More

    ಸವ್ಯಸಾಚಿ ಅಂಕಣ: ಪ್ರತಿಭಾವಂತರ ಪ್ರಚಂಡ ಆಟ, ಆಯ್ಕೆ ಧರ್ಮಸಂಕಟ

    ಗೆದ್ದಾಗ ಮುಖಸ್ತುತಿ ಮಾಡುವುದು, ಬಿದ್ದಾಗ ಸಣ್ಣ ಕನಿಕರವೂ ಇಲ್ಲದೆ ಹಿಗ್ಗಾಮುಗ್ಗಾ ಜಾಡಿಸುವುದು ಜನರ ಜಾಯಮಾನ. ಗಾಳಿ ಬೀಸುವ ದಿಕ್ಕಿಗೆ ಮೈಯೊಡ್ಡುವ, ಜನಪ್ರಿಯ ಅಭಿಪ್ರಾಯವನ್ನು ಬೆಂಬಲಿಸುತ್ತ ಪ್ರತೀ ನಿರ್ಧಾರದಲ್ಲೂ ತಪ್ಪು ಹುಡುಕುವ ಮನೋಸ್ಥಿತಿ ಕೆಲವರದ್ದು.

    ಸವ್ಯಸಾಚಿ ಅಂಕಣ: ಪ್ರತಿಭಾವಂತರ ಪ್ರಚಂಡ ಆಟ, ಆಯ್ಕೆ ಧರ್ಮಸಂಕಟಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ಅಂತಿಮ ಹನ್ನೊಂದರ ಬಳಗ ಆಯ್ಕೆ ಮಾಡುವಾಗ ಟೀಮ್ ಮ್ಯಾನೇಜ್​ವೆುಂಟ್​ಗೆ ಧರ್ಮಸಂಕಟ ಎದುರಾಗಿತ್ತು… ಜನಾಭಿಪ್ರಾಯ ಒಂದು ರೀತಿ ಇತ್ತು. ಆದರೆ, ತಂಡದ ಕೋಚ್ ಮತ್ತು ನಾಯಕನ ಆಲೋಚನೆ ಬೇರೆ ರೀತಿ ಇತ್ತು…ಕೆಲವೇ ದಿನ ಮುಂಚೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಬಾರಿಸಿದ್ದರು… ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನಲ್ಲಿ ಅತಿಶಯದ ಪ್ರದರ್ಶನ ನೀಡುವ ಮೂಲಕ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಅವಕಾಶಕ್ಕಾಗಿ ಹಕ್ಕುಸ್ಥಾಪನೆ ಮಾಡುತ್ತಿದ್ದರು… ಹೀಗಿದ್ದರೂ ಲಂಕಾ ವಿರುದ್ಧ ಆರಂಭಿಕನ ಸ್ಥಾನಕ್ಕೆ ದ್ವಿಶತಕ ವೀರ ಇಶಾನ್ ಕಿಶನ್ ಬದಲು ಭರವಸೆಯ ಶುಭಮಾನ್ ಗಿಲ್​ಗೆ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವಕಾಶ ನೀಡಿದರು. ಅದೇರೀತಿ ಸೂರ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ತರಾತುರಿ ತೋರದೆ ಶ್ರೇಯಸ್ ಅಯ್ಯರ್​ರನ್ನು ಬೆಂಬಲಿಸಿದರು. ಈ ನಿರ್ಧಾರ ಸಹಜವಾಗಿ ಸಾಕಷ್ಟು ಟೀಕೆಗಳಿಗೆ ಗ್ರಾಸವಾಯಿತು. ಗಿಲ್ ಮತ್ತು ಅಯ್ಯರ್ ಪ್ರತಿಭಾವಂತರೇ ಆಗಿದ್ದರೂ, ಅವರ ಸಲುವಾಗಿ ಕಿಶನ್ ಮತ್ತು ಸೂರ್ಯರನ್ನು ಹೊರಗಿಡಬಾರದಿತ್ತು ಎಂಬ ಅಭಿಪ್ರಾಯ ಬಹುಜನರದ್ದಾಗಿತ್ತು. ಸಾರ್ವಜನಿಕರ ವಿಚಾರ ಹಾಗಿರಲಿ, ಕೆ. ಶ್ರೀಕಾಂತ್, ವೆಂಕಟೇಶ ಪ್ರಸಾದ್ ಮೊದಲಾದ ಮಾಜಿಗಳೂ ದ್ರಾವಿಡ್, ರೋಹಿತ್ ನಿರ್ಧಾರವನ್ನು ಟೀಕಿಸಿದ್ದರು.

    ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಎನ್ನುವುದು ಪ್ರತೀ ದಿನ ಎಟುಕುವ ಸಾಧನೆಯೇನಲ್ಲ. ಇಲ್ಲಿಯವರೆಗೆ ನಡೆದಿರುವ 4507 ಏಕದಿನ ಪಂದ್ಯಗಳಲ್ಲಿ ಕೇವಲ 8 ಬ್ಯಾಟ್ಸ್​ಮನ್​ಗಳು ದ್ವಿಶತಕದ ಗಡಿ ದಾಟಿದ್ದಾರೆ ಎನ್ನುವ ಅಂಶವೊಂದೇ ಈ ಸಾಧನೆಯ ಮಹತ್ವ ಹೇಳುತ್ತದೆ. ಹೀಗಿರುವಾಗ ದ್ವಿಶತಕ ಬಾರಿಸಿದ ಆಟಗಾರನಿಗೆ ಮಾರನೇ ಪಂದ್ಯದಲ್ಲಿ ಆಡುವ ಅವಕಾಶವೇ ಸಿಗದಿದ್ದರೆ ಹತಾಶೆ ಉಂಟಾಗುವುದು ಸಹಜ. ಆದರೂ, ಒಂದೇ ಕ್ರಮಾಂಕಕ್ಕೆ ಹಲವು ಆಟಗಾರರ ನಡುವೆ ಪೈಪೋಟಿ ಇರುವ ಸಂದರ್ಭದಲ್ಲಿ, ಅದರಲ್ಲೂ ಗಾಯಾಳುವಾಗಿ ಗೈರುಹಾಜರಾಗಿದ್ದ ರೋಹಿತ್ ಶರ್ಮರಿಗೆ ಬದಲಿ ಆಟಗಾರನಾಗಿ ಪಡೆದ ಅವಕಾಶದಲ್ಲಿ ಇಶಾನ್ ಈ ಸಾಧನೆ ಮಾಡಿದ್ದ ಕಾರಣ ಅವರಿಗೆ ಸ್ಥಾನ ಕಲ್ಪಿಸಲು ಇನ್ನೊಬ್ಬ ಆಟಗಾರನ ಅವಕಾಶ ಕಿತ್ತುಕೊಳ್ಳುವುದೂ ಧರ್ಮಸಂಕಟವೇ. ಇದೇ ಕಾರಣಕ್ಕೆ ಲಂಕಾ ವಿರುದ್ಧ ಸರಣಿಯಲ್ಲಿ ಕಿಶನ್ ಬದಲು ಶುಭಮಾನ್ ಗಿಲ್​ರನ್ನೇ ಮುಂದುವರಿಸಲು ಟೀಮ್ ಮ್ಯಾನೇಜ್​ವೆುಂಟ್ ನಿರ್ಧರಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕಲ್ಪಿಸುವುದೂ ತಂಡಕ್ಕೆ ಅಷ್ಟೇ ಜಟಿಲ ಸವಾಲಾಗಿತ್ತು. ಏಕೆಂದರೆ, ಕಳೆದ ಒಂದು ವರ್ಷದಲ್ಲಿ ಶ್ರೇಯಸ್ ಅಯ್ಯರ್ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಹಲವು ಪಂದ್ಯ ಗೆಲ್ಲಿಸುವಂಥ, ಹಲವು ಸೋಲು ತಪ್ಪಿಸುವಂಥ ಭರ್ಜರಿ ಆಟ ಆಡಿದ್ದರು.

    ಒಂದು ಸ್ಥಾನಕ್ಕಾಗಿ ಹಲವು ಆಟಗಾರರ ನಡುವೆ ಪೈಪೋಟಿ ಇರುವಾಗ ಅವಕಾಶ ವಂಚಿತರು ಅನುಭವಿಸುವ ಅಸಹನೆಗಿಂತ, ಅವಕಾಶ ಪಡೆದವರು ಎದುರಿಸುವ ಒತ್ತಡ ದೊಡ್ಡದು. ಅವರ ತಲೆಯ ಮೇಲೆ ತೂಗುಕತ್ತಿ ನೇತಾಡುತ್ತಿರುತ್ತದೆ. ಅವರ ವೈಫಲ್ಯಕ್ಕಾಗಿ ಜನ ಕಾಯುತ್ತಿರುತ್ತಾರೆ. ಒಂದು ಸಣ್ಣ ಎಡವಟ್ಟು ಕೂಡ ಭವಿಷ್ಯಕ್ಕೆ ಮಾರಕವಾಗಿಬಿಡುವ ಅಪಾಯ ಇರುತ್ತದೆ. ಪ್ರತೀ ಪಂದ್ಯವೂ ಅವರ ಪಾಲಿಗೆ ಅಗ್ನಿಪರೀಕ್ಷೆಯೇ ಆಗಿರುತ್ತದೆ. ಈ ಬಾರಿ ವಿಫಲನಾದರೆ, ಮುಂದಿನ ಪಂದ್ಯದಲ್ಲಿ ತಂಡದಲ್ಲಿರುವುದಿಲ್ಲ ಎಂಬ ಆತಂಕದಲ್ಲೇ ಆಡಬೇಕಾಗುತ್ತದೆ. ಆದರೂ, ವಿಶ್ವಾಸವೆನ್ನುವುದು ಅಸಾಧ್ಯಗಳನ್ನು ಸಾಧ್ಯವಾಗಿಸುತ್ತದೆ. ಜನಾಭಿಪ್ರಾಯಕ್ಕೆ ವಿರುದ್ಧವಾಗಿ ತನ್ನನ್ನು ಬೆಂಬಲಿಸಿರುವ ಕೋಚ್ ಹಾಗೂ ನಾಯಕನ ನಿರ್ಧಾರ ಸಮಂಜಸ ಎಂದು ನಿರೂಪಿಸಬೇಕು, ಅವರು ತನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳಬೇಕು ಎಂಬ ಸಂಕಲ್ಪ ದೊಡ್ಡ ಸಾಧನೆಗಳನ್ನು ಮಾಡಿಸುತ್ತದೆ. ಗಿಲ್ ಕೂಡ ಅದೇ ರೀತಿ ವಿಶ್ವಾಸ ಉಳಿಸಿಕೊಂಡರು. ಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ 70, 21 ಮತ್ತು 116 ರನ್ ಬಾರಿಸಿದ್ದಲ್ಲದೆ, ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ದ್ವಿಶತಕವನ್ನೇ ಸಿಡಿಸುವ ಮೂಲಕ ಟೀಕಾಕಾರರಿಗೆ ಭರ್ಜರಿ ಉತ್ತರ ನೀಡಿದರು.

    ಹಾಗೆ ನೋಡಿದರೆ, ಭಾರತೀಯ ಕ್ರಿಕೆಟ್​ನಲ್ಲಿ ಇದು ಉತ್ಕರ್ಷದ ಕಾಲ. ಟಿ20 ತಂಡದಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿಗೆ ಸ್ಥಾನವಿಲ್ಲದಂಥ ಪರಿಸ್ಥಿತಿ ನಿರ್ವಣವಾಗಿದೆ. ಹಿರಿಯ ಆರಂಭಿಕ ಶಿಖರ್ ಧವನ್​ಗೆ ಏಕದಿನ ತಂಡದಲ್ಲೀಗ ಜಾಗವಿಲ್ಲ. ತಂಡದಲ್ಲಿ ಕೆ.ಎಲ್. ರಾಹುಲ್ ಸ್ಥಾನ ಅಲುಗಾಡುತ್ತಿದೆ. ಕಾರಣ ಟೀಮ್ ಇಂಡಿಯಾ ಪರ ಆಡಲು ಸನ್ನದ್ಧರಾಗಿ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭಾವಂತರ ಪೈಪೋಟಿ. ವೇಗಿ ಜಸ್​ಪ್ರೀತ್ ಬುಮ್ರಾ, ಆಲ್ರೌಂಡರ್ ರವೀಂದ್ರ ಜಡೇಜಾ ಸರಿಸುಮಾರು ವರ್ಷದಿಂದ ಗಾಯಾಳುಗಳಾಗಿದ್ದರೂ, ಅವರ ಕೊರತೆ ಕಾಡುತ್ತಿಲ್ಲ. ಮೂರೂ ಮಾದರಿಗಳಲ್ಲಿ ತಂಡದ ಪ್ರತಿಯೊಂದು ಕ್ರಮಾಂಕಕ್ಕೂ ಇಬ್ಬರಿಂದ ಮೂವರು ಪೈಪೋಟಿ ಒಡ್ಡುತ್ತಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಸರ್ಫ್ರಾಜ್ ಖಾನ್, ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್, ಜಗದೀಶನ್, ಸಚಿನ್ ಬೇಬಿ, ಆರ್. ಸಮರ್ಥ್ ಮೊದಲಾದವರು ಅವಕಾಶಗಳ ಬಾಗಿಲು ತಟ್ಟುತ್ತಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡುವುದು ಕಷ್ಟಸಾಧ್ಯವೇ ಸರಿ.

    ಕೆಲವು ಆಟಗಾರರು ಎಷ್ಟೇ ವಿಶೇಷ ಪ್ರತಿಭೆಗಳಾಗಿದ್ದರೂ, ಜಗತ್ತಿಗೆ ಅವರ ಪರಿಚಯವಾಗಲು ತುಂಬಾ ಕಾಲ ಬೇಕಾಗುತ್ತದೆ. ಸದ್ಯ ಅಭಿಮಾನಿಗಳು ಸೂರ್ಯಕುಮಾರ್ ಯಾದವ್​ರನ್ನು 360 ಡಿಗ್ರಿ ಆಟಗಾರ ಎಂದು ಕೊಂಡಾಡುತ್ತಿದ್ದಾರೆ. ಆದರೆ, ಅವರು ಟೀಮ್ ಇಂಡಿಯಾ ಪದಾರ್ಪಣೆಗಾಗಿ 30 ವರ್ಷದವರೆಗೆ ಕಾಯಬೇಕಾಯಿತು. ಈಗಲೂ ಅವರು ಕಾಯಂ ಎನಿಸಿರುವುದು ಟಿ20 ತಂಡದಲ್ಲಿ ಮಾತ್ರ. ಏಕದಿನ ಮತ್ತು ಟೆಸ್ಟ್ ಮಾದರಿಗಳಿನ್ನೂ ಸೂರ್ಯೋದಯಕ್ಕೆ ಸಾಕ್ಷಿಯಾಗಿಲ್ಲ. ಬಹುಶಃ ಆ ದಿನಗಳೂ ದೂರವಿಲ್ಲ. ಇನ್ನು ನಿರ್ಭಾವುಕ ಮುಖಭಾವದ ಆದರೆ, ಬ್ಯಾಟ್ ಮೂಲಕ ಎದುರಾಳಿಗಳನ್ನು ಕುಟ್ಟಿ ಪುಡಿಮಾಡುವ ಸಾಮರ್ಥ್ಯದ ಇಶಾನ್ ಕಿಶನ್ ಕೂಡ ಏಕದಿನಗಳಲ್ಲಿ ನಿರ್ದಿಷ್ಟ ಕ್ರಮಾಂಕ ಮತ್ತು ಹೆಚ್ಚಿನ ಅವಕಾಶಕ್ಕೆ ಅರ್ಹರು.

    ಸೂರ್ಯಕುಮಾರ್ ಯಾದವ್ ಆಟ ಚಂಡಮಾರುತದಂತೆ, ಇಶಾನ್ ಕಿಶನ್ ಲಹರಿಯಲ್ಲಿರುವಾಗ ಭೋರ್ಗರೆವ ಮಳೆಯಂತೆ.. ಇವರಿಬ್ಬರಿಗೆ ಹೋಲಿಸಿದರೆ ಶುಭಮಾನ್ ಗಿಲ್ ಆಹ್ಲಾದಕರ ತಂಗಾಳಿಯಂತೆ. ಬಾಲಿವುಡ್​ನ ರೊಮ್ಯಾಂಟಿಕ್ ಚಿತ್ರಗಳ ಹೀರೋಗಳಂತೆ ಗುಳಿಕೆನ್ನೆಯ ನಗುವಿನಿಂದ ಯುವತಿಯರ ಕ್ರಷ್ ಎನಿಸಿಕೊಂಡಿರುವ ಗಿಲ್, ಸಿಕ್ಸರ್​ಗಳ ಬಿರುಗಾಳಿ ಎಬ್ಬಿಸುವವರಂತೆ ಮೇಲ್ನೋಟಕ್ಕೆ ಸೆಳೆಯುವುದಿಲ್ಲ. ಐಪಿಎಲ್​ನಲ್ಲಿ ಕೋಲ್ಕತ ನೈಟ್​ರೈಡರ್ಸ್ ಮತ್ತು ಕಳೆದ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡಗಳ ಪರ ಗಿಲ್ ಭರ್ಜರಿ ಆಟವಾಡಿದ್ದರೂ, ಅವರ ಸ್ಟ್ರೈಕ್​ರೇಟ್ ಬಗ್ಗೆ ಕ್ರಿಕೆಟ್ ಪಂಡಿತರ ತಕರಾರು ಇದ್ದೇ ಇತ್ತು. ಆದರೆ, ನ್ಯೂಜಿಲೆಂಡ್ ವಿರುದ್ಧದ ಅವರ ಪ್ರಚಂಡ ದ್ವಿಶತಕ ಅಭಿಮಾನಿಗಳ ದೃಷ್ಟಿಕೋನವನ್ನೇ ಬದಲಾಯಿಸಿದೆ. ಹೈದರಾಬಾದ್​ನ ಕ್ಲಿಷ್ಟ ಪಿಚ್​ನಲ್ಲಿ ಬೇರೆಲ್ಲ ಘಟಾನುಘಟಿಗಳು ವಿಫಲರಾಗುತ್ತಿರುವಾಗ ಗಿಲ್ ಬಾರಿಸಿದ 208 ರನ್​ಗಳು, ಅದರಲ್ಲೂ ಸದ್ಯ ವಿಶ್ವದ ಅತಿ ವೇಗದ ಬೌಲರ್ ಎನಿಸಿರುವ ಲಾಕಿ ಫರ್ಗ್ಯುಸನ್ ವಿರುದ್ಧ ಸತತ 3 ಸಿಕ್ಸರ್ ಬಾರಿಸಿ ದ್ವಿಶತಕದ ಗಡಿ ದಾಟಿದ ರೀತಿ ಗಿಲ್ ಸಾಮರ್ಥ್ಯದ ಹೊಸ ಮುಖವನ್ನು ಪರಿಚಯಿಸಿದೆ. ಉತ್ತಮ ತಂತ್ರಗಾರಿಕೆ, ದೊಡ್ಡ ಇನಿಂಗ್ಸ್ ಆಡುವ ಸಾಮರ್ಥ್ಯ, ಮೈದಾನದ ಎಲ್ಲ ಮೂಲೆಗಳಲ್ಲೂ ಚೆಂಡು ಅಟ್ಟುವ ಚಾಕಚಕ್ಯತೆ, ಹೊಡೆತಗಳಲ್ಲಿ ವೈವಿಧ್ಯತೆ, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಒತ್ತಡವನ್ನು ಮುಖದ ಮೇಲೆ ಹೊತ್ತುಕೊಳ್ಳದೆ, ನಿರಾಳವಾಗಿ, ಹಸನ್ಮುಖರಾಗಿ ಆತ್ಮವಿಶ್ವಾಸದಿಂದ ಆಡುವ ಪರಿ ಗಿಲ್ ಟೀಮ್ ಇಂಡಿಯಾದಲ್ಲಿ ದೂರದಾರಿಯ ಪ್ರಯಾಣಿಕ ಎಂಬ ಭರವಸೆ ಮೂಡಿಸಿದೆ.

    ಪಂಜಾಬ್​ನ ಫಜಿಲ್ಕಾ ಜಿಲ್ಲೆಯಲ್ಲಿ 1999ರಲ್ಲಿ ಜನಿಸಿದ ಶುಭಮಾನ್ ರೈತ ಕುಟುಂಬದವರಾದರೂ, ತಂದೆ-ತಾಯಿ ಲಖ್ವಿಂದರ್ ಸಿಂಗ್ ಮತ್ತು ಕೀರ್ತ್ ಗಿಲ್​ಗೆ ಮಗ ಕ್ರಿಕೆಟಿಗನಾಗಲಿ ಎಂಬ ಆಸೆ. ಮೂರನೇ ವಯಸ್ಸಿನಿಂದಲೇ ಅಜ್ಜ ದೀದಾರ್ ಸಿಂಗ್ ಮಾಡಿಕೊಟ್ಟ ಮರದ ಬ್ಯಾಟ್ ಹಿಡಿದು ಕ್ರಿಕೆಟ್ ಆಟ ಆರಂಭಿಸಿದ ಗಿಲ್​ಗೆ ಅಪ್ಪ ತೋಟದಲ್ಲೇ ಕ್ರಿಕೆಟ್ ಪಿಚ್ ನಿರ್ವಿುಸಿ ಕಲಿಕೆಗೆ ಇಂಬೆರೆದರು. ಹಳ್ಳಿಯ ಮಕ್ಕಳಿಗೆ ಮಗನ ಜತೆ ಕ್ರಿಕೆಟ್ ಆಡುವಂತೆ ಉತ್ತೇಜಿಸುತ್ತಿದ್ದ ಲಖ್ವಿಂದರ್, ಗಿಲ್ ವಿಕೆಟ್ ಪಡೆಯುವ ಮಕ್ಕಳಿಗೆ 100 ರೂ. ಬಹುಮಾನ ಕೊಡುತ್ತಿದ್ದರು. ಹೀಗಾಗಿ 100 ರೂ. ಆಸೆಗೆ ಮಕ್ಕಳು ವಿಕೆಟ್ ಕಬಳಿಸಲು ಯತ್ನಿಸುತ್ತಿದ್ದರೆ, ಗಿಲ್ ಔಟಾಗಬಾರದೆಂಬ ಕೆಚ್ಚಿನಿಂದ ಆಡುತ್ತಿದ್ದರು. ಪ್ರತೀ ದಿನ ಗಿಲ್ ಕನಿಷ್ಠ 500ರಿಂದ 700 ಎಸೆತಗಳಿಗೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಬ್ಯಾಟ್ ಮಾತ್ರವೇ ಅಲ್ಲದೆ ಸ್ಟಂಪ್ ಕೋಲನ್ನು ಹಿಡಿದು ವೇಗದ ಎಸೆತ ಆಡುವ ಮೂಲಕ ಗಿಲ್ ಮಧ್ಯ ಬ್ಯಾಟ್​ನಿಂದ ಚೆಂಡಿಗೆ ಹೊಡೆಯುವುದನ್ನು, ಉತ್ತಮ ಟೈಮಿಂಗ್ ಮಾಡುವುದನ್ನು ಕಲಿತುಕೊಂಡರು. ಆಟದಲ್ಲಿ ಗಿಲ್ ಪ್ರೌಢಿಮೆ ಸಾಧಿಸಿದಂತೆಲ್ಲ ಮಗನಿಗಾಗಿ ಎಲ್ಲ ತ್ಯಾಗಕ್ಕೂ ಮುಂದಾದ ಲಖ್ವಿಂದರ್ ಹಳ್ಳಿ ತೊರೆದು ಕುಟುಂಬ ಸಹಿತ ಮೊಹಾಲಿಗೆ ವಲಸೆ ಬಂದರು. ಅಲ್ಲಿಂದ ಪಂಜಾಬ್ ಕ್ರಿಕೆಟ್ ಸಂಸ್ಥೆ ಅಕಾಡೆಮಿಯಲ್ಲಿ ಗಿಲ್ ಪಕ್ವಗೊಂಡರು.

    ಪಂಜಾಬ್ ಪರ 16 ವಯೋಮಿತಿ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ನಿರ್ಮಲ್ ಸಿಂಗ್ ಜತೆ 587 ರನ್ ಆರಂಭಿಕ ಜತೆಯಾಟದಲ್ಲಿ ಭಾಗಿಯಾಗಿದ್ದ ಗಿಲ್ ಆ ಪಂದ್ಯದಲ್ಲಿ 351 ರನ್ ಬಾರಿಸಿದ್ದರು. 2018ರಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಗಿಲ್, ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿ, ದೊಡ್ಡ ಇನಿಂಗ್ಸ್ ಕಟ್ಟುವ ಶಕ್ತಿಯನ್ನು ಚಿಕ್ಕ ವಯಸ್ಸಿನಲ್ಲೇ ಪ್ರದರ್ಶಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ 208 ರನ್ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಸಿಡಿಸಿದ ಕೀರ್ತಿಯನ್ನು ಅವರಿಗೆ ತಂದುಕೊಟ್ಟಿದೆ. ಅಷ್ಟೇ ಅಲ್ಲ ಭಾರತದ ಪರ ಅತ್ಯಂತ ಕಡಿಮೆ ಇನಿಂಗ್ಸ್​ನಲ್ಲಿ 1000 ಏಕದಿನ ರನ್ ಗಡಿ ದಾಟಿದ ಹಿರಿಮೆಯೂ ಅವರದ್ದಾಗಿದೆ.

    ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಮತ್ತು ಗಿಲ್ ಸ್ನೇಹದ ವಿಚಾರ ಕಳೆದ ವರ್ಷ ಗಾಸಿಪ್ ಅಂಕಣಗಳಲ್ಲಿ ಹರಿದಾಡಿತ್ತು. ಆದರೆ, ಗಿಲ್ ಗೆಳತಿ ಆ ಸಾರಾ ಅಲ್ಲ, ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಎಂಬ ಗಾಳಿಮಾತು ಸದ್ಯ ಚಾಲ್ತಿಯಲ್ಲಿದೆ. ಅದೇನೇ ಇದ್ದರೂ, ತನ್ನ ಸದ್ಯದ ಆದ್ಯತೆ ಸಾರಾ ಅಲ್ಲ ಎಂದು ಪಂಜಾಬಿ ಸರದಾರ ಗಿಲ್ ಆಟದ ಮೂಲಕ ಸ್ಪಷ್ಟಪಡಿಸಿದ್ದಾರೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts