ಸಿದ್ದರಾಮಯ್ಯ ವಿರುದ್ಧ ಕೊಡವರ ಪ್ರತಿಭಟನೆ

20201221115210_IMG_8372-01 - Copy
Published on

ಮಡಿಕೇರಿ: ಕೊಡವರೂ ಬೀಫ್ ತಿನ್ನುತ್ತಾರೆಂದು ಹೇಳಿಕೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕೊಡವರು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಕರೆಗೆ ಕೊಡವರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅದರಲ್ಲೂ, ದಕ್ಷಿಣ ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷ. ಆಕ್ರೋಶಿತ ಮಹಿಳೆಯರು ಕೊಡವರ ಪರ- ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

ಕೊಡಗಿಗೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಆಗಮಿಸಿದ್ದಲ್ಲಿ ಕೊಪ್ಪ ಗೇಟ್ ಬಳಿ ಪ್ರತಿಭಟನೆ ಮಾಡುವುದರ ಮೂಲಕ ಹಿಂದಕ್ಕೆ ಕಳುಹಿಸ ಲಾಗುವುದೆಂದು ಪ್ರತಿಭಟನಾಕಾರರು ಘೋಷಿಸಿದರು. ಟಿಪ್ಪು ಜಯಂತಿ ಆಚರಿಸುವುದರ ಮೂಲಕ ಕೊಡವರ ಭಾವನೆಗೆ ನೋವುಂಟು ಮಾಡಿದ್ದ ಸಿದ್ದರಾಮಯ್ಯ, ಇದೀಗ ಕೊಡವರೂ ಬೀಫ್ ತಿನ್ನುತ್ತಾರೆಂದು ಹಗುರವಾಗಿ ಮಾತನಾಡಿದ್ದಾರೆ. ತಕ್ಷಣ ಬಹಿರಂಗವಾಗಿ ಕೊಡವರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯ ತಕ್ಷಣ ತಮ್ಮ ಹೇಳಿಕೆ ಹಿಂಪಡೆಯಬೇಕು. ಕೊಡವರ ಭಾವನೆಗೆ ನೋವುಂಟು ಮಾಡಿರುವುದರಿಂದ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ವಿಷಾದ ವ್ಯಕ್ತ ಪಡಿಸುತ್ತೇವೆ. ಕೊಡವರ ಬಗ್ಗೆ ಗೌರವ ಇದೆ ಎಂದು ಹೇಳಿದ ಮಾತ್ರಕ್ಕೆ ನಾವು ಸಮಾಧಾನಗೊಳ್ಳುವು ದಿಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಂತಿ ಸತೀಶ್ ಹೇಳಿದರು.

ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ನಾಪೋಕ್ಲು ಕೊಡವ ಸಮಾಜ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ ಮಾತನಾಡಿ, ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟ ಕಟ್ಟಡದಲ್ಲಿರುವ ಸಿದ್ದರಾಮಯ್ಯ ಭಾವಚಿತ್ರ ತಕ್ಷಣ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ನಾವು ತೆರವುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಶಾಂತೆಯಂಡ ರವಿ ಕುಶಾಲಪ್ಪ ಆಗ್ರಹಿಸಿದರು. ಕೊಡವರು ಗೋವಿಗೆ ತಾಯಿ ಸ್ಥಾನ ಕೊಟ್ಟು ಪೂಜೆ ಮಾಡುತ್ತೇವೆ. ಕೊಡವರೂ ಬೀಫ್ ತಿನ್ನುತ್ತಾರೆಂದು ಹೇಳಿಕೆ ನೀಡಿರುವುದು ಖಂಡನೀ ಯ ಎಂದು ಬಿಜೆಪಿ ಹಾಸನ ಉಸ್ತುವಾರಿ ಪಟ್ಟಡ ರೀನಾ ಪ್ರಕಾಶ್ ಹೇಳಿದರು.

ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ರೂಪ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ
ರಶ್ಮಿ ಶೆಟ್ಟಿ, ಗ್ರೀನ್ ಸಿಟಿ ಫೋರಂ ಮಾಜಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಗೋಣಿಕೊಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಪ್ರಮುಖರಾದ ನೆರವಂಡ ಅನಿತಾ ಪೂವಯ್ಯ, ಮಂಡುವಂಡ ಮುತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕೊಡವರ ಮೇಲೆ ಕೋಪ : ಹಲವು ವರ್ಷಗಳ ಹಿಂದೆ ಮೈಸೂರಿನಿಂದ ಕೊಡಗಿಗೆ ಸಿದ್ದರಾಮಯ್ಯ ಕಾರ್ಮಿಕರನ್ನು ತೋಟ ಕೆಲಸಕ್ಕೆ ಕಳುಹಿಸುತ್ತಿದ್ದರು. ಆದರೆ, ಮಾಲೀಕರಿಂದ ಪಡೆದ ಹಣವನ್ನು ಕಾರ್ಮಿಕರಿಗೆ ಕೊಡುತ್ತಿರಲಿಲ್ಲ. ಇದನ್ನು ಕೊಡಗು ಭೂಮಾಲೀಕರ ಸಂಘದ ಅಧ್ಯಕ್ಷರಾಗಿದ್ದ ಕುಟ್ಟಂಡ ಗೋಪಿ ಚಿಣ್ಣಪ್ಪ ಬಯಲುಗೊಳಿಸಿದ್ದರು. ಕೊಡವರ ಮೇಲಿನ ಕೋಪದಿಂದ ಸಿದ್ದರಾಮಯ್ಯ ಹೀಗೆ ಹೇಳಿಕೆ ನೀಡಿದ್ದಾರೆಂದು ಅಮ್ಮತ್ತಿ ರೈತ ಸಂಘ ಅಧ್ಯಕ್ಷ ಕಾವಾಡಿಚಂಡ ಗಣಪತಿ ದೂರಿದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net