More

    ಸಚಿನ್ ಬದುಕಿನ ಹಾಫ್ ಸೆಂಚುರಿಗೆ ಚಿನ್ನದ ತೂಕ!; ಇಂದು ಸಚಿನ್ ತೆಂಡುಲ್ಕರ್ 50ನೇ ಜನ್ಮದಿನ

    ಸಚಿನ್ ಬದುಕಿನ ಹಾಫ್ ಸೆಂಚುರಿಗೆ ಚಿನ್ನದ ತೂಕ!; ಇಂದು ಸಚಿನ್ ತೆಂಡುಲ್ಕರ್ 50ನೇ ಜನ್ಮದಿನ‘ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ..’

    ಕಾಲಚಕ್ರ ತಿರುಗುತ್ತಲೇ ಇರುತ್ತದೆ. ನಿನ್ನೆ, ಇಂದು, ನಾಳೆಯ ಚಕ್ರ ಪುನರಾವರ್ತನೆಗೊಳ್ಳುತ್ತ ಮುಂದೆಮುಂದಕ್ಕೆ ಓಡುತ್ತಲೇ ಇರುತ್ತದೆ. ಆದರೆ, ಬದುಕಿಗೆ ಸಾರ್ಥಕತೆಯೆಂಬ ಗರಿ ಸಿಗುವುದು ನಾಳೆ ಏನು ಮಾಡುತ್ತೇವೆ ಎನ್ನುವುದಕ್ಕಿಂತ, ನಿನ್ನೆ ನಾವೇನು ಮಾಡಿದ್ದೇವೆ, ಇಂದು ಯಾವ ರೀತಿ ಬದುಕುತ್ತಿದ್ದೇವೆ ಎಂಬ ಆತ್ಮವಿಮರ್ಶೆಯಲ್ಲಿ ಖೇದ, ವಿಷಾದಕ್ಕಿಂತ, ಸಮಾಧಾನ, ಅಭಿಮಾನ ಪಡುವಂಥ ವಿಷಯಗಳು ಹೆಚ್ಚು ಸಿಕ್ಕಿದಾಗ.

    ‘ಆಟವನ್ನು ನಿರಂತರವಾಗಿ ಗೌರವಿಸು… ಆಟ ನಿನ್ನನ್ನು ಪ್ರೀತಿಸುತ್ತದೆ…’ ಕಳೆದ ವಾರ ಮುಂಬೈ ಇಂಡಿಯನ್ಸ್ ಪರ ಮಗ ಅರ್ಜುನ್ ತೆಂಡುಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ ರಂಗಪ್ರವೇಶ ಮಾಡಿದ ಬಳಿಕ ಸಚಿನ್ ತೆಂಡುಲ್ಕರ್ ಮಾಡಿದ್ದ ಟ್ವೀಟ್ ಇದು…

    ಭಾರತೀಯರು ಅಷ್ಟೇ ಏಕೆ, ಜಗತ್ತಿನಾದ್ಯಂತ ಜನ ಸಚಿನ್ ತೆಂಡುಲ್ಕರ್ ಎಂಬ ಕ್ರಿಕೆಟ್ ಮಾಂತ್ರಿಕನನ್ನು ಪ್ರೀತಿಸುವುದಕ್ಕೆ ಕಾರಣ ಇದೇ. ಅಂಕಿಅಂಶಗಳು ಶಾಶ್ವತವಲ್ಲ. ಇಂದು ಅದ್ಭುತವೆನ್ನಿಸಿದ ಸ್ಪೋಟಕ ಆಟ, ನಾಳೆ ಅದಕ್ಕಿಂತ ಮಿಗಿಲಾದ ಮತ್ತೊಂದು ಇನಿಂಗ್ಸ್ ಎದುರು ಮರೆತುಹೋಗುತ್ತದೆ. ಆದರೆ, ತಮ್ಮ ಆಟ, ವ್ಯಕ್ತಿತ್ವದ ಮೂಲಕ ಕ್ರಿಕೆಟ್​ನ ಘನತೆಯನ್ನು ಹೆಚ್ಚಿಸಿದ ಸಚಿನ್​ರಂಥ ಅಪ್ಪಟ ವಜ್ರಗಳು ಯಾವತ್ತೂ ಮುಕ್ಕಾಗುವುದಿಲ್ಲ, ಮರೆತುಹೋಗುವುದಿಲ್ಲ, ಅವರಿಗೆ ನೇಪಥ್ಯವೆನ್ನುವುದು ಇರುವುದಿಲ್ಲ.

    ‘ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಅವನಿಗೆ ಚಿರಋಣಿ. ಆದರೆ, ಈಗ ದೇವರ ಬಳಿ ಇನ್ನೂ ಒಂದು ಕೋರಿಕೆ ಇದೆ. ನನ್ನ ಕಾಲು ಸದಾ ನೆಲದ ಮೇಲೆಯೇ ಇರುವಂತೆ ಅನುಗ್ರಹಿಸು ಎಂಬುದೇ ನನ್ನ ಪ್ರಾರ್ಥನೆ…’ ಇದು ತೆಂಡುಲ್ಕರ್ ಅವರ ವಿನಮ್ರತೆ. ಸತತ ಇಪ್ಪತ್ನಾಲ್ಕು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ, ಆಟದಲ್ಲಿ, ಬದುಕಿನಲ್ಲಿ ಏನೆಲ್ಲ ಸಾಧಿಸಬಹುದೋ ಅದೆಲ್ಲವನ್ನೂ ಸಾಧಿಸಿದ ಮೇಲೂ ಸ್ವಲ್ಪವೂ ಅಹಂ ಇಲ್ಲದೆ, ‘ನಿನ್ನ ದಾಸರ ದಾಸರ ಮನೆಯ ದಾಸಾನುದಾಸ ನಾನು’ ಎಂಬಂಥ ವಿನಮ್ರ ಭಾವ ಸಚಿನ್ ತೆಂಡುಲ್ಕರ್​ರಲ್ಲಿ ಮಾತ್ರ ಕಾಣಲು ಸಾಧ್ಯ. ದೊಡ್ಡ ಗುಣದಿಂದಲೇ ದೊಡ್ಡವರಾದವರು ಸಚಿನ್. ಸೋಮವಾರ ಸಚಿನ್ ತೆಂಡುಲ್ಕರ್ ಪಾಲಿಗೆ ಸುವರ್ಣ ಸಂಭ್ರಮ. 50ನೇ ಜನ್ಮದಿನವನ್ನು ಅವರು ಆಚರಿಸಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ, 164 ಅರ್ಧಶತಕ ಬಾರಿಸಿರುವ ಸಚಿನ್, ‘ಈ ಶತಕಾರ್ಧದ ಅನುಭವ ಬೇರೆಯೇ ರೀತಿ. ಬದುಕು ಮತ್ತೊಂದು ತಿರುವು ಕ್ರಮಿಸಿದೆ’ ಎಂದು ಹೇಳಿಕೊಂಡಿದ್ದಾರೆ.

    ಹಾಗೆ ನೋಡಿದರೆ, ಶ್ರೇಷ್ಠತೆಯೆಡೆಗೆ ತೆಂಡುಲ್ಕರ್ ಪಯಣ ಒಂದು ಅಪ್ಪಟ ಪ್ರಕ್ರಿಯೆ. ಈ ಹಾದಿಯಲ್ಲಿ ಅನೇಕ ಘಟ್ಟಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಪ್ರಾರಂಭಿಕ ದಿನಗಳಿಂದ ನಿವೃತ್ತಿಯ ದಿನಗಳವರೆಗೆ ವಿವಿಧ ಸ್ತರಗಳಲ್ಲಿ ಅವರ ಯಶಸ್ಸಿನ, ಶ್ರೇಷ್ಠತೆಯ ವಿಸ್ತರಣೆಯನ್ನು ಕಾಣಬಹುದು. ಅವರು ಬಾಲಿವುಡ್ ನಟರಂತೆ ರಾತ್ರೋರಾತ್ರಿ ಹೀರೋ ಎನಿಸಿಕೊಂಡವರಲ್ಲ. 1989ರಲ್ಲಿ ಪಾಕಿಸ್ತಾನದ ವಿರುದ್ಧ ಹಾಲುಗಲ್ಲದ ಹುಡುಗನ ರೂಪದಲ್ಲಿ ಪದಾರ್ಪಣೆ ಮಾಡಿದ ದಿನದಿಂದ ಸಚಿನ್ ಬಗ್ಗೆ ವಿಶೇಷ ಕುತೂಹಲ ಇತ್ತಾದರೂ, ಅದು ಹೊಸ ಹೊಸ ಮಜಲುಗಳಿಗೆ ವಿಸ್ತರಣೆಯಾಗುತ್ತಾ ಸಾಗಿತೇ ಹೊರತು ಎಲ್ಲೂ ಭ್ರಮನಿರಸನವಾಗಲಿಲ್ಲ.

    ಸಚಿನ್​ರಲ್ಲಿ ರಕ್ತಗತ ಪ್ರತಿಭೆ ಇತ್ತು. ಹಾಗೆಂದು ಪ್ರತಿಭೆ ಇದ್ದವರೆಲ್ಲಾ ಮಹಾನ್ ಎನಿಸಿಕೊಳ್ಳುವುದಿಲ್ಲ. ಅಲ್ಲಿ ವೈಯಕ್ತಿಕ ತುಡಿತವಿರಬೇಕು. ಆದ್ಯಂತವಾಗಿ ಶ್ರಮ ಇರಬೇಕು. ತಮ್ಮನ್ನು ತಾವು ಪರಿಪಕ್ವತೆಯ ಪ್ರಕ್ರಿಯೆಗೆ ಒಗ್ಗಿಸಿಕೊಳ್ಳಬೇಕು. ವ್ಯಕ್ತಿಯಾಗಿ ಮಾಗದೆ ವ್ಯಕ್ತಿತ್ವ ಬೆಳೆಯದು. ವ್ಯಕ್ತಿತ್ವರಹಿತವಾದ ಶ್ರೇಷ್ಠತೆಗೆ ಬೆಲೆಯಿಲ್ಲ. ಅದಕ್ಕೆ ಉದಾಹರಣೆ ಡೀಗೋ ಮರಡೋನಾ. ಅವರ ಅದ್ಭುತ ಫುಟ್​ಬಾಲ್ ಸಾಧನೆಯ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಆದರೆ, ಅವರ ವ್ಯಕ್ತಿತ್ವವನ್ನು ಗೌರವಿಸುವವರು ಕಡಿಮೆ.

    ತೆಂಡುಲ್ಕರ್ ವಿಭಿನ್ನರೆನಿಸುವುದೇ ಇಂಥ ವಿಚಾರದಲ್ಲಿ. ಅವರದು ಆಟಕ್ಕೆ ಪೈಪೋಟಿ ಒಡ್ಡುವಂಥ ವ್ಯಕ್ತಿತ್ವ. ಅವರ ಕ್ರಿಕೆಟ್ ಜೀವನ ಒಂದು ಶಿಖರವಾದರೆ, ವೈಯಕ್ತಿಕ ಜೀವನ ಮತ್ತೊಂದು ಶಿಖರ. ಎರಡರ ನಡುವೆ ಅಪ್ರತಿಮ ಸಮತೋಲನ ಕಾಪಾಡಿಕೊಂಡು ಎಲ್ಲೂ ಎಡವದೆ ಬೀಳದೆ ಸಾಗಿಬಂದವರು ತೆಂಡುಲ್ಕರ್.

    ತೆಂಡುಲ್ಕರ್ ದಾಖಲೆಗಳ ಬಗ್ಗೆ ಬರೆಯುವುದು ಕಷ್ಟ-ಸಾಹಸವೇ ಸರಿ. ಕ್ರಿಕೆಟ್​ನ ಸರಿಸುಮಾರು ಎಲ್ಲಾ ವಿಶ್ವದಾಖಲೆಗಳಲ್ಲೂ ಅವರ ಹೆಸರು ಒಂದಿಲ್ಲೊಂದು ಶ್ರೇಣಿಯಲ್ಲಿ ಕಾಣಿಸಿಕೊಳ್ಳುವಾಗ ಎಷ್ಟೆಂದು ಬರೆಯುವುದು? ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದಲ್ಲಿ, ದಾಖಲೆಗಳು ಆಟಗಾರನ ಶ್ರೇಷ್ಠತೆಗೆ ಮಾನದಂಡ ಆಗಲಾರದು. ಬದಲಿಗೆ ವೃತ್ತಿಜೀವನದ ಹಾದಿ ಸೂಚಿಸುವ ದಿಕ್ಸೂಚಿ ಆಗಬಹುದು. ಕೇವಲ ದಾಖಲೆಗಳನ್ನೇ ಮಾಡ ಬೇಕೆಂದು ಆಡಲು ಯಾರಿಂದಲೂ ಸಾಧ್ಯವಿಲ್ಲ. ಸಚಿನ್ ಸಹ ಅಷ್ಟೇ. ತಗ್ಗಿದ್ದಲ್ಲಿ ನೀರು ಹರಿಯುತ್ತದೆ. ಅಂತೆಯೇ ಶ್ರೇಷ್ಠ ಆಟಗಾರರಿಗೆ ದಾಖಲೆಗಳು ಒಲಿಯುತ್ತವೆ. ಸಚಿನ್ ಸತತ 24 ವರ್ಷ ಕ್ರಿಕೆಟ್ ಆಡಿದರೆಂದರೆ ಅವರತ್ತ ಅಷ್ಟೊಂದು ದಾಖಲೆಗಳು ಹರಿದುಬಂದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂದರೆ ಇಲ್ಲಿ ಮೆಚ್ಚಬೇಕಾದ್ದು ಅವರ ದೀರ್ಘಕಾಲೀನ ಬಾಳಿಕೆಯನ್ನು. ಅಷ್ಟು ಸುದೀರ್ಘ ಅವಧಿಯಲ್ಲಿ ಸ್ಥಿರತೆ, ಪ್ರಸ್ತುತತೆ ಮತ್ತು ತಂಡಕ್ಕೆ ತಮ್ಮ ಅವಶ್ಯಕತೆಯನ್ನು ಏಕಪ್ರಕಾರ ವಾಗಿ ಕಾಪಾಡಿಕೊಳ್ಳುವುದೆಂದರೆ ಅದೇ ಮತ್ತೊಂದು ಬೆಲೆ ಕಟ್ಟಲಾಗದ ವಿಶ್ವದಾಖಲೆ.

    ‘ನಾನೂ ಸಚಿನ್ ಆಗಬೇಕು’ ಎಂದು ಕನಸು ಕಾಣುವ ದೇಶದ ಕೋಟ್ಯಂತರ ಯುವಕರು ಉಳಿದೆಲ್ಲ ಸಂಗತಿಗಳಿಗಿಂತ ಮೊದಲು ಸಚಿನ್​ರ ಮಾನವೀಯ ಗುಣಗಳನ್ನು ಅನುಸರಿಸಬೇಕು… ಸಚಿನ್ ಕ್ರಿಕೆಟಿಗನಾಗಿ ಮಾತ್ರ ಮಹಾನ್ ಅಲ್ಲ, ಓರ್ವ ವ್ಯಕ್ತಿಯಾಗಿಯೂ ಶ್ರೇಷ್ಠತೆಯ ಮಜಲು ಮುಟ್ಟಿದವರು.

    ಹೊಸ ಪೀಳಿಗೆಯ ಮಕ್ಕಳಿಗೆ ಕ್ರೀಡೆಯಲ್ಲಿ ದೊಡ್ಡ ಸಾಧನೆಯ ಕನಸು ಕಾಣುವುದಕ್ಕೆ ಸದ್ಯ ಸ್ಪೂರ್ತಿಗೇನೂ ಕೊರತೆ ಇಲ್ಲ. ವಿರಾಟ್ ಕೊಹ್ಲಿ, ಮೆಸ್ಸಿ, ರೊನಾಲ್ಡೊ, ನಡಾಲ್ ಹೀಗೆ ಬೇಕಾದಷ್ಟು ಆಯ್ಕೆಗಳಿವೆ. ಹೀಗೆ ಯಾವುದೇ ತಾರೆಯನ್ನು ಮಾದರಿಯಾಗಿಸಿಕೊಂಡರೂ, ತೆಂಡುಲ್ಕರ್ ವೃತ್ತಿಜೀವನದ ಶಿಸ್ತನ್ನು ಅನುಸರಿಸುವುದರಿಂದ ಬಹುದೊಡ್ಡ ಲಾಭವಿದೆ. ಹಾಗೆ ನೋಡಿದರೆ, ತೆಂಡುಲ್ಕರ್ ವೃತ್ತಿಜೀವನವೇ ಒಂದು ಅಧ್ಯಯನ ವಿಷಯವಾಗಬಹುದು.

    ಎಲ್ಲಿಯೂ ನಿಲ್ಲದಿರು, ಬೆನ್ನು ತೋರಿಸದಿರು… ಇದು ತೆಂಡುಲ್ಕರ್ ವೃತ್ತಿಜೀವನದ ದೊಡ್ಡ ಗುಣಗಳಲ್ಲೊಂದು. ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ಏಕಪ್ರಕಾರವಾಗಿ ಮಹತ್ವ ಉಳಿಸಿಕೊಂಡು ಭಾರತೀಯ ಕ್ರಿಕೆಟ್​ನ ನಂ.1 ಆಟಗಾರನಾಗಿರುವುದು ಎಲ್ಲರಿಂದ ಸಾಧ್ಯವಾಗುವಂಥದ್ದಲ್ಲ. ಸಚಿನ್ ಬದುಕಿನಲ್ಲೂ ಸಾಕಷ್ಟು ಅಡಚಣೆ, ನಿಲುಗಡೆಗಳಿದ್ದವು. ಅನೇಕ ಗಾಯಗಳು ಅವರನ್ನು ಬಾಧಿಸಿದವು, ಫಾಮ್ರ್ ಕೂಡ ಆಗಾಗ ಕೈಕೊಟ್ಟಿತು. ಆದರೆ, ಎಂಥ ಅಡ್ಡಿ ಎದುರಾದರೂ, ಸಚಿನ್ ಗುರಿಯಿಂದ ವಿಮುಖರಾಗಲಿಲ್ಲ. ಎಷ್ಟು ಗಾಯಗಳಾದರೂ, ಶಸ್ತ್ರಚಿಕಿತ್ಸೆಗಳಾದರೂ, ಹಿಂದಿಗಿಂತ ಪ್ರಬಲವಾಗಿ ಪುನರಾಗಮನಗೈದರು. ಅವರು ‘ಮಾಸ್ಟರ್ ಬ್ಲಾಸ್ಟರ್’ ಎಂದು ಖ್ಯಾತರಾಗಿದ್ದರೂ, ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಸದಾ ವಿದ್ಯಾರ್ಥಿಯಾಗಿಯೇ ಉಳಿದರು.

    ಪರಿಶ್ರಮ, ಕಲಿಕೆ ಮತ್ತು ಪ್ರಯತ್ನಶೀಲತೆ ಎನ್ನುವುದು ಸಚಿನ್​ರ ಸಾಧನೆಯ ಮಂತ್ರವಾಗಿತ್ತು. ಎಷ್ಟೇ ಅನುಭವಿಯಾದ ಮೇಲೂ ಅವರು ಅಭ್ಯಾಸ ನಿಲ್ಲಿಸಲಿಲ್ಲ, ನೆಟ್ಸ್​ಗೆ ಗೈರುಹಾಜರಾಗಿ ಪ್ರಾಪಂಚಿಕ ಸೆಳೆತಗಳತ್ತ ಗಮನ ಕೊಡಲಿಲ್ಲ. ಪ್ರತೀ ಪಂದ್ಯ, ಸರಣಿಗೆ ಮುನ್ನ ತಮ್ಮದೇ ರೀತಿಯಲ್ಲಿ ಅವರ ಅಧ್ಯಯನ, ಅಭ್ಯಾಸ ನಿರಂತರವಾಗಿರುತ್ತಿತ್ತು. ಈಗಿನ ಹೈಟೆಕ್ ವಿಶ್ಲೇಷಣೆಗಳು ಲಭ್ಯವಿಲ್ಲದ ಕಾಲದಲ್ಲೂ ಸಚಿನ್ ಪ್ರತಿಯೊಬ್ಬ ಬೌಲರ್​ನ ಶಕ್ತಿ, ದೌರ್ಬಲ್ಯ ಗ್ರಹಿಸಿ ಅದಕ್ಕೆ ತಕ್ಕಂತೆ ಸಜ್ಜಾಗಿರುತ್ತಿದ್ದರು. ಇಂಥ ಪರಿಶ್ರಮ, ಪ್ರಯತ್ನಶೀಲತೆಯಿಂದಲೇ ಸಚಿನ್ ಯಾವತ್ತೂ ಆಟದಲ್ಲಿ ಅಪ್ರಸ್ತುತರೆನಿಸಲಿಲ್ಲ. ತಮಗಿಂತ ಹತ್ತುವರ್ಷ ನಂತರ ಕ್ರಿಕೆಟ್​ಗೆ ಬಂದವರು ಹತ್ತುವರ್ಷ ಮೊದಲೇ ನಿರ್ಗಮಿಸಿದರೂ, ಇವರು ಮಾತ್ರ ಎಂದಿನಂತೆ ಆಡುತ್ತಲೇ ಇದ್ದರು. ಕೇವಲ ಪ್ರತಿಭೆ ಇದ್ದರೆ ಸಾಲದು, ಪ್ರಯತ್ನಶೀಲತೆ, ಪರಿಶ್ರಮದಿಂದಷ್ಟೇ ಯಶಸ್ಸು ಎನ್ನುವುದಕ್ಕೆ ಸಚಿನ್ ಸಾಫಲ್ಯ, ಅವರ ಸಮಕಾಲೀನ ವಿನೋದ್ ಕಾಂಬ್ಳಿ ವೈಫಲ್ಯವೇ ನಿದರ್ಶನ.

    ಸಚಿನ್ ಆಟವೇ ಒಂದು ವಿಶ್ವಕೋಶ ಎನ್ನಲಡ್ಡಿಯಿಲ್ಲ. ವೃತ್ತಿಬದುಕಿನಲ್ಲಿ ಸಚಿನ್ ಎಲ್ಲ ದೇಶದಲ್ಲಿ, ಎಲ್ಲ ಬಗೆಯ ಪಿಚ್​ನಲ್ಲಿ, ಎಲ್ಲ ವಾತಾವರಣದಲ್ಲಿ, ಸರ್ವ ರೀತಿಯ ಸನ್ನಿವೇಶದಲ್ಲಿ ಆಡಿದವರು. ಆಕಾರದಲ್ಲಿ ವಾಮನಮೂರ್ತಿಯಾದರೂ, ಆಟದಲ್ಲಿ ತ್ರಿವಿಕ್ರಮನಾಗಿ ಏಳಡಿ ಎತ್ತರದ ಬೌಲರ್​ಗಳ ಎಸೆತಗಳನ್ನೂ ಸಿಕ್ಸರ್​ಗಟ್ಟಿದವರು. ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ತೆಂಡುಲ್ಕರ್ ಆರ್ಭಟವನ್ನು ಪ್ರತ್ಯಕ್ಷ ನೋಡಿದ್ದವರು ಜನ್ಮದಲ್ಲಿ ಮರೆಯುವುದಿಲ್ಲ. ಗ್ವಾಲಿಯರ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್​ನ ಪ್ರಪ್ರಥಮ ದ್ವಿಶತಕ ಬಾರಿಸಿದ್ದು, 2003ರ ವಿಶ್ವಕಪ್​ನಲ್ಲಿ ಭಾರತ ಫೈನಲ್​ನಲ್ಲಿ ಸೋತರೂ, ತೆಂಡುಲ್ಕರ್ ಟೂರ್ನಿಯಲ್ಲಿ 671 ರನ್ ಗಳಿಸಿ ಸರ್ವಶ್ರೇಷ್ಠ ಗೌರವ ಗಳಿಸಿದ್ದು, ಅದೇ ವಿಶ್ವಕಪ್​ನಲ್ಲಿ ಸೆಂಚುರಿಯನ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಶೋಯಿಬ್ ಅಖ್ತರ್ ಸೊಕ್ಕು ಮುರಿದಿದ್ದು, 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ನನಸಾಗಿಸಿಕೊಂಡ ಬಳಿಕ ಸಹಆಟಗಾರರೆಲ್ಲ ಅವರನ್ನು ಹೊತ್ತುಕೊಂಡು ಮೆರವಣಿಗೆ ಮಾಡಿದ್ದು, ಆ ಬಳಿಕವೂ ವಿಶ್ರಮಿಸದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನೂರು ಶತಕಗಳ ಸಾಧನೆ ಶಿಖರವೇರಿ ಸಂಭ್ರಮಿಸಿದ್ದು… ಇವೆಲ್ಲವೂ ತೆಂಡುಲ್ಕರ್ ಅಭಿಮಾನಿಗಳಿಗೆ ಕಾಣಿಕೆಯಾಗಿ ಕೊಟ್ಟ ಎಂದೂ ಮರೆಯದ ನೆನಪುಗಳು. 1994ರಲ್ಲಿ ತೆಂಡುಲ್ಕರ್ ನ್ಯೂಜಿಲೆಂಡ್​ನ ಆಕ್ಲೆಂಡ್​ನಲ್ಲಿ ಮೊಟ್ಟಮೊದಲ ಬಾರಿ ಆರಂಭಿಕನಾಗಿ ಏಕದಿನ ಪಂದ್ಯವೊಂದರಲ್ಲಿ ಕಣಕ್ಕಿಳಿದು 49 ಎಸೆತಗಳಲ್ಲಿ 82 ರನ್ ಬಾರಿಸಿದ್ದರು. ಅಂದರೆ, ಐಪಿಎಲ್ ಆರಂಭವಾಗುವುದಕ್ಕೆ 14 ವರ್ಷ ಮುನ್ನವೇ ಐಪಿಎಲ್​ಗೊಪು್ಪವ ಹೊಡೆಬಡಿ ಆಟವನ್ನು ಉಣಬಡಿಸಿದ್ದರು.

    ಒಟ್ಟಿನಲ್ಲಿ ಜೀವನವೇ ಒಂದು ಕಾಯಂ ಗುರುಕುಲ. ಅಲ್ಲಿ ಪ್ರತಿನಿತ್ಯ, ಪ್ರತಿಕ್ಷಣ ನಾವು ಕಲಿಯುವುದು ಏನಾದರೊಂದು ಇದ್ದೇ ಇರುತ್ತದೆ. ಹಾಗಾಗಿ ಕಲಿತು ಮುಗಿಯಿತು ಎಂಬ ಅಹಂ ಆಗಲೀ, ತಾನು ಕಲಿತಿದ್ದೇ ಶ್ರೇಷ್ಠ ಎಂಬ ಹೆಚ್ಚುಗಾರಿಕೆಯಾಗಲೀ ಸಲ್ಲದು. ಬಾಂದ್ರಾದ ಬಡಕುಟುಂಬದ ಹುಡುಗ ಭಾರತದ ಪರ ಕ್ರಿಕೆಟ್ ಆಡಿದ ಸರ್ವಶ್ರೇಷ್ಠ ಆಟಗಾರನೆನಿಸಿ, ‘ಭಾರತರತ್ನ’ವೇ ಆಗಿದ್ದು ಸಾರ್ವಕಾಲಿಕ ಸಾರ್ಥ‘ಕಥೆ’. ಕೋಟಿ ಕನಸುಗಳನ್ನು ಅರಳಿಸಿದ ಸಚಿನ್ ಕ್ರಿಕೆಟ್ ಕಲಿಯುವವರಿಗಷ್ಟೇ ಅಲ್ಲ, ಬದುಕಿನಲ್ಲಿ ಯಶಸ್ವಿಯಾಗುವುದಕ್ಕೂ ಬಹುದೊಡ್ಡ ಪ್ರೇರಣೆ.

    ಹ್ಯಾಪಿ ಬರ್ತ್​ಡೇ ಸಚಿನ್…

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts