ಸಿನಿಮಾ

ಯುಪಿಎಸ್​ಸಿ ಮಹಿಳೆಯರೇ ಬೆಸ್ಟ್: ಮೊದಲ 4 ರ‌್ಯಾಂಕ್ ಮಹಿಳೆಯರಿಗೆ; ಬೆಂಗಳೂರಿನ ಭಾವನಾ ರಾಜ್ಯದ ಟಾಪರ್

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2022ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್​ಇ) ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 933 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಅಗ್ರ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದು, ಕರ್ನಾಟಕದ ಟಾಪರ್ ಕೂಡ ಮಹಿಳೆಯೇ ಆಗಿದ್ದಾರೆ.

ಪ್ರಸ್ತುತ ಸೊಲ್ಲಾಪುರದಲ್ಲಿ ಭಾರತೀಯ ರೈಲ್ವೆ ಸೇವೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಬನಶಂಕರಿಯ ಭಾವನಾ ಎಚ್.ಎಸ್. 55ನೇ ರ್ಯಾಂಕ್ ಪಡೆದು ರಾಜ್ಯದ ಅಭ್ಯರ್ಥಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯು ಹಾಗೂ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಭಾವನಾ 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗಿದ್ದರು. ಆದರೂ ಐಎಎಸ್ ಗುರಿಯೊಂದಿಗೆ ಅಧ್ಯಯನ ಮುಂದುವರಿಸಿದ್ದರು. ರಾಜ್ಯದ 30ಕ್ಕೂ ಅಧಿಕ ಜನ ಈ ಬಾರಿ ಯುಪಿಎಸ್​ಸಿ ಹುದ್ದೆ ಪಡೆದಿದ್ದಾರೆ. ಉತ್ತರಪ್ರದೇಶದ ಇಶಿತಾ ಕಿಶೋರ್ ದೇಶಕ್ಕೇ ಮೊದಲ ರ್ಯಾಂಕ್ ಗಳಿಸಿದ್ದಾರೆ. 2ನೇ ರ್ಯಾಂಕ್ ಪಡೆದಿರುವ ಗರಿಮಾ ಲೋಹಿಯಾ ಬೆಂಗಳೂರಿನ ಯೂನಿವರ್ಸಲ್ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆದಿದ್ದರು.

ತರಬೇತಿ ಪಡೆದ ಮಾತ್ರಕ್ಕೆ ಯುಪಿಎಸ್​ಸಿ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಸ್ಥಿರತೆ, ತಾಳ್ಮೆ ಮತ್ತು ಪರಿಶ್ರಮದಿಂದ ಸಾಧಿಸಬಹುದು. 2018ರಲ್ಲಿ 314ನೇ ರ‌್ಯಾಂಕ್ ಬಂದಿತ್ತು. ಸದ್ಯ ಸೊಲ್ಲಾಪುರದಲ್ಲಿ ಐಆರ್​ಎಸ್ ಸೇವೆಯಲ್ಲಿದ್ದೇನೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಂತರ 6ನೇ ಪ್ರಯತ್ನದಲ್ಲಿ 55ನೇ ರ್ಯಾಂಕ್ ಬಂದಿದೆ. ಸೇವೆಯಲ್ಲಿದ್ದರಿಂದ ಎಲ್ಲಿಯೂ ಕೋಚಿಂಗ್ ಹೋಗಿಲ್ಲ. ಕೆಲಸದಲ್ಲಿದ್ದುಕೊಂಡು ಬ್ಯಾಚ್​ವೆುೕಟ್ ಜತೆ ರ್ಚಚಿಸಿ ಅಧ್ಯಯನ ನಡೆಸಿದ್ದೆ.

| ಭಾವನಾ ಎಚ್.ಎಸ್., 55ನೇ ರ‌್ಯಾಂಕ್, ರಾಜ್ಯದ ಟಾಪರ್

2021ರಲ್ಲಿ 255ನೇ ರ‌್ಯಾಂಕ್ ಪಡೆದು ಐಆರ್​ಎಸ್ ತರಬೇತಿಯಲ್ಲಿದ್ದೇನೆ. ಈಗ 197ನೇ ರ‌್ಯಾಂಕ್ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಈಗ ನನಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಮೂಲತಃ ಮೈಸೂರಿನವರಾಗಿದ್ದು, ಶಾಲೆ- ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿದ್ದೇನೆ.

| ಸೂರಜ್ ಡಿ. 197ನೇ ರ‌್ಯಾಂಕ್, ಯುಪಿಎಸ್​ಸಿ ಸಾಧಕ ಕನ್ನಡಿಗರು

ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ್ದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಲ್ಲಿ 30ಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ದೇಶದ ನಾಗರಿಕ ಸೇವೆಗಳ ಉನ್ನತ ಹುದ್ದೆ ಗಳಿಸಿರುವ ಈ ಕನ್ನಡಿಗರ ಶ್ರಮದ ಹಿಂದೆ ಹಲವಾರು ವಿಶೇಷಗಳಿವೆ. ಬಡತನ, ಮನೆಯಲ್ಲೇ ಅಭ್ಯಾಸ, ನಿರಂತರ ಪ್ರಯತ್ನ ಹೀಗೆ ಒಬ್ಬೊಬ್ಬರದು ಒಂದೊಂದು ಕತೆ. ಸಾಧಕರ ಕಿರು ಪರಿಚಯ ಇಲ್ಲಿದೆ.

ಶ್ರುತಿ ಯರಗಟ್ಟಿ 362ನೇ ರ‌್ಯಾಂಕ್

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ಅರಬಾವಿ ಗ್ರಾಮದ ಶ್ರುತಿ ಎಸ್.ಯರಗಟ್ಟಿ, ಹುಕ್ಕೇರಿ ತಾಲೂಕಿನ ಶಿರಿಢಾನ ಗಂಗಾಧರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕದಿಂದ ಪ್ರೌಢ ಶಿಕ್ಷಣ ಮುಗಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯು ವಿಜ್ಞಾನ, ಬಿಎಸ್​ಸಿ ಪದವಿ ಪಡೆದರು. ಸತತವಾಗಿ ಏಳು ವರ್ಷಗಳ ಕಾಲ ಯುಪಿಎಸ್​ಸಿ ಪರೀಕ್ಷೆಗಾಗಿ ಅಧ್ಯಯನ ನಡೆಸಿದರು. ದೆಹಲಿಯಲ್ಲಿ ಒಂದು ವರ್ಷ ತರಬೇತಿ ಪಡೆದು ಆರನೇ ಪ್ರಯತ್ನದಲ್ಲಿ 362ನೇ, ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಶ್ರುತಿ ಬೆಂಗಳೂರಿನ ಅತ್ತಿಗುಬ್ಬೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಕಠಿಣ ಶ್ರಮ, ದೃಢ ಸಂಕಲ್ಪ ಮುಖ್ಯವಾಗಿರಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಬೇಕು. ಪ್ರತಿಯೊಂದು ವಿಷಯದ ಮೇಲೆ ಹಿಡಿತ ಸಾಧಿಸುವಷ್ಟು ಅಧ್ಯಯನ ಮಾಡಬೇಕು.

| ಶ್ರುತಿ ಯರಗಟ್ಟಿ

ಕೆ. ಸೌರಭ್ 260ನೇ ರ‌್ಯಾಂಕ್

ಮೈಸೂರಿನ ಯುವಕ ಕೆ. ಸೌರಭ್ ಇಂಡಿಯನ್ ಫಾರೆಸ್ಟ್ ಸರ್ವೀಸ್ (ಐಎಫ್​ಎಸ್)ನಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಡೆಹರಾಡೂನ್​ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಯುಪಿಎಸ್​ಸಿ ಪರೀಕ್ಷೆ ಎದುರಿಸಿ 260ನೇ ರ್ಯಾಂಕ್ ಪಡೆದುಕೊಂಡಿರುವುದು ವಿಶೇಷ. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆಂಪರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಂ. ಜಾನಕಿ ದಂಪತಿ ಪುತ್ರರಾಗಿರುವ ಸೌರಭ್ ಎಂಟೆಕ್ ಪದವೀಧರ.

ತಂದೆ, ತಾಯಿಯ ಸ್ಪೂರ್ತಿಯಿಂದ 4ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದೇನೆ. ಎರಡು ಗಂಟೆ ಓದಿದರೆ ಇನ್ನೆರಡು ಗಂಟೆ ಟಿವಿ ನೋಡುವುದು ಹಾಗೂ ಆಟ ಆಡುವುದರಲ್ಲಿ ಕಳೆಯುತ್ತಿದ್ದೆ. ನಿರಂತರವಾಗಿ ಓದಿದರೆ ತಲೆಯಲ್ಲಿ ಉಳಿಯುವುದಿಲ್ಲ ಎಂಬ ತಂದೆ ಸಲಹೆಯನ್ನು ಪಾಲಿಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.

| ಕೆ. ಸೌರಭ್

ಶ್ರವಣ್​ಕುಮಾರ್ 222ನೇ ರ‌್ಯಾಂಕ್

ಶ್ರವಣ್ ಕುಮಾರ್ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದವರು. ಈಗಾಗಲೆ ಶ್ರವಣ್ ಭಾರತ ಕಂದಾಯ ಸೇವೆ (ಐಆರ್​ಎಸ್)ಗೆ ಆಯ್ಕೆಯಾಗಿದ್ದು, ತರಬೇತಿ ಪಡೆಯುತ್ತಿದ್ದಾರೆ. ಶ್ರವಣ್​ಕುಮಾರ್ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳ್ಳುತ್ತಿರುವ ವೇಳೆಯಲ್ಲಿ ಯುಪಿಎಸ್​ಸಿ ಪರೀಕ್ಷೆ ಬರೆಯಲು ಆರಂಭಿಸಿದ್ದರು. ಎರಡು ಬಾರಿ ಪರೀಕ್ಷೆಯಲ್ಲಿ ಐಆರ್​ಎಸ್ ಅಧಿಕಾರಿಯಾಗಿ ಆಯ್ಕೆಗೊಂಡಿದ್ದರು. ಪುನಃ ಯುಎಸ್​ಸಿ ಪರೀಕ್ಷೆ ಎದುರಿಸಿ, ಐಎಎಸ್​ಗೆ ಆಯ್ಕೆಯಾಗುವ ಮಹತ್ವದ ಸಾಧನೆ ಮಾಡಿದ್ದಾರೆ.

ಚೆಲುವರಾಜು 238ನೇ ರ‌್ಯಾಂಕ್

ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕು ದೊಡ್ಡಬಾದಗೆರೆ ಗ್ರಾಮದ ಆರ್. ಚೆಲುವರಾಜು, ಬಡ ಕುಟುಂಬದ ಪ್ರತಿಭೆ. ಕೆಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಇವರು ಪ್ರಸ್ತುತ ಸಹಕಾರ ಇಲಾಖೆ ಸಹಾಯಕ ನಿರ್ದೇಶಕರಾಗಿ ತರಬೇತಿ ಪಡೆಯುತ್ತಿದ್ದರು.ಜತೆಯಲ್ಲಿಯೇ ಯುಪಿಎಸ್​ಸಿ ಪರೀಕ್ಷೆಗೂ ತಯಾರಿ ನಡೆಸಿದ್ದರು.

ಯುಪಿಎಸ್​ಸಿ ಪರೀಕ್ಷೆಯಲ್ಲಿ 238ನೇ ರ್ಯಾಂಕ್ ಪಡೆದಿರುವ ಆರ್. ಚೆಲುವರಾಜು ಅವರಿಗೆ ಸಿಹಿ ತಿನ್ನಿಸಿದ ತಾಯಿ ನಾಗಮ್ಮ.

ಎಂ.ಪೂಜಾ 390ನೇ ರ‌್ಯಾಂಕ್

ಮೈಸೂರಿನ ಕುವೆಂಪುನಗರದ ಎಂ. ಪೂಜಾ ಖಾಸಗಿ ಸಂಸ್ಥೆ ಉದ್ಯೋಗಿಯಾಗಿರುವ ಮುಕುಂದ್​ರಾವ್-ರೋಹಿಣಿ ದಂಪತಿ ಪುತ್ರಿ. ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ 2ನೇ ಪ್ರಯತ್ನದಲ್ಲಿಯೇ ಯುಪಿಎಸ್​ಸಿ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಯುಪಿಎಸ್​ಸಿ ಪರೀಕ್ಷೆಗೆ ಪೂಜಾ ಯಾವುದೇ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆಯಲಿಲ್ಲ, ಮನೆಯಲ್ಲಿ ಕುಳಿತು ಓದಿಯೇ ಯಶಸ್ಸನ್ನು ಕಂಡಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಎಲ್ಲ ರೀತಿಯ ಸವಲತ್ತುಗಳು ಅವಶ್ಯಕ ಎಂಬ ಭಾವನೆ ಬೇಡ, ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಿದೆ.

| ಎಂ. ಪೂಜಾ

ಸೌರಭ ನರೇಂದ್ರ 198ನೇ ರ‌್ಯಾಂಕ್

ಧಾರವಾಡದ ಸಿ.ಬಿ. ನಗರದ ಸೌರಭ ನರೇಂದ್ರ, ಸತತ 4 ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಫಲತೆ ಕಾಣದಿದ್ದರೂ ನಿರಂತರ ಓದು ಮುಂದುವರಿಸಿ 5ನೇ ಪ್ರಯತ್ನದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಕನಸು ನನಸು ಮಾಡಿಕೊಂಡಿದ್ದಾರೆ. ಇವರ ತಂದೆ ಅಮೃತ ಅವರು ಖಾಸಗಿ ಉದ್ಯೋಗಿ. ತಾಯಿ ಸುನೀತಾ ಗೃಹಿಣಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿರುವ ಸೌರಭ, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ನಿರ್ದೇಶಕ ಹುದ್ದೆಗೇರಿ ಹಾಲಿ ಪುದುಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಐ.ಎನ್.ಮೇಘನಾ 617ನೇ ರ‌್ಯಾಂಕ್

ಶಿವಮೊಗ್ಗದ ಐ.ಎನ್.ಮೇಘನಾ ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಅವರ ಪುತ್ರಿ. ಚಾಮರಾಜನಗರ ಜಿಲ್ಲೆ ಬಂಡೀಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಈಕೆ, ದಾವಣಗೆರೆ ಸರ್ಕಾರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ, ಶಿವಮೊಗ್ಗದ ಸಾಂದೀಪನಿಯಲ್ಲಿ ಪ್ರೌಢ ಶಿಕ್ಷಣ, ಪೇಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮುಗಿಸಿದ್ದಾರೆ.

ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಯುಪಿಎಸ್​ಸಿ ಪರೀಕ್ಷೆ ಕಡೆಗೆ ಗಮನ ಹರಿಸಿದ್ದರು. ಮೊದಲ ಪ್ರಯತ್ನದಲ್ಲಿ ವಿಫಲರಾದರೂ ಬೆಂಗಳೂರಿನಲ್ಲಿ ತರಬೇತಿ ಪಡೆದು ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಸಾರ್ವ ಜನಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡ ಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಹಿರಿಯ ಅಧಿಕಾರಿಯಾಗಲೇಬೇಕೆಂಬ ಗುರಿಯೊಂದಿಗೆ ತಯಾರಿ ನಡೆಸಿದ್ದೆ. ಅದರಲ್ಲಿ ಯಶಸ್ಸು ಸಿಕ್ಕಿದ್ದರಿಂದ ಸಮಾಧಾನವಾಗಿದೆ.

| ಐ.ಎನ್.ಮೇಘನಾ

ಸತೀಶ ಸೋಮಜಾಳ 588ನೇ ರ‌್ಯಾಂಕ್

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ ಸೋಮಜಾಳ ಯುಪಿಎಸ್​ಸಿ ಪರೀಕ್ಷೆಯಲ್ಲಿ 588ನೇ ರ್ಯಾಂಕ್ ಪಡೆದಿದ್ದು, ಕುಟುಂಬಸ್ಥರಿಗೆ ಸ್ವರ್ಗವೇ ಧರೆಗಿಳಿದಂತಾಗಿದೆ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ (1ರಿಂದ 5), 5 ರಿಂದ ದ್ವಿತೀಯ ಪಿಯುಸಿವರೆಗೆ ಸೈನಿಕ ಶಾಲೆಯಲ್ಲಿ ಓದಿದ್ದು, ಸೈನಿಕ ಶಾಲೆ ವಾತಾವರಣವೇ ಯುಪಿಎಸ್​ಸಿ ತೇರ್ಗಡೆಯಾಗಲು ಪ್ರೇರಣೆ ಎನ್ನುತ್ತಾರೆ ಸತೀಶ. ಇಂಜಿನಿಯರಿಂಗ್ ಪದವಿ ಪೂರೈಸಿದ ಸತೀಶ, 4ನೇ ಪ್ರಯತ್ನದಲ್ಲಿ 588ನೇ ರ್ಯಾಂಕ್ ಸಾಧನೆ ಮಾಡಿದ್ದು, ಇನ್ನೂ ರ್ಯಾಂಕ್ ಉತ್ತಮಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸತತ ಪ್ರಯತ್ನ, ಗಂಭೀರ ಓದು, ತಾಳ್ಮೆಯೇ ಸಾಧನೆಗೆ ರಹದಾರಿ. ಪ್ರತಿ ದಿನ ಎಂಟು ಗಂಟೆಗಳ ಕಾಲ ಅಧ್ಯಯನಶೀಲನಾಗಿರುತ್ತಿದ್ದೆ. ಒಂದು ವರ್ಷ ದೆಹಲಿಯಲ್ಲಿ ತರಬೇತಿ ಪಡೆದೆ. ಬಡತನದಲ್ಲೂ ಬ್ಯಾಂಕ್ ಲೋನ್ ಪಡೆದು ಶಿಕ್ಷಣ ಪೂರೈಸಿದೆ. ಈ ಸಾಧನೆಯನ್ನು ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ.

| ಸತೀಶ ಶ್ರೀಶೈಲ ಸೋಮಜಾಳ

ಯಲಗೂರೇಶ ನಾಯಕ 890 ನೇ ರ‌್ಯಾಂಕ್

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾ ನಿವಾಸಿಯಾದ ಯಲಗೂರೇಶ ಅರ್ಜುನ ನಾಯಕ 2018ರಲ್ಲಿ ಬಿಕಾಂ ಪದವಿ ಮುಗಿಸಿದ್ದು, ಕುಟುಂಬದ ಬಡತನದ ಮಧ್ಯೆಯೂ ಉತ್ತಮ ಸಾಧನೆ ಮಾಡಿದ್ದಾರೆ. ಯುಪಿಎಸ್​ಸಿ ಪರೀಕ್ಷೆಯನ್ನು ನಾಲ್ಕನೇ ಬಾರಿ ಎದುರಿಸಿ ಯಶಸ್ಸು ಸಾಧಿಸಿರುವ ಯಲಗೂರೇಶ ಕನ್ನಡದಲ್ಲೇ ಪರೀಕ್ಷೆ ಬರೆದಿದ್ದಾರೆ. ಯಾವುದೇ ಕೋಚಿಂಗ್ ಸೆಂಟರ್​ನಿಂದ ಕೋಚಿಂಗ್ ಪಡೆಯದೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಬಳಿಯ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಈ ಸಾಧನೆ ಮಾಡಿರುವುದಾಗಿ ಯಲಗೂರೇಶ ತಿಳಿಸಿದ್ದಾರೆ.

ದಾಮಿನಿ ಎಂ.ದಾಸ್ 345ನೇ ರ‌್ಯಾಂಕ್

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಯುವತಿ ದಾಮಿನಿ ಎಂ.ದಾಸ್, ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ತಾಲೂಕಿನ ಮೊದಲ ಯುವತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಮಳೂರುಪಟ್ಟಣ ಗ್ರಾಮದ ಶೈಲಜಾ ಹಾಗೂ ಮೋಹನ್ ದಾಸ್ ದಂಪತಿ ಪುತ್ರಿಯಾದ ದಾಮಿನಿ, ಇಂಜಿನಿಯರ್ ಪದವೀಧರೆ. ಆನ್​ಲೈನ್ ತರಬೇತಿಯ ಮೂಲಕವೇ ಈ ಸಾಧನೆ ಮಾಡಿರುವುದು ವಿಶೇಷ. ದಾಮಿನಿ ಅವರ ತಂದೆ ಮೋಹನ್​ದಾಸ್ ಕೃಷಿಕರು.

ಮೊದಲ ಯತ್ನದಲ್ಲಿ ತೇರ್ಗಡೆ ಸಾಧ್ಯವಾಗಿರಲಿಲ್ಲ. 2 ನೇ ಬಾರಿಗೆ ಯಶಸ್ವಿ ಯಾಗಿರುವುದು ಸಂತೋಷ ತಂದಿದೆ. ನನ್ನ ಸಾಧನೆಗೆ ತಂದೆ-ತಾಯಿಯೇ ಕಾರಣ. ತಂದೆ ಮೊದಲಿನಿಂದಲೂ ಉನ್ನತ ಅಧಿಕಾರಿಗಳಿಗೆ ಇರುವ ಗೌರವ ಮತ್ತು ಜವಾಬ್ದಾರಿ ತಿಳಿಸಿಕೊಡುತ್ತಿದ್ದರು. ಬಡವರ ಸೇವೆ ಮಾಡುವ ಹಂಬಲ ನನ್ನಲೂ ಇದೆ.

| ದಾಮಿನಿ ಎಂ.ದಾಸ್

ಸಿದ್ದಲಿಂಗಪ್ಪ ಪೂಜಾರ 589ನೇ ರ‌್ಯಾಂಕ್

ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿ, ಹುಬ್ಬಳ್ಳಿ ಡಿಪೋದಲ್ಲಿ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕರಿಸಿದ್ದಪ್ಪ ಪೂಜಾರ ಅವರ ಪುತ್ರ ಸಿದ್ದಲಿಂಗಪ್ಪ ಪೂಜಾರ, ಯಾವುದೇ ತರಬೇತಿ ಕೇಂದ್ರಗಳಿಗೆ ತೆರಳದೇ, ಪರಿಚಿತ ವಿಷಯ ತಜ್ಞರಿಂದ ಮಾರ್ಗದರ್ಶನ ಪಡೆದು ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಸಿದ್ದಲಿಂಗಪ್ಪ, ಬೆಂಗಳೂರಿನ ಐಟಿ ಕಂಪನಿಯನಲ್ಲಿ 3 ವರ್ಷ ಕೆಲಸ ಮಾಡಿದ್ದರು. ಸತತ 5 ಬಾರಿ ಪರೀಕ್ಷೆಯನ್ನು ಎದುರಿಸಿ, ಸದ್ಯ 589ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಯುವಕರು ಕನಸು ಕಾಣಬೇಕು, ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ತಂದೆ-ತಾಯಿಗೆ ಹೊರೆ ಆಗಬಾರದು. ನಾನು ಕೆಲಸ ಮಾಡುತ್ತಲೇ ಓದಿದೆ. ಈಗ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಖುಷಿಯಾಗಿದೆ.

| ಸಿದ್ದಲಿಂಗಪ್ಪ ಪೂಜಾರ

ಧನುಷ್​ಕುಮಾರ್ 501ನೇ ರ‌್ಯಾಂಕ್

ಹಾಸನ ಜಿಲ್ಲೆಯ ಅರಸೀಕೆರೆಯ ಬಿ.ಎಸ್. ಧನುಷ್​ಕುಮಾರ್ 501ನೇ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಬಿಎಂಎನ್​ಐಟಿ ಕಾಲೇಜಿನಲ್ಲಿ ಇಂಜಿನಿಯರ್ ಸಿಎಸ್ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆ ಬಿಟ್ಟು ಹೋದ ಬಳಿಕ ತಾಯಿ ಚೇತನಾ ಅವರ ಆರೈಕೆಯಲ್ಲಿ ಬೆಳೆದ ಧನುಷ್, 4 ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆದು ಸಂದರ್ಶನದ ಹಂತದವರೆಗೂ ಹೋಗಿ ವಿಫಲರಾಗಿದ್ದರು.

ಡಾ.ಜೆ. ಭಾನುಪ್ರಕಾಶ್ 448ನೇ ರ‌್ಯಾಂಕ್

ಮೈಸೂರು ನಗರದ ಹೊರವಲಯದ ಬೆಳವಾಡಿ ನಿವಾಸಿ ಡಾ.ಜೆ. ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ನೆಲಮಂಗಲದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿದ್ದಾರೆ.ಕೆ.ಆರ್. ನಗರದ ಕೆಸ್ತೂರುಕೊಪ್ಪಲು ನಿವಾಸಿಯಾದ ಕೃಷಿಕ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರರಾದ ಡಾ.ಜೆ. ಭಾನುಪ್ರಕಾಶ್, ವೈದ್ಯ ವೃತ್ತಿಯ ಒತ್ತಡದ ನಡುವೆಯೂ ಯುಪಿಎಸ್​ಸಿ ಪರೀಕ್ಷೆಗೆ ತಯಾರಿಸಿ ನಡೆಸಿ 3ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಸೇವೆಯ ಕಡೆಗೆ ಆಕರ್ಷಣೆ ಹೆಚ್ಚಾಯಿತು. ಹಾಗಾಗಿ ವೈದ್ಯ ವೃತ್ತಿಯ ನಡುವೆಯೂ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದೆ. 3ನೇ ಪ್ರಯತ್ನದಲ್ಲಿ ತೇರ್ಗಡೆಯಾಗಿರುವುದು ಸಂತಸ ಉಂಟು ಮಾಡಿದೆ.

| ಡಾ.ಜೆ. ಭಾನುಪ್ರಕಾಶ್

ಮೋದಿ ಅಭಿನಂದನೆ

ನಾಗರಿಕ ಸೇವಾ ಆಯೋಗದ ಪರೀಕ್ಷೆ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಮತ್ತು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಇದು ರೋಮಾಂಚಕವಾದ ಸಮಯ. ಫಲಪ್ರದ ಮತ್ತು ತೃಪ್ತಿದಾಯಕ ವೃತ್ತಿಜೀವನಕ್ಕಾಗಿ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಬಳಿಕ ಮಣಿಪಾಲ್ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. 3ನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗಿರುವುದಕ್ಕೆ ಖುಷಿಯಾಗುತ್ತಿದೆ. ಐಎಎಸ್ ಮಾಡಬೇಕೆಂಬುದು ಗುರಿಯಿಂದ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡೆ. ಭೌತಿಕವಾಗಿ ತರಬೇತಿಗೆ ಹೋಗಿರಲಿಲ್ಲ. ಆನ್​ಲೈನ್​ನಲ್ಲಿಯೇ ತರಬೇತಿ ಪಡೆದು, ಸರಿಯಾದ ಮತ್ತು ಸೀಮಿತವಾಗಿ ಓದುತ್ತಿದ್ದೆ.

| ಡಾ. ವರುಣ್​ಗೌಡ, 594ನೇ ರ‌್ಯಾಂಕ್

ಮಂಡ್ಯದ ಮೂವರಿಗೆ ರ‌್ಯಾಂಕ್

ಮಂಡ್ಯ ಜಿಲ್ಲೆಯ ಮೂವರು ಯುಪಿಎಸ್​ಸಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಇವರೆಲ್ಲರೂ ಮಂಡ್ಯ ತಾಲೂಕಿನವರೇ ಎಂಬುದು ವಿಶೇಷ. ಮಾಚಹಳ್ಳಿ ಗ್ರಾಮದ ಎಂ.ಎಸ್.ತನ್ಮಯ್ 690ನೇ ರ್ಯಾಂಕ್ ಪಡೆದಿದ್ದು, ಪ್ರಸ್ತುತ ಹಾವೇರಿಯಲ್ಲಿ ಪ್ರೊಬೆಷನರಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸು ತ್ತಿದ್ದಾರೆ. ಹೊಳಲು ಚಂದಗಾಲು ಗ್ರಾಮದ ಸಿ.ಪಿ.ನಿಮಿಷಾಂಬ 659ನೇ ರ್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಹಳೇಬೂದನೂರು ಗ್ರಾಮದ ಎಚ್.ಪಿ.ಮನೋಜ್ 929ನೇ ರ್ಯಾಂಕ್ ಗಳಿಸಿದ್ದಾರೆ. ಇವರು ದೆಹಲಿಯ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್​ನಲ್ಲಿ ಸೆಂಟ್ರಲ್ ಎಲೆಕ್ಟ್ರಿಕಲ್ ಅಥಾರಿಟಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ.

2022ರ ಜೂನ್​ನಲ್ಲಿ ನಡೆದಿದ್ದ ಪರೀಕ್ಷೆ

ನಾಗರಿಕ ಸೇವಾ ಆಯೋಗದ ಪರೀಕ್ಷೆಗಳನ್ನು ವರ್ಷದಲ್ಲಿ ಪ್ರಾಥಮಿಕ, ಮುಖ್ಯ, ಸಂದರ್ಶನ ಎಂದು 3 ಹಂತಗಳಲ್ಲಿ ನಡೆಸಲಾಗುತ್ತದೆ. ಈಗ ಅಂತಿಮ ಹಂತದ ಫಲಿತಾಂಶ ಪ್ರಕಟವಾಗಿದ್ದು, 613 ಹುಡುಗರು, 320 ಹುಡುಗಿಯರು ಉತ್ತೀರ್ಣರಾಗಿದ್ದಾರೆ. ಶ್ರೇಣಿಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಐಎಎಸ್, ಐಪಿಎಸ್, ಆರ್​ಎಫ್​ಎಸ್ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುವುದು. ಕಳೆದ ವರ್ಷ ಜೂನ್​ನಲ್ಲಿ ಆಯೋಗ ಪ್ರಾಥಮಿಕ ಪರೀಕ್ಷೆ ನಡೆಸಿತ್ತು. ಆಗ 11,35,697 ಆಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ವಾಸ್ತವವಾಗಿ 5,73,735 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2022ರ ಸೆಪ್ಟೆಂಬರ್​ನಲ್ಲಿ ನಡೆದ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ 2,529 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು.

ಯಾವ ಹುದ್ದೆಗೆ ಎಷ್ಟು ಅಭ್ಯರ್ಥಿಗಳ ಆಯ್ಕೆ?: ಕೇಂದ್ರವು 1,022 ಹುದ್ದೆಗಳನ್ನು ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಸೂಚಿಸಿದ್ದು, ಇದರಲ್ಲಿ 180 ಐಎಎಸ್ ಅಧಿಕಾರಿ, 38 ಐಎಫ್​ಎಸ್, 200 ಐಪಿಎಸ್, ಗ್ರೂಪ್ ಎ 473 ಹುದ್ದೆಗಳು, 173 ಗ್ರೂಪ್ ಬಿ ಹುದ್ದೆಗಳು ಒಳಗೊಂಡಿವೆ ಎಂದು ಕೇಂದ್ರ ನಾಗರಿಕ ಸೇವಾ ಆಯೋಗ ತಿಳಿಸಿದೆ.

22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

Latest Posts

ಲೈಫ್‌ಸ್ಟೈಲ್