

ಸಿಂಹಾಸನವನ್ನು ಯೋಗ್ಯತೆ, ಸಾಮರ್ಥ್ಯದಿಂದ ದಕ್ಕಿಸಿಕೊಳ್ಳಬೇಕೇ ಹೊರತು, ಅದು ದಯೆ, ಔದಾರ್ಯದಿಂದ ಬೇಡಿ ಪಡೆದುಕೊಳ್ಳುವಂಥ ವಸ್ತುವಲ್ಲ. ಜಗತ್ತಿನ ಯಾವುದೇ ದೇಶದ, ಯಾವುದೇ ರಾಜವಂಶದ ಕಥೆ ಗಮನಿಸಿದರೂ, ಸಿಂಹಾಸನವೆನ್ನುವುದು ಶಕ್ತಿವಂತನ ಸೊತ್ತು. ಮಹತ್ವಾಕಾಂಕ್ಷಿಯಾದವನು ಹೋರಾಡಿ ಸಿಂಹಾಸನವನ್ನು ದಕ್ಕಿಸಿಕೊಳ್ಳುತ್ತಾನೆ. ಅಲ್ಲಿ ನ್ಯಾಯ, ಪ್ರಾಮಾಣಿಕತೆ, ಅವನ ನಂತರ ಇವನೆಂಬ ಸರದಿ, ತ್ಯಾಗ ಇತ್ಯಾದಿ ಗುಣವಿಶೇಷಗಳನ್ನು ಹುಡುಕುವಂತಿಲ್ಲ.
ತನ್ನ ಮಗನೇ ಪಟ್ಟಕ್ಕೇರಲಿ ಎಂಬ ಕೈಕೇಯಿಯ ವ್ಯಾಮೋಹ ರಾಮಾಯಣಕ್ಕೆ ಕಾರಣವಾಯಿತು. ‘ಚಿಕ್ಕಮ್ಮನ ಆಸೆಯಂತೆ ಭರತನೇ ಪಟ್ಟಕ್ಕೇರಲಿ ಎಂಬ ರಾಮನ ಔದಾರ್ಯ; ಸಿಂಹಾಸನ ರಾಮನಿಗೆ ಸೇರಿದ್ದು, ಅಲ್ಲಿ ಅಣ್ಣನ ಪಾದುಕೆ ಇಟ್ಟು ಪ್ರತಿನಿಧಿ ಆಗುವೆನೇ ಹೊರತು ಸ್ವತಃ ಸಿಂಹಾಸನ ಏರಲಾರೆ ಎಂಬ ಭರತನ ತ್ಯಾಗ..’ ಭಾರತದ ಸಾಮ್ರಾಜ್ಯ ಪರಂಪರೆಯಲ್ಲಿ ಅಪರೂಪದ ನಿದರ್ಶನ.
ಸಿಂಹಾಸನಕ್ಕಾಗಿ ನಡೆದ ಹೋರಾಟವೇ ಮಹಾಭಾರತದ ಜೀವದ್ರವ್ಯ. ದುರ್ಯೋಧನನೆಂಬ ಛಲಗಾರ ಬಾಲ್ಯದಿಂದಲೂ ಕಂಡಿದ್ದು ಸಿಂಹಾಸನದ ಕನಸನ್ನು. ಆತ ಜೀವಮಾನಪೂರ್ತಿ ಸಿಂಹಾಸನದ ಹೋರಾಟದಲ್ಲೇ ಕಳೆಯುತ್ತಾನೆ. ಮಕ್ಕಳು ನೀರಾಟದಲ್ಲಿ ತಲ್ಲೀನರಾಗಿರುವಾಗ ದುರ್ಯೋಧನ ಮಾತ್ರ ಭೀಮನನ್ನು ಮುಳುಗಿಸಿ ಕೊಂದರೆ, ತನ್ನ ಹಾದಿ ಸುಗಮವಾದೀತು ಎಂದು ಯೋಚಿಸುತ್ತಾನೆ. ಪಾಂಡವರನ್ನು ಅರಗಿನ ಮನೆಯಲ್ಲಿ ಸುಟ್ಟು ಕೊಂದರೆ ಸಿಂಹಾಸನಕ್ಕೆ ಪೈಪೋಟಿ ಇರುವುದಿಲ್ಲ ಎಂದು ಷಡ್ಯಂತ್ರ ಹೊಸೆಯುತ್ತಾನೆ. ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿ ಕಾಡಿಗಟ್ಟುವ ಮೂಲಕ ಹಸ್ತಿನಾಪುರದ ಸಿಂಹಾಸನ ತನ್ನ ಬಳಿಯೇ ಉಳಿಯುವಂತೆ ನೋಡಿಕೊಳ್ಳುತ್ತಾನೆ. ಅಜ್ಞಾತವಾಸದ ಬಳಿಕ, ‘ಸಿಂಹಾಸನ ನೀನೇ ಇಟ್ಟುಕೋ, ನಮಗೆ ಐದು ಹಳ್ಳಿಯನ್ನಾದರೂ ಬಿಟ್ಟುಕೊಡು ಸಾಕು’ ಎಂಬ ಪಾಂಡವ ಧರ್ಮರಾಯನ ಕೋರಿಕೆಗೆ, ‘ಸೂಜಿಮೊನೆಯಷ್ಟು ಜಾಗವನ್ನೂ ಬಿಟ್ಟುಕೊಡಲಾರೆ. ಶಕ್ತಿ ಇದ್ದರೆ ಯುದ್ಧದಲ್ಲಿ ಗೆದ್ದು ಪಡೆದುಕೊಳ್ಳಿ’ ಎಂದು ಸವಾಲು ಹಾಕುತ್ತಾನೆ..
ಇತಿಹಾಸವೆನ್ನುವುದು ಯಾವಾಗಲೂ ಸಿಂಹಾಸನಕ್ಕಾಗಿ ನಡೆದ ರಕ್ತಸಿಕ್ತ ಹೋರಾಟದ ಕಥನವೇ ಆಗಿರುವುದು ವಿಪರ್ಯಾಸ. ರಕ್ತದ ಕಲೆ ಅಂಟದ ಸಿಂಹಾಸನ ಜಗತ್ತಿನಲ್ಲಿ ಎಲ್ಲೂ ಸಿಗುವುದಿಲ್ಲ. ಅಧಿಕಾರದ ದಾಹ, ಸಿಂಹಾಸನದ ವ್ಯಾಮೋಹ ಮನುಷ್ಯನನ್ನು ಕ್ರೂರಿಯಾಗಿಸಿಬಿಡುತ್ತದೆ. ನ್ಯಾಯಾನ್ಯಾಯಗಳ ವಿವೇಚನೆ ಮರೆಸಿಬಿಡುತ್ತದೆ. ತಂದೆ ಮಗನನ್ನು, ಮಗ ತಂದೆಯನ್ನು, ಅಣ್ಣತಮ್ಮಂದಿರನ್ನು, ಹತ್ತಿರದ ಬಂಧುಗಳನ್ನು ಖಡ್ಗದ ಮೊನೆಯಿಂದ ಕತ್ತರಿಸಿ ಅಧಿಕಾರಕ್ಕೆ ಬಂದ ಮೈಝುುಮ್ಮೆನ್ನಿಸುವ ಕಥೆಗಳು ಸಾವಿರ. ಹುಟ್ಟುವಾಗ ಅಣ್ಣತಮ್ಮ, ಬೆಳೆದ ಮೇಲೆ ವಾಲಿ-ಸುಗ್ರೀವ ಎಂಬ ಮಾತಿಗೆ ಕಾರಣವೇ ಸಿಂಹಾಸನದ ಕಲಹ.
ಭಾರತವನ್ನು ಸುದೀರ್ಘ ಕಾಲ ಆಳಿದ ಮುಘಲರ ಇತಿಹಾಸವನ್ನೇ ಪರಿಕಿಸುವುದಾದರೆ, ಅಕ್ಬರನ ನಂತರ ಜಹಾಂಗೀರ್ ಪಟ್ಟಕ್ಕೇರುವುದನ್ನು ವಿರೋಧಿಸಿ ಖುದ್ದು ಆತನ ಮಗ ಖುಸ್ರಾವು ಮಿರ್ಜಾ ಬಂಡೆದ್ದ. ಮಗನ ಕಣ್ಣು ಕೀಳಿಸಿ ಜೈಲಿಗಟ್ಟಿ 36 ವರ್ಷದ ಜಹಾಂಗೀರ್ ಅಧಿಕಾರಕ್ಕೆ ಬರಬೇಕಾಯಿತು. ಮುಂದೆ ಜಹಾಂಗೀರ್ ವಿರುದ್ಧ ಆತನ ಮಗ ಶಹಜಹಾನ್ ದಂಗೆ ಎದ್ದ. ಜೈಲಿನಲ್ಲಿದ್ದ ಅಣ್ಣ ಖುಸ್ರಾವು ಮಿರ್ಜಾನನ್ನು ಹತ್ಯೆಗೈದ. ಈ ಬಂಡಾಯವನ್ನು ಜಹಾಂಗೀರ್ ಹತ್ತಿಕ್ಕಿದರೂ, ಆತನ ಮರಣಾನಂತರ ಶಹಜಹಾನ್ ತಮ್ಮಂದಿರಾದ ದಾವರ್ ಭಕ್ಷ್, ಶಹರಿಯಾರ್ರನ್ನು ಕೊಲ್ಲಿಸಿ, ಮಲತಾಯಿ ನೂರ್ಜಹಾನ್ಳನ್ನು ಜೈಲಿಗಟ್ಟಿ ಪಟ್ಟಕ್ಕೇರಿದ. ಶಹಜಹಾನ್ ವಯೋವೃದ್ಧನಾದಾಗ ಆತನನ್ನು ಬಂಧನದಲ್ಲಿರಿಸಿದ ಔರಂಗಜೇಬ, ಅಣ್ಣ ದಾರಾ ಶಿಖೋಹ್, ತಮ್ಮಂದಿರಾದ ಮುರಾದ್ ಮತ್ತು ಶುಜಾರನ್ನು ಗಲ್ಲಿಗೇರಿಸಿ ಅಧಿಕಾರಕ್ಕೆ ಬಂದ.
ಕ್ರಿ.ಪೂ. 492ರಿಂದ 460ರವರೆಗೆ ಮಗಧ ಸಾಮ್ರಾಜ್ಯವನ್ನಾಳಿದ ಹರ್ಯಂಕ ವಂಶದ 2ನೇ ದೊರೆ ಅಜಾತಶತ್ರು ತನ್ನ ತಂದೆ ಬಿಂಬಿಸಾರನನ್ನು ಕೊಂದು ಪಟ್ಟಕ್ಕೇರಿದ್ದ. ಬಿಂಬಿಸಾರ ಗೌತಮ ಬುದ್ಧನ ಸಮಕಾಲೀನ ಮತ್ತು ಸ್ನೇಹಿತನಾಗಿದ್ದ. ಕಾಲಾನಂತರದಲ್ಲಿ ಅಜಾತಶತ್ರು ಸಹ ತನ್ನ ಮಗ ಉದಯಭದ್ರನ ಕೈಯಲ್ಲಿ ಹತನಾದ. ಮಗಧವನ್ನಾಳಿದ ಶಿಶುನಾಗ ವಂಶದ ಕೊನೆಯ ದೊರೆ ಮಹಾನಂದಿನ್ನನ್ನು ದಾಸಿಪುತ್ರ ಮಹಾಪದ್ಮನಂದ ಕೊಂದು ನಂದ ಸಾಮ್ರಾಜ್ಯವನ್ನು ಸ್ಥಾಪಿಸಿದ. ಸಿಂಹಾಸನಕ್ಕಾಗಿ ತನ್ನ ಅಷ್ಟೂ ಮಲಸೋದರರನ್ನು ಕೊಲ್ಲಿಸಿದ ಮಹಾಪದ್ಮನಂದ ಪಾಟಲಿಪುತ್ರವನ್ನು (ಈಗಿನ ಪಟನಾ) ರಾಜಧಾನಿಯನ್ನಾಗಿಸಿಕೊಂಡು ಮಗಧವನ್ನಾಳಿದ. ಮುಂದೆ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯರು ನಂದ ಸಾಮ್ರಾಜ್ಯ ಕೊನೆಗೊಳಿಸಿ ಮೌರ್ಯರ ಆಳ್ವಿಕೆ ಆರಂಭಿಸಿದರು.
ಮೌರ್ಯ ವಂಶದಲ್ಲಿ ಪ್ರಸಿದ್ಧನಾದ ಚಕ್ರವರ್ತಿ ಅಶೋಕ, ಬಿಂದುಸಾರನ 3ನೇ ಮಗ. ಅಶೋಕ ಸಾಮ್ರಾಜ್ಯಕ್ಕೆ ಯುವರಾಜನೂ ಆಗಿರಲಿಲ್ಲ, ಪಟ್ಟಕ್ಕೆ ಪರಿಗಣನೆಯಲ್ಲೂ ಇರಲಿಲ್ಲ. ಆದರೆ, ತನ್ನ 99 ಸೋದರರನ್ನು ಕೊಲ್ಲಿಸಿದ ಅಶೋಕ ಸಿಂಹಾಸನವೇರಿ ಚಕ್ರವರ್ತಿ ಎನಿಸಿದ.
ಗುಪ್ತ ಸಾಮ್ರಾಜ್ಯದ ಸುವರ್ಣಯುಗದ ಪ್ರಸಿದ್ಧ ದೊರೆ ಸಮುದ್ರಗುಪ್ತನ ಮಗ ಚಂದ್ರಗುಪ್ತ ವಿಕ್ರಮಾದಿತ್ಯ ದುರ್ಬಲನಾಗಿದ್ದ ತನ್ನ ಅಣ್ಣ ರಾಮಗುಪ್ತನನ್ನು ಕೊಂದು ಅತ್ತಿಗೆ ಧ್ರುವದೇವಿಯನ್ನು ವಿವಾಹವಾದ ಎಂದು ಕೆಲವು ಉಲ್ಲೇಖಗಳಿವೆ. ಯವನರ ಸೈನ್ಯ ಸಾಮ್ರಾಜ್ಯಕ್ಕೆ ಮುತ್ತಿಗೆ ಹಾಕಿದಾಗ ರಾಮಗುಪ್ತ ಶರಣಾಗತನಾಗಿ ಪತ್ನಿಯನ್ನು ಶತ್ರುಗಳಿಗೆ ಒಪ್ಪಿಸಲು ಸಿದ್ಧನಾಗಿದ್ದ. ಇದನ್ನು ತಪ್ಪಿಸಲು ಚಂದ್ರಗುಪ್ತ ಈ ರೀತಿ ಮಾಡಬೇಕಾಯಿತು ಎಂಬ ಸಮರ್ಥನೆಯೂ ಸಿಗುತ್ತದೆ.
1433ರಿಂದ 1468ರವರೆಗೆ ಮೇವಾರದ ರಾಜನಾಗಿದ್ದ ರಜಪೂತರ ಸಿಸೋಡಿಯ ವಂಶದ ಮಹಾರಾಣ ಕುಂಭನನ್ನು ಆತನ ಮಗ ಉದಯ್ ಸಿಂಗ್ ಕೊಂದು ರಾಜನೆನಿಸಿದ. ಆದರೆ, ಐದೇ ವರ್ಷಗಳಲ್ಲಿ ಉದಯ್ ಸಿಂಗ್ನನ್ನು ಆತನ ತಮ್ಮ ರಾಯಮಲ್ಲ ಕೊಂದು ಅಧಿಕಾರಕ್ಕೆ ಬಂದ. ರಾಯಮಲ್ಲನ ನಂತರ ಪಟ್ಟಕ್ಕೆ ಬಂದ ಹಿರಿಯ ಮಗ ಪೃಥ್ವಿರಾಜ ಸಿಂಗ್ ಸಿಂಹಾಸನಕ್ಕೆ ಪೈಪೋಟಿ ಇರಬಾರದೆಂಬ ಕಾರಣಕ್ಕೆ ಸೋದರ ಸಂಗ್ರಾಮ ಸಿಂಗ್ನ ಒಂದು ಕಣ್ಣು ಕೀಳಿಸಿ ಗಡಿಪಾರು ಮಾಡಿದ. ಆದರೆ, ಪೃಥ್ವಿರಾಜ ಸಿಂಗ್ ನಿಧನದ ಬಳಿಕ ಸಿಂಹಾಸನವೇರಿದ ಸಂಗ್ರಾಮ ಸಿಂಗ್, ಮಹಾರಾಣ ಸಂಗ ಹೆಸರಿನಲ್ಲಿ ಪ್ರಖ್ಯಾತನಾದ. ಭಾರತದಲ್ಲಿ ಮುಘಲರ ಯುಗ ಆರಂಭಕ್ಕೆ ಮುನ್ನ ಉತ್ತರ ಭಾರತದ ಬಹುಪಾಲು ಭೂಭಾಗ ಆಳಿದ ಸಮರ್ಥ ರಾಜನೆಂಬ ಕೀರ್ತಿ ಮಹಾರಾಣ ಸಂಗನಿಗಿದೆ.
ರಾಜನೀತಿ, ಯುದ್ಧತಂತ್ರ ನಿಪುಣನಾಗಿದ್ದ ಮಹಾರಾಣ ಸಂಗ, ದೆಹಲಿಯಲ್ಲಿ ಆಳುತ್ತಿದ್ದ ಲೋಧಿಗಳನ್ನು ಸೋಲಿಸಿ ದೆಹಲಿ ಆಕ್ರಮಿಸುವ ಸಲುವಾಗಿ ಬಾಬರನ ಸಖ್ಯ ಬೆಳೆಸಿದ. ಆದರೆ, ಯುದ್ಧ ಗೆಲುವಿನ ಬಳಿಕ ಬಾಬರ್ ಅಫ್ಘಾನಿಸ್ತಾನಕ್ಕೆ ಮರಳದೆ, ತಾನೇ ದೆಹಲಿ ಸಿಂಹಾಸನವೇರಿ 1527ರಲ್ಲಿ ರಾಣ ಸಂಗನ ವಿರುದ್ಧ ಯುದ್ಧಸಾರಿದ. ಪರಾಜಿತನಾಗಿ ಗಾಯಾಳುವಾದ ಸಂಗ, ಮತ್ತೊಮ್ಮೆ ಸೈನ್ಯ ಸಂಘಟಿಸಿ ಯುದ್ಧ ಗೆಲ್ಲುವವರೆಗೂ ಚಿತ್ತೋರಿಗೆ ಮರಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಆದರೆ, ಬಾಬರ್ನ ವಿರುದ್ಧ ಮತ್ತೆ ಯುದ್ಧ ಇಷ್ಟವಿಲ್ಲದ ಆತನ ಪರಿವಾರದವರೇ ವಿಷವಿಕ್ಕಿ ಸಂಗನನ್ನು ಕೊಂದರು. ಬಳಿಕ ಆತನ ಮಗ 2ನೇ ರತನ್ ಸಿಂಗ್ ಪಟ್ಟಕ್ಕೆ ಬಂದ.
ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಕೃಷ್ಣದೇವರಾಯನ ಅಕಾಲಿಕ ಮರಣದ ಬಳಿಕ ತಮ್ಮ ಅಚ್ಯುತದೇವರಾಯ 1529ರಲ್ಲಿ ಪಟ್ಟಕ್ಕೇರಿದ. 1542ರಲ್ಲಿ ಆತ ನಿಧನ ಹೊಂದಿದಾಗ ಸೋದರಸಂಬಂಧಿ ಬಾಲಕ ಸದಾಶಿವರಾಯನನ್ನು ಪಟ್ಟಕ್ಕೇರಿಸಿ ಕೃಷ್ಣದೇವರಾಯನ ಅಳಿಯ ರಾಮರಾಯ ಉಸ್ತುವಾರಿಯಾದ. ಸದಾಶಿವರಾಯ ದುರ್ಬಲ ದೊರೆಯಾಗಿದ್ದ ಕಾರಣ ಆತ ಪ್ರೌಢಾವಸ್ಥೆಗೆ ಬಂದ ಬಳಿಕವೂ ಸಾಮ್ರಾಜ್ಯದ ಅಧಿಕಾರಸೂತ್ರ ಹಸ್ತಾಂತರಿಸಲು ನಿರಾಕರಿಸಿದ ರಾಮರಾಯ, ಸದಾಶಿವರಾಯನನ್ನು ಗೃಹಬಂಧನದಲ್ಲಿರಿಸಿ ತಾನೇ ಆಡಳಿತ ನಿರ್ವಹಿಸಿದ. ವಿಜಯನಗರವನ್ನಾಳಿದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳ ಇತಿಹಾಸದಲ್ಲಿ ಅಣ್ಣನನ್ನು ತಮ್ಮ ಕೊಂದ, ತಮ್ಮನನ್ನು ಅಣ್ಣ ಕೊಲ್ಲಿಸಿದ, ಅಣ್ಣ ಯುದ್ಧಕ್ಕೆ ತೆರಳಿದಾಗ ತಮ್ಮ ಸಿಂಹಾಸನ ಆಕ್ರಮಿಸಿಕೊಂಡ, ಬಾಲ್ಯದಲ್ಲಿ ಪಟ್ಟಕ್ಕೇರಿದ ದೊರೆಗಳ ಸಹಾಯಕರಾಗಿ ನೇಮಕಗೊಂಡ ಚಿಕ್ಕಪ್ಪ, ಸೋದರಮಾವಂದಿರೇ ಸಿಂಹಾಸನ ಆಕ್ರಮಿಸಿಕೊಂಡ ಕಥೆಗಳು ಹತ್ತುಹಲವು.
ಮರಾಠಾ ಸಂಸ್ಥಾನದ ಸುಪ್ರಸಿದ್ಧ ಪೇಶ್ವೆ ಬಾಲಾಜಿ ರಾವ್ ನಿಧನದ ಬಳಿಕ 10ನೇ ಪೇಶ್ವೆಯಾಗಿ ಬಾಲಕ ನಾರಾಯಣರಾವ್ ಪಟ್ಟಕ್ಕೇರಿದ. ಆದರೆ, ಪೇಶ್ವೆ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದ ಈತನ ಚಿಕ್ಕಪ್ಪ ರಘುನಾಥರಾವ್ ಷಡ್ಯಂತ್ರ ನಡೆಸಿ 1773 ಆಗಸ್ಟ್ 30 ಗಣೇಶ ಚತುರ್ಥಿಯ ದಿನ ಬಾಲಕನ ಹತ್ಯೆಗೆ ಸಂಚು ರೂಪಿಸಿದ್ದ. ನಾರಾಯಣರಾವ್ ಏಕಾಂಗಿಯಾಗಿ ವಿಶ್ರಾಂತಿಯಲ್ಲಿದ್ದಾಗ ಹಂತಕರು ದಾಳಿ ಮಾಡಿದರು. ನಾರಾಯಣರಾವ್ ಸಹಾಯಕ್ಕಾಗಿ ಕೂಗುತ್ತ, ಆಕ್ರಂದನ ಮಾಡುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ಚಿಕ್ಕಪ್ಪ ರಘುನಾಥರಾವ್ ಕೊಠಡಿಗೆ ಧಾವಿಸಿ ಕಾಲಿಗೆ ಬಿದ್ದ ನಾರಾಯಣರಾವ್, ಸಿಂಹಾಸನ ನೀನೇ ಇಟ್ಟುಕೊಂಡು, ಜೀವದಾನ ಮಾಡುವಂತೆ ಗೋಗರೆದರೂ, ರಘುನಾಥರಾವ್ ಮನಸ್ಸು ಕರಗಲಿಲ್ಲ. ಹಂತಕರು ನಿರ್ದಯವಾಗಿ ಬಾಲ ಪೇಶ್ವೆಯನ್ನು ತುಂಡುತುಂಡಾಗಿ ಕತ್ತರಿಸಿ ಕೊಂದರು. ಸುಮಾರು ಅರ್ಧ ಗಂಟೆ ಅವಧಿಯಲ್ಲಿ ನಾರಾಯಣರಾವ್ ಪರಿವಾರದವರು, ಸೇವಕರು, ಪುರೋಹಿತರನ್ನು ಸೇರಿ 11 ಜನರನ್ನು ಕಗ್ಗೊಲೆ ಮಾಡಲಾಯಿತು.
ಕೇವಲ ಭಾರತವೆಂದಲ್ಲ, ರೋಮನ್ನರು, ಗ್ರೀಕರು, ಈಜಿಪ್ಟಿಯನ್ನರು, ಜರ್ಮನಿ, ಫ್ರೆಂಚ್, ಇಂಗ್ಲಿಷ್, ರಷ್ಯಾ, ಮಂಗೋಲಿಯನ್ನರು ಹೀಗೆ ಇತಿಹಾಸದ ಪುಟಗಳಲ್ಲೂ ಇಂಥ ರಕ್ತಚರಿತ್ರೆಯ ಕಥೆಗಳು ಸಾವಿರ ಸಿಗುತ್ತವೆ. ತೀರಾ ಇತ್ತೀಚೆಗೆಂದರೆ 2001ನೇ ಇಸವಿ ಜೂನ್ 1ರಂದು ನೇಪಾಳದ ದೊರೆ ಬೀರೇಂದ್ರ, ರಾಣಿ ಐಶ್ವರ್ಯ ಸೇರಿದಂತೆ ರಾಜಪರಿವಾರದ 9 ಸದಸ್ಯರನ್ನು ಸಾಮೂಹಿಕವಾಗಿ ಗುಂಡಿಟ್ಟು ಕಗ್ಗೊಲೆ ಮಾಡಿದ ಉದಾಹರಣೆ ಕಣ್ಣಮುಂದಿದೆ. ಒಂದು ಸಿಂಹಾಸನಕ್ಕೆ ಹಲವು ಆಕಾಂಕ್ಷಿಗಳಿದ್ದಾಗ ಪೈಪೋಟಿ, ಹೋರಾಟ, ಕ್ರೂರತೆಯನ್ನು ಅನಾವರಣಗೊಳಿಸುವ ಕಂಬನಿಯ ಕೊಯಿಲಿನ ಕಥೆಗಳು ರಕ್ತದ ಹೊಳೆಯಾಗಿ ಇತಿಹಾಸದ ಸಮುದ್ರ ಸೇರಿವೆ..
ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಬಂದ ಮೇಲೂ ಅಧಿಕಾರದ ಸಂಘರ್ಷಗಳೇನೂ ನಿಂತಿಲ್ಲ. ಜನಾದೇಶ ದೊರೆತ ಬಳಿಕವೂ ಸರ್ಕಾರವನ್ನು ಮುನ್ನಡೆಸುವ ಅಧಿಕಾರ ಸ್ಥಾನಕ್ಕೆ ಹಲವು ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಡುವುದು, ಗಾದಿಯನ್ನು ದಕ್ಕಿಸಿಕೊಳ್ಳುವುದಕ್ಕೆ ಎಲ್ಲ ರೀತಿಯ ರಾಜಕೀಯ ಪಟ್ಟು, ರಣತಂತ್ರ, ರಾಜನೀತಿ, ಹಣಬಲ, ಜನಬಲ, ಜಾತಿಬಲದ ಅಸ್ತ್ರಗಳನ್ನು ಪ್ರಯೋಗಿಸಿ ಹೋರಾಡುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಒಂದೇ ವ್ಯತ್ಯಾಸವೆಂದರೆ, ರಾಜಪ್ರಭುತ್ವ ಕಾಲದ ರಕ್ತಚರಿತ್ರೆ ಪ್ರಜಾಪ್ರಭುತ್ವದಲ್ಲಿಲ್ಲ. ಶಸ್ತ್ರವಿಲ್ಲದೆ ಯುಕ್ತಿಯಿಂದ, ಪ್ರಭಾವದಿಂದ, ಹಟ, ಹೋರಾಟದಿಂದ ಯುದ್ಧ ಗೆಲ್ಲುವ ಕಲೆಯನ್ನು ಪ್ರಜಾಪ್ರಭುತ್ವ ಸಮಾಜಕ್ಕೆ ಕಲಿಸಿಕೊಟ್ಟಿದೆ.
‘ಬಾಹುಬಲಿ’ ಚಿತ್ರದಲ್ಲೊಂದು ಸನ್ನಿವೇಶ ಬರುತ್ತದೆ. ಕಾಲಕೇಯನ ವಿರುದ್ಧ ಯುದ್ಧ ಗೆಲ್ಲುವ ಮಗನಿಗೆ ಪಟ್ಟ ಕಟ್ಟುವುದಾಗಿ ಶಿವಗಾಮಿ ಆಶ್ವಾಸನೆ ಕೊಟ್ಟಿರುತ್ತಾಳೆ. ಯುದ್ಧವನ್ನು ಬಾಹುಬಲಿ, ಬಲ್ಲಾಳ ಇಬ್ಬರೂ ಕೂಡಿ ಗೆಲ್ಲುತ್ತಾರೆ. ಕಾಲಕೇಯನ ರುಂಡ ಚೆಂಡಾಡಿದ ಬಲ್ಲಾಳ ತಾನೇ ರಾಜನಾಗಬೇಕೆಂಬ ಹಂಬಲದಲ್ಲಿರುವಾಗ, ಶತ್ರುಗಳನ್ನು ಚೆಂಡಾಡುವ ಯುದ್ಧ ದುರಂಧರ ಸಮರ್ಥ ಸೇನಾಧಿಪತಿ ಆಗಲು ಯೋಗ್ಯ. ಯುದ್ಧದ ವಿಷಮ ಸನ್ನಿವೇಶದಲ್ಲೂ ಶತ್ರುಗಳ ಒತ್ತೆಯಿಂದ ಪ್ರಜೆಗಳನ್ನು ಕೂದಲು ಕೊಂಕದಂತೆ ಕಾಪಾಡುವ, ಪ್ರಜೆಗಳ ಹಿತವನ್ನು ಕಾಯುವ ಬಾಹುಬಲಿಯೇ ಸಿಂಹಾಸನಕ್ಕೆ ನನ್ನ ಆಯ್ಕೆ ಎಂದು ಶಿವಗಾಮಿ ಘೋಷಿಸುತ್ತಾಳೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಎಲ್ಲ ಅಡೆತಡೆಗಳನ್ನು ಮೆಟ್ಟಿ, ಸಿಂಹಾಸನದ ಆಕಾಂಕ್ಷಿಗಳ ಮಟ್ಟಕ್ಕೆ ಏರುವ ನಾಯಕರು ಪ್ರಭಾವಿಗಳು, ಸಮರ್ಥರೇ ಆಗಿರುತ್ತಾರೆ. ಆದರೆ, ಅವರ ಪೈಕಿ ಜನಾನುರಾಗಿಯಾದವರು, ಪ್ರಜೆಗಳ ಹಿತ ಕಾಪಾಡುವವರಿಗೆ ಅಧಿಕಾರ ದೊರೆತಾಗ ಮಾತ್ರ ನಾಡಿಗೆ, ಸಮಾಜಕ್ಕೆ ಒಳಿತಾಗುತ್ತದೆ..
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)