

ನಾಗರಿಕತೆಗಳ ಆರಂಭ ಕ್ರಮಾಗತವೆಂಬಂತೆ ಕಂಡರೂ, ಅವು ನಿರಂಕುಶವಾಗಿ ಬೆಳೆದು ಕೊನೆಗೆ ಅವ್ಯವಸ್ಥೆಯ ಸ್ಥಿತಿ ತಲುಪಿ ಕಂಗಾಲಾಗುವುದೇ ದಿಟ! ಲೌಕಿಕ ಅನ್ವೇಷಣೆಗಳು ರೋಚಕವಾಗಿ, ಲಾಭದಾಯಕವಾಗಿಯೇ ಕೋರೈಸುತ್ತವೆ, ಅತಿಯಾದ ಆಸೆಬುರುಕತನದ ಗಿಡಕ್ಕೆ ನೀರನ್ನು ಎರೆಯುತ್ತದೆ. ಮನುಷ್ಯ ತನ್ನ ಇತಿಮಿತಿಯನ್ನು ಉಪೇಕ್ಷಿಸಿ ಜಗತ್ತಿಗೆ ಸವಾಲು ಹಾಕುತ್ತಾನೆ.
ಕೈಗಾರಿಕಾ ಕ್ರಾಂತಿ ಆದ ನಂತರದ ಬೆಳವಣಿಗೆಗಳು ವಿಸ್ಮಯಕಾರಿ. ನಿಬ್ಬೆರಗಾದ ವಿಶ್ವಕ್ಕೆ ಅಮೆರಿಕ ನಾಟಕಕಾರ ಜಾನ್ ಡ್ರೂಟೆನ್ ಹೇಳುತ್ತಾನೆ: ‘ನ್ಯೂಟನ್ ಗುರುತ್ವಾಕರ್ಷಕ ನಿಯಮವನ್ನು ಆವಿಷ್ಕರಿಸಿ ಭೌತಿಕ ಜಗತ್ತಿನಿಂದ ದೇವರನ್ನು ಉಚ್ಛಾಟಿಸಿದ. ಡಾರ್ವಿನ್ನನ ಜೈವಿಕ ವಿಕಾಸದ ಆವಿಷ್ಕಾರಗಳು ದೇವರನ್ನು ಸಾವಯವ ಜಗತ್ತಿನಿಂದ ಉಚ್ಛಾಟಿಸಿದವು. ಸಿಗ್ಮಂಡ್ ಫ್ರಾಯ್್ಡ ತನ್ನ ಮನೋವೈಜ್ಞಾನಿಕ ಸಿದ್ಧಾಂತಗಳ ಬಲದಿಂದ ದೇವರನ್ನು ಮಾನವನ ಮಾನಸಿಕ ಜಗತ್ತಿನಿಂದ ಹೊರಗೋಡಿಸಿದ!’
ಭಗವಾನ್ ಶ್ರೀರಾಮಕೃಷ್ಣರು, ‘ನನ್ನ ನರೇಂದ್ರನಿಗೆ ಲೋಕಶಿಕ್ಷಣ ಕಾರ್ಯಗೈಯಲು ಜಗನ್ಮಾತೆ ಲೈಸೆನ್ಸ್ ನೀಡಿದ್ದಾಳೆ. ನರೇಂದ್ರ ಜಗತ್ತಿಗೆ ಬೋಧನೆ ಮಾಡುತ್ತಾನೆ’ ಎಂದಿದ್ದರು. ಅಮೆರಿಕದ ಸಂದರ್ಶನವೊಂದರಲ್ಲಿ ಸ್ವಾಮಿ ವಿವೇಕಾನಂದರು, ‘ಪೂರ್ವ ರಾಷ್ಟ್ರಗಳಿಗೆ ಬುದ್ಧನ ಸಂದೇಶವಿದ್ದಂತೆ ಪಶ್ಚಿಮ ದೇಶಗಳಿಗೆ ನನ್ನ ಸಂದೇಶವಿದೆ’ ಎಂದಿದ್ದರು.
ಭಾರತದಾದ್ಯಂತ ಪರಿವ್ರಾಜಕರಾಗಿ ಸಂಚರಿಸಿ ಇಲ್ಲಿನ ಸಮಗ್ರ ಸ್ಥಿತಿಗತಿಗಳ ಅರಿವು ಪಡೆದಿದ್ದ ವಿವೇಕಾನಂದರಿಗೆ ದಾಸ್ಯದಲ್ಲೇ ಮುಳುಗಿದ್ದ ಸ್ವದೇಶಿಯರಿಗೆ ಅವಶ್ಯಕತೆ ಇದ್ದಷ್ಟು ಸಂದೇಶವನ್ನು ನೀಡಲು ಸಾಧ್ಯವಾಯಿತಾದರೂ ಹಿಂದೂಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಮನ್ನಣೆ ದೊರೆಯುವಂತಾಗಬೇಕಾದರೆ ಹೊರರಾಷ್ಟ್ರಗಳಿಗೆ ಹೋಗಬೇಕು ಮತ್ತು ವಿಶೇಷವಾಗಿ ಅಮೆರಿಕದ ಷಿಕಾಗೊದಲ್ಲಿ ಆಯೋಜನೆಗೊಂಡಿದ್ದ ವಿಶ್ವಧರ್ಮಸಮ್ಮೇಳನದಲ್ಲಿ ಭಾಗವಹಿಸಲೇಬೇಕೆಂದು ಒತ್ತಾಸೆ ಮೂಡಿಸಿದವರೆಂದರೆ ಮೈಸೂರು, ಖೇತ್ರಿ, ರಾಮನಾಡು, ಲಿಂಬ್ಡಿ, ಭುಜ್ ಮೊದಲಾದ ಸಾಮ್ರಾಜ್ಯಗಳ ದೊರೆಗಳು, ಪೋರಬಂದರಿನ ದಿವಾನ ಶಂಕರ ಪಾಂಡುರಂಗ, ಜುನಾಗಢದ ದಿವಾನ ಹರಿದಾಸ್ ವಿಹಾರಿದಾಸ್ ದೇಸಾಯಿ, ಘಾಸೀಪುರದ ಜಿಲ್ಲಾ ನ್ಯಾಯಾಧೀಶ ಪೆನ್ನಿಂಗ್ಟನ್ ಮತ್ತು ಮದ್ರಾಸಿನ ಶಿಷ್ಯವೃಂದ.
ವಿಶ್ವಧರ್ಮ ಸಮ್ಮೇಳನ ಜಗತ್ತಿನ ಇತಿಹಾಸದಲ್ಲಿ, ಜಗತ್ತಿನ ಧಾರ್ವಿುಕ ಚರಿತ್ರೆಯಲ್ಲಿ ಮತ್ತು ಹಿಂದೂಧರ್ಮದ ಐತಿಹ್ಯದಲ್ಲಿ ನಿಜಕ್ಕೂ ‘ಮಾನವತೆಯ ಸಮ್ಮೇಳನ’ ಎಂದೇ ದಾಖಲಾಗಿದೆ. ಸಮ್ಮೇಳನದ ಯೋಜನೆಗಳ ಜನಕ ಚಾರ್ಲ್ಸ್ ಬಾನಿ, ‘ಮಾನವಕೋಟಿಗೆ ಸಂಬಂಧಿಸಿದ ಅತ್ಯವಶ್ಯಕ ವಿಚಾರಗಳಾದ ಸ್ತ್ರೀಯರ ಮುನ್ನಡೆ, ವೈದ್ಯಕೀಯ, ವಿಜ್ಞಾನ, ಸಂಗೀತ, ಸರ್ಕಾರ, ಕಾನೂನು, ಸುಧಾರಣೆ ಮತ್ತು ಧರ್ಮವೇ ಮೊದಲಾದ ವೈವಿಧ್ಯಮಯ ವಿಚಾರಗಳ ಬಗ್ಗೆ ಸಮ್ಮೇಳನ ಏರ್ಪಾಡಾಗಬೇಕು, ವಿಶ್ವದ ಎಲ್ಲೆಡೆಯಿಂದ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರುಗಳಿಗೆ ವಿಶ್ವಭ್ರಾತೃತ್ವ ನಿರ್ವಣ, ಜಗತ್ತಿನ ವಿವಿಧ ಧರ್ಮಗಳ ನಡುವೆ ಪರಸ್ಪರ ಅರಿವು ಹೊಂದಾಣಿಕೆ ಮೂಡಿಸುವುದು ಮತ್ತು ವಿಶ್ವಶಾಂತಿಗಾಗಿ ಶ್ರಮಿಸುವುದು-ಮೊದಲಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಬೇಕು’ ಎಂದೇ ಸಂಕಲ್ಪಿಸಿದ್ದ. ಆದರೆ ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಕ್ರೖೆಸ್ತಧರ್ಮವೇ ಶ್ರೇಷ್ಠವೆಂದು ಸಾಬೀತುಪಡಿಸಿ ಜಗತ್ತಿನ ಮುಂದೆ ಕ್ರೖೆಸ್ತೇತರ ಅನಾಗರಿಕರನ್ನು ಪ್ರದರ್ಶಿಸುವುದೇ ಸಂಕುಚಿತ ವ್ಯಕ್ತಿಗಳ ಒಳಸಂಚಾಗಿತ್ತು.
ಸಮ್ಮೇಳನದ ವೇದಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ವಿಚಾರಗಳ ಸಂಕುಚಿತತೆಯಿಂದ ಬೇಸರಗೊಂಡು ಇಲ್ಲಿ ಮಾತನಾಡುವುದು ನಿಷ್ಪ್ರಯೋಜಕವೆಂದೇ ಬಹುತೇಕ ತೀರ್ವನಿಸಿದ್ದ ವಿವೇಕಾನಂದರು, ಫ್ರೆಂಚ್ ಪಾದ್ರಿ ಬಾನೆಟ್ ಮಾರಿ ಅವರ ಪ್ರೀತಿಗೆ ಸೋತು ಸಭೆಯಲ್ಲಿ ಮಾತನಾಡಲು ಎದ್ದರು. ಪ್ರಪಂಚದ ಪ್ರಾಚೀನ ಸಂನ್ಯಾಸಿಗಳ ಸಂಘದ ಪರವಾಗಿ, ಸಕಲಧರ್ಮಗಳ ಮಾತೆಯ ಪರವಾಗಿ, ಸಂಘಟಕರಿಗೆ ಹಾಗೂ ಸಭಿಕರಿಗೆ ಕೃತಜ್ಞತೆ ಸಲ್ಲಿಸಿದರು. ತನ್ನ ಧರ್ಮ ಜಗತ್ತಿಗೆ ಸಹಿಷ್ಣುತೆ, ಸರ್ವಧರ್ಮ ಸ್ವೀಕಾರ ಭಾವವನ್ನು ಬೋಧಿಸಿದೆ. ತನ್ನ ಮತದಲ್ಲಿ ‘ಬಹಿಷ್ಕಾರ’ ಎಂಬ ಶಬ್ದವನ್ನು ಅನುವಾದಿಸಲು ಸಾಧ್ಯವಿಲ್ಲವೆಂದೂ ಸರ್ವಮತ ಸಹಿಷ್ಣುತೆ ಮತ್ತು ಸರ್ವಮತಗಳು ಸತ್ಯವೆಂದು ಸ್ವೀಕರಿಸುವ ಹೃದಯ ಶ್ರೀಮಂತಿಕೆ ಇದೆಯೆಂದೂ, ಪ್ರಪಂಚದ ಎಲ್ಲ ಧರ್ಮ, ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ತಾನು ಸೇರಿದವನೆಂದು ಮಾತನಾಡಿದರು. ‘ಅಮೆರಿಕದ ನನ್ನ ಸೋದರ ಸೋದರಿಯರೇ’ ಎಂದು ಪ್ರಾರಂಭಿಸಿ ಅವರಾಡಿದ ಪ್ರತಿ ಶಬ್ದದಲ್ಲೂ ಹೃತ್ಪೂವರ್ಕತೆ ಹಾಗೂ ಶ್ರದ್ಧೆ ತುಂಬಿ ತುಳುಕುತ್ತಿತ್ತು. ಸಮ್ಮೇಳನದಲ್ಲಿ ಧಾರ್ವಿುಕ ವಿಭಾಗದಲ್ಲಷ್ಟೇ ಅಲ್ಲದೆ ವೈಜ್ಞಾನಿಕ ವಿಭಾಗದಲ್ಲೂ ಉಪನ್ಯಾಸಗಳನ್ನಿತ್ತ ಸ್ವಾಮೀಜಿ ಸಮ್ಮೇಳನದ ಅಧಿಕೃತ ಸಭೆಗಳಲ್ಲಿ ಅನೇಕ ಬಾರಿ ಅನೌಪಚಾರಿಕವಾಗಿಯೂ ಮಾತನಾಡಿದ್ದುಂಟು.
ಇದನ್ನೂ ಓದಿ: ಪಬ್ಜಿ ಆಡಬೇಡ ಎಂದಿದ್ದಕ್ಕೆ ಈ ಹುಡುಗ ಹೀಗೆ ಮಾಡೋದಾ?
‘ಧರ್ಮ ಮಾನವನ ದೌರ್ಬಲ್ಯದಿಂದ ಉದಿಸಿದ್ದಲ್ಲ ಅಥವಾ ಯಾವುದೇ ಘೊರ ಉಪದ್ರವಕ್ಕೆ ಹೆದರಿ ಅವನು ಮಾಡಿಕೊಂಡಿದ್ದಲ್ಲ. ಧರ್ಮ ಪ್ರೇಮದ ವಿಕಸನ ಮತ್ತು ಬೆಳವಣಿಗೆ... ವಿಶ್ವಧರ್ಮವೆನ್ನುವುದು ಹೊಸ ಧರ್ಮಗ್ರಂಥವುಳ್ಳ ಧರ್ಮವಲ್ಲ, ಧರ್ಮದೆಡೆಗೆ ಹೊಸದೃಷ್ಟಿ, ಧರ್ಮದ ಬಗ್ಗೆ ಹೊಸ ನೈತಿಕ ನಿಲುವು, ಆಧ್ಯಾತ್ಮಿಕ ಅಭಿಮತ. ಇಲ್ಲಿ ಅನ್ಯಧರ್ಮಗಳನ್ನು ಸಹಿಸುವುದಷ್ಟೇ ಅಲ್ಲ, ಅವುಗಳನ್ನು ಸತ್ಯವೆಂದು ಸ್ವೀಕರಿಸಿದಾಗಷ್ಟೇ ಮಾನವರೆಲ್ಲರ ಐಕ್ಯತೆ ಹಾಗೂ ಎಲ್ಲ ಧರ್ಮಗಳಲ್ಲೂ ವಿಶ್ವದರ್ಶನ ಸಾಧ್ಯ’ ಎಂದು ಪ್ರತಿಪಾದಿಸುವಲ್ಲಿ ಯಶಸ್ವಿಯಾದರು.
ಪಾಶ್ಚಾತ್ಯರು ಮಾನವೀಯತೆಯ ಪರಿಕಲ್ಪನೆಯಲ್ಲಿರುವ ಸಂಕುಚಿತತೆಯನ್ನು ಎತ್ತಿ ಹಿಡಿದ ಸ್ವಾಮೀಜಿ, ‘ಗ್ರೀಕ್ ಮತ್ತು ರೋಮನ್ನರು ಯುದ್ಧದ ಒತ್ತೆಯಾಳುಗಳನ್ನು ಮೃಗಗಳಂತೆ ಕಂಡರು. ಕ್ರೖೆಸ್ತರಲ್ಲಿ ದೇವರ ತತ್ತ್ವ ಒಪ್ಪಿದವರು ಮಾನವೀಯ ವಲಯಕ್ಕೆ ಬಂದರೆ, ಒಪ್ಪದವರು ಪ್ರಾಟೆಸ್ಟೆಂಟ್ಸ್ ಆದರು. ಜರ್ಮನಿಯಲ್ಲಾದ ಯುದ್ಧಗಳು ಜನಸಂಖ್ಯೆಯನ್ನೇ ಕ್ಷೀಣಿಸಿತು!’ ಎಂದು ಸಾಬೀತುಪಡಿಸಿದರು.
ಇದನ್ನೂ ಓದಿ: ಈ ಬಾರಿಯ ವಿಷ್ಣುವರ್ಧನ್ ಹುಟ್ಟುಹಬ್ಬದ ವಿಶೇಷ ಏನು?
ಅಮೆರಿಕದ ಪತ್ರಿಕೆಗಳು ಸ್ವಾಮೀಜಿಯವರನ್ನು, ‘ದೈವದತ್ತ ವಾಗ್ಮಿ, ಶ್ರೇಷ್ಠ ಹಾಗೂ ಉದಾತ್ತ ಚಿಂತಕ, ಮನಮೋಹಕ ವ್ಯಕ್ತಿ, ಸಂಭಾಷಣಾ ಚತುರ, ಕಲಾಕಾರ, ಭಗವಂತನ ಶ್ರೇಷ್ಠತಮ ಸೇವಕ’ ಎಂದು ಶ್ಲಾಘಿಸಿವೆ. ವಿಶ್ವವಿಜ್ಞಾನಿ ಹಿರಮ್ ಮ್ಯಾಕ್ಸಿಮ್ ‘ವೆಬ್ಸ್ಟರ್ನ ಪದವೀಧರನಂತೆ ಇಂಗ್ಲಿಷ್ ಮಾತನಾಡುವ, ಪ್ರಭಾವಶಾಲಿ ವ್ಯಕ್ತಿತ್ವದ ಅಪರಿಮಿತ ಜ್ಞಾನಿ ವಿವೇಕಾನಂದರನ್ನು ನಿರ್ನಾಮ ಮಾಡಲು ಪ್ರಾಟೆಸ್ಟೆಂಟರೇನೋ ಬಯಸಿದ್ದರು. ಆದರೆ ಆನಂತರ ಅವರಿಗೆ ಅರಿವಾಯ್ತು ತಾವು ಎದುರಿಸುತ್ತಿರುವುದು ಒಬ್ಬ ನೆಪೋಲಿಯನ್ನನ್ನು ಎಂದು. ಬೆಕ್ಕೊಂದು ಸಾವಿರಾರು ಇಲಿಗಳೊಂದಿಗೆ ಆಟವಾಡುವಂತೆ ಆತ ಕ್ರೖೆಸ್ತ ಮಿಷನರಿಗಳೊಂದಿಗೆ ಆಡಿದ...’ ಭಾರತದ ಬಗ್ಗೆ ಅಪಪ್ರಚಾರ ಮಾಡಬಾರದೆಂದೂ, ಮತಾಂತರ ಮಾಡುವುದನ್ನು ಬಿಟ್ಟು ಜನರು ಸ್ವಾವಲಂಬಿಗಳಾಗಿ ಜೀವಿಸಲು ನೆರವಾಗಬೇಕೆಂದು ಕ್ರೖೆಸ್ತ ಮಿಷನರಿಗಳಿಗೆ ತಿಳಿವಳಿಕೆ ಹೇಳಿದರು.
ಷಿಕಾಗೊದ ಐತಿಹಾಸಿಕ ಸಮ್ಮೇಳನ ಜಗತ್ತಿಗೇ ಒಂದು ಉತ್ಕ್ರಾಂತಿಯ ತಿರುವನ್ನು ನೀಡಿತು. ಭಾರತ ಸ್ವಾತಂತ್ರ್ಯ ಚಳವಳಿಯನ್ನು ಮೊದಲ್ಗೊಂಡು ಎಲ್ಲ ಕ್ಷೇತ್ರಗಳ ಬಗ್ಗೆ ಉದ್ಧಾರದ ಹೆದ್ದಾರಿ ಕಂಡುಕೊಳ್ಳಲು ಪ್ರಾರಂಭಿಸಿತು. ರೋಮಾರೋಲಾ ಹೇಳುವಂತೆ ವಿವೇಕಾನಂದರು ಸೇವಾತತ್ತ್ವಕ್ಕೇ ದಿವ್ಯಪ್ರಭೆ ತಂದುಕೊಟ್ಟು ಅದನ್ನು ಧರ್ಮದ ಗೌರವಾನ್ವಿತ ಮಟ್ಟಕ್ಕೆ ಉದಾತ್ತೀಕರಿಸಿದರು.
ಕಾರ್ಲ್ವಾರ್ಕ್ಸ್ನ ತತ್ತ್ವ ಮಾನವೀಯತೆಯ ಸಮತೆಯನ್ನು ಸಾಧಿಸುವಲ್ಲಿ ವಿಫಲವಾಯಿತು, ರಷ್ಯಾದ ಬೋಲ್ಷೆವಿನ್ ಕ್ರಾಂತಿ ಧೂಳು ಹತ್ತಿತು. ಆದರೆ ‘ಜೀವದಲ್ಲಿ ಶಿವನನ್ನು ಕಂಡು ಆರಾಧಿಸು, ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ’ ಎಂಬ ವಿವೇಕವಾಣಿ ಜಗತ್ತಿನ ಹೃದಯವನ್ನು ತಟ್ಟುವಲ್ಲಿ ಯಶಸ್ವಿಯಾಗಿದೆ.
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮ ಅಧ್ಯಕ್ಷರು)