

ಲಂಡನ್: ಎಮ್ಮೆಗಳ ಹಿಂಡೊಂದು ದಾರಿ ತಪ್ಪಿ ಮನೆಯೊಂದರ ಆವರಣಕ್ಕೆ ನುಗ್ಗಿದ್ದಲ್ಲದೆ, ದಂಪತಿ ನಿರ್ಮಿಸಿದ್ದ ಹೊಸ ಈಜುಕೊಳದ ನೀರಿನಲ್ಲಿ ಮಿಂದೇಳಿವೆ. ಇದರ ಪರಿಣಾಮ ದಂಪತಿಗೆ ಭಾರೀ ಪ್ರಮಾಣದಲ್ಲೇ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆದಿದೆ. 18 ಎಮ್ಮೆಗಳು ಹತ್ತಿರದ ತೋಟವೊಂದರಿಂದ ಎಸ್ಕೇಪ್ ಆಗಿ ಎಸ್ಸೆಕ್ಸ್ ಸ್ವಿಮ್ಮಿಂಗ್ಪೂಲ್ಗೆ ನುಗ್ಗಿದವು ಎಂದು ಬಿಬಿಸಿ ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದು, ಪ್ರಾಣಿಗಳು ಈಜುಕೊಳದ ಒಳಗೆ ಬೀಳುತ್ತಿರುವ ದೃಶ್ಯವಿದೆ. ಸಾಕಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಅಂದಾಜಿನ ಪ್ರಕಾರ 25 ಸಾವಿರ ಪೌಂಡ್ಸ್, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 25 ಲಕ್ಷ ರೂಪಾಯಿ ನಷ್ಟವಾಗಿದೆ.
ಈ ಬಗ್ಗೆ ಮಾತನಾಡಿರುವ ನಿವೃತ್ತ ದಂಪತಿ ಆ್ಯಂಡಿ ಮತ್ತು ಲಿನೆಟ್ ಸ್ಮಿತ್, 70 ಸಾವಿರ ಪೌಂಡ್ಸ್ (ಭಾರತೀಯ ಕರೆನ್ಸಿ ಪ್ರಕಾರ 70 ಲಕ್ಷ ರೂ.) ವೆಚ್ಚದಿಂದ ಈಜುಕೊಳ ನಿರ್ಮಾಣ ಮಾಡಲಾಗಿದೆ. 18 ಎಮ್ಮೆಗಳಲ್ಲಿ 8 ಎಮ್ಮೆಗಳು ಈಜುಕೊಳ್ಳದಲ್ಲಿ ಬಿದ್ದು ಎದ್ದಿವೆ. ಅಲ್ಲದೆ, ಎಸ್ಕೇಪ್ ಆಗುವ ಭಯದಲ್ಲಿ ಬೇಲಿ ಮತ್ತು ಹೂವಿನ ಹಾಸಿಗೆಯನ್ನು ಹಾಳುಗೆಡವಿವೆ. ಆನಂತರದಲ್ಲಿ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ. ಅವುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಪತ್ನಿ ಬೆಳಿಗ್ಗೆ ಚಹಾ ಮಾಡಲು ಹೋದಾಗ, ಅವಳು ಅಡಿಗೆ ಕೋಣೆಯ ಕಿಟಕಿಯಿಂದ ಹೊರಗೆ ನೋಡಿದಳು. ಈ ವೇಳೆ ಈಜುಕೊಳದಲ್ಲಿ ಎಂಟು ಎಮ್ಮೆಗಳನ್ನು ಕಂಡಳು ಎಂದು ಆಂಡಿ ಸ್ಮಿತ್ ಗಾರ್ಡಿಯನ್ ನ್ಯೂಸ್ಗೆ ತಿಳಿಸಿದ್ದಾರೆ. ಅವಳು 999 ಸಹಾಯವಾಣಿಗೆ ಕರೆ ಮಾಡಿದಾಗ ಹುಸಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅಗ್ನಿಶಾಮಕ ದಳವು ಆರಂಭದಲ್ಲಿ ನಿರ್ಲಕ್ಷಿಸಿತು. ಬಳಿಕ ನಿಜವೆಂದು ಅವರ ಮನವೊಲಿಸಲು ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಸಿಬ್ಬಂದಿ ಬಂದಾಗ, ಅವರ ಹೈ-ವಿಸ್ ಜಾಕೆಟ್‌ಗಳಿಂದ ಬೆಚ್ಚಿಬಿದ್ದ ಎಮ್ಮೆಗಳಲ್ಲೊಂದು ನೇರವಾಗಿ ಅವರತ್ತವೇ ನುಗ್ಗಿತು.
ಇನ್ನು ಈಜುಕೊಳ ಹಾನಿ ಸಂಬಂಧ ಎನ್ಎಫ್ಯು ಮ್ಯೂಚುಯಲ್ ಇನ್ಸುರೆನ್ಸ್‌ನ ವಕ್ತಾರರು ಕ್ಲೈಮ್ ಅನ್ನು ಇತ್ಯರ್ಥಪಡಿಸಲಾಗಿದೆ ಮತ್ತು ಹಣ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)