More

    ಪರಿಪೂರ್ಣ ಬಂಧನವೇ ಮುಕ್ತಿಗೆ ದಾರಿ

    ಪರಿಪೂರ್ಣ ಬಂಧನವೇ ಮುಕ್ತಿಗೆ ದಾರಿಅನೇಕ ಆಧ್ಯಾತ್ಮಿಕ ಬೋಧನೆಗಳು ಬಂಧನ (ಅಂಟಿಕೊಳ್ಳುವುದು) ಕೆಟ್ಟದು, ಆದ್ದರಿಂದ ಯಾವುದೇ ವಿಷಯದಲ್ಲೂ ಬಂಧನಕ್ಕೆ ಒಳಗಾಗಬೇಡಿ ಎಂಬ ವಿಚಾರವನ್ನು ಸಾರುತ್ತವೆ. ಇಂತಹ ಕಾರಣಗಳಿಂದ ಬಳಲಿದ ಜನರಿಂದಲೇ ಈ ರೀತಿಯ ಬೋಧನೆಗಳು ಮತ್ತು ತಪ್ಪುಗ್ರಹಿಕೆಗಳು ಬಂದಿವೆ. ವೈರಾಗ್ಯದ ಬಗೆಗಿನ ಹಾಗೂ ನಿರಪೇಕ್ಷತೆಯನ್ನು ಸಾರುವ ಬೋಧನೆಗಳು, ಅದರಲ್ಲಿ ತಾವು ಸ್ವತಃ ಸಿಕ್ಕಿಕೊಳ್ಳುವ ಭಯದಿಂದಾಗಿ ಈ ರೀತಿ ತಿಳಿಸುತ್ತವೆ. ಯಾವುದೇ ರೀತಿ ಬಂಧಕ್ಕೊಳಗಾಗುವುದು ಯಾವಾಗಲೂ ವ್ಯಕ್ತಿಗೆ ನೋವು ಮತ್ತು ಸಂಕಟವನ್ನು ಉಂಟು ಮಾಡುತ್ತದೆ. ಆದ್ದರಿಂದ, ಯಾರಾದರೂ ಈ ಮೂರ್ಖ ಪರಿಹಾರವನ್ನು ತಮ್ಮ ಬೋಧನೆಯಲ್ಲಿ ನೀಡಿದರೆ – ಅವರ ಪ್ರಕಾರ, ಜೀವನಕ್ಕೆ ಪರಿಹಾರವೆಂದರೆ ಜೀವನದಿಂದ ತಪ್ಪಿಸಿಕೊಳ್ಳುವುದು ಎಂದಾಗುತ್ತದೆ. ಯಾರಾದರೂ ಜೀವನದಿಂದ ತಪ್ಪಿಸಿಕೊಳ್ಳಲು ಬಯಸಿದರೆ, ಅವರು ಸಾವನ್ನು ಆರಿಸಬೇಕಾಗುತ್ತದೆಯಲ್ಲವೇ? ಇದು ತುಂಬಾ ಸರಳ. ಜೀವಂತವಾಗಿದ್ದೂ ಸಾಯಲು ಬಯಸುವುದು ಅಥವಾ ಸಾಯದಿರುವುದು ಹಿಂಸಾತ್ಮಕವಾಗುತ್ತದೆಯಷ್ಟೇ. ನೀವು ಬದುಕಲು ಬಯಸಿದರೆ, ತೊಡಗಿಕೊಳ್ಳುವಿಕೆಯ ಗುಣ ಅಗತ್ಯ.

    ಜನರು ಆಧ್ಯಾತ್ಮಿಕತೆ ಎಂದರೆ ತಮ್ಮ ಸಂಗಾತಿ ಅಥವಾ ಕುಟುಂಬವನ್ನು ಕೈಬಿಡುವುದು ಎಂದು ಅರ್ಥ ಮಾಡಿಕೊಂಡಿದ್ದಾರೆ. ಆದರೆ ದಯವಿಟ್ಟು ಗಮನಿಸಿ, ಇದಕ್ಕೂ ಆಧ್ಯಾತ್ಮಿಕತೆಗೂ ಯಾವುದೇ ಸಂಬಂಧವಿಲ್ಲ. ನಿಮಗೆ ಅನನುಕೂಲವಾದಾಗ ಸಹಜವಾಗಿಯೇ ಅವುಗಳಿಂದ ದೂರವಾಗಲು ಬಯಸುತ್ತೀರಿ. ಯಾರಿಂದಾಗಲಿ ನಿಮ್ಮನ್ನು ಬಿಡಿಸಿಕೊಳ್ಳುವುದರ ಮೂಲಕ ನೀವು ಆಧ್ಯಾತ್ಮಿಕರಾಗುವುದಿಲ್ಲ. ನಿಮ್ಮಲ್ಲಿರುವ ದೊಡ್ಡ ಬಂಧನವೆಂದರೆ ನಿಮ್ಮ ಸಂಗಾತಿ, ಮಕ್ಕಳು, ಬ್ಯಾಂಕ್ ಬ್ಯಾಲೆನ್ಸ್ ಅಥವಾ ಮತ್ತಾವುದೋ ಅಲ್ಲ – ಬದಲಾಗಿ, ನಿಮ್ಮ ಸ್ವಂತ ವ್ಯಕ್ತಿತ್ವ. ನೀವು ಏನಾದರೂ ತೊರೆಯಬೇಕೆಂದುಕೊಂಡರೆ ಈ ವ್ಯಕ್ತಿತ್ವವನ್ನು ತೊರೆಯಬೇಕು. ನಿಮ್ಮ ಆಳವಾದ ಬಂಧನವು ನಿಮ್ಮ ಸ್ವಂತ ಆಲೋಚನೆ ಮತ್ತು ಭಾವನೆಗಳಿಗೆ ಸಂಬಂಧಿಸಿದೆ. ಇಲ್ಲ, ನನ್ನ ಸಂಗಾತಿ, ಕೆಲಸ ಮತ್ತು ಮಕ್ಕಳು ನನಗೆ ಪ್ರಿಯವಾದವು ಎಂದು ನೀವು ವಾದಿಸಬಹುದು. ಆದರೆ ನಿಮ್ಮ ಸಂಗಾತಿ, ಮಗು ಅಥವಾ ನಿಮ್ಮ ಸುತ್ತಮುತ್ತಲಿನ ಸನ್ನಿವೇಶಗಳು ಯಾವುದೇ ಆಗಲಿ ನೀವು ಅಂದುಕೊಂಡಂತೆ ಅಥವಾ ಅನುಭವಿಸುವ ವಿಧಾನಕ್ಕೆ ವಿರುದ್ಧವಾಗಿ ನಡೆದಾಗ, ನೀವು ಅವೆಲ್ಲವನ್ನೂ ಕೈಬಿಡುತ್ತೀರಿ. ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನು ನೀವು ಬಿಡುವುದಿಲ್ಲ, ಆದರೆ ಇತರ ವ್ಯಕ್ತಿಯನ್ನು ಕೈಬಿಡುತ್ತೀರಿ, ಏಕೆಂದರೆ ಇತರ ವ್ಯಕ್ತಿಯು ನಿಮ್ಮ ಜೀವನಕ್ಕನುಗುಣವಾಗಿ ಹೊಂದಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಅವರು ನಿಮ್ಮ ಜೀವನದಲ್ಲಿ ಇರುವುದರ ಒಂದೇ ಕಾರಣದಿಂದ ಅವರು ನಿಮ್ಮ ಅನಿಸಿಕೆ ಮತ್ತು ಭಾವನೆಗಳನ್ನು ಒಪ್ಪಿಕೊಳ್ಳಲು ರಾಜಿ ಮಾಡಿಕೊಂಡಿದ್ದಾರೆ.

    ಆದ್ದರಿಂದ ನೀವು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ನಿಮ್ಮಲ್ಲಿರುವ ಬಂಧನದ ಕುರಿತು ಏನೂ ಮಾಡಬೇಕಾಗಿಲ್ಲ. ಸ್ವಂತ ದೇಹದೊಂದಿಗಿರುವ ಇರುವ ಬಂಧನದ ಕುರಿತು ಕೆಲಸ ಮಾಡಬೇಕಾಗಿದೆ. ಏಕೆಂದರೆ ನಿಮ್ಮ ದೇಹಕ್ಕೆ ನೀವು ಆಳವಾಗಿ ಬಂಧಿಸಿ(ಅಂಟಿ) ಕೊಂಡಾಗ ಮಾತ್ರ ನಿಮಗೆ ಬೇರೊಬ್ಬರೊಂದಿಗೆ ಬಂಧನ (ಅಂಟಿಕೊಳ್ಳಲು) ಸಾಧ್ಯ. ಇದರಿಂದ ನಿಮ್ಮನ್ನು ನೀವು ಬಿಡುಗಡೆ ಮಾಡಿದರೆ, ಎಲ್ಲದರಿಂದ ಮುಕ್ತರಾಗುತ್ತೀರಿ. ನಿಮ್ಮ ಸ್ವಂತ ದೇಹಕ್ಕೆ ನೀವು ಅಂಟಿಕೊಳ್ಳದಿದ್ದರೆ, ಯಾರೊಂದಿಗೂ ನಿಮ್ಮನ್ನು ಆಳವಾಗಿ ತೊಡಗಿಸಿಕೊಳ್ಳಲಾಗದು. ಈ ದೇಹವು ನಾನಲ್ಲ ಎಂಬುದು ನಿಮ್ಮೊಳಗೆ ಪ್ರಾಯೋಗಿಕವಾಗಿ ಸ್ಪಷ್ಟವಾಗದ ಹೊರತು ‘ಬಂಧನಕ್ಕೊಳಗಾಗಬೇಡಿ (ಅಂಟಿಕೊಳ್ಳಬೇಡಿ)’ ಎಂದು ಸಾರುವ ಬೋಧನೆಗಳು ಕೆಲಸ ಮಾಡುವುದಿಲ್ಲ.

    ಇದರ ಕುರಿತಂತೆ ಒಂದು ಒಳ್ಳೆಯ ಕಥೆ ಇದೆ. ಒಮ್ಮೆ, ದೇವತೆಗಳ ರಾಜನಾದ ಇಂದ್ರನು ಇಂದ್ರಿಯ ಸುಖವನ್ನು ಹುಡುಕುತ್ತಾ ಭೂಮಿಗೆ ಬಂದು ಹಂದಿಯ ರೂಪವನ್ನು ತಾಳಿದನು, ಏಕೆಂದರೆ ಸಾಮಾನ್ಯವಾಗಿ ದೈಹಿಕ ಸುಖದ ದೃಷ್ಟಿಯಲ್ಲಿ ಹಂದಿಯ ರೂಪ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅವನು ಸುಂದರವಾದ ಹೆಣ್ಣು ಹಂದಿಯೊಂದನ್ನು ಮದುವೆಯಾದನು ಹಾಗು ಹಲವಾರು ಹಂದಿಮರಿಗಳು ಹುಟ್ಟಿದವು. ಕಾಲಾನಂತರದಲ್ಲಿ, ಅವನು ಬಹಳ ಆಳವಾಗಿ ತನ್ನನ್ನು ಅವುಗಳೊಂದಿಗೆ ತೊಡಗಿಸಿಕೊಂಡನು ಹಾಗೂ ಬಂಧನ ಹೆಚ್ಚಾಯಿತು.

    ಒಂದು ಸಣ್ಣ ಪ್ರವಾಸದಲ್ಲಿ ಇಂದ್ರನು ಇದ್ದಾನೆ ಎಂದು ಮಿಕ್ಕ ದೇವತೆಗಳು ಭಾವಿಸಿ ಸ್ವರ್ಗದಲ್ಲಿ ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ ಇಂದ್ರನು ಹಿಂತಿರುಗದಿದ್ದಾಗ, ಅವರು ಭೂಮಿಗೆ ಬಂದು, ಅವನು ಹಂದಿಯಾದ ಸಂಗತಿಯನ್ನು ಕಂಡರು. ಹಂದಿಯ ಜೀವನವನ್ನು ತ್ಯಜಿಸಿ ಸ್ವರ್ಗಕ್ಕೆ ಮರಳಲು ಅವನೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಆದರೆ ಇಂದ್ರನು ತನ್ನನ್ನು ತುಂಬಾ ಆಳವಾಗಿ ತೊಡಗಿಸಿಕೊಂಡಿದ್ದು ಹಾಗೂ ಸಂಬಂಧಗಳಿಗೆ ಅಂಟಿಕೊಂಡಿದ್ದರಿಂದ, ಗೊಣಗುತ್ತಾ ಹೊರಟುಹೋದನು.

    ‘ತನ್ನ ಸಂಸಾರದಲ್ಲಿ ನಡೆಯುವ ಒಂದು ದುರಂತದಿಂದ, ಇಂದ್ರನು ತನ್ನ ನಿಜವಾದ ಸ್ವರೂಪವನ್ನು ಅರಿತುಕೊಂಡು ಹಿಂದಿರುಗುವಂತೆ ಮಾಡಬಹುದು’ ಎಂಬ ಆಶಯದೊಂದಿಗೆ ದೇವತೆಗಳು ಅವನ ಒಂದು ಮರಿಯನ್ನು ಸಾಯಿಸಿದರು. ಆದರೆ, ನೀವು ಐದು ಮಕ್ಕಳನ್ನು ಹೊಂದಿದ್ದೀರಿ ಎಂದು ಭಾವಿಸೋಣ ಮತ್ತು ನೀವು ಇದ್ದಕ್ಕಿದ್ದಂತೆ ಒಬ್ಬರನ್ನು ಕಳೆದುಕೊಂಡರೆ, ಉಳಿದ ನಾಲ್ಕು ಮಕ್ಕಳಿಗೆ ನೀವು ಗಟ್ಟಿಯಾಗಿ ಅಂಟಿಕೊಳ್ಳುತ್ತೀರಿ. ಅದು ದಾರಿ. ನೀವು ಇನ್ನೊಂದನ್ನು ಕಳೆದುಕೊಂಡರೆ ಉಳಿದ ಮೂವರಿಗೆ ಇನ್ನಷ್ಟು ಗಟ್ಟಿಯಾಗಿ ಅಂಟಿಕೊಳ್ಳುತ್ತೀರಿ, ಅಲ್ಲವೇ? ಕೊಲ್ಲಲ್ಪಟ್ಟ ಪ್ರತಿ ಹಂದಿಮರಿಗಳಿಗೆ ಬದಲಾಗಿ, ಇಂದ್ರನು ಉಳಿದವುಗಳಿಗೆ ಗಟ್ಟಿಯಾಗಿ ಅಂಟಿಕೊಂಡನು. ಅಂತಿಮವಾಗಿ, ದೇವತೆಗಳು ಎಲ್ಲಾ ಹಂದಿಮರಿಗಳನ್ನು ಸಾಯಿಸಿದರು.

    ಆದರೆ ಇಂದ್ರನು ಹೆಚ್ಚು ಮಕ್ಕಳನ್ನು ಹುಟ್ಟಿಸುವ ಪ್ರಕ್ರಿಯೆಯಲ್ಲಿ ನಿರತನಾದನು. ಆಗ ದೇವತೆಗಳು ಇಂದ್ರನ ನಿಜವಾದ ಬಂಧನ ಅವನ ಹೆಂಡತಿ ಎಂದು ಭಾವಿಸಿ ಅವಳನ್ನು ಕೊಂದರು. ಈಗ ಅವನು ತುಂಬಾ ಸಂಕಟಕ್ಕೊಳಗಾದನು. ಶೀಘ್ರದಲ್ಲೇ ಅವನ ಹಂದಿ ಸ್ನೇಹಿತರು ಮತ್ತು ಸಂಬಂಧಿಕರು ಇನ್ನೊಂದು ಮದುವೆಯಾಗಲು ಸೂಚಿಸಿದರು. ಸಂಬಂಧಿಕರು ಯಾವಾಗಲೂ ಇದನ್ನೇ ಮಾಡುತ್ತಾರೆ, ಅಲ್ಲವೇ?. ಇಡೀ ಹಂದಿ-ವ್ಯವಹಾರವು ಮತ್ತೆ ಪ್ರಾರಂಭವಾಯಿತು.

    ಬುದ್ಧಿವಂತಿಕೆಗೆ ಹೆಸರಾದ ಋಷಿಯಾದ ನಾರದನು ಅಲ್ಲಿ ಹಾದುಹೋಗುತ್ತಿದ್ದಾಗ ದೇವತೆಗಳ ನಿರಾಶಾ ಭಾವವನ್ನು ಕಂಡು ‘ನೀವು ಅವನ ಹೆಂಡತಿ ಮತ್ತು ಮಕ್ಕಳನ್ನು ಏಕೆ ಕೊಂದಿರಿ? ಅವನ ಬಂಧನ ಅವನ ದೇಹಕ್ಕಷ್ಟೇ. ದೇಹವನ್ನು ನಾಶಮಾಡಿರಿ’ ಎಂದನು. ದೇವತೆಗಳು ಅವನ ದೇಹವನ್ನು ಕತ್ತರಿಸಿದರು. ಇದರಿಂದ ಇಂದ್ರನು ಹೊರಗೆ ಬಂದು, ‘ಅಯ್ಯೋ, ನಾನು ಇಲ್ಲೇನು ಮಾಡುತ್ತಿದ್ದೇನೆ?’ ಎನ್ನುತ್ತಾ ಸ್ವರ್ಗಕ್ಕೆ ಮರಳಿದನು.

    ದೇಹದೊಂದಿಗಿನ ಬಂಧನವು ಆಳವಾಗಿರುತ್ತದೆ. ಅದು ಎಲ್ಲಾ ಬಂಧನಗಳ ಮೂಲವಾಗಿದೆ. ನೀವು ನಿಜವಾಗಿಯೂ ಇನ್ನೊಬ್ಬ ಜೀವಿಯೊಂದಿಗೆ ನಂಟು ಅಥವಾ ಬಾಂಧವ್ಯ ಬೆಳೆಸಿಕೊಳ್ಳಬಹುದಾದರೆ, ಅದು ನಿಜಕ್ಕೂ ಅದ್ಭುತ ಹಾಗು ವಿಸ್ಮಯದ ವಿಚಾರವಾಗುತ್ತದೆ. ಆದರೆ ಸ್ವಂತ ದೇಹದೊಂದಿಗೆ ಬಂಧನಕ್ಕೊಳಗಾದಾಗ, ನೀವು ತುಂಬಾ ಸೀಮಿತರಾಗುತ್ತೀರಿ. ಆದ್ದರಿಂದ, ನೀವು ಬೇರೆಲ್ಲಿಯೂ ಮುಕ್ತಿಯನ್ನು ಹುಡುಕಲು ಹೋಗಬೇಕಾಗಿಲ್ಲ. ಹಾಗೆಯೇ ಜೀವನದಲ್ಲಿ ಯಾವುದರಿಂದಲೂ ದೂರವಿರಬೇಕಾಗಿಲ್ಲ. ಸ್ವಂತ ದೇಹದಿಂದ ನಿಮ್ಮನ್ನು ಹೇಗೆ ದೂರವಿರಿಸಬೇಕೆಂದು ನೀವು ಅರ್ಥ ಮಾಡಿಕೊಳ್ಳಬೇಕು. ಸಂಪೂರ್ಣ ವಿಜ್ಞಾನವಾದ ಯೋಗವು, ಈ ಪ್ರತ್ಯೇಕತೆಯ ಪ್ರಜ್ಞೆಯನ್ನು ಮತ್ತು ದೇಹದ ಮಟ್ಟದಿಂದ ಸ್ವಾತಂತ್ರ್ಯವನ್ನು ತರುವ ಸಾಧನ ಮತ್ತು ತಂತ್ರಜ್ಞಾನವಾಗಿದೆ.

    ನೀವು ಇಷ್ಟಪಟ್ಟರೂ ಪಡದಿದ್ದರೂ, ಒಟ್ಟಾರೆಯಾಗಿ ನಿಮ್ಮ ಉಸಿರಾಟದ, ದೇಹದ ಮತ್ತು ಅಸ್ತಿತ್ವದ ಜತೆಗೆ, ನೀವು ಬೇರ್ಪಡಿಸಲಾಗದ ಬಂಧನದಲ್ಲಿದ್ದೀರಿ. ಆದ್ದರಿಂದ, ಬಂಧನದ ಬಗ್ಗೆ ಹಿಂಜರಿಯಬೇಡಿ. ಬೇರ್ಪಡುವಿಕೆ ಬಗ್ಗೆ ತಿಳಿಸುವ ಯಾವ ಬೋಧನೆಗಳನ್ನೂ ಕೇಳಬೇಡಿ. ಇದೀಗ, ಬಂಧನ ತಪ್ಪು ಎಂಬ ಬೋಧನೆಗಳಿಗೊಳಗಾಗಿ, ಸಕ್ರಿಯವಾಗಿ ಜೀವನದಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದೀರಿ. ನಿಮ್ಮನ್ನು ನೀವೇ ಜೀವನದಿಂದ ಪ್ರತ್ಯೇಕವಾಗಿಸುವುದರಿಂದ ಸ್ವತಂತ್ರರಾಗುವುದು ಅಸಾದ್ಯ. ಎಲ್ಲವನ್ನೂ ನಿಮ್ಮ ಭಾಗವಾಗಿ ಸೇರಿಸಿಕೊಳ್ಳುವುದರ ಮೂಲಕ ಮಾತ್ರ ಸ್ವಾತಂತ್ರ್ಯ ಬರುತ್ತದೆ. ಎಲ್ಲವನ್ನೂ ನಿಮ್ಮ ಭಾಗವಾಗಿ ಸೇರಿಸಿಕೊಂಡಲ್ಲಿ, ನಿಮ್ಮದೇ ಆದ ಯಾವ ಗುರುತೂ ಉಳಿಯುವುದಿಲ್ಲ; ಅದುವೇ ಯೋಗ.

    ಯೋಗ ಎಂದರೆ ಬಂಧನ, ಆದರೆ ನೀವು ಇಡೀ ಅಸ್ತಿತ್ವದ ಜತೆ ಬಂಧನಕ್ಕೆ ಒಳಗಾದರಷ್ಟೇ, ನೀವು ಯೋಗದಲ್ಲಿದ್ದೀರೆಂದು ಅರ್ಥ. ಅಥವಾ ನೀವು ಅಸ್ತಿತ್ವದೊಂದಿಗೆ ಬೇರ್ಪಡಿಸಲಾಗದಷ್ಟು ಬಂಧನ ಹೊಂದಿರುವಿರಿ ಎಂದು ತಿಳಿದಾಗ, ಅದುವೇ ನಿಮ್ಮ ವಿಶ್ವರೂಪ -ಸರ್ವವ್ಯಾಪಿ. ನಿಮ್ಮ ಬಂಧನ ವಿವೇಚನಾಮುಕ್ತವಾಗಿರಲಿ. ಅದರಿಂದ ಆನಂದದ ಅವಸ್ಥೆಯೆಡೆಗೆ ಸಾಗಲು ಕಾರಣವಾಗುತ್ತದೆ. ಕೇವಲ ನಿಮ್ಮದೇ ಆಯ್ಕೆಯ ಹಾಗೂ ಪೂರ್ವಾಗ್ರಹ ಹೊಂದಿದ, ಬಂಧನವಷ್ಟೇ ನೋವನ್ನು ಉಂಟು ಮಾಡುತ್ತದೆ.

    ಯಾರು ವಿವೇಚನೆಯಿಲ್ಲದೆ ಅಸ್ತಿತ್ವದಲ್ಲಿರುವ ಎಲ್ಲದರೊಂದಿಗೆ ಸಂಪೂರ್ಣವಾಗಿ ತೊಡಗಿಸಿ(ಬಂಧಿಸಿ) ಕೊಳ್ಳುತ್ತಾರೆಯೋ ಅವರಿಗಷ್ಟೇ ಜೀವನದ ಸೌಂದರ್ಯ ಮತ್ತು ಭವ್ಯತೆಯು ತಿಳಿಯುತ್ತದೆ. ಇದು ನಿಮ್ಮನ್ನು ಎಲ್ಲದಕ್ಕೂ ಕೇವಲ ಅಂಟಿಕೊಳ್ಳುವಂತೆ ಮಾಡುವುದಿಲ್ಲ, ಬದಲಾಗಿ ನಿಮ್ಮಲ್ಲಿ ನೀವೇ ರಚಿಸಿರುವ ‘ನಾನು’ ಎಂಬ ಅಹಂಕಾರವನ್ನು ಕರಗಿಸುತ್ತದೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts