More

    ಸವ್ಯಸಾಚಿ ಅಂಕಣ | ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರೀತಿಯ ಮೆರವಣಿಗೆ…

    ಸವ್ಯಸಾಚಿ ಅಂಕಣ | ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರೀತಿಯ ಮೆರವಣಿಗೆ…ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 1990ರ ವರ್ಷಗಳು ಪ್ರೇಮದ ದಶಕ. ಕನ್ನಡ ಚಿತ್ರರಂಗ ಆಗಿನ್ನೂ ಪ್ರೇಮಲೋಕ, ರಣಧೀರ, ರಣರಂಗ, ರಥಸಪ್ತಮಿಯಂಥ ಹೊಸ ತಲೆಮಾರಿನ ಪ್ರೇಮಚಿತ್ರಗಳ ಗುಂಗಿನಲ್ಲಿರುವಾಗಲೇ ಸಂಪೂರ್ಣ ವಿಭಿನ್ನ ಸಂಗೀತ-ಪ್ರೇಮಕಾವ್ಯವಾಗಿ ಚಿತ್ರರಸಿಕರನ್ನು ರೋಮಾಂಚನಗೊಳಿಸಿದ ಚಿತ್ರ ‘ಚೈತ್ರದ ಪ್ರೇಮಾಂಜಲಿ’.

    ವರವಾಗಿ ಒಲವ ತಂದನು | ಮರವಾಗೊ ಗಿಡವ ಕಡಿದನು
    ಶುಭವಾಗಲೆಂದು ನುಡಿದನು | ಸುಖ ಕಾಣುವಾಗ ಮುನಿದನು..’

    ಚಲನಚಿತ್ರಕ್ಕಾಗಿ ಬರೆದ ಶೋಕಗೀತೆಯೊಂದು ಅದೇ ಚಿತ್ರದ ನಾಯಕನ ಜೀವನಕಥೆಯೇ ಆಗಿಬಿಡುವುದು ವಿಧಿವಿಚಿತ್ರಗಳಲ್ಲೊಂದು. ಶೃಂಗಾರಕಾವ್ಯ ಎಂಬ ದುರಂತ ಶೃಂಗಾರ ಚಿತ್ರಕಾವ್ಯದ ನಾಯಕನಟ ರಘುವೀರ್ ಜೀವನದ ದುರಂತ ಇದು.

    ಪ್ರತೀ ಬಾರಿ ಯುಗಾದಿ ಬಂದಾಗ, ಚೈತ್ರಮಾಸದ ಚಿಗುರು ವಾತಾವರಣವನ್ನು ಹಸಿರುಗೊಳಿಸಿ ಪ್ರಫುಲ್ಲಗೊಳಿಸುವಾಗ, ಮಾವುಬೇವಿನ ತಳಿರುತೋರಣಗಳು ಕಂಗೊಳಿಸುವಾಗ ರಘುವೀರ್ ನೆನಪಾಗುತ್ತಾರೆ. ರಘುವೀರ್ ಎಂದೊಡನೆ ‘ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ| ಗಂಧದ ಪರಿಮಳಕಿಂತ ಘಮ ಘಮ ಘಮ’ ಹಾಡು ನೆನಪಾಗುತ್ತದೆ. ಚಿತ್ರರಂಗದಲ್ಲೂ, ನಿಜಬದುಕಿನಲ್ಲೂ ದುರಂತ ನಾಯಕನೇ ಆದ ರಘುವೀರ್ ಚಿತ್ರರಂಗಕ್ಕೆ ಕೊಟ್ಟ ಪ್ರೇಮ ಚಿತ್ರಕಾವ್ಯ ‘ಚೈತ್ರದ ಪ್ರೇಮಾಂಜಲಿ’ ನೆನಪಾಗುತ್ತದೆ.

    ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 1990ರ ವರ್ಷಗಳು ಪ್ರೇಮದ ದಶಕ. ಆ ಹತ್ತು ವರ್ಷಗಳಲ್ಲಿ ಬಿಡುಗಡೆಗೊಂಡಷ್ಟು ನವ ಪ್ರೇಮಕಾವ್ಯಗಳು ಮತ್ತೊಂದು ಕಾಲಘಟ್ಟದಲ್ಲಿ ಬಿಡುಗಡೆಯಾಗಿದ್ದಕ್ಕೆ ಲೆಕ್ಕ ಸಿಗುವುದಿಲ್ಲ. ಬಾಲಿವುಡ್ ಉದಾಹರಣೆ ಕೊಡುವುದಾರೆ, ‘ಸೌದಾಗರ್’, ‘ಫೂಲ್ ಔರ್ ಕಾಂಟೆ’, ‘ದಿಲ್’, ‘ಆಶಿಖಿ’, ‘ರೋಜಾ’, ‘ಬಾಂಬೆ’, ‘1942 ಲವ್ ಸ್ಟೋರಿ’, ‘ದಿಲ್​ವಾಲೆ ದುಲ್ಹನಿಯ ಲೇಜಾಯೇಂಗೆ’, ‘ದಿಲ್ ತೊ ಪಾಗಲ್ ಹೈ’, ‘ಕುಚ್ ಕುಚ್ ಹೋತಾ ಹೈ’, ‘ದಿಲ್ ಹೈ ಕಿ ಮಾನ್ತಾ ನಹೀ’.. ಹೀಗೆ ಒಂದೇ ಎರಡೇ.. ದೇಶ ಜಾಗತೀಕರಣದ ದಿಕ್ಕಿನಲ್ಲಿ ಮಗ್ಗಲು ಬದಲಾಯಿಸುತ್ತಿದ್ದ ಕಾಲಘಟ್ಟದಲ್ಲಿ ಪ್ರೀತಿಪ್ರೇಮದ ಅಮೃತಗಂಗೆಯನ್ನು ಹರಿಸಿ, ಪಾಶ್ಚಾತ್ಯ ದೃಷ್ಟಿಕೋನದಲ್ಲಿ ಯುವಹೃದಯಗಳನ್ನು ಅರಳಿಸಿದ ಅಮರ ದೃಶ್ಯಕಾವ್ಯಗಳು ಕೇವಲ ಬಾಲಿವುಡ್​ಗೆ ಸೀಮಿತವಾಗದೆ ಎಲ್ಲ ಭಾಷಾ ಚಿತ್ರರಂಗದಿಂದಲೂ ಹೊರಹೊಮ್ಮಿದವು. ಕನ್ನಡ ಚಿತ್ರರಂಗ ಆಗಿನ್ನೂ ಪ್ರೇಮಲೋಕ, ರಣಧೀರ, ರಣರಂಗ, ರಥಸಪ್ತಮಿಯಂಥ ಹೊಸ ತಲೆಮಾರಿನ ಪ್ರೇಮಚಿತ್ರಗಳ ಗುಂಗಿನಲ್ಲಿರುವಾಗಲೇ ಸಂಪೂರ್ಣ ವಿಭಿನ್ನ ಸಂಗೀತ-ಪ್ರೇಮಕಾವ್ಯವಾಗಿ ಚಿತ್ರರಸಿಕರನ್ನು ರೋಮಾಂಚನಗೊಳಿಸಿದ ಚಿತ್ರ ‘ಚೈತ್ರದ ಪ್ರೇಮಾಂಜಲಿ’.

    1992ರ ಮಾರ್ಚ್​ನಲ್ಲಿ ಬಿಡುಗಡೆಯಾದ ಈ ಚಿತ್ರ ರಘುವೀರ್​ರನ್ನು ನಾಯಕನನ್ನಾಗಿ ದೊಡ್ಡರೀತಿಯಲ್ಲಿ ಗೆಲ್ಲಿಸಿತು. ಅಷ್ಟೇ ಅಲ್ಲ, ಕಲಾಸಾಮ್ರಾಟ್ ಎಸ್. ನಾರಾಯಣ್ ಎಂಬ ಹೊಸ ಅಲೆಯ ನಿರ್ದೇಶಕನ ರಂಗಪ್ರವೇಶಕ್ಕೆ ವೇದಿಕೆಯಾಯಿತು. ಆದರೆ, ಈ ಚಿತ್ರವನ್ನು ಗೆಲ್ಲಿಸಿದ ಬಹುದೊಡ್ಡ ಸಂಗತಿ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಎಂದರೆ ತಪ್ಪಾಗದು. ಈ ಚಿತ್ರದ ಹಾಡುಗಳನ್ನು ಗುನುಗದವರೇ ಇಲ್ಲ.

    ‘ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ.. ಮಾತನಾಡೆ ಮಂದಾರ ನಿನ್ನ ಹೆಸರೆ ಶೃಂಗಾರ.. | ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ..’ ಎಂಥ ಮೈಝುುಮ್ಮೆನ್ನಿಸುವ ಸಾಲುಗಳು, ಗುನುಗುತ್ತಲೇ ಇರಬೇಕೆನ್ನಿಸುವ ಹಾಡು. ಪ್ರೇಮಲೋಕದಿಂದ ಪ್ರೀತಿಯ ಸಂದೇಶವನ್ನು ಕನ್ನಡ ಚಿತ್ರರಂಗಕ್ಕೆ ಹೊತ್ತುತಂದ ಹಂಸಲೇಖ ಸಂಗೀತ ನಿರ್ದೇಶಕ ಹಾಗೂ ಸಾಹಿತಿಯಾಗಿ ಚಂದನವನದಲ್ಲಿ ರೋಮಾಂಚನದ ಅಲೆಗಳನ್ನೆಬ್ಬಿಸಿದವರು. ‘ಕರುನಾಡತಾಯಿ ಸದಾ ಚಿನ್ಮಯಿ’ ಎಂಬಂಥ ಭಾವಕೋಶಗಳನ್ನು ಜಾಗೃತಗೊಳಿಸುವ ಕನ್ನಡ ಪ್ರೀತಿಯ ಹಾಡು ಬರೆದರು. ‘ಈ ಬಾಳು ಬಣ್ಣದ ಬುಗುರಿ’ ಎಂದು ತಾತ್ವಿಕರಾಗುತ್ತಲೇ, ಕನ್ನಡ ಚಿತ್ರಸಂಗೀತದಲ್ಲಿ ಅಪರೂಪದ ಮುತ್ತಿನ ಹಾರ ಹೊಸೆದವರು.

    ‘ಆಹಾ ಓಹೋ’ ಎಂದು ಕನ್ನಡ ವರ್ಣಮಾಲೆಯಿಂದಲೇ ರಸಿಕತನದ ಹಾಡು ಕಟ್ಟಿದ ಹಂಸಲೇಖ, ‘ಬಾತ್ ರೂಮಲ್ಲಿ ಜಾರಿಬಿದ್ದಷ್ಟೇ’ ಸುಲಭವಾಗಿ ‘ನೀನು ನೀನೇ ಇಲ್ಲಿ ನಾನು ನಾನೇ’ ಎಂದು ಶಾಸ್ತ್ರೀಯ ಸಂಗೀತದ ಪ್ರೌಢಿಮೆಯನ್ನೂ ತೋರಿಸಿದವರು. ‘ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು’ ಎಂಬ ಕನ್ನಡತನ ಮೆರೆಯುತ್ತಲೇ, ‘ಅಮ್ಮಾ, ಊರೇನೇ ಅಂದರೂ ನೀ ನನ್ನ ದೇವರು’ ಎಂದು ಮೈಮರೆಸಿದವರು. ‘ಸಂಕ್ರಾಂತಿಯಲ್ಲಿ ರತ್ತೋ ರತ್ತೋ’ ಎನ್ನುತ್ತ, ‘ದೀಪಾವಳಿಯಲ್ಲಿ ಗೋವಿಂದ ಲೀಲಾವಳಿ’ ನೆನಪಿಸುತ್ತ, ‘ಮಣ್ಣಿನ ದೋಣಿಯಲ್ಲಿ ಒಲವಿನ ಸುರಿಮಳೆಯಲ್ಲಿ ನೆನೆಸುತ್ತ’, ‘ಬಂಗಾರದಿಂದ ಬಣ್ಣವನ್ನು ತಂದು, ಸಾರಂಗದಿಂದ ನಯನವನ್ನು ತಂದು, ಮಂದಾರವನ್ನೇ ಹೆಣ್ಣಾಗು’ ಎಂದ ಚಮತ್ಕಾರದ ಕವಿ.

    ‘ಬೇಸಿಗೆಯಲಿ ಆ ಸೂರ್ಯ ಭೂತಾಯಿಯ ಸುಡುತಾನೆ | ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ | ಬೇಡ ಎಂದರೆ ನಾವು ಸುಡದೇ ಇರುವುದೆ ನೋವು| ದೇವರು ಹೊಸೆದ ಪ್ರೇಮದ ದಾರ | ದಾರದಿ ಬೆಸೆದ ಋತುಗಳ ಹಾರ..’ ಹಂಸಲೇಖ ಬರೆದ ಇಂಥ ಹಾಡುಗಳೆಂದರೆ ಬರಿ ಪ್ರಾಸವಲ್ಲ, ಲೋಕಾನುಭವವನ್ನು, ಜೀವನದ ಸಾರಸರ್ವಸ್ವವನ್ನು ಅಂತರಂಗದ ತಂತುಗಳು ಮಿಡಿಯುವಂತೆ ಪೋಣಿಸುವ ಕಲೆ ಅವರಿಗೆ ಕರಗತ. ಕನ್ನಡ ಚಿತ್ರರಂಗದಲ್ಲಿ ಹಂಸಲೇಖ ಎಂದೂ ಅಚ್ಚಳಿಯದ ಮುತ್ತಿನಹಾರವಾದರೆ, ಅವರು ಸಂಗೀತ ನೀಡಿದ ಒಂದೊಂದು ಹಾಡುಗಳೂ, ಆ ಹಾಡುಗಳಿಗೆ ಬರೆದ ಒಂದೊಂದು ಸಾಲುಗಳೂ ಅಪ್ರತಿಮ ಮುತ್ತುಗಳೇ. ‘ಚೈತ್ರದ ಪ್ರೇಮಾಂಜಲಿ’ ಚಿತ್ರಕ್ಕಾಗಿ ಹಂಸಲೇಖ ಬರೆದಿದ್ದು, ಪೋಣಿಸಿದ್ದೂ ಇಂಥ ಹಾಡುಗಳನ್ನೇ. ‘ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ… ಪಾರಿಜಾತ ವರವಾಗು ಸೂರ್ಯಕಾಂತಿ ಬೆಳಕಾಗು..’ ಪ್ರೀತಿ, ಪ್ರೇಮಿಕೆ ಕುರಿತು ಇದಕ್ಕಿಂತ ಸೊಗಸಾಗಿ ಹಾಡು ಕಟ್ಟುವುದು ಕಷ್ಟಸಾಧ್ಯ. ಕಮಲವತಿ, ಪುಷ್ಪವತಿ ಎಂಬ ಕಲ್ಪನೆಗಳೇ ಸೊಗಸು. ಪ್ರಕೃತಿಯ ಸರ್ವಸಂಪತ್ತನ್ನೂ ಪ್ರೀತಿ ತುಂಬಿದ ಅಕ್ಷರಗಳ ಮೆರವಣಿಗೆಯಲ್ಲಿ ದಿಬ್ಬಣವಾಗಿ ಕರೆತರುವ ಚಮತ್ಕಾರ ಅಪೂರ್ವವೇ ಸರಿ.

    ‘ಓ… ಕೋಗಿಲೆ… ಕೋಗಿಲೆ… ನಾ… ಹಾಡಲೇ.. ಹಾಡಲೇ..’ ಎಂದು ಗಾನಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯ ಹಾಡುತ್ತಿದ್ದರೆ, ರಸಿಕರು ಮೈಮರೆತು ಪರವಶರಾಗಿ ಕೇಳಿಯೇಕೇಳಿದರು. ‘ಹರಿವ ನೀರು ನಿಲ್ಲದು | ಇಲ್ಲಿ ಚಿಂತೆ ಉಳಿಯದು | ತೊಳೆದು ಎಲ್ಲ ಕಹಿಗಳ | ಸವಿದು ಕಾಡ ಸಿಹಿಗಳ..’ ಮುಂತಾದ ಸಾಲುಗಳಲ್ಲಿ ಅಡಗಿದ ಅರ್ಥ, ಲಾಲಿತ್ಯ, ಮಾಧುರ್ಯದ ಮೋಡಿಯಲ್ಲಿ ಜನ ಕರಗಿದರು. ಹಂಸಲೇಖ ಸಂಗೀತಕ್ಕೆ ಮನಸೋತ ಜನ ‘ಚೈತ್ರದ ಪ್ರೇಮಾಂಜಲಿ’ ಗೆಲ್ಲಿಸಿದರು. ಈ ಚಿತ್ರದ ಕಥೆ ಆ ಕಾಲಘಟ್ಟದ ಚಿತ್ರಗಳಿಗೆ ಹೋಲಿಸಿದರೆ ವಿಭಿನ್ನವೇನೂ ಇರಲಿಲ್ಲವಾದರೂ ಎಸ್. ನಾರಾಯಣ್ ಚೊಚ್ಚಲ ನಿರ್ದೇಶನದಲ್ಲಿ ತಾಜಾತನದ ತಂಪುತಂಗಾಳಿಯಿತ್ತು. ಸಾಂಪ್ರದಾಯಿಕ ಕಥಾವಸ್ತುವಿನ ಚಿತ್ರದ ಉಪಸಂಹಾರ ಅನಿರೀಕ್ಷಿತ ತಿರುವು ಹೊಂದಿತ್ತು. ಚಿತ್ರಪೂರ್ತಿ ಪ್ರೀತಿಯ ಸುಮ, ಘಮದಲ್ಲಿ ತೇಲಾಡಿಸಿ ಕೊನೆಯಲ್ಲಿ ಕಣ್ಣೀರು ತರಿಸಿ ಹೃದಯ ಭಾರವಾಗಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಚಿತ್ರ ಯಶಸ್ವಿಯಾಗಿತ್ತು..

    ಈ ಚಿತ್ರಕ್ಕೆ, ಕಥಾನಾಯಕನ ಪಾತ್ರಕ್ಕೆ ರಘುವೀರ್ ಕೂಡ ಹೊಂದಿಕೆಯಾಗಿದ್ದರು. ಬಾಲಿವುಡ್​ನಲ್ಲಿ ಹಾಲುಗಲ್ಲದ, ಮೀಸೆ ಇಲ್ಲದ ಹೀರೋಗಳು ಪ್ರೇಮಗೀತೆ ಹಾಡುತ್ತಿದ್ದ ದಿನಗಳಲ್ಲಿ, ರಘುವೀರ್, ಶ್ರೀರಾಮಪುರದ ಗಲ್ಲಿಯಲ್ಲಿ ದಿಢೀರನೆ ಎದುರಾದಾಗ ಮುಗುಳುನಗು ತೋರಿ ಮಾಯವಾಗುವ ಅಪರಿಚಿತನಂತೆ, ನಮ್ಮೊಳಗೊಬ್ಬ ಎಂಬಂತೆ ಆಪ್ತವಾಗಿದ್ದರು. ಹುಟ್ಟುಶ್ರೀಮಂತನಾಗಿದ್ದರೂ ಮಧ್ಯಮವರ್ಗದ ಹುಡುಗನ ಮುಖಲಕ್ಷಣ ರಘುವೀರ್ ಪಾತ್ರದಲ್ಲಿ ಜನಸಾಮಾನ್ಯರು ತಮ್ಮನ್ನು ತಾವು ಕಲ್ಪಿಸಿಕೊಳ್ಳುವುದಕ್ಕೆ ನೆರವಾಗಿತ್ತು.

    ಆ ಕಾಲದಲ್ಲಿ ಬೆಂಗಳೂರಿನಲ್ಲೇ ದೊಡ್ಡ ಕಂಟ್ರಾಕ್ಟರ್ ಆಗಿದ್ದ ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ್ದ ರಘುವೀರ್, ರೆಬೆಲ್ ಸ್ಟಾರ್ ಅಂಬರೀಷ್ ಸಲಹೆಯಂತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತಂದೆ ಮುನಿಯಲ್ಲಪ್ಪ ಅವರಿಗೆ ಸಿನಿಮಾ ಇಷ್ಟವಿರಲಿಲ್ಲ. ಆದರೂ, ಮಗನ ಸಲುವಾಗಿ ಹಣಹೂಡಿದ್ದರು. ಮೊದಲ ಚಿತ್ರ ‘ಅಜಯ್ ವಿಜಯ್’ ನೆಲಕಚ್ಚಿತ್ತು. ನಂತರ ‘ಚೈತ್ರದ ಪ್ರೇಮಾಂಜಲಿ’ ನಿರ್ವಿುಸಿದರು. ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಆ ಕಾಲದಲ್ಲೇ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಅದ್ದೂರಿಯಾಗಿ ಮಾಡಲಾಗಿತ್ತು. ಆದರೂ, ಫೇಸ್​ಬುಕ್, ಯೂಟ್ಯೂಬ್ ಇಲ್ಲದ ಆ ಕಾಲದಲ್ಲಿ ಹಾಡುಗಳು ಜನರನ್ನು ತಲುಪಿರಲಿಲ್ಲ. ಚಿತ್ರ ಬಿಡುಗಡೆಗೆ ಮುಂಚಿತವಾಗಿ ಸುಮಾರು 40 ವಿತರಕರಿಗೆ ರಘುವೀರ್ ಚಿತ್ರ ತೋರಿಸಿದ್ದರು. ಯಾರೊಬ್ಬರೂ ಒಪ್ಪಲಿಲ್ಲ. ‘ನಾಯಕ ಕಪ್ಪಗಿದ್ದಾನೆ, ಚೆನ್ನಾಗಿಲ್ಲ’ ಎನ್ನುವ ಸಬೂಬು. ‘ಈತ ಹೀರೋ ಮೆಟೀರಿಯಲ್ ಅಲ್ಲ, ಈತನ ಮುಸುಡಿ ಯಾರು ನೋಡುತ್ತಾರೆ’ ಎಂದು ವಿತರಕರು ಅವಮಾನಿಸಿದ್ದರು. ಆಗ ರಘುವೀರ್ ನೆರವಿಗೆ ಬಂದವರು ಕೋಟಿ ನಿರ್ವಪಕ ರಾಮು. ಕೊನೆಗೂ ಚಿತ್ರ ಬಿಡುಗಡೆ ಆದ ಮೇಲೆ ಇಪ್ಪತ್ತೊಂದು ದಿನವಲ್ಲ, ಇಪ್ಪತ್ತೊಂದು ವಾರ ಓಡಿತು. ರಘುವೀರ್ ಕಪ್ಪೆಂದು ಹೀಯಾಳಿಸಿದ ವಿತರಕರು ಬೆಪ್ಪಾಗಿ ಚಿತ್ರವನ್ನು ತಮಗೇ ಕೊಡಿ ಎಂದು ಓಡಿಬಂದಿದ್ದರು.

    ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಘುವೀರ್, ‘ಶೃಂಗಾರ ಕಾವ್ಯ’ ನಿರ್ವಿುಸಿದರು. ಎಸ್. ಮಹೇಂದರ್ ನಿರ್ದೇಶನದ ಆ ಚಿತ್ರದಲ್ಲೂ ಉತ್ತಮ ಕಥೆ, ಹಂಸಲೇಖ ಅವರ ಅದ್ಭುತ ಹಾಡುಗಳು.. ಚಿತ್ರ ಸೂಪರ್ ಹಿಟ್. ‘ಶೃಂಗಾರಕಾವ್ಯ’ ಚಿತ್ರೀಕರಣದ ಸಂದರ್ಭದಲ್ಲಿ ನಾಯಕಿ ಸಿಂಧು ಅವರನ್ನು ರಘುವೀರ್ ಇಷ್ಟಪಟ್ಟರು. ಆದರೆ, ಮದುವೆಗೆ ಮನೆಯಲ್ಲಿ ವಿರೋಧ ಎದುರಾಯಿತು. ನಾವಾ? ಅವಳಾ? ಎಂಬ ಸವಾಲಿನ ಸಂದರ್ಭದಲ್ಲಿ ರಘುವೀರ್, ಪ್ರೀತಿಗೇ ಜೈ ಎಂದರು. ಹೆತ್ತವರನ್ನು ದೂರ ಮಾಡಿಕೊಂಡರು. ಆಸ್ತಿ, ಅಂತಸ್ತು ಸರ್ವಸ್ವವನ್ನೂ ತ್ಯಾಗ ಮಾಡಿ ಸಿಂಧುವನ್ನು ಮದುವೆಯಾದರು. ಬಡತನವನ್ನು ಸಿನಿಮಾದಲ್ಲಿ ಮಾತ್ರ ಕಂಡಿದ್ದ ರಘುವೀರ್ ನಿಜಜೀವನದಲ್ಲಿ ಅರಗಿಸಿಕೊಳ್ಳಲಾಗದೆ ಒದ್ದಾಡಿದರು. ಆದರೂ ಸ್ವಾಭಿಮಾನ ಬಿಡಲಿಲ್ಲ. ‘ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೇ’ ಎಂಬ ನೋವಿನಲ್ಲೂ ಬದುಕನ್ನು ಮರಳಿ ಹಳಿಗೆ ತರಲು ಹೋರಾಡಿದರು. ಗಾಂಧಿನಗರದಲ್ಲಿ ಮತ್ತೊಂದು ಯಶಸ್ಸಿಗಾಗಿ ಬೀದಿ ಅಲೆದರು. ಆದರೆ ವಿಧಿ ಕ್ರೂರವಾಗಿತ್ತು. ಯಾವ ಪ್ರೀತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದರೋ, ಆ ಪ್ರೀತಿಯೇ ಕೊನೆಯವರೆಗೂ ಉಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ಸಿಂಧು ವಿಚ್ಛೇದನ ಪಡೆದಾಗ ರಘುವೀರ್ ಹತಾಶರಾದರು. ಮತ್ತೆರಡು ವರ್ಷಗಳಲ್ಲೇ ಸಿಂಧು ಅಕಾಲಿಕ ಮರಣ ಹೊಂದಿದಾಗ ರಘುವೀರ್ ಖಿನ್ನತೆಯ ಸುಳಿಗೆ ಜಾರಿದರು.

    ಕೊನೆಗೂ ಮಗನ ಸಂಕಟ ನೋಡಲಾಗದೆ ಕುಟುಂಬ ಅವರನ್ನು ಮರಳಿ ಸೇರಿಸಿಕೊಂಡಿತ್ತು. ಸಂಬಂಧದ ಹುಡುಗಿಯನ್ನು ರಘುವೀರ್ ಎರಡನೇ ಮದುವೆಯಾದರು. ಚಿತ್ತ ಶಾಂತವಾದರೂ, ಚಿತ್ರರಂಗದಲ್ಲಿ ಅವರು ಕಂಡ ಕನಸು ಮತ್ತೆ ನನಸಾಗಲಿಲ್ಲ. ನಿರ್ವಿುಸಿದ ಚಿತ್ರಗಳಾವುದೂ ಕೈಹಿಡಿಯಲಿಲ್ಲ. ಬದುಕು ಹಳಿಗೆ ಮರಳಿದರೂ, ಆರೋಗ್ಯ ಕೈಕೊಟ್ಟು ಅಕಾಲಿಕವಾಗಿ ಬಲಿತೆಗೆದುಕೊಂಡಿತು. ರಘುವೀರ್ ಗುರುತು ‘ಚೈತ್ರದ ಪ್ರೇಮಾಂಜಲಿ’ಯ ಸುಮ ಘಮದೊಂದಿಗೆ ಶಾಶ್ವತವಾಯಿತು.

    ಪ್ರತೀ ವರ್ಷ ವಸಂತ ಮರಳಿದಾಗ, ಚೈತ್ರ ಮಾಸ ಶೃಂಗಾರದ ಕನಸು ಹೊತ್ತು ದಿಬ್ಬಣ ಹೊರಟಾಗ ‘ಚೈತ್ರದ ಪ್ರೇಮಾಂಜಲಿ’ ನೆನಪಾಗುತ್ತದೆ. ‘ಓ ಮಲೆನಾಡಿನ ಮೈಸಿರಿಯೆ | ಆ ರವಿ ಜಾರಿಸೂ ಹೂಗರಿಯೆ..’ ಹಾಡು ಕಿವಿಯಲ್ಲಿ ಅನುರಣಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts