

ಪುತ್ತೂರು: ಪೈಗಂಬರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ನೆಪವೊಡ್ಡಿ ಇತ್ತ ಬೆಂಗಳೂರಿನಲ್ಲಿ ಭಾರಿ ಕೋಲಾಹಲ ಸೃಷ್ಟಿಯಾದ ಬೆನ್ನಲ್ಲೇ ಅತ್ತ ಕ್ರೈಸ್ತ ಮಹಿಳೆಯೊಬ್ಬರು ತಮ್ಮ ಸಾಕುನಾಯಿಗೆ ಕೃಷ್ಣನ ವೇಷ ಹಾಕಿ ಕಿಡಿ ಹೊತ್ತಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತಂತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕುವುದು ಮಾಮೂಲು. ಅದರೆ ಪುತ್ತೂರಿನ ಕ್ರೈಸ್ತ ಮಹಿಳೆಯೊಬ್ಬರು ತಮ್ಮ ನಾಯಿಗೆ ಕೃಷ್ಣನ ವೇಷ ತೊಡಿಸಿ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇವರು ಮಂಗಳೂರು ಮೂಲದ ಮಾಡೆಲ್ ಎಂದು ತಿಳಿದುಬಂದಿದೆ.
ಅನೇಕ ಮಂದಿ ನಾಯಿ, ಬೆಕ್ಕು ಇತ್ಯಾದಿಗಳನ್ನು ಬಹಳ ಪ್ರೀತಿಯಿಂದ ಮಕ್ಕಳಂತೆಯೇ ಸಾಕುವುದು ಸಾಮಾನ್ಯ. ಅದರಲ್ಲಿಯೂ ಮಕ್ಕಳು ಇಲ್ಲದವರು ಇವುಗಳನ್ನು ಪ್ರಾಣಿ ಎಂದು ಅಂದುಕೊಳ್ಳುವುದೇ ಇಲ್ಲ. ಮನುಷ್ಯರಂತೆಯೇ ಸಲಹುತ್ತಾರೆ.
ಈ ಮಹಿಳೆ ಅದೇ ಉದ್ದೇಶಕ್ಕೆ ತಮ್ಮ ನಾಯಿಗೆ ಕೃಷ್ಣನ ವೇಷ ಹಾಕಿದ್ದರೋ ಅಥವಾ ಅವಹೇಳನ ಮಾಡಲು ಹಾಕಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಇದು ಹಲವರನ್ನು ಕೆರಳಿಸಿಬಿಟ್ಟಿದೆ. ಇವರಿಗೆ ಸಿಕ್ಕಾಪಟ್ಟೆ ವಿರೋಧ ಕಮೆಂಟ್ಗಳು, ಆಕ್ರೋಶಗಳು ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಹೆದರಿಕೊಂಡ ಮಹಿಳೆ ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಕೃಷ್ಣಜನ್ಮಾಷ್ಟಮಿಯಾದ ಮೊನ್ನೆ ಅಂದರೆ ಆಗಸ್ಟ್ 11ರಂದು ಅವರು ಈ ಪೋಸ್ಟ್ ಹಂಚಿಕೊಂಡಿದ್ದರು.
ಮಂಗಳೂರು ಮೂಲದ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಈ ಮಹಿಳೆ ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಅವರ ಉದ್ದೇಶ ಏನೇ ಇದ್ದರೂ, ಇವರು ಉದ್ದೇಶಪೂರ್ವಕವಾಗಿಯೇ ನಾಯಿ ಮರಿಗೆ ಕೃಷ್ಣನ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿ, ತನ್ನ ಇನ್ಸ್ಟಾಗ್ರಾಮಿನಲ್ಲಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಇದು ಇನ್ಸ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತವಾಗುವುದಕ್ಕಷ್ಟೇ ಸೀಮಿತಗೊಂಡಿದೆ ಎನ್ನುವುದು ಸಮಾಧಾನ.