

ನವದೆಹಲಿ: ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸಿದ್ದೇ ತಪ್ಪಾಗಿಹೋಗಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ನನಗೆ ನ್ಯಾಯ ಬೇಕಿದೆ. ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಆದ್ದರಿಂನ ನಕ್ಸಲೈಟ್ ಆಗಬೇಕು ಎಂದುಕೊಂಡಿದ್ದೇನೆ. ಅನುಮತಿ ಕೊಡಿ...
ಹೀಗೊಂದು ಕುತೂಹಲದ ಪತ್ರ ಬರೆದಿದ್ದಾನೆ 23 ವರ್ಷದ ಆಂಧ್ರ ಪ್ರದೇಶದ ದಲಿತ ಯುವಕ ಪ್ರಸಾದ್.
ಈ ಪತ್ರದಿಂದ ಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಶುರುವಾಗಿದೆ. ತೆಲುಗು ದೇಶಂ ಪಾರ್ಟಿ ನಾಯಕ ಚಂದ್ರಬಾಬು ನಾಯ್ದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಯುವಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಕ್ಸಲೈಟ್ ಸಮಸ್ಯೆಗೆ ಮುಕ್ತಿ ಹಾಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯ ಹಾಗೂ ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಯುವಕರು ಈ ರೀತಿ ಅಡ್ಡ ದಾರಿ ಹಿಡಿಯುವ ಅಪಾಯ ಎದುರಾಗುತ್ತಿದೆ. ಇದಕ್ಕೆ ಜಗನ್ ಸರ್ಕಾರ ಕಾರಣ ಎಂದ ಆರೋಪಿಸಿದ್ದಾರೆ.
ಅಷ್ಟಕ್ಕೂ ಈ ಪತ್ರದಲ್ಲಿ ಯುವಕ ಬರೆದಿರುವುದು ಇಷ್ಟು: ನ್ಯಾಯಕ್ಕಾಗಿ ಹೋರಾಡಿ ಸೋತುಹೋಗಿದ್ದೇನೆ. ಕಾನೂನು ವ್ಯವಸ್ಥೆ ನನಗೆ ನ್ಯಾಯ ಕೊಡಲು ವಿಫಲವಾಗಿದೆ. ಹೀಗಾಗಿ ನ್ಯಾಯ ಹಾಗೂ ನನ್ನ ಘನತೆ ಎತ್ತಿ ಹಿಡಿಯಲು ಇನ್ನೊಂದು ಮಾರ್ಗವನ್ನು ಹಿಡಿಯಲು ಬಯಸುತ್ತೇನೆ. ಇದಕ್ಕಾಗಿ ನನಗೆ ನಕ್ಸಲೈಟ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದಿದ್ದಾನೆ.
ಈತನ ಪತ್ರ ಓದಿದ ರಾಷ್ಟ್ರಪತಿ ತಕ್ಷಣವೇ ಸ್ಪಂದಿಸಿದ್ದು, ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದಾರೆ.
ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸಿದ ತನ್ನ ಮೇಲೆ ಪೊಲೀಸರು ಇಲ್ಲಸಲ್ಲದ ಆರೋಪ ಹೊರಿಸಿ ಅರೆಸ್ಟ್ ಮಾಡಿದ್ದಾರೆ. ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಸರ್ಕಾರದ ಶಾಸಕರೊಬ್ಬರ ಆದೇಶದ ಮೇರೆ ಪೊಲೀಸರು ನನ್ನನ್ನು ಠಾಣೆಗೆ ಕರೆ ತಂದು ತಲೆ ಬೋಳಿಸಿದ್ದಾರೆ ಎನ್ನುವುದು ಈ ಯುವಕನ ಆರೋಪ.
ಇದಾಗಲೇ ಈ ಬಗ್ಗೆ ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಪಿರೋಝ್ ಷಾ ಹಾಗೂ ಇಬ್ಬರು ಕಾನ್ಸ್‌ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ ಇದು ಕಣ್ಣೊರೆಸುವ ತಂತ್ರ. ರಾಜಕೀಯ ಮುಖಂಡರು ಇದರಲ್ಲಿ ಶಾಮೀಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಪತ್ರದಲ್ಲಿ ಯುವಕ ಬರೆದಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೂರ್ವ ಗೋದಾವರಿ ಜಿಲ್ಲಾಧಿಕಾರಿಯವರಿಗೆ ನಾನು ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ. ತಾರತಮ್ಯ ಮಾಡಿದ್ದಾರೆ. ನ್ಯಾಯಕ್ಕಾಗಿ ಮಾಡಿದ ಎಲ್ಲಾ ಪ್ರಯತ್ನಗಳ ವಿಫಲವಾಗಿದೆ. ಹೀಗಾಗಿ ನಕ್ಸಲ್ ಚಟುವಟಿಕೆಯಲ್ಲಿ ಸೇರಿ ನ್ಯಾಯಕ್ಕಾಗಿ ಹೋರಾಡಲು ಅನುಮತಿ ನೀಡಬೇಕು ಎಂದು ಪತ್ರ ಬರದಿದ್ದಾನೆ.
ಇದನ್ನು ನೋಡಿದ ರಾಷ್ಟ್ರಪತಿಯವರು ಆಂಧ್ರ ಪ್ರದೇಶ ಸರ್ಕಾರದ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿಗಳಿಂದ ಸೂಚನೆ ಬಂದ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ಕ್ರೂರವಾಗಿ ನಡೆಸಿಕೊಂಡ ಕಾರಣಕ್ಕೆ ಪ್ರಸಾದ್‌ಗೆ 50 ರೂಪಾಯಿ ಪರಿಹಾರ ಮೊತ್ತವನ್ನು ನೀಡಲು ನಿರ್ಧರಿಸಲಾಗಿದೆ.