

ಬೆಂಗಳೂರು: ಮಹಿಳೆಯೊಬ್ಬರು ಸ್ಲೀವ್‌ಲೆಸ್ ಬ್ಲೌಸ್ ಮತ್ತು ಸೀರೆ ತೊಟ್ಟು ಆಕಾಶಕ್ಕೆ ಹಾರಿ ಪಲ್ಟಿ ಹೊಡೆದ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರುಲ್ ಅರೋರಾ ಎಂಬ ಹೆಸರಿನ ರಾಷ್ಟ್ರೀಯ ಸ್ವರ್ಣ ಪದಕ ವಿಜೇತೆ ಜಿಮ್ನಾಸ್ಟ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯಾಗಿದ್ದು, ಅವರ ಈ ಸಾಹಸಕ್ಕೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಪಾರುಲ್ ಅರೋರಾ ಕಳೆದ ತಿಂಗಳು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಸಣ್ಣ ವಿಡಿಯೋ ಇದಾಗಿದ್ದು, ಅವರು ನಿರಾಯಾಸವಾಗಿ ಬ್ಯಾಕ್‌ಫ್ಲಿಪ್ ಮತ್ತು ಫ್ರಂಟ್ ಫ್ಲಿಪ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ‘ಸೀರೆಯಲ್ಲಿ ಖತರ್ನಾಕ್ ಸ್ಟಂಟ್’ ಎಂದು ಪಾರುಲ್ ಅರೋರಾ ಈ ವಿಡಿಯೋಗೆ ಅಡಿಬರಹ ಬರೆದಿದ್ದರು.
ಇದೀಗ ಶುಕ್ರವಾರ ಒಮ್ಮಿಂದೊಮ್ಮೆಲೆ ಈ ವಿಡಿಯೋ ವೈರಲ್ ಆಗಿದ್ದು, ಸೀರೆಯುಟ್ಟು ಅವರು ತೋರಿದ ಈ ಜಿಮ್ನಾಸ್ಟಿಕ್ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ‘ಸೀರೆಯುಟ್ಟು ಅದನ್ನು ನಿಭಾಯಿಸುವುದು ಕಷ್ಟ ಎಂದವರು ಯಾರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟಾಗ ಯಾವುದೂ ಅಸಾಧ್ಯವಲ್ಲ ಎಂದು ಇನ್ನು ಕೆಲವರು ಬರೆದಿದ್ದಾರೆ.
ಪಾರುಲ್ ಅರೋರಾ ಕಳೆದ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೋಗೆ ಈಗಾಗಲೆ 7.4 ಲಕ್ಷ ಲೈಕ್ಸ್‌ಗಳು ಬಂದಿದ್ದು, ಟ್ವಿಟರ್‌ನಲ್ಲೂ ಈ ವಿಡಿಯೋವನ್ನು ಹಲವಾರು ಮಂದಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಕೂಡ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದಾರೆ.