

ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಇಂಧನ ದರ ಏರಿಕೆಯಿಂದ ವಾಹನ ಸವಾರರ ಜೇಬು ಸುಡುತ್ತಿದ್ದರೆ ಇತ್ತ ಎಲ್ಪಿಜಿ ಹಾಗೂ ವಾಣಿಜ್ಯಕ್ಕಾಗಿ ಉಪಯೋಗಿಸುವ ಸಿಲಿಂಡರ್ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಲಾಗಿದ್ದಾರೆ. ಕಳೆದ 15 ದಿನಗಳಲ್ಲಿ ಸಬ್ಸಿಡಿಯುಕ್ತ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ 100 ರೂ ಹಾಗೂ 19 ಕೆ.ಜಿ. ವಾಣಿಜ್ಯಕ್ಕಾಗಿ ಬಳಸುವ ಸಿಲಿಂಡರ್ ಬೆಲೆಯಲ್ಲಿ 92 ರೂ. ಹೆಚ್ಚಿಸಲಾಗಿದೆ.
ಈ ಹಿಂದೆ 14.2 ಕೆಜಿ ಸಿಲಿಂಡರ್ 597 ರೂ. ಹಾಗೂ 19 ಕೆ.ಜಿ. ಸಿಲಿಂಡರ್ 1,290 ರೂ. ಇತ್ತು. ಆದರೆ, ಸಾರ್ವಜನಿಕರ ತೈಲ ಮಾರುಕಟ್ಟೆ ಕಂಪನಿಗಳು ಡಿ.2ರಂದು ಸದ್ದಿಲ್ಲದೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ. ಹಾಗೂ ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಬೆಲೆ ಮೇಲೆ 56 ರೂ. ಹೆಚ್ಚಿಸಿದ್ದವು. 2 ವಾರದ ಹಿಂದೆಷ್ಟೇ ಹೆಚ್ಚಿಸಲಾಗಿದ್ದ ಸಿಲಿಂಡರ್ ದರಲ್ಲಿ ಮತ್ತೆ ದರ ಏರಿಕೆ ಶಾಕ್ ನೀಡಿದ್ದು, ಡಿ.15ರಂದು 50 ರೂ. ಹಾಗೂ 36 ರೂ. ಹೆಚ್ಚಿಸಲಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ಪ್ರಸ್ತುತ ಸಬ್ಸಿಡಿ ಸಿಲಿಂಡರ್ 697 ರೂ. ಹಾಗೂ 19 ಕೆ.ಜಿ. ಸಿಲಿಂಡರ್ 1,382 ರೂ. ಇದೆ. ಈಗಾಗಲೇ ಕರೊನಾದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇಂಧನ ಹಾಗೂ ಸಿಲಿಂಡರ್ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: 8 ದಿನದಲ್ಲೇ 925 ಕೋಟಿ ರೂ.ಮೌಲ್ಯದ ಮದ್ಯ ಬಿಕರಿ
ಸಬ್ಸಿಡಿ ಸ್ಥಗಿತ: ಗ್ರಾಹಕರಿಗೆ ಸಿಗುತ್ತಿದ್ದ ಅಲ್ಪಸ್ವಲ್ಪ ಗ್ಯಾಸ್ ಸಬ್ಸಿಡಿ ಹಣವೂ ಈಗ ಬರುತ್ತಿಲ್ಲ. ಮೇ, ಜೂನ್ ಹಾಗೂ ಜುಲೈ ತಿಂಗಳಿನ ಸಬ್ಸಿಡಿ ಹಣ ಬಂದಿಲ್ಲ. ಆದರೆ, ಬೇರೆ ಯಾವ ಕಾರಣಕ್ಕಾಗಿ ಕೇಂದ್ರ ಸಬ್ಸಿಡಿ ಹಣ ಸ್ಥಗಿತಗೊಳಿಸಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಆಯಿಲ್ ಕಂಪನಿಗಳು ಹೇಳಿವೆ.
1.78 ಕೋಟಿ ಗ್ರಾಹಕರು: ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ(ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ(ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟಾರೆ 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897, ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ.