ನಿಯಂತ್ರಣಕ್ಕೆ ಸಿಗದ ಹೋರ್ಡಿಂಗ್ ಮಾಫಿಯಾ, ಹೋರ್ಡಿಂಗ್ ಅಳವಡಿಸಲು ಅವಕಾಶ ಇಲ್ಲದಿದ್ದರೂ ಬೇಕಾಬಿಟ್ಟಿ ಅಳವಡಿಕೆ, ಅಪಾಯಕಾರಿ ಹೋರ್ಡಿಂಗ್ ಬಗ್ಗೆ ಕ್ರಮ ಕೈಗೊಳ್ಳದ ಸ್ಥಳಿಯಾಡಳಿತ

mng-15-flex1
ಮಂಗಳೂರು ನಗರದ ಹಲವು ಕಟ್ಟಡಗಳಲ್ಲಿ ಹೋರ್ಡಿಂಗ್ ಅಳವಡಿಸಲು ಅವಕಾಶ ಇಲ್ಲದಿದ್ದರೂ ಬೇಕಾಬಿಟ್ಟಿ ಹೋರ್ಡಿಂಗ್ ಅಳವಡಿಸಲಾಗಿದೆ.
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ಜೋರಾದ ಗಾಳಿ ಮಳೆಯಾದರೆ ಸಾಕು ಜಿಲ್ಲೆಯ ವಿವಿಧ ನಗರದ ಹಲವು ಕಟ್ಟಡಗಳಲ್ಲಿ ಅಳವಡಿಸಿದ ಹೋರ್ಡಿಂಗ್ ಗಾಳಿಯಲ್ಲಿ ಹಾರಾಟುವುದು, ಸಾರ್ವಜನಿಕ ಸ್ಥಳಗಳಲ್ಲಿ ಬೀಳುವುದು ಸರ್ವೇ ಸಾಮನ್ಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ ಮಳೆಯಾದರೆ ಸಾಕು ಹೋರ್ಡಿಂಗ್ ಮಾಫಿಯಾ ಅಪಾಯಕಾರಿಯಾಗಿ ಪರಿಣಮಿಸಿದೆ.

ದ.ಕ, ಉಡುಪಿ ಜಿಲ್ಲೆಗಳ ಗ್ರಾಮೀಣ ಭಾಗದ ಪಟ್ಟಣಗಳೆಲ್ಲ ನಗರವಾಗಿ ಬೆಳೆಯುತ್ತಿದೆ. ಮಂಗಳೂರು ನಗರ, ಉಡುಪಿ ಜಿಲ್ಲಾ ಕೇಂದ್ರ, ಪುತ್ತೂರು ಸೇರಿದಂತೆ ಹಲವಡೆ ಬೃಹತ್ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ತಲೆಯೆತ್ತಿದೆ. ಸ್ಥಳೀಯಾಡಳಿತದ ಅನುಮತಿ ಪಡೆದ ಕಟ್ಟಡ ವಿನ್ಯಾಸದಂತೆ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತದೆ. ಕಟ್ಟಡ ನಿರ್ಮಾದ ಬಳಿಕ ಕಟ್ಟಡ ವಿನ್ಯಾಸ, ಸೆಟ್‌ಬ್ಯಾಕ್ ಪರಿಶೀಲನೆ ಬಳಿಕ ಸ್ಥಳಿಯಾಡಳಿತ ಎನ್‌ಒಸಿ ನೀಡುವುದು ರೂಢಿ. ಕಟ್ಟಡ ವಿನ್ಯಾಸದಲ್ಲಿ ಹೋರ್ಡಿಂಗ್ ಅಳವಡಿಸುವ ಬಗ್ಗೆ ಯಾವುದೇ ಉಲ್ಲೇಖ ಇರುವುದಿಲ್ಲ. ಆದರೆ ನಂತರ ಕಟ್ಟಡಗಳ ಸುತ್ತ ಬೃಹತ್ ಅನಧಿಕೃತ ಹೋರ್ಡಿಂಗ್‌ಗಳು ರಾರಾಜಿಸುತ್ತಿರುತ್ತದೆ.

*ತುರ್ತು ಕಾರ್ಯಾಚರಣೆಗೆ ತೊಡಕು

ಬೃಹತ್ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ತುರ್ತು ಅವಗಡವಾದರೆ ತುರ್ತು ಸೇವೆ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ತೊಡಕಾಗುತ್ತದೆ. ಬಹುತೇಕ ಹೋರ್ಡಿಂಗ್‌ಗಳು ಕಟ್ಟಡದ ಹೊರಭಾಗದ ಗೋಡೆಗಳನ್ನು ಆವರಿಸಿದ್ದರಿ, ಕೆಲವವು ಕಟ್ಟಡದ ಮೇಲೆ ಸಾಧಾರಣ ಪಿಲ್ಲರ್ ಬಳಸಿ ಅಳವಡಿಸಲಾಗಿದೆ. ಜೋರಾದ ಗಾಳಿ ಬೀಸಿದರೆ ಹೋರ್ಡಿಂಗ್ ತುಣುಕುಗಳು ಚಲ್ಲಾಪಿಲ್ಲಿಯಾಗಿ ಹರಡಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.

----------------

ನಗರದಲ್ಲಿ ತಲೆಯೆತ್ತಿದ ಹೋರ್ಡಿಂಗ್ ಮಾಫಿಯಾ

ನಗರದ ಹಲವಡೆ ಕಟ್ಟಡಗಳಲ್ಲಿ ಹೋರ್ಡಿಂಗ್ ಅಳವಡಿಸುವುದು ಮಾಫಿಯವಾಗಿ ಪರಿಣಮಿಸಿದೆ. ಕಟ್ಟಡ, ಖಾಲಿ ನಿವೇಷನ ಇದ್ದರೆ ಸಾಕು ಅಲ್ಲಿ ಬೃಹತ್ ಹೋರ್ಡಿಂಗ್ ಬೋರ್ಡ್‌ಗಳು ತಲೆಯೆತ್ತುವುದು ರೂಢಿಯಾಗಿದೆ. ಲಭ್ಯ ಮಾಹಿತಿಯಂತೆ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 47 ಸಾವಿರಕ್ಕೂ ಅಧಿಕ ಹೋರ್ಡಿಂಗ್‌ಗಳು ತಲೆಯೆತ್ತಿದೆ. ಇದರಲ್ಲಿ ಸ್ಥಳೀಯಾಡಳಿತದಿಂದ ಅನುಮತಿ ಪಡೆದದ್ದು ಕೇವಲ 6205(2023ರ ಮಾಹಿತಿ) ಮಾತ್ರ. ಮಳೆಗಾಲ ಬಂತೆಂದರೆ ಸಾಕು ಈ ಹೋರ್ಡಿಂಗ್‌ಗಳು ಗಾಳಿಯಲ್ಲಿ ಹಾರಾಡುತ್ತಿರುತ್ತವೆ. ಮಂಗಳೂರಿನ ಈಗಿನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಳೆದ 4-5 ವರ್ಷದಿಂದ ಅನಧಿಕೃತ ಹೋರ್ಡಿಂಗ್ ಬಗ್ಗೆ ಹೋರಾಟವೇ ನಡೆಸಿದ್ದರು, ಮೇಯರ್ ಪದವಿಗೇರುತ್ತಿದ್ದಂತೆ ಹೋರ್ಡಿಂಗ್ ಮಾಫಿಯಾದ ಬಗ್ಗೆ ಕಿಂಚಿತ್ತೂ ದ್ವನಿ ಎತ್ತಿಲ್ಲ.

----------------

ಜಿಲ್ಲಾಡಳಿತ ಮೌನವೇಕೆ?

ಮಂಗಳೂರು ನಗರ, ಉಡುಪಿ ಸೇರಿದಂತೆ ಪ್ರಮುಖ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಅನಧಿಕೃತ, ಅಪಾಯಕಾರಿ ಹೋರ್ಡಿಂಗ್ ಬಗ್ಗೆ ಜಿಲ್ಲಾಡಳಿತ ಏಕೆ ಮೌನವಹಿಸಿದೆ ಎಂಬ ಸಾರ್ವಜನಿಕರ ದೂರಿಗೆ ಉತ್ತರವಿಲ್ಲ. ಇತ್ತೀಚೆಗೆ ವಾಣಿಜ್ಯ ರಾಜಧಾನಿ ಮುಂಬಯಿನ ಘಟ್ಟೋಪರ್‌ನಲ್ಲಿ ಸಂಭವಿಸಿದ ಬೃಹತ್ ಹೋಡಿರ್ಂಗ್ ಪತನ ಪ್ರಕರಣದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಘಾಟ್ರೋಪರ್‌ನಲ್ಲಿ ಪತನಗೊಂಡ ಹೋಡಿರ್ಂಗ್ ಅಕ್ರಮವಾಗಿದ್ದು, 40*40 ಹೋಡಿರ್ಂಗ್ ಅಳವಡಿಸಲು ಪಾಲಿಕೆ ಅನುಮತಿ ನೀಡಿತ್ತು. ಆದರೆ 120 * 120 ಅಡಿ ಅಳತೆಯ ಬೃಹತ್ ಹೋಡಿರ್ಂಗ್ ಅನ್ನು ಅಳವಡಿಸಿತ್ತು. ಲಭ್ಯ ಮಾಹಿತಿಯಂತೆ ಈ ಎರಡು ಜಿಲ್ಲೆಯಲ್ಲಿರುವ ಹೋರ್ಡಿಂಗ್‌ಗಳು ಕನ್ನಡ ಪ್ರಗತಿಪರ ಹೋರಾಟಗಾರ ಮತ್ತು ಜಿಲ್ಲೆಯ ಮಾಜಿ ಶಾಸಕರ ಕುಟುಂಬದ ಒಡೆತನದ ಸಂಸ್ಥೆಯದ್ದೇ ಅಧಿಕ. ಇವರ ಸಂಸ್ಥೆಯು 1 ಅಧಿಕೃತ ಹೋರ್ಡಿಂಗ್ ಪರವಾಣಗಿಯಲ್ಲಿ 10 ರಿಂದ 15 ಪರವಾಣಗಿ ರಹಿತ ಹೋರ್ಡಿಂಗ್‌ಗಳನ್ನು ಅಳವಡಿಸಿರುವ ಆರೋಪ ಬಹಳ ಹಿಂದಿನಿಂದಲೂ ಕೇಳಿಬಂದಿದೆ. ಸ್ಥಳಿಯಾಡಳಿತದ ಅಧಿಕಾಗಳ ಶಾಮಿಲಾತಿಯಿಂದ ಹೋರ್ಡಿಂಗ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ.

-------------

ವಿಪರೀತ ಗಾಳಿಯಿಂದ ಬಿದ್ದು ಜನರ ಜೀವಕ್ಕೆ ಹಾನಿ ಉಂಟುಡುವ ಜಾಹಿರಾತು ಫಲಕಗಳನ್ನು ಕೂಡಲೆ ತೆರವುಗೊಳಿಸಬೇಕು. ಪ್ರತಿ ತಾಲೂಕು ಅಧಿಕರಿಗಳು ಸಭೆಯನ್ನು ನಡೆಸಿ ಈ ಬಗ್ಗೆ ಅಗತ್ಯ ಕ್ರಮ ವಹಿಸುಸಲು ಕುಡಿಯುವ ನೀರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸೂಚಿಸಲಾಗಿದೆ.

ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net