ಆಸ್ಪತ್ರೆಯ ಬೆಡ್‌ನಿಂದಲೇ ಐಪಿಎಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಸೌರವ್ ಗಂಗೂಲಿ!

ganguly web
Published on

ಕೋಲ್ಕತ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ಲಘು ಹೃದಯಾಘಾತಕ್ಕೊಳಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ಈ ನಡುವೆ ಅವರು ಜೀವದ ಅಪಾಯದಿಂದ ಪಾರಾದ ಬೆನ್ನಲ್ಲೇ ಆಸ್ಪತ್ರೆಯ ಬೆಡ್‌ನಿಂದಲೇ ಆನ್‌ಲೈನ್ ಮೂಲಕ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಹೃದಯದ ರಕ್ತನಾಳ ಬ್ಲಾಕ್ ಆಗಿದ್ದಕ್ಕೆ ವೈದ್ಯರ ತಂಡದಿಂದ ಚಿಕಿತ್ಸೆ ಪಡೆದ ಬಳಿಕ ಗಂಗೂಲಿ ಚೇತರಿಕೆ ಕಂಡಿದ್ದರೂ, ಬಳಲಿಕೆಯನ್ನು ಹೊಂದಿದ್ದರು. ಆದರೆ ಇದರ ನಡುವೆಯೂ ಕರ್ತವ್ಯನಿಷ್ಠೆಯನ್ನು ಮರೆಯದ 48 ವರ್ಷದ ಗಂಗೂಲಿ, ಮಂಡಳಿಯ ಪ್ರಮುಖ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಕಳೆದ ಗುರುವಾರ ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

ಮುಂಬರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸುವ ದೃಷ್ಟಿಯಿಂದ ಇದು ಮಹತ್ವದ ಸಭೆಯಾಗಿತ್ತು. ಸಭೆ ಮುಂದೂಡಲ್ಪಟ್ಟರೆ ಟೂರ್ನಿಯ ಸಿದ್ಧತೆಗೆ ಹಿನ್ನಡೆ ಎದುರಾಗುತ್ತಿತ್ತು. ಹೀಗಾಗಿ ಗಂಗೂಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು. ಐಪಿಎಲ್ ತಂಡಗಳ ಆಟಗಾರರ ರಿಟೇನ್ ಪಟ್ಟಿ ಸಲ್ಲಿಸಲು ಸಭೆಯಲ್ಲಿ ಗಡುವು ನಿಗದಿಪಡಿಸಲಾಗಿದ್ದು, ಆಟಗಾರರ ವರ್ಗಾವಣೆಗೂ ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net