

ನವದೆಹಲಿ: ಕರೊನಾ ಮಹಾಮಾರಿ ಶುರುವಾದಾಗಿಂದಲೂ ಎಲ್ಲೆಲ್ಲೂ ಆನ್ಲೈನ್ ಕ್ಲಾಸ್ಗಳದ್ದೇ ಭರಾಟೆ ಶುರುವಾಗಿದೆ. ಶಾಲಾ, ಕಾಲೇಜುಗಳಿಂದ ಹಿಡಿದು ಎಲ್ಲಾ ತರಗತಿಗಳಲ್ಲಿಯೂ ಇದೀಗ ಆನ್ಲೈನ್ ಕ್ಲಾಸ್.
ಆದರೆ ಎಷ್ಟೋ ಕಡೆಗಳಲ್ಲಿ ಆನ್ಲೈನ್ ಕ್ಲಾಸ್ ಮಾಡಲು ಸರಿಯಾದ ವ್ಯವಸ್ಥೆಗಳೇ ಇಲ್ಲವಾಗಿದೆ. ಇತ್ತ ಶಿಕ್ಷಕರು ಕ್ಲಾಸ್ ಮಾಡಲು ಕಷ್ಟಪಡುತ್ತಿದ್ದರೆ, ಅತ್ತ ಮಕ್ಕಳೂ ತೊಂದರೆ ಪಡುವ ಸ್ಥಿತಿ ತಲೆದೋರಿದೆ. ಇದಕ್ಕಾಗಿಯೇ ಹಲವಾರು ಶಿಕ್ಷಕರು ಹೊಸ ಹೊಸ ಪ್ಲ್ಯಾನ್ಗಳನ್ನು ಮಾಡುತ್ತಿದ್ದಾರೆ.
ಇವರ ಪೈಕಿ, ಇದೀಗ ಇಲ್ಲೊಬ್ಬ ಶಿಕ್ಷಕಿ ಮಾಡಿರುವ ಹೊಸ ಪ್ಲ್ಯಾನ್ ಭಾರಿ ವೈರಲ್ ಆಗಿದ್ದು, ಅಪಾರ ಮೆಚ್ಚುಗೆಯನ್ನೂ ಗಳಿಸಿದೆ. ಅದೇನೆಂದರೆ ರೆಫ್ರಿಜರೇಟರ್ ಗ್ಲಾಸ್ ಟ್ರೇ ಬಳಸಿ ಆನ್ಲೈನ್ ತರಗತಿ ನಡೆಸುತ್ತಿದ್ದಾರೆ.
ಕೆಲವೊಂದು ಫ್ರಿಜ್ಗಳಿಗೆ ಪಾರದರ್ಶಕವಾಗಿರುವ ಗ್ಲಾಸ್ಗಳು ಬರುತ್ತವೆ. ಅದನ್ನೇ ಬಳಸಿಕೊಂಡಿದ್ದಾರೆ ಈ ಶಿಕ್ಷಕಿ. ಎರಡು ಡಬ್ಬಗಳನ್ನು ಇಟ್ಟು ಅದರ ಮೇಲೆ ಟ್ರೇ ಇಟ್ಟಿದ್ದಾರೆ. ಟ್ರೇ ಮೇಲೆ ಮೊಬೈಲ್ ಇಟ್ಟು ಕೆಳಗಡೆ ಇರುವ ಪೇಪರ್ ಗಳನ್ನು ತೋರಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಹೇಳಿಕೊಡಬಹುದು ಎನ್ನುವ ಶಿಕ್ಷಕಿ, ಇದರ ಮೂಲಕವೇ ಯಶಸ್ಸನ್ನೂ ಕಂಡುಕೊಳ್ಳುತ್ತಿದ್ದಾರೆ.
ಮೋನಿಕಾ ಯಾದವ್ ಎನ್ನುವವರು ಈ ಶಿಕ್ಷಕಿಯ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ವೈರಲ್ ಆಗಿದೆ. ಅಪಾರ ಮೆಚ್ಚುಗೆಯನ್ನೂ ಗಳಿಸಿದೆ.
ಇಂಥ ಹಲವಾರು ಪ್ಲ್ಯಾನ್ಗಳು ಯೂಟ್ಯೂಬ್ಗಳಲ್ಲಿಯೂ ಲಭ್ಯವಿದ್ದು, ಶಿಕ್ಷಕರು ಅಂಥ ಪ್ರಯತ್ನಕ್ಕೂ ಕೈಹಾಕಿದರೆ ಒಳ್ಳೆಯ ಯಶಸ್ಸು ಪಡೆಯಬಹುದು ಎಂದು ಕಮೆಂಟಿಗರು ಸೂಚಿಸಿದ್ದಾರೆ.