ಸಿನಿಮಾ

ಖಾದ್ಯತೈಲ ಬೆಲೆ ಇಳಿಕೆ; ಆಮದು ಪ್ರಮಾಣ ಏರಿಕೆ

ಯೂಕ್ರೇನ್ ಮೇಲೆ ರಷ್ಯಾದ ಆಕ್ರಮಣಗೈದ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಈಗ ಕುಸಿದಿವೆ. ಸೂರ್ಯಕಾಂತಿ ಎಣ್ಣೆ ಅತಿ ಹೆಚ್ಚು ಏರಿಳಿತ ಕಂಡಿದೆ. ಅಲ್ಲದೆ, ಭಾರತದ ತೈಲ ಆಮದು ದಾಖಲೆಯ ಎತ್ತರಕ್ಕೆ ತಲುಪಿದೆ. ಸೂರ್ಯಕಾಂತಿ, ತಾಳೆ ಎಣ್ಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಯಿತು.

ಕಳೆದ 2-3 ವರ್ಷಗಳಲ್ಲಿ ಕೆಲವು ಸರಕುಗಳು ಹೆಚ್ಚಿನ ಬೆಲೆ ಚಂಚಲತೆಗೆ ಸಾಕ್ಷಿಯಾಗಿವೆ. ಇವುಗಳಲ್ಲಿ ಖಾದ್ಯ ತೈಲಗಳು ಪ್ರಮುಖವಾದವು. ವಿಶ್ವದಾದ್ಯಂತ ಕೋವಿಡ್ ಲಾಕ್​ಡೌನ್ ಪರಿಸ್ಥಿತಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ 2020ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಜಾಗತಿಕ ತರಕಾರಿ ತೈಲಗಳ ಬೆಲೆ ಸೂಚ್ಯಂಕವು (2014-16 ಮೂಲ ಅವಧಿಯ ಮೌಲ್ಯ = 100) 77.8 ಪಾಯಿಂಟ್​ಗಳಿಗೆ ಇಳಿದಿತ್ತು. ಆದರೆ, 2022ರ ಮಾರ್ಚ್​ನಲ್ಲಿ ರಷ್ಯಾ-ಯೂಕ್ರೇನ್ ಯುದ್ಧ ಆರಂಭದ ನಂತರ ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 251.8 ಕ್ಕೆ ಏರಿತು. ಈಗ ಮತ್ತೆ 2023ರ ಏಪ್ರಿಲ್ ಹೊತ್ತಿಗೆ 130 ಅಂಕಗಳಿಗೆ ಇಳಿದಿದೆ. ಅತಿ ಹೆಚ್ಚು ಬೆಲೆ ಏರಿಕೆ ಮತ್ತು ಇಳಿಕೆಗೆ ಸಾಕ್ಷಿಯಾದ ತೈಲವೆಂದರೆ ಸೂರ್ಯಕಾಂತಿ. ಏಕೆಂದರೆ, 2021-22ರಲ್ಲಿ ಯೂಕ್ರೇನ್ ಮತ್ತು ರಷ್ಯಾ ಒಟ್ಟಾಗಿ ಈ ಎಣ್ಣೆಬೀಜದ ಜಾಗತಿಕ ಉತ್ಪಾದನೆಯ ಶೇಕಡಾ 58ರಷ್ಟನ್ನು ಉತ್ಪಾದಿಸಿದ್ದವು. ಯುದ್ಧ ಆರಂಭವಾದ ನಂತರ ಕಪ್ಪು ಸಮುದ್ರದ ಬಂದರುಗಳ ಮೂಲಕ ಸೂರ್ಯಕಾಂತಿ ಸರಬರಾಜು ಸ್ಥಗಿತಗೊಳ್ಳುತ್ತಿದ್ದಂತೆಯೇ ಬೆಲೆಗಳು ಗಗನಕ್ಕೇರಿದವು.

2022ರ ಜನವರಿಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಬೆಲೆ ಪ್ರತಿ ಟನ್​ಗೆ ಸರಾಸರಿ 1,475 ಡಾಲರ್. ಕಚ್ಚಾ ಸೋಯಾಬಿನ್ ತೈಲಕ್ಕೆ (1,506 ಡಾಲರ್) ಮತ್ತು ತಾಳೆ ಎಣ್ಣೆಗೆ (1,490 ಡಾಲರ್) ಹೋಲಿಸಿದರೆ ಈ ಬೆಲೆ ಕಡಿಮೆಯಾಗಿತ್ತು. ಆದರೆ, 2022ರ ಏಪ್ರಿಲ್ ಹೊತ್ತಿಗೆ ಸೂರ್ಯಕಾಂತಿ ಎಣ್ಣೆಯ ಸರಾಸರಿ ಆಮದು ಬೆಲೆ ಪ್ರತಿ ಟನ್​ಗೆ 2,155 ಡಾಲರ್ ಆಗಿತ್ತು. ಪ್ರತಿ ಟನ್ ಸೋಯಾಬೀನ್​ಗೆ 1,909 ಡಾಲರ್ ಮತ್ತು ತಾಳೆಗೆ 1,748 ಡಾಲರ್ ಬೆಲೆ ಇತ್ತು.

2022ರ ಜುಲೈನಲ್ಲಿ ರಷ್ಯಾ ಮತ್ತು ಯೂಕ್ರೇನ್ ನಡುವಿನ ಕಪ್ಪು ಸಮುದ್ರದ ಧಾನ್ಯ ಯೋಜನೆ ಒಪ್ಪಂದದೊಂದಿಗೆ ಯೂಕ್ರೇನ್​ನ ಮೂರು ಬಂದರುಗಳಿಂದ ಧಾನ್ಯ ಮತ್ತು ಆಹಾರ ಪದಾರ್ಥಗಳನ್ನು ಹಡಗುಗಳ ಮೂಲಕ ರವಾನೆ ಮಾಡುವುದನ್ನು ಸುಗಮಗೊಳಿಸಿತು. ಇದರಿಂದಾಗಿ ಯೂಕ್ರೇನ್​ನಲ್ಲಿ ಸಂಗ್ರಹವಾದ ಸೂರ್ಯಕಾಂತಿ ಎಣ್ಣೆ ಮತ್ತು ಬೀಜವನ್ನು ಹೊರಕ್ಕೆ ಸಾಗಿಸಲು ಅನುಕೂಲವಾಯಿತು. ಇದು ಸೂರ್ಯಕಾಂತಿ ಎಣ್ಣೆಯ ಬೆಲೆ ಯುದ್ಧಪೂರ್ವದ ಮಟ್ಟಕ್ಕಿಂತ ಕೆಳಗಿಳಿಯಲು ಕಾರಣವಾಯಿತು. ಸೂರ್ಯಕಾಂತಿ ಎಣ್ಣೆಯನ್ನು ಪ್ರಸ್ತುತ ಪ್ರತಿ ಟನ್​ಗೆ 950 ಡಾಲರ್ ಬೆಲೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಪ್ರತಿಸ್ಪರ್ಧಿ ತೈಲವಾದ ಸೋಯಾಬೀನ್​ಗಿಂತಲೂ (ಪ್ರತಿ ಟನ್​ಗೆ 990 ಡಾಲರ್) ಬೆಲೆ ಕಡಿಮೆ ಇದೆ.

ಯೂಕ್ರೇನ್​ನಿಂದ ಆಮದು ಕುಸಿತ

ಭಾರತದ ಸೂರ್ಯಕಾಂತಿ ಎಣ್ಣೆ ಆಮದು 2021-22 ರಲ್ಲಿ 23,864 ಕೋಟಿ ರೂ. ಮತ್ತು 2022-23ರಲ್ಲಿ 25,852 ಕೋಟಿ ರೂ. ಮೌಲ್ಯದ್ದಾಗಿದೆ. ಈ ಎರಡೂ ವರ್ಷಗಳಲ್ಲಿ ಆಮದು ಪ್ರಮಾಣ ಸರಿಸಮನಾಗಿಯೇ (20 ಲಕ್ಷ ಟನ್) ಇತ್ತು. ಬೆಲೆಯಲ್ಲಿ ಮಾತ್ರ ವ್ಯತ್ಯಾಸವಾಗಿತ್ತು. ಆದರೆ, ಆಮದಿನಲ್ಲಿ ಯೂಕ್ರೇನ್​ನ ಪಾಲು 2021-22ರಲ್ಲಿ 14.8 ಲಕ್ಷ ಟನ್​ನಿಂದ 2022-23 ರಲ್ಲಿ 4.3 ಲಕ್ಷ ಟನ್​ಗೆ ಕುಸಿಯಿತು. ರಷ್ಯಾದ ಪಾಲು 3.4 ಲಕ್ಷ ಟನ್​ನಿಂದ 5.7 ಲಕ್ಷ ಟನ್​ಗೆ, ಅರ್ಜೆಂಟೀನಾದ ಪಾಲು 1.9 ಲಕ್ಷ ಟನ್​ನಿಂದ 4.3 ಲಕ್ಷ ಟನ್​ಗೆ, ರೊಮೇನಿಯಾದ ಪಾಲು 20 ಸಾವಿರದಿಂದ 2 ಲಕ್ಷ ಟನ್​ಗೆ, ಬಲ್ಗೇರಿಯಾದ ಪಾಲು 20 ಸಾವಿರದಿಂದ 1.6 ಲಕ್ಷ ಟನ್​ಗೆ ಏರಿತು.

ಕೆಜಿಗೆ 200ರಿಂದ 120ಕ್ಕೆ ಇಳಿಕೆ

ಪ್ರತಿ ಟನ್​ಗೆ 950 ಡಾಲರ್ ದರದಲ್ಲಿ ಭಾರತಕ್ಕೆ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡರೆ ಅದರ ಬೆಲೆ ಒಂದು ಕೆಜಿಗೆ ಅದಾಜು 78.7 ರೂಪಾಯಿ ಆಗುತ್ತದೆ. ಶೇಕಡಾ 5.5 ಆಮದು ಸುಂಕ ಮತ್ತು 6 ರೂ.ಗಳ ಸಂಸ್ಕರಣಾ ವೆಚ್ಚ ಸೇರಿಸಿದರೆ (ತರಕಾರಿ ತೈಲ ಸಂಸ್ಕರಣಾಗಾರಗಳು ಹೆಚ್ಚಾಗಿ ಬಂದರುಗಳ ಬಳಿ ಇವೆ) ಈ ದರವು ಕೆಜಿಗೆ 89 ರೂಪಾಯಿಗೆ ತಲುಪುತ್ತದೆ. ಪ್ಯಾಕ್ ಮಾಡಿದ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಈಗ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಜಿಗೆ 119-120 ರೂ.ಗೆ ಮಾರಾಟವಾಗುತ್ತಿದೆ. ಆಮದು ಬೆಲೆ ಪ್ರತಿ ಟನ್​ಗೆ 2,100-2,200 ಡಾಲರ್​ಗೆ ಏರಿದಾಗ (2022ರ ಏಪ್ರಿಲ್ ಅವಧಿಯಲ್ಲಿ) 190-200 ರೂಪಾಯಿಗೆ ಮಾರಾಟವಾಗುತ್ತಿತ್ತು.

ಕರ್ನಾಟಕದಲ್ಲಿ ಹೆಚ್ಚು ಉಪಯೋಗ

ದೇಶದ ಸೂರ್ಯಕಾಂತಿ ಎಣ್ಣೆಯ ಬಳಕೆಯಲ್ಲಿ ಶೇಕಡಾ 70ರಷ್ಟು ಪಾಲು ದಕ್ಷಿಣ ರಾಜ್ಯಗಳದ್ದಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸೂರ್ಯಕಾಂತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ. ಕಳೆದ ಒಂದು ದಶಕದಲ್ಲಿ ಸೂರ್ಯಕಾಂತಿಯ ದೇಶೀಯ ಉತ್ಪಾದನೆ ಕುಸಿತ ಕಂಡಿದೆ.

2.4 ಕೋಟಿ ಟನ್ ಎಣ್ಣೆ ಬಳಕೆ ಆಮದು ಮೇಲೆ ಅವಲಂಬನೆ

ಭಾರತವು ವಾರ್ಷಿಕವಾಗಿ ಅಂದಾಜು 2.4 ಕೋಟಿ ಟನ್​ನಷ್ಟು ಅಡುಗೆ ಎಣ್ಣೆಯನ್ನು ಬಳಸುತ್ತದೆ. ಇದರಲ್ಲಿ ಅಂದಾಜು 1.4 ಕೋಟಿ ಟನ್​ನಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಉಳಿದುದನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ ಎರಡನ್ನೂ ಬಹುತೇಕವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಇವುಗಳ ದೇಶೀಯ ಉತ್ಪಾದನೆ ಕ್ರಮವಾಗಿ 50 ಸಾವಿರ ಟನ್ ಮತ್ತು 3 ಲಕ್ಷ ಟನ್ ಮಾತ್ರ. ಅಗತ್ಯವಿರುವಷ್ಟು ಸಾಸಿವೆ ಎಣ್ಣೆಯನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತದೆ. ಸೋಯಾಬೀನ್ ಎಣ್ಣೆಯ ಪೈಕಿ ಶೇ. 30ರಷ್ಟನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ಹೀಗಾಗಿ, ಖಾದ್ಯ ತೈಲ ಆಮದು ಬೆಲೆಗಳು ಭಾರತೀಯ ಗ್ರಾಹಕರ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ.

ಸ್ಥಳೀಯವಾಗಿ ಉತ್ಪಾದಿಸುವ ಇತರ ತೈಲಗಳು ಹತ್ತಿಬೀಜ (13 ಲಕ್ಷ ಟನ್), ಭತ್ತದ ಹೊಟ್ಟು (11 ಲಕ್ಷ ಟನ್), ಕಡಲೆಕಾಯಿ (10 ಲಕ್ಷ ಟನ್) ಮತ್ತು ತೆಂಗಿನಕಾಯಿ (4 ಲಕ್ಷ ಟನ್) ಎಣ್ಣೆಗಳು ಬೆಲೆಗಳ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ಪ್ರಮಾಣದಲ್ಲಿ ದೇಶದಲ್ಲಿ ಉತ್ಪಾದನೆಯಾಗುವುದಿಲ್ಲ.

ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

Latest Posts

ಲೈಫ್‌ಸ್ಟೈಲ್