ಅ.ನ.ಕೃಷ್ಣರಾಯರ ಮೇರುಕೃತಿ ವಿಜಯನಗರ ಸಾಮ್ರಾಜ್ಯದಲ್ಲೊಂದು ರೋಚಕ ಪ್ರಸಂಗ..
ಹಿಂದು ಹೃದಯ ಸಾಮ್ರಾಟ ಶ್ರೀ ಕೃಷ್ಣದೇವರಾಯರು ಒಮ್ಮೆ ವ್ಯಾಸತೀರ್ಥರ ಅನುಗ್ರಹ ಪಡೆಯಲು ಶ್ರೀಮಠಕ್ಕೆ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ವ್ಯಾಸರಾಯರು ನರಸಿಂಹ ಶರ್ಮ ಎಂಬ ಬ್ರಾಹ್ಮಣನನ್ನು ಮಹಾರಾಜನಿಗೆ ಪರಿಚಯಿಸುತ್ತಾರೆ. ‘ಹೊಯ್ಸಳ ನಾಡಿನಿಂದ ಬಂದಿರುವ ಈ ಬ್ರಾಹ್ಮಣನಿಗೆ ಶ್ರೀಲಕ್ಷ್ಮೀ ಸಮೇತ ನರಸಿಂಹ ದೇವರ ವಿಗ್ರಹ ಪ್ರತಿಷ್ಠಾಪಿಸಬೇಕೆಂದು ಕನಸಿನಲ್ಲಿ ಪ್ರೇರಣೆಯಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ನರಸಿಂಹ ದೇಗುಲ ರಕ್ಷಾಕವಚವಾಗಲಿದೆ. ನೀವು ಅವಕಾಶ ಮಾಡಿಕೊಡಬೇಕು’ ಎಂದು ಯತಿಗಳು ಸೂಚಿಸುತ್ತಾರೆ.
ನೀವು ವೃತ್ತಿಪರ ಶಿಲ್ಪಕಾರರೇ? ಹಿಂದೆ ಯಾವ ಶಿಲ್ಪ ಕೆತ್ತಿದ್ದೀರಿ ಎಂದು ಅರಸರು ಪ್ರಶ್ನಿಸುತ್ತಾರೆ. ‘ನಿಮ್ಮ ದೈವಪ್ರೇರಣೆಗೆ ನಮ್ಮ ಸಹಮತವಿದೆ. ಆದರೆ, ಶಿಲ್ಪಕಲೆಯಲ್ಲಿ ಪ್ರಾವೀಣ್ಯವಿಲ್ಲದ ನಿಮ್ಮಿಂದ ವಿಗ್ರಹ ವಿರೂಪಗೊಂಡು ನರಸಿಂಹ ದೇವರಿಗೆ ಅಪಚಾರವಾದರೆ, ನಮ್ಮ ಸಾಮ್ರಾಜ್ಯಕ್ಕೆ ಕೆಡುಕಾದೀತು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಆಗ ವ್ಯಾಸತೀರ್ಥರು ಮಧ್ಯಪ್ರವೇಶಿಸಿ, ‘ನಿಮ್ಮ ಅನುಮಾನ ತಪ್ಪಲ್ಲ, ಆದರೆ, ಈ ವಿಪ್ರ ಗುರಿ ಸಾಧಿಸುವ ವಿಶ್ವಾಸ ನಮಗಿದೆ. ಅನುಮತಿ ನೀಡಿ’ ಎಂದು ಭರವಸೆ ನೀಡುತ್ತಾರೆ. ಅಂದುಕೊಂಡಂತೆ ಭವ್ಯ ವಿಗ್ರಹ ನಿರ್ವಿುಸಿದರೆ ನಿಮಗೆ ಸ್ವರ್ಣಪೂಜೆ ಮಾಡುತ್ತೇನೆ ಎಂದು ಮಹಾರಾಜರು ಆಶ್ವಾಸನೆ ನೀಡುತ್ತಾರೆ. ‘ಒಂದು ಮಂಡಲ (ಹುಣ್ಣಿಮೆಯಿಂದ ಹುಣ್ಣಿಮೆಗೆ ಒಂದು ತಿಂಗಳು, ತದನಂತರದ ಏಕಾದಶಿವರೆಗೆ ಹನ್ನೊಂದು ದಿನ, ಒಟ್ಟು 41 ದಿನ) ಅವಧಿಯಲ್ಲಿ ವಿಗ್ರಹ ಪೂರ್ಣಗೊಳಿಸದಿದ್ದರೆ ನಾನು ಮರಣದಂಡನೆ ಅನುಭವಿಸುತ್ತೇನೆ’ ಎಂದು ಬ್ರಾಹ್ಮಣ ನುಡಿಯುತ್ತಾನೆ.
ಇದನ್ನೂ ಓದಿ: ಸವ್ಯಸಾಚಿ ಅಂಕಣ | ರತ್ನಸಿಂಹಾಸನದ ರಕ್ತಚರಿತ್ರೆಯ ಸಿಂಹಾವಲೋಕನ
ವೈಶಾಖ ಶುದ್ಧ ಚತುರ್ದಶಿ ನರಸಿಂಹ ಜಯಂತಿಯಂದು ವಿಗ್ರಹದ ಕೆತ್ತನೆ ಆರಂಭವಾಗುತ್ತದೆ. 30 ಅಡಿಯ ಬಂಡೆಯೊಂದನ್ನು ಆರಿಸಿಕೊಂಡು ಅದರ ಸುತ್ತ ತಗಡಿನ ತಡಿಕೆ ನಿರ್ವಿುಸಿ ನರಸಿಂಹ ಶರ್ಮ ಕೆಲಸ ಆರಂಭಿಸುತ್ತಾನೆ. ಆ ಪ್ರದೇಶದ ಒಳಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ. ಆದರೆ, ಕುತೂಹಲಕ್ಕೆ ಬಂದುಹೋಗುವವರ ಸಂಖ್ಯೆ ಹೆಚ್ಚುತ್ತದೆ. ಉಳಿಯಿಂದ ಕಲ್ಲನ್ನು ಕಟೆಯುವ ಕಟ್ ಕಟ್ ಎಂಬ ಶಬ್ದ ಬಿಟ್ಟರೆ ಬೇರೇನೂ ಗೊತ್ತಾಗುತ್ತಿಲ್ಲ. ಹಗಲೂ ರಾತ್ರಿ ಅದೇ ಶಬ್ದ. ಕೆಲವೊಮ್ಮೆ ಇಬ್ಬರು ಕೆತ್ತಿದಂತೆ ಸಪ್ಪಳ. ಆದರೆ, ಯಾರೂ ಒಳಪ್ರವೇಶಿಸಬಾರದೆಂಬ ರಾಜಾಜ್ಞೆ. ಹಾಗಾಗಿ ಯಾರಿಗೂ ಒಳಗೆ ಹೋಗಿ ನೋಡುವ ಧೈರ್ಯವಿಲ್ಲ. ಕೊನೆಗೂ ಜೇಷ್ಠ ಮಾಸ ಬಹುಳ ದಶಮಿ ದಿನ ಕಟ್ ಕಟ್ ಶಬ್ದ ನಿಂತುಹೋಗುತ್ತದೆ. ಮಾರನೇ ದಿನವೇ ಏಕಾದಶಿ. ವ್ಯಾಸತೀರ್ಥರು, ಕೃಷ್ಣದೇವರಾಯರು, ರಾಜಪರಿವಾರದವರು ತಗಡಿನ ತಡಿಕೆ ಸರಿಸಿ ಕರ್ಮಶಾಲೆಯ ಒಳಪ್ರವೇಶಿಸಿ ನೋಡಿದರೆ, ಏನದ್ಭುತ, ಇಪ್ಪತ್ತೆರಡು ಅಡಿ ಎತ್ತರದ ನರಸಿಂಹನ ದಿವ್ಯಮೂರ್ತಿ ಸಿದ್ಧವಾಗಿದೆ. ಪದ್ಮಾಸನದಲ್ಲಿ ಕುಳಿತ ನೃಸಿಂಹನ ತೊಡೆಯ ಮೇಲೆ ಲಕ್ಷ್ಮೀ ವಿರಾಜಮಾನಳಾಗಿದ್ದಾಳೆ. ದೇವರ ಪಾದಗಳ ಮೇಲೆ ತಲೆಯಿಟ್ಟು ವ್ಯಕ್ತಿಯೊಬ್ಬ ನಿದ್ರಿಸಿದಂತೆ ಕಾಣುತ್ತಿದೆ. ಯಾರವರು ಎಂದು ತಟ್ಟಿ ಅಲುಗಾಡಿಸಿದರೆ, ಪ್ರಾಣವಿಲ್ಲದ ದೇಹ ಕೆಳಕ್ಕುರುಳುತ್ತದೆ. ನರಸಿಂಹದೇವರ ದಿವ್ಯಮೂರ್ತಿಯನ್ನು ಒಂದು ಮಂಡಲ ಅವಧಿಯಲ್ಲಿ ಪೂರ್ಣಗೊಳಿಸಿದ ನರಸಿಂಹ ಶರ್ಮ ದೇವರ ಪಾದ ಸೇರಿರುತ್ತಾನೆ. ಇದೇನು ದೈವಸಂಕಲ್ಪ, ನರಸಿಂಹದೇವರೇ ಈ ಬ್ರಾಹ್ಮಣನ ರೂಪದಲ್ಲಿ ಬಂದು ವಿಗ್ರಹಸ್ಥಾಪನೆ ನಿಮಿತ್ತ ನಮ್ಮ ಸಾಮ್ರಾಜ್ಯದಲ್ಲಿ ನೆಲೆಸಿದ್ದಾನೆ ಎಂದು ಮಹಾರಾಜರು ಭಾವಿಸುತ್ತಾರೆ.
ದೈವಸಂಕಲ್ಪವಿದ್ದರೆ ಹಾಗೆಯೇ. ಕಲ್ಪನೆಗಳೂ ನಿಲುಕದ ಸಂಗತಿಗಳು ಘಟಿಸಿರುತ್ತವೆ. ಆ ಸಂದರ್ಭಕ್ಕೆ ಸಾಕ್ಷಿಯಾಗುವ ಭಾಗ್ಯ ನಮ್ಮದಾಗಿರುತ್ತದೆ.
***
ರಾಷ್ಟ್ರ ರಾಜಧಾನಿಯಲ್ಲೊಂದು ನೂತನ ಸಂಸತ್ ಭವನದ ನಿರ್ಮಾಣ ಸರ್ವವೇದ್ಯ ಸಂಗತಿಯಾಗಿತ್ತು. ಆದರೆ, ಓರ್ವ ನಿಸ್ವಾರ್ಥ ರಾಷ್ಟ್ರಸೇವಕನ ಇಚ್ಛಾಶಕ್ತಿಯ ಫಲ ಎಷ್ಟು ಅದ್ಭುತವಾಗಿರುತ್ತದೆ ಎನ್ನುವುದು ಮೊನ್ನೆ ಉದ್ಘಾಟನೆಗೊಂಡ ಬಳಿಕವಷ್ಟೇ ಎಲ್ಲರ ಅನುಭವಕ್ಕೆ ಬಂತು. ಸಂಸತ್ ಭವನವೆನ್ನುವುದೊಂದು ಕೇವಲ ಬೃಹತ್ ಕಟ್ಟಡವಲ್ಲ, ಅದು ರಾಷ್ಟ್ರದ ಆತ್ಮ. ಪ್ರಜಾಪ್ರಭುತ್ವದ ದಿವ್ಯದೇಗುಲ ಎಂಬ ಭವ್ಯ ಅನಾವರಣ ವಿಸ್ಮಿತಗೊಳಿಸಿತು. ಅರಿಯದವರು ಸಾವಿರ ಟೀಕಿಸಲಿ, ನಮ್ಮ ನೂತನ ಸಂಸತ್ ದೇಗುಲದ ಹಿಂದೊಂದು ಸನಾತನ ಚಿಂತನೆಯಿದೆ, ಅಖಂಡ ಭಾರತದ ಸಾಕ್ಷಿಪ್ರಜ್ಞೆಯಿದೆ, ಭವಿಷ್ಯದ ಭಾರತದ ಅದ್ಭುತ ಪರಿಕಲ್ಪನೆಯಿದೆ. ವೇದಕಾಲದ ಸತ್ಚಿಂತನೆಯಿಂದ ಮುಂದಿನ ಶತಮಾನದ ತಲೆಮಾರುಗಳಿಗೆ ಮಾರ್ಗದರ್ಶಕವಾಗಬಲ್ಲ ಆಧುನಿಕ ಪ್ರಜ್ಞೆಯ ಅನಾವರಣವನ್ನು ಸಂಸತ್ ಭವನದ ಒಂದೊಂದು ಕಲ್ಲು, ಇಟ್ಟಿಗೆ, ಗೋಡೆ, ಮೆಟ್ಟಿಲು, ಮೂಲೆ, ಛಾವಣಿಗಳಲ್ಲಿ ಬಿತ್ತಿಸಲಾಗಿದೆ. ಒಂದು ಮೇಲ್ಸೇತುವೆ, ಮೆಟ್ರೋ ಮಾರ್ಗ, ಏರ್ಪೋರ್ಟ್ ನಿರ್ವಣಕ್ಕೆ ಐದು-ಹತ್ತು ವರ್ಷ ಕಾಲ, ಸಾವಿರಾರು ಕೋಟಿ ಹಣ ವ್ಯಯವಾಗುವ ಈ ದೇಶದಲ್ಲಿ ಇಂಥ ಬೃಹತ್ ಯೋಜನೆಯೊಂದು 900 ಕೋಟಿ ರೂಪಾಯಿಗೂ ಕಡಿಮೆ ವೆಚ್ಚದಲ್ಲಿ, ಕೇವಲ ಮೂರು ವರ್ಷದಲ್ಲಿ ಸಾಕಾರಗೊಂಡಿದ್ದರೆ, ಅದು ರಾಷ್ಟ್ರದ ನೇತೃತ್ವ ವಹಿಸಿದವರ ಕರ್ತೃತ್ವ ಶಕ್ತಿಯ ಪ್ರತೀಕ.
ಇದನ್ನೂ ಓದಿ: ಸಚಿನ್ ಬದುಕಿನ ಹಾಫ್ ಸೆಂಚುರಿಗೆ ಚಿನ್ನದ ತೂಕ!; ಇಂದು ಸಚಿನ್ ತೆಂಡುಲ್ಕರ್ 50ನೇ ಜನ್ಮದಿನ
ನೂತನ ಸಂಸತ್ ಭವನ ಅಧಿವೇಶನಗಳು ನಡೆಯುವಾಗ ಜನಪ್ರತಿನಿಧಿಗಳು ಒಂದೆಡೆ ಸೇರುವ ಬೃಹತ್ ಕಲ್ಲಿನ ಕಟ್ಟಡವಾಗಷ್ಟೇ ರೂಪುಗೊಳ್ಳದೇ, ಪ್ರಾಚೀನ- ಅರ್ವಾಚೀನ ಚಿಂತನೆಗಳು ಮೇಳೈಸುವ, ಇತಿಹಾಸದ ಸಾಧನೆಗಳು, ಭವಿಷ್ಯದ ಮಹತ್ವಾಕಾಂಕ್ಷೆಗಳು ಒಟ್ಟಾಗುವ ಅಪೂರ್ವ ಜೀವಂತಿಕೆಯ ಶಾರದೆಯ ಶಕ್ತಿಸೌಧವಾಗಿ ರೂಪುಗೊಂಡಿದೆ. ಮೂಲಗಳ ಪ್ರಕಾರ, ಈ ಭವನದ ಉದ್ದಗಲಕ್ಕೂ ಸುಮಾರು 5,000 ಕಲಾ ಮೆರುಗುಗಳಿವೆ. ಕಲಾಕೃತಿಗಳು, ವರ್ಣಕೃತಿಗಳು, ತೈಲಚಿತ್ರಗಳು, ಗೋಡೆ ಚಿತ್ರಗಳು, ಶಿಲ್ಪಕೃತಿಗಳು, ಲೋಹಶಿಲ್ಪಗಳು ಹೀಗೆ ವೇದಕಾಲದಿಂದ ಪ್ರಜಾಪ್ರಭುತ್ವ ದಿನಗಳವರೆಗಿನ ಪರಂಪರೆಗಳನ್ನು ಬಿಂಬಿಸುವ ಕಲಾವಂತಿಕೆ ಭವನದ ಸುತ್ತಲೂ ಕಂಗೊಳಿಸುತ್ತಿವೆ. ಹಾಗೆ ನೋಡಿದರೆ ನೂತನ ಸಂಸತ್ ಭವನದ ವಿನ್ಯಾಸವೇ ವೈದಿಕ ಶ್ರೀಚಕ್ರ ಯಂತ್ರದ ಆಕಾರದಿಂದ ಪ್ರೇರಿತವಾಗಿದೆ. ಸಂವಿಧಾನ ಸಭಾಂಗಣದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಬೆಳವಣಿಗೆಯ ಹಾದಿಯನ್ನು ಕಲಾಕೃತಿಗಳ ಮೂಲಕ ಬಿಂಬಿಸಲಾಗಿದೆ. ಭಾರತೀಯ ಸಂವಿಧಾನದ ಡಿಜಿಟಲ್ ಪ್ರತಿ ಸಂವಿಧಾನ ಸಭಾಂಗಣದಲ್ಲಿ ಉಪಲಬ್ಧವಿದ್ದು, ಭೂಮಿಯ ಆವರ್ತನವನ್ನು ಸಂಕೇತಿಸುವ ಫೌಕಾಲ್ಟ್ನ ಲೋಲಕವನ್ನು ಸ್ಥಾಪಿಸಲಾಗಿದೆ. ಸಭಾಂಗಣದ ತ್ರಿಕೋನಾಕಾರದ ಛಾವಣಿಯ ನಡುವಿನಲ್ಲಿರುವ ಬೃಹತ್ ದೀಪದಿಂದ ಈ ಲೋಲಕವನ್ನು ಇಳಿಬಿಡಲಾಗಿದೆ.
ಸಂಸತ್ ಭವನವು ಮೂರು ವಿಧ್ಯುಕ್ತ ಸಭಾಂಗಣಗಳನ್ನು ಹೊಂದಿದ್ದು, ಅಲ್ಲಿ ಮಹಾತ್ಮ ಗಾಂಧಿ, ಚಾಣಕ್ಯ, ಗಾರ್ಗಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು, ಅಂಬೇಡ್ಕರ್, ಕೊನಾರ್ಕ್ ಸೂರ್ಯದೇಗುಲದಲ್ಲಿರುವ ರಥದ ಚಕ್ರದ ಬೃಹತ್ ತಾಮ್ರ ಫಲಕಗಳಿಂದ ಅಲಂಕರಿಸಲಾಗಿದೆ. ಭವನಕ್ಕೆ ಆರು ಮಹಾದ್ವಾರಗಳಿದ್ದು, ಉತ್ತರದಲ್ಲಿ ಗಜ ದ್ವಾರ, ದಕ್ಷಿಣದಲ್ಲಿ ಅಶ್ವದ್ವಾರ, ಪೂರ್ವದಲ್ಲಿ ಗರುಡ ದ್ವಾರ, ಈಶಾನ್ಯದಲ್ಲಿ ಹಂಸ ದ್ವಾರ, ಹಾಗೆಯೇ ಇನ್ನೆರಡು ದಿಕ್ಕಿನಲ್ಲಿ ಮಕರ (ಮೊಸಳೆ) ಹಾಗೂ ಶಾರ್ದೂಲ ದ್ವಾರಗಳಿವೆ. ಇವೆಲ್ಲವೂ ಸನಾತನ ಪರಂಪರೆ ಹಾಗೂ ವಾಸ್ತು ಶಾಸ್ತ್ರದ ಅನುಸಾರವಾಗಿವೆ. ಒಳಾಂಗಣದಲ್ಲಿ ಮೂರು ಕಲಾಮಂದಿರಗಳಿದ್ದು ದೇಶದ ನೃತ್ಯ ಹಾಗೂ ಸಂಗೀತ ಪರಂಪರೆ ಬಿಂಬಿಸುವ ಸಂಗೀತ ಗ್ಯಾಲರಿ, ಶಿಲ್ಪಕಲಾ ಶ್ರೀಮಂತಿಕೆ ಪ್ರತಿನಿಧಿಸುವ ಸ್ಥಪಥ್ಯ ಗ್ಯಾಲರಿ, ವಿವಿಧ ರಾಜ್ಯಗಳ ಕರಕುಶಲ ಕಲಾವಂತಿಕೆ ಅನಾವರಣಗೊಳಿಸುವ ಶಿಲ್ಪ ಗ್ಯಾಲರಿಗಳು ಕಣ್ಸೆಳೆಯುತ್ತವೆ. ಲೋಕಸಭಾ ಸಭಾಂಗಣವನ್ನು ರಾಷ್ಟ್ರಪಕ್ಷಿ ನವಿಲಿನ ಪರಿಕಲ್ಪನೆಯಲ್ಲಿ ಚಿತ್ತಾರಗೊಳಿಸಲಾಗಿದೆ. ರಾಜ್ಯಸಭಾ ಸಭಾಂಗಣ ರಾಷ್ಟ್ರಪುಷ್ಪ ಕಮಲವನ್ನು ಬಿಂಬಿಸುವಂತಿದೆ. ಸಂಗೀತ ಗ್ಯಾಲರಿಯಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್, ಪಂಡಿತ್ ಹರಿಪ್ರಸಾದ್ ಚೌರಾಸಿಯ, ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ್ ಮೊದಲಾದ ದಿಗ್ಗಜರು ಕೊಡುಗೆ ನೀಡಿದ ಸಂಗೀತ ಉಪಕರಣಗಳನ್ನು ಪ್ರದರ್ಶಿಸಲಾಗಿದೆ.
ನಾಲ್ಕು ಮಹಡಿಗಳ ಸಂಸದ್ ಭವನ ಒಟ್ಟು 64,500 ಚದರ ಮೀಟರ್ ಪ್ರದೇಶದಲ್ಲಿ ನಿರ್ವಣಗೊಂಡಿದ್ದು, ಜಂಟಿ ಅಧಿವೇಶನ ಸಂದರ್ಭದಲ್ಲಿ 1272 ಸಂಸದರಿಗೆ, ಸಾಮಾನ್ಯ ಸಂದರ್ಭದಲ್ಲಿ 888 ಸಂಸದರಿಗೆ ಆಸನ ವ್ಯವಸ್ಥೆ ಹೊಂದಿರುವ ಲೋಕಸಭಾ ಭವನ, 384 ಆಸನ ವ್ಯವಸ್ಥೆಯ ರಾಜ್ಯಸಭಾಭವನ ಹೊಂದಿದೆ. ಮುಖ್ಯಪ್ರವೇಶ ದ್ವಾರ ಪ್ರವೇಶಿಸುತ್ತಿದ್ದಂತೆಯೇ ಒಳಾಂಗಣದಲ್ಲಿ ಬೃಹತ್ ಅಶ್ವತ್ಥ ವೃಕ್ಷ ಗಮನ ಸೆಳೆಯುತ್ತದೆ.
ಭವನದ ಒಳಾಂಗಣದಲ್ಲಿ ಎರಡು ಬೃಹತ್ ತಾಮ್ರ ಕಲಾಕೃತಿಗಳಿದ್ದು, ಪ್ರತಿಯೊಂದೂ 75 ಅಡಿ ಎತ್ತರವಿದೆ. ಒಂದು ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುವ ಕಲಾಕೃತಿ ಒಳಗೊಂಡಿದ್ದರೆ, ಇನ್ನೊಂದು ಸಮುದ್ರ ಮಂಥನದ ಚಿತ್ರಣವನ್ನು ಬಿಂಬಿಸುತ್ತದೆ.
ಇದನ್ನೂ ಓದಿ: ಸವ್ಯಸಾಚಿ ಅಂಕಣ | ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರೀತಿಯ ಮೆರವಣಿಗೆ…
ಕರೊನಾ ಲಸಿಕೆಯನ್ನು ವೈದ್ಯವಿಜ್ಞಾನ ಸಂಶೋಧಕರು ಕಂಡುಹಿಡಿದರು, ಅದರಲ್ಲಿ ಪ್ರಧಾನಿ ಮೋದಿ ಹೆಚ್ಚುಗಾರಿಕೆಯೇನಿದೆ ಎಂದು ಟೀಕಿಸಿದಂತೆ, ಸಂಸದ್ ಭವನವನ್ನೂ ಜನರ ತೆರಿಗೆ ಹಣದಲ್ಲಿ ಕಟ್ಟಲಾಗಿದೆ. ಇಂಜಿನಿಯರ್ಗಳು, ಆರ್ಕಿಟೆಕ್ಟ್ಗಳು, ತಜ್ಞರು ನಿರ್ವಿುಸಿದ್ದಾರೆ. ಇದನ್ನೇನು ಮೋದಿ ಗಾರೆ ಕೆಲಸ ಮಾಡಿ ಕಟ್ಟಲಿಲ್ಲ ಎಂದು ಟೀಕಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ರಾಷ್ಟ್ರವನ್ನು ಮುನ್ನಡೆಸುವ ನಾಯಕನ ಇಚ್ಛಾಶಕ್ತಿ, ದೂರದೃಷ್ಟಿ, ರಾಷ್ಟ್ರಪ್ರಜ್ಞೆ ಇಲ್ಲದೇ ಹೋದರೆ ಇಂಥ ಪ್ರಜಾಪ್ರಭುತ್ವದ ದೇಗುಲಗಳು ನಿರ್ವಣವಾಗುವುದಿಲ್ಲ. ಕರೋನಾ ಕಾಲಘಟ್ಟದಲ್ಲಿ ಪ್ರಾರಂಭಗೊಂಡ ಈ ಸೌಧ ಮೂರೇ ವರ್ಷದಲ್ಲಿ ವಿಶ್ವವಿನೂತನವಾಗಿ ತಲೆಎತ್ತಿನಿಲ್ಲಬೇಕಾದರೆ, ಅದರ ಹಿಂದಿರುವುದು ಮೋದಿ ಮಹಾನತೆ. ಬೇಕಾದಷ್ಟು ಹಣ, ಸಾವಿರಾರು ಆಳುಕಾಳು, ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣ, ಸಾಮಗ್ರಿಗಳ ರಾಶಿ ಗುಡ್ಡೆ ಹಾಕಿದ ಮಾತ್ರಕ್ಕೆ ಕಟ್ಟಡ ನಿರ್ವಣವಾಗುವುದಿಲ್ಲ. ಮೋದಿ ಎಂಬ ಪ್ರಾಮಾಣಿಕ ಶಕ್ತಿ ಬೆನ್ನೆಲುಬಾಗಿ ನಿಂತಿದ್ದರಿಂದ ಈ ಭವನ ನಿರ್ದಿಷ್ಟ ಸಮಯದಲ್ಲಿ, ನಿಗದಿತ ವೆಚ್ಚದಲ್ಲಿ ಸಾಕಾರವಾಗಿದೆ.
ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಬಾರದು, ರಾಷ್ಟ್ರಪತಿಗಳೇ ಉದ್ಘಾಟಿಸಬೇಕು ಎಂದು ಕೋಲಾಹಲವೇ ನಡೆಯಿತು. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟೆ ಹೇಳಿದ ಮೇಲೂ ಪ್ರತಿಪಕ್ಷಗಳ ತಗಾದೆ ನಿಲ್ಲಲಿಲ್ಲ. ಇದು ರಾಜಕೀಯ ವಿರೋಧವಾಗಿತ್ತೇ ಹೊರತು ತರ್ಕವಿರಲಿಲ್ಲ. ಹಿಂದು ಸಂಪ್ರದಾಯದಲ್ಲಿ ಮನೆ ಗೃಹಪ್ರವೇಶ, ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಕುಟುಂಬದಲ್ಲಿ ಹಿರಿಯರು ಅನೇಕರಿದ್ದರೂ, ಯಾರು ಕೇಂದ್ರಬಿಂದು ಆಗಿರುತ್ತಾರೋ ಅವರು ಪೂಜೆಗೆ ಕೂರುವುದು ಸಂಪ್ರದಾಯ. ಮದುವೆ ಬಳಿಕ ಸತ್ಯನಾರಾಯಣ ಪೂಜೆಗೆ ನವ ದಂಪತಿಯನ್ನು ಕೂರಿಸುವರೇ ವಿನಾ, ಹಿರಿಯರು ಎಂಬ ಕಾರಣಕ್ಕೆ ಅಪ್ಪ-ಅಮ್ಮನನ್ನೋ, ಅತ್ತೆ ಮಾವನನ್ನೋ ಕೂರಿಸುವುದಿಲ್ಲ. ಮಗ ಮನೆ ಕಟ್ಟಿಸಿದಾಗಲೂ ಅಷ್ಟೇ, ಅಪ್ಪ-ಅಮ್ಮನ ಆಶೀರ್ವಾದ ಪಡೆದು ಮಗಸೊಸೆ ಪೂಜೆಗೆ ಕೂರುತ್ತಾರೆ. ಸಂಸತ್ ಭವನದ ವಿಚಾರದಲ್ಲೂ ಅಷ್ಟೇ, ಸೂಟುಬೂಟು ಹಾಕಿಕೊಂಡು ಟೇಪ್ ಕತ್ತರಿಸಿ ಉದ್ಘಾಟಿಸುವ ಕಾರ್ಯಕ್ರಮವಾಗಿದ್ದರೆ ರಾಷ್ಟ್ರಪತಿ ಯಾಕೆ, ಯಾರನ್ನಾದರೂ ಕರೆಸಬಹುದಿತ್ತು. ಆದರೆ, ಅಲ್ಲಿ ನಡೆದಿದ್ದು ಭಾರತದ ಪರಂಪರೆ, ಸಂಸ್ಕೃತಿ ಬಿಂಬಿಸುವ, ಸರ್ವಧರ್ಮ ಆಶಯಗಳನ್ನು ಎತ್ತಿಹಿಡಿಯುವ ಧಾರ್ವಿುಕ ಕಾರ್ಯಕ್ರಮ. ಅದಕ್ಕೆ ಇಡೀ ರಾಷ್ಟ್ರದ ಪ್ರತಿನಿಧಿಯಾಗಿ ಪವಿತ್ರ ಸಂಕಲ್ಪ ಧರಿಸಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದೇ ಸೂಕ್ತವಾಗಿತ್ತು.
ಇನ್ನು ಉದ್ಘಾಟನಾ ಸಮಾರಂಭ ಬಾಯ್ಕಾಟ್ ಮಾಡುವುದಕ್ಕೆ ಕಾಂಗ್ರೆಸ್ಗೆ ಕಾರಣವಿತ್ತು. ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹಗೊಂಡಿದ್ದರಿಂದ ಆಹ್ವಾನ ಹೊಂದಿರಲಿಲ್ಲ. ಪ್ರಿಯಾಂಕಾ ಗಾಂಧಿ ಯಾವುದೇ ಸದನದ ಸದಸ್ಯತ್ವ ಹೊಂದಿಲ್ಲ. ಸೋನಿಯಾ ಗಾಂಧಿ ಸಂಸದರಾಗಿದ್ದರೂ, ವಿಶೇಷ ಸ್ಥಾನಮಾನವಿಲ್ಲದೆ ಪಾಲ್ಗೊಳ್ಳಬೇಕಿತ್ತು. ಈ ಮುಜುಗರ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಬಾಯ್ಕಾಟ್ ಕರೆನೀಡಿತು. ಆದರೆ, ಇತರ 19 ವಿರೋಧ ಪಕ್ಷಗಳು ವಿತಂಡ ವಿರೋಧದ ಮೂಲಕ ಐತಿಹಾಸಿಕ ಸಂದರ್ಭವೊಂದನ್ನು ತಪ್ಪಿಸಿಕೊಂಡವು.
ಏನೇ ಇರಲಿ, ಮನುಷ್ಯನ ಇಚ್ಛಾಶಕ್ತಿಯೊಂದಿಗೆ ದೈವಸಂಕಲ್ಪ ಬೆರೆತರೆ ಬಂಡೆಯೊಂದು ಲಕ್ಷ್ಮೀನೃಸಿಂಹನಾಗಿ ಮೈದಳೆಯುವುದು, ಸಂಸತ್ ಭವನದಂತಹ ಅದ್ಭುತ ರಾಷ್ಟ್ರಸೌಧ ನಿರ್ವಣವಾಗುವುದು ಅಸಾಧ್ಯವೇನಲ್ಲ. ಮನುಷ್ಯ ಇಂದು ಮೆರೆದವನು ನಾಳೆ ಅಳಿಯುತ್ತಾನೆ, ಪದವಿ, ಅಧಿಕಾರ, ಕೀರ್ತಿ, ಪ್ರಭಾವ ಯಾವುದೂ ಶಾಶ್ವತವಲ್ಲ. ಆದರೆ, ಅಧಿಕಾರವಿದ್ದಾಗ ಸ್ವಂತಕ್ಕಾಗಿ, ಸ್ವಾರ್ಥಕ್ಕಾಗಿ ಯೋಚಿಸದೆ, ಜನಹಿತಕ್ಕಾಗಿ, ಭವಿಷ್ಯದ ಪೀಳಿಗೆಗಾಗಿ ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ…
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)