮೀಪದ ಚಾಲೆಂಜ್​ ಹೆಲ್ತ್​ ಕ್ಲಬ್​ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದರು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೋಗಿ 8 ಗಂಟೆಗೆ ವಾಪಸ್​ ಬಂದು ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಶನಿವಾರ ಸಹ ಜಿಮ್​ನಲ್ಲಿ ಭಾರ ಎತ್ತುವ ವರ್ಕೌಟ್​ ಮಾಡುವಾಗಲೇ ಕುಸಿದು ಬಿದ್ದಿದ್ದಾರೆ. ಜಿಮ್​ನಲ್ಲಿದ್ದವರು ಕೂಡಲೇ ಆಕೆಗೆ ಪ್ರಾಥಮಿಕ ಆರೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಮಾರ್ಗಮಧ್ಯೆಯಲ್ಲಿಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಜಿಮ್​ಗೆ ಹೋಗುವವರಲ್ಲಿ ಆತಂಕ ಸಹಜವಾಗಿಯೇ ಮೂಡಿದೆ. ಈ ಸಂದರ್ಭದಲ್ಲಿ ವೈದ್ಯರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

    ವೈದ್ಯರು ಹೇಳೋದೇನು?: ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮ, ಮಧುಮೇಹ, ಅಧಿಕ ರಕ್ತದ ಒತ್ತಡ, ಧೂಮಪಾನ, ಬೊಜ್ಜು ಹೃದಯಾಘಾತ ಹಾಗೂ ಹೃದಯ ಸಮಸ್ಯೆಗಳಿಗೆ ಕಾರಣವಾದರೆ. ಹೃದಯಾಘಾತ, ಹೃದಯದ ರಕ್ತನಾಳ ಹಾಗೂ ಮಿದುಳು ರಕ್ತನಾಳ ಏಕಾಏಕಿ ಒಡೆಯುವುದು ಮತ್ತು ಜನ್ಮಜಾತ ಹೃದಯ (ಹೈಪಟ್ರೋರ್ಫಿಕ್​ ಅಬ್ಸ್​ಟ್ರಾಕ್ಟಿವ್​ ಕಾಡಿರ್ಯೊಮಯೋಪಥಿ) ಸಮಸ್ಯೆಗಳು, ಅನಿಯಂತ್ರಿತ ಹೃದಯ ಬಡಿತ, ಹೃದಯ ಸ್ತಂಭನಕ್ಕೆ ಕಾರಣವಾಗಿವೆ. ಇವಲ್ಲದೆ ಅನಿಯಂತ್ರಿದ ಮಧುಮೇಹ ಹಾಗೂ ರಕ್ತದ ಒತ್ತಡ, ಅತಿಯಾದ ಬೊಜ್ಜು ಸಹ ಕೆಲವೊಮ್ಮೆ ಕಾರಣವಾಗಲಿವೆ. ಇವುಗಳಲ್ಲಿ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣ ಹೃದಯಾಘಾತವೇ ಆಗಿದೆ. ಮಿದುಳಿನ ರಕ್ತನಾಳ ಹಾಗೂ ಹೃದಯದ ರಕ್ತನಾಳ (ಐಯೋಟ) ದುರ್ಬಲಗೊಂಡು ಒಡೆದು ಹೋದರೆ ದೇಹದಲ್ಲಿ ಸಮಪರ್ಕವಾಗಿ ರಕ್ತಚಲನೆ ಆಗದೆ, ಹೃದಯಕ್ಕೆ ಆಮ್ಲಜನಕ ಪೂರೈಕೆಯಾಗದೆ 1-2 ನಿಮಿಷಗಳಲ್ಲೇ ರೋಗಿಯ ಸಾವು ಸಂಭವಿಸುತ್ತದೆ. ಇದು ಹೃದಯಾಘಾತ ಆದವರಲ್ಲಿ ಹೆಚ್ಚಿರುತ್ತದೆ ಎಂದು ಎಂ.ಎಸ್​. ರಾಮಯ್ಯ ನಾರಾಯಣ ಹೃದಯ ಕೇಂದ್ರದ ಸೀನಿಯರ್​ ಕನ್ಸಲ್ಟೆಂಟ್​ ಹಾಗೂ ಹೃದಯ ತಜ್ಞ ಡಾ. ನಾಗಮಲೇಶ್​ ತಿಳಿಸಿದ್ದಾರೆ. ದೇಹವನ್ನು ಸದೃಢವಾಗಿಡಲು ವರ್ಕ್​ಔಟ್​ ಅಗತ್ಯವಿದೆ. ಜಿಮ್​ನಲ್ಲಿ ವರ್ಕ್​ಔಟ್​ ಮಾಡುವುದರಿಂದ ಹೃದಯಾಘಾತ ಇಲ್ಲವೆ ಹೃದಯ ಸ್ತಂಭನ ಆಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದೂ ಅವರು ಹೇಳಿದ್ದಾರೆ.

    ಸಲಹೆ ಮೇರೆಗೆ ವರ್ಕ್​ಔಟ್​ ಮಾಡಿ: ಆರೋಗ್ಯವಾಗಿದ್ದವರು ಜಿಮ್​ ವರ್ಕ್​ಔಟ್​ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ಹೃದಯ ಸಂಬಂಧಿ ಕಾಯಿಲೆಗಳಿದ್ದವರು, ವೈದ್ಯರ ಸಲಹೆ ಮೇರೆಗೆ ವರ್ಕ್​ಔಟ್​ ಮಾಡಬೇಕಾಗುತ್ತದೆ. ಅತಿಯಾದ ರಕ್ತದ ಒತ್ತಡ ಇದ್ದವರು ವರ್ಕ್​ಔಟ್​ ಮಾಡಿದರೆ ಬ್ಲಡ್​ ಪ್ರೆಶರ್​ ಇನ್ನಷ್ಟು ಹೆಚ್ಚಾಗಿ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಹೊಸದಾಗಿ ಜಿಮ್​ಗೆ ಸೇರುವವರು ತರಬೇತುದಾರರ ಸಲಹೆ ಮೇರೆಗೆ ಹಂತಹಂತವಾಗಿ ವರ್ಕ್​ಔಟ್​ ಮಾಡಬೇಕು ಎಂದು ಕೋರಮಂಗಲದ ಜಿಮ್​ ತರಬೇತುದಾರ ಆಶೀಶ್​ ಶೆಟ್ಟಿ ಹೇಳಿದ್ದಾರೆ.

    ಹೃದಯದ ಆರೋಗ್ಯಕ್ಕೆ ಸಲಹೆ
    * ಧೂಮಪಾನ, ಮದ್ಯಪಾನದಿಂದ ದೂರ ಇರಬೇಕು.
    * ಮಧುಮೇಹ ರಕ್ತದೊತ್ತಡ ಇದ್ದರೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
    * ಕೆಂಪು ಮಾಂಸ, ಎಣ್ಣೆಯಲ್ಲಿ ಕರಿದ ಪದಾರ್ಥ, ಬೇಕರಿ ಪದಾರ್ಥಗಳ ಹೆಚ್ಚು ಸೇವನೆ ಒಳಿತಲ್ಲ.
    * ತಾಜಾ ಹಣ್ಣು, ತರಕಾರಿ, ಸೊಪ್ಪು, ಬೇಳೆ ಕಾಳುಗಳು, ಮೊಟ್ಟೆ, ಮೀನು, ಚಿಕನ್​ ಸೇವನೆ ಉತ್ತಮ.
    * ದೇಹದ ಬಿಎಂಐ 18 -24 ಹೊಂದಿರಬೇಕು.
    * ಮಧುಮೇಹಿಗಳಲ್ಲಿ ಎಚ್​ಬಿಎ1ಸಿ 7 ಇರಬೇಕು.
    * ರಕ್ತದೊತ್ತಡ (ಬಿಪಿ) 140/90 ಇರಬೇಕು.

    ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

    ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts