More

    VIDEO | ಸ್ಟೀವನ್ ಸ್ಮಿತ್‌ರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

    ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಏಕಾಂಗಿ ಹೋರಾಟದ ಮೂಲಕ ಆತಿಥೇಯರ ಮೊತ್ತ ಏರಿಸಿದರು. ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ ಒಂದಂಕಿ ದಾಟಲು ವಿಫಲರಾಗಿದ್ದ ಸ್ಟೀವನ್ ಸ್ಮಿತ್ ಈ ಬಾರಿ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ನಿಂತು ಅಮೋಘ ಶತಕ ಸಿಡಿಸಿದರು. ಅವರ ಇನಿಂಗ್ಸ್‌ಗೆ ತೆರೆ ಎಳೆಯಲು ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗದ ಕೆಲಸವನ್ನು ಕೊನೆಗೂ ರವೀಂದ್ರ ಜಡೇಜಾ ಅದ್ಭುತ ಫೀಲ್ಡಿಂಗ್ ಮೂಲಕ ಮಾಡಿದರು. ಈ ಮೂಲಕ ಆಸೀಸ್ ಇನಿಂಗ್ಸ್‌ಗೂ ತೆರೆ ಎಳೆದ ಜಡೇಜಾ ಸಾಹಸ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

    2ನೇ ದಿನದಾಟದಲ್ಲಿ ಮಾರ್ನಸ್ ಲಬುಶೇನ್ ಔಟಾದ ಬಳಿಕ ಸಮರ್ಥ ಜತೆಗಾರರಿಲ್ಲದ ಕಾರಣ ಸ್ಮಿತ್, ಶತಕ ಕೈತಪ್ಪುವ ಭೀತಿಯನ್ನೂ ಎದುರಿಸಿದ್ದರು. ಆದರೆ ಮಿಚೆಲ್ ಸ್ಟಾರ್ಕ್ (24) ಜತೆಗಿನ 32 ರನ್ ಜತೆಯಾಟದ ವೇಳೆ ಸ್ಮಿತ್ (131) ಶತಕ ಒಲಿಸಿಕೊಳ್ಳುವಲ್ಲಿ ಸಫಲರಾದರು. ಸೈನಿ ಎಸೆತದಲ್ಲಿ 3 ರನ್ ಕಸಿಯುವ ಮೂಲಕ 201 ಎಸೆತಗಳಲ್ಲಿ ಶತಕ ಪೂರೈಸಿದ ಸ್ಮಿತ್, ಬಳಿಕ ಆಕ್ರಮಣಕಾರಿ ಆಟಕ್ಕಿಳಿದರು. ಆಗ ಜಡೇಜಾ ಮಾಡಿದ ರನೌಟ್‌ನಿಂದ ಆಸೀಸ್ ಮತ್ತೆ 25-30 ರನ್ ಸೇರಿಸುವುದು ತಪ್ಪಿಹೋಯಿತು.

    ಇದನ್ನೂ ಓದಿ:  ಸಿಡ್ನಿಯಲ್ಲಿ ಸ್ಮಿತ್​ ಶತಕ, ಭಾರತಕ್ಕೆ ಮೇಲುಗೈ ತಂದುಕೊಟ್ಟ ಜಡೇಜಾ, ಗಿಲ್​

    ಸ್ಮಿತ್ ಅವರ ದಿಟ್ಟ ಇನಿಂಗ್ಸ್‌ಗೆ ರವೀಂದ್ರ ಜಡೇಜಾ ಚುರುಕಿನ ಫೀಲ್ಡಿಂಗ್ ಮೂಲಕ ಅಂತ್ಯ ಹಾಡಿದರು. ವೇಗಿ ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ಸ್ಮಿತ್ 2 ರನ್ ಕಸಿದು ಸ್ಟ್ರೈಕ್ ಉಳಿಸಿಕೊಳ್ಳಲು ಯತ್ನಿಸಿದಾಗ ಜಡೇಜಾ 30 ಯಾರ್ಡ್ ವೃತ್ತದ ಹೊರಗಿನ ಡೀಪ್ ಸ್ಕ್ವೇರ್ ಲೆಗ್‌ನಿಂದ ಡೈರೆಕ್ಟ್ ಹಿಟ್ ಮಾಡುವುದರೊಂದಿಗೆ ಸ್ಮಿತ್‌ರನ್ನು ರನೌಟ್ ಮಾಡಿದರು. ಡೈವ್ ಮಾಡಿದರೂ, ಸ್ಮಿತ್ ಬಚಾವ್ ಆಗಲಿಲ್ಲ. ದಿನದಾಟದ ಬಳಿಕ ಜಡೇಜಾ, ಇದು ವೃತ್ತಿಜೀವನದಲ್ಲಿ ತಾನು ಮಾಡಿದ ಅತ್ಯುತ್ತಮ ರನೌಟ್. ಇದರ ವಿಡಿಯೋವನ್ನು ಪದೇಪದೆ ನೋಡುವೆ ಎಂದರು. ಅಲ್ಲದೆ ಇನಿಂಗ್ಸ್‌ನಲ್ಲಿ ಕಬಳಿಸಿದ 4 ವಿಕೆಟ್‌ಗಳಿಗಿಂತ ಈ ರನೌಟ್ ಹೆಚ್ಚು ಖುಷಿ ನೀಡಿತು ಎಂದರು.

    ಜಡೇಜಾ ರನೌಟ್ ಮಾಡಿದ ರೀತಿಗೆ ನೆಟ್ಟಿಗರೂ ಬೆರಗಾಗಿದ್ದು, ಇನಿಂಗ್ಸ್‌ನಲ್ಲಿ ಜಡೇಜಾ 5 ವಿಕೆಟ್ ಗೊಂಚಲು ಪಡೆದರೆಂದೇ ಪರಿಗಣಿಸಬೇಕೆಂದು ಹೇಳಿದ್ದಾರೆ. ಜಡೇಜಾ ಕೈಗೆ ಚೆಂಡು ಹೋದರೆ ರನ್ ಕಸಿಯುವ ಮುನ್ನ ಎರಡೆರಡು ಬಾರಿ ಯೋಚಿಸಬೇಕೆಂದೂ ಹೇಳಿದ್ದಾರೆ. ಭಾರತ ತಂಡಕ್ಕೆ ಜಡೇಜಾ ಎಷ್ಟು ಪ್ರಾಮುಖ್ಯವಾದ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ ಎಂದೂ ಹೊಗಳಿದ್ದಾರೆ. ಜಡೇಜಾ ಜಗತ್ತಿನ ಅತ್ಯುತ್ತಮ ಫೀಲ್ಡರ್​ ಎಂದೂ ಕೆಲವರು ಬಣ್ಣಿಸಿದ್ದಾರೆ. ಜಡೇಜಾ ಅವರ ಟೀಕಾಕಾರರಲ್ಲಿ ಪ್ರಮುಖರಾದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸಂಜಯ್​ ಮಂಜ್ರೇಕರ್ ಕೂಡ ಜಡೇಜಾ ಮಾಡಿದ ಅದ್ಬುತ ರನೌಟ್​ ಅನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts