

ನವದೆಹಲಿ: ಈ ಶೀರ್ಷಿಕೆ ಓದಿ ಬಹುಶಃ ಕನ್‌ಫ್ಯೂಸ್ ಆಗಿರಬೇಕಲ್ಲವೆ? ಟಿಕೆಟ್ ಇಲ್ಲದೇ ಪ್ರಯಾಣಿಸಿದರೆ ರೈಲ್ವೆ ಇಲಾಖೆಗೆ ನಷ್ಟವಾಗಬೇಕು, ಲಾಭ ಹೇಗಾಗುತ್ತದೆ ಎಂದು ತಲೆ ಕೆಡಿಸಿಕೊಂಡಿರಲಿಕ್ಕೂ ಸಾಕು. ಅಲ್ಲೇ ಇರೋದು ಸುದ್ದಿ...
2019-20 ನೇ ಸಾಲಿನಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಪ್ರಯಾಣಿಕರು, ಟಿಕೆಟ್ ಪಡೆಯದೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ಟಿಕೆಟ್ ರಹಿತ ಪ್ರಯಾಣಿಕರ ಪೈಕಿ ಹೆಚ್ಚಿನವರ ಅದೃಷ್ಟ ಕೈಕೊಟ್ಟಿದ್ದರಿಂದ ಅವರು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರಿಂದ ದುಪ್ಪಟ್ಟು, ಮೂರು ಪಟ್ಟು ಹಣ ವಸೂಲಿ ಮಾಡಲಾಗಿದೆ.
ಇದರಿಂದ ಈ ಸಾಲಿನಲ್ಲಿ ರೈಲ್ವೆ ಇಲಾಖೆ 561.73 ಕೋಟಿ ರೂ ಲಾಭ ಗಳಿಸಿದೆ. ಮಧ್ಯಪ್ರದೇಶದ ಮಾಹಿತಿ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ತಿಳಿದುಬಂದಿದೆ.
ವರ್ಷವರ್ಷವೂ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಿಕ್ಕಿಬಿದ್ದವರಿಂದ ದಂಡ ವಸೂಲಿ ಮಾಡುತ್ತಿರುವ ಕಾರಣ, ಟಿಕೆಟ್‌ಗಿಂತಲೂ ಅಧಿಕ ಲಾಭ ರೈಲ್ವೆ ಇಲಾಖೆಗೆ ಆಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ರೈಲ್ವೆ 2016-17ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ದಂಡವಾಗಿ 405.30 ಕೋಟಿ ರೂ, 2017-18ರಲ್ಲಿ 441.62 ಕೋಟಿ ರೂ, ಮತ್ತು 2018-19ರಲ್ಲಿ 530.06 ಕೋಟಿ ರೂ. ಲಾಭ ಗಳಿಸಿದೆ. 2019-2020ರಲ್ಲಿ 1.10 ಕೋಟಿ ಪ್ರಯಾಣಿಕರು ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಈ ಮಾಹಿತಿಯಲ್ಲಿ ತಿಳಿದುಬಂದಿದೆ.
ಟಿಕೆಟ್ ರಹಿತ ಪ್ರಯಾಣವನ್ನು ತಡೆಯಲು ಭಾರತೀಯ ರೈಲ್ವೆ ನಿಯಮಗಳನ್ನು ರೂಪಿಸಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕ ಟಿಕೆಟ್ ವೆಚ್ಚದ ಜತೆಗೆ ಕನಿಷ್ಠ 250 ರೂ ದಂಡ ಕಟ್ಟಬೇಕು ಅಥವಾ ಪ್ರಯಾಣಿಕ ದಂಡ ಪಾವತಿಸಲು ನಿರಾಕರಿಸಿದರೆ, ವ್ಯಕ್ತಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ಗೆ ಹಸ್ತಾಂತರಿಸಲಾಗುತ್ತದೆ.
ಇಂಥ ಪ್ರಯಾಣಿಕರ ವಿರುದ್ಧ ಲ್ವೆ ಕಾಯ್ದೆಯ ಸೆಕ್ಷನ್ 137 ರ ಅಡಿಯಲ್ಲಿ ಕೇಸ್ ದಾಖಲು ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ. ಮ್ಯಾಜಿಸ್ಟ್ರೇಟ್ ಅವನಿಗೆ 1,000 ರೂ ದಂಡ ಕಟ್ಟಬೇಕು. ಒಂದು ವೇಳೆ ವ್ಯಕ್ತಿ ದಂಡವನ್ನು ಪಾವತಿಸಲು ನಿರಾಕರಿಸಿದರೆ, ಅವನು ಅಥವಾ ಅವಳು ಆರು ತಿಂಗಳವರೆಗೆ ಜೈಲುವಾಸ ಅನುಭವಿಸಬೇಕು ಎಂಬ ನಿಯಮ ಇದೆ.
ಆದ್ದರಿಂದ ಕೆಲವೇ ನೂರು ರೂಪಾಯಿಗಳನ್ನು ಉಳಿಸುವ ಸಲುವಾಗಿ ಸಾವಿರಾರು ರೂಪಾಯಿ ದಂಡ, ಜೈಲು ಶಿಕ್ಷೆ ಎಲ್ಲಾ ಅನುಭವಿಸುವ ಬದಲು ಟಿಕೆಟ್ ಕೊಟ್ಟು ಪ್ರಯಾಣಿಸಿ ಎಂದು ರೈಲ್ವೆ ಇಲಾಖೆ ಹೇಳಿದೆ. ಹೀಗೆ ಮಾಡದಿದ್ದರೆ ಇಲಾಖೆಗೆ ಲಾಭವೇ ಆಗುತ್ತದೆ, ನಷ್ಟ ನಿಮಗೆ ಅಷ್ಟೇ.