ಕರೊನಾ ರ‍್ಯಾಪಿಡ್ ಟೆಸ್ಟ್‌ನಿಂದ ತಪ್ಪು ಫಲಿತಾಂಶ: ಒಪ್ಪಿಕೊಂಡ ಕೇಂದ್ರ, ಐಸಿಎಂಆರ್!

Covid Test
Published on

ನವದೆಹಲಿ: ರೋಗ ಲಕ್ಷಣ ಹೊಂದಿದ್ದರೂ, ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ತೋರಿಸಿದರೆ ಅಂಥವರನ್ನು ಆರ್‌ಟಿ-ಪಿಸಿಆರ್ ಮೂಲಕ ಮತ್ತೊಮ್ಮ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.

ಸೋಂಕು ಹರಡುವುದನ್ನು ತಡೆಯಲು ಯಾವುದೇ ಪ್ರಕರಣಗಳು ತಪ್ಪಿಹೋಗದಂತೆ ನೋಡಿಕೊಳ್ಳಬೇಕು. ಕಡಿಮೆ ವೆಚ್ಚ ತಗಲುವುದರಿಂದ ರಾಜ್ಯಗಳು ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯನ್ನು ಹೆಚ್ಚು ನಡೆಸುತ್ತಿವೆ. ಆದರೆ ಈ ಪರೀಕ್ಷೆಗಳು ಹೆಚ್ಚಿನ ಪ್ರಮಾಣದಲ್ಲಿ ತಪ್ಪು ಫಲಿತಾಂಶ ನೀಡುತ್ತಿವೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹ ಗುರುತಿಸಿದೆ. ಹೀಗಾಗಿ ನೆಗೆಟಿವ್ ತೋರಿಸಿದ ರೋಗಲಕ್ಷಣ ಹೊಂದಿರುವವರನ್ನು ಮತ್ತೊಮ್ಮೆ ಪರೀಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ನಡುವೆ, ದೇಶದಲ್ಲಿ ಬುಧವಾರ 95,529 ಕರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಇವು ಈವರೆಗೆ ಒಂದೇ ದಿನದಲ್ಲಿ ಬೆಳಕಿಗೆ ಬಂದ ಗರಿಷ್ಠ ಪ್ರಕರಣಗಳಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆ 1 ಲಕ್ಷದ ಗಡಿ ಮುಟ್ಟುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದಲೂ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿ ಕೆಲವೇ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಅತಿ ಹೆಚ್ಚು ಸಾವುಗಳು ಕೂಡ ಈ ರಾಜ್ಯದಲ್ಲೇ ಸಂಭವಿಸುತ್ತಿವೆ. ಬುಧವಾರ ಶೇಕಡ 7.7 ಇದ್ದ ಪಾಸಿಟಿವಿಟಿ ದರ ಗುರುವಾರ ಶೇಕಡ 8.4ಕ್ಕೆ ತಲುಪಿದೆ. ಕಳೆದ 24 ತಾಸಿನಲ್ಲಿ 11.29 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 5,29,34,433ಕ್ಕೆ ಏರಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net