More

    ಸವ್ಯಸಾಚಿ ಅಂಕಣ; ದುಷ್ಟ ಆರ್ಭಟದ ಕಾಲದಲ್ಲಿ ಶಿವಚಿಂತನೆಯ ಮಹತ್ವ

    ಸವ್ಯಸಾಚಿ ಅಂಕಣ; ದುಷ್ಟ ಆರ್ಭಟದ ಕಾಲದಲ್ಲಿ ಶಿವಚಿಂತನೆಯ ಮಹತ್ವಹರ ಹರ ಕಾಪಾಡು..

    ಆ ಸಾಧ್ವಿ ದೇವರನ್ನು ನೆನಪಿಸಿಕೊಳ್ಳುವಾಗ ಹರ ಹರ ಎನ್ನುತ್ತಿದ್ದಳು.. ಹರ ಯಾಕೆ, ಶಿವ ಎಂದೇಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರೆ, ಹೆಸರು ಹೇಳಿದರೆ ‘ಅವರ ಆಯಸ್ಸು ಕಡಿಮೆಯಾಗುತ್ತದೆ’ ಎನ್ನುತ್ತಿದ್ದಳು. ಹೆಣ್ಣು ಮಕ್ಕಳು ಗಂಡನ ಹೆಸರು ಹೇಳಬಾರದು ಎನ್ನುವುದು ಒಂದು ನಂಬಿಕೆ. ಕೆಲವರು ಮೂಢನಂಬಿಕೆ ಅನ್ನಬಹುದು. ಅವರವರ ಭಾವ, ಅವರವರ ವ್ಯಾಖ್ಯಾನ…

    ಇವತ್ತಿನ ಮಟ್ಟಿಗೆ ಹೇಳುವುದಾದರೆ, ಹೆಂಡತಿಯರಿಗೆ ಗಂಡನ ಹೆಸರು ಹೇಳುವ ಕಷ್ಟವೇ ಇಲ್ಲ. ಮೊದಲೆಲ್ಲ, ರೀ, ಏನ್ರೀ, ಹೌದೇನ್ರೀ.. ಇತ್ಯಾದಿ ‘ರೀ’ಚಕಗಳಿಂದ ಕರೆಯುವ ಪದ್ಧತಿ ಇತ್ತು.. ಕೊಂಕಣಿ ಸಮುದಾಯದಲ್ಲಿ ಗಂಡನನ್ನು ..ತ್ತೇ, ಇತ್ತೇ… ಎಂದು ಹೆಂಗಸರು ಕರೆಯುವುದುಂಟು. ಅದೇ ರೀತಿ ಬೇರೆ ಬೇರೆ ಪ್ರದೇಶ, ಭಾಷೆಗಳಲ್ಲಿ ಬೇರೆ ಬೇರೆ ರೀತಿ. ಇತ್ತೀಚಿನ ದಿನಮಾನದಲ್ಲಿ ಅಡ್ಡಹೆಸರಿನಿಂದ, ಮುದ್ದಿನ ಹೆಸರುಗಳಿಂದ ಕರೆಯುವ ವಾಡಿಕೆಯೂ ಹೆಚ್ಚುತ್ತಿದೆ. ಚಿನ್ನು, ಬೇಬಿ, ಡಾ.. ಬಾಬು, ಜಾನು ಇಂಥ ಹೆಸರುಗಳೇ ಸಾರ್ವತ್ರಿಕವಾಗುತ್ತಿರುವುದರಿಂದ ಯಾವುದೇ ಹೆಂಡತಿಯ ದೆಸೆಯಿಂದ ಗಂಡನ ಆಯಸ್ಸು ಕಡಿಮೆ ಆಗುವ ಪ್ರಮೇಯ ತಗ್ಗಿದೆ!

    ಹೆಂಡತಿ ಗಂಡನ ಹೆಸರು ಹೇಳಬೇಕೋ? ಬಾರದೋ? ಹೇಳಿದರೇನು ತಪ್ಪು? ಹೇಳಬಾರದೆಂದು ಯಾವ ಶಾಸ್ತ್ರದಲ್ಲಿದೆ? ಈ ಶತಮಾನದಲ್ಲೂ ಇಂಥದ್ದನ್ನೆಲ್ಲ ನಂಬ್ತಾರೇನ್ರೀ? ಈ ಬಗೆಯ ಚರ್ಚೆ ಇಲ್ಲಿನ ಉದ್ದೇಶವಲ್ಲ. ಗಂಡನನ್ನು ಹೇಗೆ, ಯಾವ ಹೆಸರಿನಿಂದ ಕರೆಯಬೇಕು ಎನ್ನುವುದು ಹೆಂಡತಿಯ ಸ್ವಾತಂತ್ರ್ಯ; ವಿವೇಚನೆ. ಆದರೆ, ಒಟ್ಟಾರೆ ಹೇಳುವುದಾದರೆ ಭಾರತೀಯ ಸಂಸ್ಕೃತಿಯಲ್ಲಿ ಸಂಸಾರದಲ್ಲೂ ಒಂದು ಸಂಸ್ಕಾರವಿರುತ್ತಿತ್ತು.

    ಕಾಲ ಬದಲಾದಂತೆಲ್ಲ ಪೌರಾತ್ಯ ಪಾಶ್ಚಾತ್ಯ ಸಂಸ್ಕೃತಿಗಳ ವಿನಿಮಯ ವಿರುದ್ಧಾರ್ಥದಲ್ಲಿ ಆಗುತ್ತಿದೆ. ಅನ್ಯದೇಶಗಳವರು ಭಾರತದ ಸಂಸ್ಕೃತಿ, ಪರಂಪರೆಗೆ ಮಾರು ಹೋಗುತ್ತಿದ್ದಾರೆ. ಭಾರತೀಯ ಪದ್ಧತಿಯಲ್ಲಿ ಮದುವೆ ಆಗುತ್ತಿದ್ದಾರೆ. ಮಥುರಾ, ಬೃಂದಾವನ ಮೊದಲಾದ ಪುಣ್ಯಕ್ಷೇತ್ರಗಳಿಗೆ ಭಾರತೀಯರು ಜೀನ್ಸ್, ಶಾರ್ಟ್ಸ್, ಕೂಲಿಂಗ್ ಗ್ಲಾಸ್ ಧರಿಸಿಕೊಂಡು ಶೋಕಿಯಿಂದ ಹೋದರೆ, ವಿದೇಶೀಯರು ಭಾರತದ ಸಾಂಪ್ರದಾಯಿಕ ಉಡುಗೆ ತೊಟ್ಟು, ತಾಳ ಹಿಡಿದು ಭಜನೆ ಮಾಡುತ್ತಿರುತ್ತಾರೆ. ನಾವು ಮರೆತ ದೇವರ ಸಂಕೀರ್ತನೆಯನ್ನು ವಿದೇಶಿಯರ ಬಾಯಲ್ಲಿ ಕೇಳಿಸಿಕೊಂಡರೂ, ಅದನ್ನು ಅಂತರಾತ್ಮಕ್ಕೆ ತಟ್ಟಿಸಿಕೊಳ್ಳದೆ ಮರಳುತ್ತೇವೆ. ಸನಾತನ ಸಂಸ್ಕಾರಗಳು ಹಲವು ಯುಗ, ದೇಶ, ಭಾಷೆ, ಯುದ್ಧ, ನಾಗರಿಕತೆಗಳ ಪಲ್ಲಟಗಳ ಹೊರತಾಗಿಯೂ ಮೂಲಸ್ವರೂಪ ಉಳಿಸಿಕೊಂಡು ಬಂದಿವೆ. ನಾವಲ್ಲದಿದ್ದರೂ ಇನ್ಯಾರೋ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಸಾಂಸ್ಕೃತಿಕ ಉತ್ತರಾಧಿಕಾರ ಎನ್ನುವುದು ವಂಶಪಾರಂಪರ್ಯವಲ್ಲ; ಮಾನವ ರೂಪಿತವಲ್ಲ. ಕಾಲಕ್ಕೆ ತಕ್ಕಂತೆ ಏನೇನು ಆಗಬೇಕೋ ಆಗುತ್ತಿರುತ್ತದೆ.

    ಹಾಗೆಂದು ಮಾನವ ಸಮಾಜ ಎಲ್ಲವನ್ನೂ ಕಾಲಾಯ ತಸ್ಮೈ ನಮಃ ಎಂದು ದೈವನಿಯಾಮಕದ ಮಡಿಲಿಗೆ ಹಾಕಿ ಹೊಣೆಗೇಡಿತನ ಮೆರೆಯಬಹುದೇ? ಖಂಡಿತಾ ಇಲ್ಲ. ಪ್ರತಿಯೊಂದು ಜೀವಿಯ ಸೃಷ್ಟಿಗೂ ಒಂದು ಉದ್ದೇಶವಿದೆ, ಹೊಣೆಗಾರಿಕೆಯಿದೆ. ಅದನ್ನು ನಾವು ಅರಿಯಬೇಕಷ್ಟೇ. ಆದರೆ, ನಿತ್ಯಪ್ರಪಂಚದ ಆಗುಹೋಗುಗಳನ್ನು ಗಮನಿಸುವಾಗ ನಾಗರಿಕ ಸಮಾಜ ಮಾನವತೆಯನ್ನೇ ಮರೆತು ಮೃಗೀಯವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ದುರಾಸೆ, ಲಾಲಸೆ, ಮಾತ್ಸರ್ಯ, ಸೇಡು, ರೋಷ, ಮಾನವೀಯತೆಯ ಬುನಾದಿಯನ್ನೇ ಅಲುಗಾಡಿಸುವಂಥ ದುಷ್ಟ ಪ್ರವೃತ್ತಿಗಳು ದಂಗುಬಡಿಸುತ್ತವೆ. ಮಗ ಸತ್ತ ಮೇಲೆ ಮಾವ ಸೊಸೆಯನ್ನು ಮದುವೆಯಾಗುತ್ತಾನೆ! ವರಸೆಯಲ್ಲಿ ಅಣ್ಣನಾಗಬೇಕಾದವನೊಂದಿಗೆ ಸಂಬಂಧ ಬೆಳೆಸಿ, ಹೆಂಡತಿ ಗಂಡನನ್ನೇ ಕೊಲ್ಲಿಸುತ್ತಾಳೆ, ಮದುವೆಯಾಗೆಂದು ಒತ್ತಾಯಿಸಿದವಳನ್ನು ನರರಾಕ್ಷಸನೊಬ್ಬ ಮೂವತೆôದು ತುಂಡು ಮಾಡಿ ಫ್ರೀಜರ್​ನಲ್ಲಿಡುತ್ತಾನೆ.. ಅಪ್ರಾಪ್ತ ಬಾಲಕಿಯನ್ನು ಎರಡನೇ ಗಂಡನ ಮಾತು ಕೇಳಿ ತಾಯಿಯೇ ವೇಶ್ಯಾವಾಟಿಕೆಗೆ ದೂಡುತ್ತಾಳೆ.. ಬಡತನವೋ, ಸಾಂಸಾರಿಕ ಕಲಹವೋ, ಇನ್ನೂ ಬದುಕಿ ಬಾಳಬೇಕಾದ, ಜಗತ್ತನ್ನೇ ನೋಡದ ಕಂದಮ್ಮಗಳನ್ನು ಅಪ್ಪ ಅಮ್ಮ ಅನ್ನಿಸಿಕೊಂಡವರೇ ಕೆರೆಗೆ, ಬಾವಿಗೆ, ನದಿಗೆ, ನಾಲೆಗೆ ದೂಡಿ ತಾವೂ ಸಾಯುತ್ತಾರೆ. ಸಾರ್ಥಕ, ಸುಂದರ ಅನುಭವ ಆಗಬೇಕಿದ್ದ ಜಗತ್ತು ಇಷ್ಟೊಂದು ಘೊರ, ಕ್ರೂರ ಆಗಿದ್ದಾದರೂ ಹೇಗೆ?

    ಸತ್ತವರನ್ನು ಬದುಕಿಸುವ ಶಕ್ತಿ ಮನುಷ್ಯನಿಗಿಲ್ಲವೆಂದ ಮೇಲೆ, ಇನ್ನೊಬ್ಬರ ಜೀವ ತೆಗೆಯುವ ಅಧಿಕಾರವೂ ಆತನಿಗಿಲ್ಲ. ಆದರೆ, ಸಮಾಜದಲ್ಲಿ ಕೊಲೆಗಡುಕ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳ ಮೂಡಿಸುತ್ತದೆ. ಕಾರಿನಡಿ ಸಿಲುಕಿದ ಯುವತಿಯನ್ನು ಕಿಲೋಮೀಟರ್​ಗಟ್ಟಲೆ ಎಳೆದೊಯ್ಯುತ್ತಾರೆ. ಸಣ್ಣಪುಟ್ಟ ಕಾರಣಗಳಿಗೂ ಜೀವವನ್ನೇ ತೆಗೆದುಬಿಡುತ್ತಾರೆ. ಕೊಲೆ ಎನ್ನುವುದು ಮಕ್ಕಳಾಟದಷ್ಟು ಸಲೀಸಾಗಿಬಿಟ್ಟಿದೆ. ಅಂದರೆ ಸಮಾಜದಲ್ಲಿ ಸಂಯಮ ಮಾಯವಾಗುತ್ತಿದೆ. ಇನ್ನೊಬ್ಬರ ಏಳಿಗೆ ಸಹಿಸಲಾಗದ ಅಸಹನೆ, ಇನ್ನೊಬ್ಬರ ವಿಚಾರ ಒಪ್ಪದಂಥ ಅಸಹಿಷ್ಣುತೆ, ತನಗೆ ಸಿಗದೇ ಇರುವುದು ಯಾರಿಗೂ ಸಿಗಬಾರದು ಎಂಬ ವಿಕೃತಿ, ನನ್ನ ಬದುಕು ನನ್ನಿಷ್ಟ, ಬೇಕಾದಂತೆ ಬದುಕುತ್ತೇನೆ, ಪ್ರಶ್ನಿಸಲು ನೀವ್ಯಾರು ಎಂಬ ದಾಷ್ಟರ್್ಯ. ಧರ್ಮ, ಮತ, ಪಂಥ, ಜಾತಿಗಳ ನಡುವೆ ಒಬ್ಬರು ಇನ್ನೊಬ್ಬರನ್ನು ಒಪ್ಪದಿರುವಂಥ ಸಂಕುಚಿತ ವಾತಾವರಣ ನೋಡುವಾಗ ಪ್ರಜ್ಞಾವಂತಿಕೆ ಎನ್ನುವುದು ಮನುಷ್ಯನಿಂದ ದೂರವಾಗುತ್ತಿದೆಯೇ? ಸ್ವಾರ್ಥದ ಬಲೆಗೆ ಬಿದ್ದು ವಿಪತ್ತಿನ ಹಾದಿಗೆ ಕಾಲಘಟ್ಟ ಹೊರಳಿದೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ.

    ಹಾಗೆಂದು ತೀರಾ ಹತಾಶರಾಗುವ ಅವಶ್ಯಕತೆಯೂ ಇಲ್ಲ. ಸ್ವಾರ್ಥ, ಲಾಲಸೆ, ದುಷ್ಟಪ್ರವೃತ್ತಿ ಯಾವುದೋ ಒಂದು ಕಾಲಕ್ಕೆ ಸೀಮಿತವೂ ಅಲ್ಲ. ಹಾಗೆ ನೋಡಿದರೆ, ಪ್ರಜಾಪ್ರಭುತ್ವದಲ್ಲಿ ಸಮಾಜಕ್ಕೊಂದು ಚೌಕಟ್ಟಿದೆ, ಕಾನೂನಿನ ಬಲವಿದೆ, ಅನ್ಯಾಯದ ವಿರುದ್ಧ ಹೋರಾಡುವುದಕ್ಕೊಂದು ಸಂಘಟಿತ ವ್ಯವಸ್ಥೆ ಇದೆ. ಅಲ್ಲದೆ, ಶತಶತಮಾನಗಳಿಂದಲೂ ಮನುಷ್ಯ ಇಂಥ ಎಲ್ಲ ಕ್ರೌರ್ಯ, ಹಿಂಸೆ, ರಕ್ತಪಾತದ ಕಾಲಘಟ್ಟವನ್ನು ದಾಟಿಕೊಂಡೇ ಬಂದಿದ್ದಾನೆ. ಹಿಂದಿನ ಕಾಲದಲ್ಲೂ ದ್ವೇಷ ಅಸೂಯೆಗಳಿದ್ದವು. ಕಳ್ಳತನ, ದರೋಡೆ, ಲೂಟಿ, ಭ್ರಷ್ಟಾಚಾರಗಳು ತಾಂಡವವಾಡುತ್ತಿದ್ದವು. ಕೊಲೆ, ಅತ್ಯಾಚಾರ, ಅನಾಚಾರಗಳು ವ್ಯಾಪಕವಾಗಿದ್ದವು. ಕುದುರೆ ಲಾಯದ ಕಾವಲುಗಾರನ ಮೋಹದ ಬಲೆಗೆ ಬಿದ್ದ ರಾಣಿ ರಾಜನನ್ನು ಕೊಲ್ಲಿಸುವಂಥ ಅಪರಾಧಗಳು ಆಗಲೂ ಇದ್ದವು. ಆಗಲೂ ಪ್ರೀತಿಯ ಹೆಸರಲ್ಲಿ ಹೆಣ್ಣು ಮಕ್ಕಳ ಶೋಷಣೆ ನಡೆಯುತ್ತಿತ್ತು. ವಿವಾಹಬಾಹಿರ ಸಂಬಂಧಗಳಿದ್ದವು. ಒಂದು ಯುದ್ಧ ನಡೆದರೆ, ರಾಜ್ಯದ ಗಂಡಸರೆಲ್ಲ ಜೀವ ಕಳೆದುಕೊಳ್ಳುತ್ತಿದ್ದರು. ಹೆಂಗಸರೆಲ್ಲ ಸಹಗಮನ ಮಾಡಿ ಮಾನ ಉಳಿಸಿಕೊಳ್ಳಬೇಕಿತ್ತು. ಇಲ್ಲವೇ ಶತ್ರು ಸೈನಿಕರ ದಾಸಿಯರಾಗಿ ಅವರ ದೇಹದ ದಾಹ ತಣಿಸಬೇಕಿತ್ತು. ನಮ್ಮ ಚರಿತ್ರೆಯ ಕೃತಿಗಳು ರಾಜಮಹಾರಾಜರ ಶೌರ್ಯವನ್ನು ಮಾತ್ರ ಬಣ್ಣಿಸುತ್ತವೆ. ಆದರೆ, ಯುದ್ಧದ ಹೆಸರಿನಲ್ಲಿ ನಡೆಯುತ್ತಿದ್ದ ಕ್ರೌರ್ಯವನ್ನು ಚಿತ್ರಿಸುವುದಿಲ್ಲ. ರಾಜರುಗಳು ವಿರೋಧಿಗಳನ್ನು, ಶತ್ರುಗಳನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಿದ್ದರು. ಮೊಘಲರ ದೊರೆ ಔರಂಗಜೇಬ, ಸಾಂಭಾಜಿಯನ್ನು ಚರ್ಮ ಸುಲಿಸಿ, ನಾಲಿಗೆ ಕತ್ತರಿಸಿ, ಕಣ್ಣು ಕೀಳಿಸಿ, ಚಿತ್ರವಿಚಿತ್ರವಾಗಿ ಹಿಂಸಿಸಿ ಬರ್ಬರವಾಗಿ ಸಾಯಿಸಿದ್ದ. ಇದು ಯಾವುದೋ ಒಬ್ಬ ರಾಜ, ಒಂದು ರಾಜವಂಶಕ್ಕೆ ಸೀಮಿತವಲ್ಲ. ಪ್ರಜಾಪ್ರಭುತ್ವ ಯುಗ ಆರಂಭಕ್ಕೆ ಮುನ್ನ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಇರುವುದು ಇಂಥ ರಕ್ತಸಿಕ್ತ ಇತಿಹಾಸವೇ.

    ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
    ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

    ಕೃಷ್ಣ ಭಗವದ್ಗೀತೆಯಲ್ಲಿ ಶಿಷ್ಟರ ರಕ್ಷಣೆಗಾಗಿ, ದುಷ್ಟರನ್ನು ಶಿಕ್ಷಿಸುವ ಸಲುವಾಗಿ, ಧರ್ಮದ ಸಂಸ್ಥಾಪನೆ ಸಲುವಾಗಿ ಮತ್ತೆ ಮತ್ತೆ ಹುಟ್ಟಿಬರುತ್ತೇನೆ ಎಂದು ಹೇಳಿರುವುದಕ್ಕೆ ಹಿನ್ನೆಲೆಯೇ ಇದು. ಅನ್ನದ ಬೆಲೆ ಹಸಿದವನಿಗೆ ಮಾತ್ರ ಗೊತ್ತು. ಅದೇ ರೀತಿ ಯಾವುದು ಒಳಿತು ಎಂದು ತಿಳಿಯಬೇಕಾದರೆ, ಎದುರಿಗೆ ಕೆಡುಕು ಕೂಡ ಇರಬೇಕು. ರಾಕ್ಷಸರೇ ಇಲ್ಲದಿರುತ್ತಿದ್ದರೆ ದೇವತೆಗಳಿಗೇನು ಕೆಲಸ? ಹೀಗೆ ಎಲ್ಲ ಕಾಲದಲ್ಲಿಯೂ, ದುಷ್ಟ ಶಕ್ತಿಗಳು, ದುಷ್ಟ ಚಿಂತನೆಗಳು, ದುಷ್ಟ ವ್ಯಕ್ತಿಗಳು ಇರುತ್ತಿದ್ದರು. ಅವರನ್ನೆಲ್ಲ ದಮನ ಮಾಡುವುದಕ್ಕೆ ಸಾತ್ವಿಕ ಶಕ್ತಿಗಳ ಪ್ರವರ್ಧಮಾನವೂ ಆಗುತ್ತಿತ್ತು. ದುಷ್ಟರು ಅಟ್ಟಹಾಸ ಮೆರೆಯುತ್ತಾರೆ, ಶಿಷ್ಟರು ಕಷ್ಟಪಡುತ್ತಾರೆ ಎನ್ನುವುದು ನಮ್ಮೆಲ್ಲ ಪುರಾಣ, ಇತಿಹಾಸ ಕಥನಗಳಿಂದ ತಿಳಿದುಬರುತ್ತದೆ. ಆದರೆ, ಅಲ್ಲೊಂದು ಸಂದೇಶವೂ ಇದೆ. ಎಷ್ಟೇ ದೊಡ್ಡವರಾದರೂ ದುಷ್ಟರಿಗೆ ಉಳಿಗಾಲವಿಲ್ಲ. ಕೊನೆಗೆ ಸತ್ಯವೇ ಗೆಲ್ಲುತ್ತದೆ, ನ್ಯಾಯವೇ ಗೆಲ್ಲುತ್ತದೆ. ಸತ್ಯಂ ಶಿವಂ ಸುಂದರಂ ಎಂಬ ಸಂದೇಶ ಅದು.

    ನಾಳೆ ಶಿವರಾತ್ರಿ. ಶಿವ ಎಂದರೆ ಮಂಗಳ. ಜಗತ್ತಿಗೆ ಶುಭ ತರುವವನು ಶಿವ. ನಮ್ಮ ಶಿವನ ಪರಿಕಲ್ಪನೆಯೇ ಅದ್ಭುತ. ಆತ ನಾಗೇಂದ್ರ ಹಾರಾಯ ಅಂದರೆ ಸರ್ಪವನ್ನು ಮಾಲೆಯನ್ನಾಗಿ ಧರಿಸುವಂತವನು, ತ್ರಿಲೋಚನಾಯ- ಸೂರ್ಯ, ಚಂದ್ರ, ಅಗ್ನಿಯನ್ನೇ ಮೂರು ಕಣ್ಣುಗಳನ್ನಾಗಿಸಿಕೊಂಡವನು, ಭಸ್ಮಾಂಗರಾಗಾಯ- ಚಿತಾಭಸ್ಮವನ್ನು ಅಂಗಾಂಗಗಳಿಗೆ ಲೇಪಿಸಿಕೊಳ್ಳುವವನು, ಮಹೇಶ್ವರಾಯ- ಜಗತ್ತಿಗೇ ಒಡೆಯನು, ನಿತ್ಯಾಯ ಶುದ್ಧಾಯ ದಿಗಂಬರಾಯ, ನಿತ್ಯನೂ, ಪರಿಶುದ್ಧನೂ, ದಿಕ್ಕುಗಳನ್ನೇ ವಸನಗಳನ್ನಾಗಿ ಧರಿಸಿದವನೂ, ಮಂದಾಕಿನಿ ಸಲಿಲ ಚಂದನ ರ್ಚಚಿತಾಯ- ಮಂದಾಕಿನಿ ನದಿಯ ನೀರು ಹಾಗೂ ಗಂಧವನ್ನು ಲೇಪಿಸಿಕೊಂಡವನು, ಶಿವಾಯ ಗೌರಿ ವದನಾಬ್ಜ ಬೃಂದ- ಗೌರಿ ದೇವಿಯ ಮುಖಾರವಿಂದವನ್ನು ಅರಳಿಸುವ ಸೂರ್ಯನೂ, ಆನಂದಸ್ವರೂಪನೂ. ಸೂರ್ಯಾಯ ದಕ್ಷಾಧ್ವರನಾಶಕಾಯ- ದಕ್ಷ ಯಜ್ಞ ನಾಶಪಡಿಸಿದವನೂ, ಶ್ರೀನೀಲಕಂಠಾಯ ವೃಷಭ ಧ್ವಜಾಯ- ಕಾಕೋಟಕ ವಿಷವನ್ನು ಗಂಟಲಲ್ಲಿ ಅರಗಿಸಿಕೊಂಡ ನೀಲಕಂಠನೂ, ವೃಷಭವನ್ನು ಧ್ವಜವಾಗಿಸಿಕೊಂಡವನೂ, ಶಿವನ ವಾಸಸ್ಥಾನ ಕೈಲಾಸ ಪರ್ವತ. ಅದಕ್ಕೆ ಬೆಳ್ಳಿ ಬೆಟ್ಟ ಎಂದೂ ಹೆಸರು. ಬೆಳ್ಳಿ ಏಕೆಂದರೆ, ದಟ್ಟ ಹಿಮದಿಂದ ಆವೃತವಾಗಿರುವ ಪರ್ವತ ಅದು. ಹೀಗೆ ಹಿಮ ಪರ್ವತದಲ್ಲಿ ದಿಗಂಬರನಾಗಿ, ಪ್ರಾಣಿಯ ಚರ್ಮವನ್ನು ಸುತ್ತಿಕೊಂಡು, ತಲೆಯಲ್ಲಿ ಗಂಗೆಯನ್ನು ಹೊತ್ತುಕೊಂಡು, ಕೊರಳಲ್ಲಿ ಸರ್ಪ, ಬಗಲಲ್ಲಿ ವೃಷಭ, ಮಂದಾಕಿನಿ ನದಿಯಲ್ಲಿ ಸ್ನಾನ, ಪುಷ್ಪಬಾಣ ಬಿಟ್ಟು ತಪಸ್ಸು ಭಂಗ ಮಾಡಿದ ಕಾಮನ ದಹನ ಮಾಡಿದವನು ಶಿವ. ಹೀಗೆ ಪರಮಶಿವನ ಸ್ವರೂಪಚಿಂತನೆಯೇ ಅನುಪಮ.

    ಆಧುನಿಕ ಜಗತ್ತಿನ ಜಂಜಡಗಳಿಗೆ ಶಿವಚಿಂತನೆಯಲ್ಲಿ ಪರಿಹಾರವಿದೆ. ಪ್ರಪಂಚದ ಎಲ್ಲ ಕಷ್ಟ- ಅನಿಷ್ಟಗಳಿಗೆ ಕಾರಣ ಕಾಮ, ಕ್ರೋಧ, ಲೋಭ, ಮೋಹ,ಮದ, ಮಾತ್ಸರ್ಯ ಎಂಬ ಈ ಆರು ಶತ್ರುಗಳನ್ನು ಬಿಟ್ಟರೆ ಬೇರೊಂದು ಕಾರಣವಿರುವುದಿಲ್ಲ. ಈ ಅರಿಷಡ್ವರ್ಗಗಳನ್ನು ಗೆದ್ದವನು ಶಿವ. ಆತ ಕ್ಷಿಪ್ರಪ್ರಸಾದ. ಅಂದರೆ, ನಿಜವಾದ ಭಕ್ತರಿಗೆ ತುಂಬಾ ಸತಾಯಿಸದೆ ಬೇಗನೆ ವರ ಕೊಟ್ಟುಬಿಡುವವನು. ಶಿವನ ಧ್ಯಾನವೂ ತುಂಬಾ ಕಠಿಣವೇನಲ್ಲ. ಓಂ ನಮಃ ಶಿವಾಯ ಎಂಬ ಐದಕ್ಷರದ ಪಂಚಾಕ್ಷರಿ ಮಂತ್ರ ಹೇಳಿದರೆ ಮುಗಿಯಿತು. ಶಿವ ಪೂಜೆ, ಧ್ಯಾನಕ್ಕೆ ತುಂಬ ಕಟ್ಟುನಿಟ್ಟುಗಳೂ ಇಲ್ಲ. ಶುದ್ಧ ಮನಸ್ಸಿನಿಂದ ಯಾರು ಬೇಕಾದರೂ ಪೂಜಿಸಬಹುದು. ಭಕ್ತರಿಂದ ಹೆಚ್ಚಿನ ಅಪೇಕ್ಷೆಗಳು ಆತನಿಗಿಲ್ಲ. ಜಲಾಭಿಷೇಕದಿಂದಲೇ ಆತ ತೃಪ್ತ.

    ಜನ ಕಷ್ಟಗಳು ಎದುರಾದಾಗ ಪರಿಹಾರಕ್ಕಾಗಿ ದೇವಸ್ಥಾನಗಳಿಗೆ ಓಡುತ್ತಾರೆ. ಆದರೆ, ನಮ್ಮ ಸನಾತನ ಪರಂಪರೆಯಲ್ಲಿ ಸಂಕಟವೇ ಬರದಂತೆ ಸದಾಕಾಲ ಭಗವಂತನ ಚಿಂತನೆ ಮಾಡುವ ಕ್ರಮವಿದೆ. ಅಂದರೆ, ರೋಗ ಬಂದ ಮೇಲೆ ಔಷಧಿ ಸೇವಿಸುವುದಕ್ಕಿಂತ ರೋಗವೇ ಬರದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮ ಅದು. ನಿತ್ಯ ಭಗವಂತನ ಪೂಜೆ, ಧ್ಯಾನ, ತತ್ವ ಚಿಂತನೆ, ಮನನದಿಂದ ಮನಸ್ಸು ಶುದ್ಧವಾಗುತ್ತದೆ. ದುಷ್ಟ ಆಲೋಚನೆಗಳು ದೂರ ಸರಿಯುತ್ತವೆ. ಮನಸ್ಸಿಗೆ ಸಂಯಮ, ಶಾಂತಿ ಲಭಿಸುತ್ತದೆ. ವ್ಯವಹಾರ ಜಗತ್ತಿನ ರೋಷಾವೇಶಗಳಿಂದ ಮನಸ್ಸು ಕ್ಷೋಭೆಗೊಳ್ಳದಂತೆ, ಉದ್ವೇಗಗೊಳ್ಳದಂತೆ ಸೈರಣೆಯ ಶಕ್ತಿಯನ್ನು ದೈವಭಕ್ತಿ ಕಲಿಸುತ್ತದೆ. ನಮ್ಮ ಎಲ್ಲ ಹಬ್ಬ ಹರಿದಿನ ಆಚರಣೆಗಳ ಹಿಂದೆ ಇಂಥ ಸಾತ್ವಿಕ ಚಿಂತನೆಗಳೇ ಇವೆ. ಇದನ್ನೆಲ್ಲ ಯಾರು ನಂಬುತ್ತಾರೆ ಎನ್ನುವವರಿದ್ದರೂ, ಸಾವಿರಕ್ಕೆ ಒಬ್ಬರು ದೈವಭಕ್ತಿಯಿಂದ ಮನಃಶಾಂತಿ ಪಡೆದುಕೊಂಡರೂ, ಸಮಾಜಕ್ಕೆ ಅಷ್ಟು ಭಾರ ಹಗುರಾದಂತೆ. ಕೊನೆಗೆ ಎಲ್ಲವೂ ಅವರವರ ಭಾವಕ್ಕೆ, ಅವರವರ ವ್ಯಾಖ್ಯಾನಕ್ಕೆ…

    ಗೌರಿ ವಿಲಾಸ ಭುವನಾಯ ಮಹೋದಯಾಯ |
    ಪಂಚಾನನಾಯ ಶರಣಾಗತರಕ್ಷಕಾಯ
    ಶರ್ವಾಯ ಸರ್ವಜಗತಾಮಧಿಪಾಯ ತಸ್ಯೈ|
    ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ ||

    ಭಕ್ತರ ದಾರಿದ್ರ್ಯವನ್ನು ಸುಟ್ಟುಹಾಕುವವನೂ, ಗೌರಿಮಾತೆಯ ಅನುಗ್ರಹ ಪ್ರಪಂಚವಾಗಿರುವವನೂ, ದೇವದೇವನೂ, ಸಿಂಹಸ್ವರೂಪನೂ, ಸಮಸ್ತ ಕೋರಿಕೆಗಳನ್ನು ಈಡೇರಿಸುವ ಕಲ್ಪವೃಕ್ಷನೂ, ಶರಣೆಂದು ಬರುವವರನ್ನು ರಕ್ಷಿಸುವವನೂ, ಸಮಸ್ತ ವಿಶ್ವದ ಅಧಿಪತಿಯೂ ಆದ ಪರಮೇಶ್ವರನಿಗೆ ಭಕ್ತಿಪೂರ್ವಗಳ ನಮಸ್ಕಾರಗಳು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts