

ಹುಬ್ಬಳ್ಳಿ: ರಾಜ್ಯದ ಹಲವು ನಗರಗಳಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದೆ. ಇದರಿಂದ ಹಲವು ಕಡೆಗಳಲ್ಲಿ ವಿಮಾನ ಹಾರಾಟಗಳ ಸಂಚಾರದಲ್ಲಿಯೂ ಅಸ್ತವ್ಯಸ್ತ ಉಂಟಾಗಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ ಇಂಡಿಗೋ ವಿಮಾನವನ್ನು ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೆ ಆಕಾಶದಲ್ಲೇ ಕೆಲಕಾಲ ಹಾರಾಟ ನಡೆಸಬೇಕಾಯಿತು. ಇದರಿಂದ ಕೆಲಕಾಲ ಆತಂಕ ವಾತಾವರಣವೂ ಸೃಷ್ಟಿಯಾಗಿತ್ತು.
ಈ ವಿಮಾನದಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರೂ ಪ್ರಯಾಣಿಸುತ್ತಿದ್ದರು. ಇವರ ಜತೆ ಇನ್ನೂ 46 ಪ್ರಯಾಣಿಕರು ಇದ್ದರು.
ಈ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಬೆಳಗ್ಗೆ 8:55ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಹವಾಮಾನ ವೈಪರೀತ್ಯದ ಕಾರಣ ಎಟಿಸಿ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಲ್ಯಾಂಡಿಂಗ್‍ಗೆ ಅನುಮತಿ ದೊರೆಯಲಿಲ್ಲ. ಹಾಗಾಗಿ ಬೆಳಗ್ಗೆ ಕೆಲ ಕಾಲ ಲ್ಯಾಂಡಿಂಗ್‍ಗೆ ಅವಕಾಶ ನೀಡಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ವಿಮಾನ ಆಗಸದಲ್ಲೇ ಸುತ್ತಾಡತೊಡಗಿತು. ಇದರಿಂದಾಗಿ ಅನಂತ್‌ಕುಮಾರ್ ಸೆರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಂತೂ ಆಕಾಶದಲ್ಲಿಯೇ ಸುತ್ತಾಡಿ ಸುತ್ತಾಡಿ ಕೊನೆಗೆ 10:25ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ವೇಳೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ತುತ್ತಾಗಿ 18 ಜನರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಆತಂಕ ಮತ್ತೂ ಹೆಚ್ಚಾಗಿತ್ತು ಎನ್ನಲಾಗಿದೆ.
ಈ ನಡುವೆ ಹುಬ್ಬಳ್ಳಿ-ಧಾರವಾಡದ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆ ಆಗಿದೆ.