

ಬೆಂಗಳೂರು: ಕಳ್ಳರು ಒಂದಲ್ಲ ಒಂದು ಸುಳಿವು ಕೊಟ್ಟೇ ಕೊಡುತ್ತಾರೆ ಎನ್ನುತ್ತಾರೆ. ಆದರೆ ಯಾವುದೇ ಸುಳಿವು ಕೊಡದ ಆರೋಪಿಯೊಬ್ಬ ಕೊನೆಗೆ ನಡೆದಾಡುವ ಸ್ಟೈಲ್ನಿಂದ ಸಿಕ್ಕಬಿದ್ದ ರೋಚಕ ಘಟನೆ ಇದು.
ಹೌದು. ಬೆಂಗಳೂರಿನ ಎಟಿಎಂ ಒಂದರಿಂದ 32,28,500 ರೂಪಾಯಿ ಎಗರಿಸಿ ಹೋದ ಖದೀಮನೊಬ್ಬ ಇದೀಗ ನಡೆದಾಡುವ ಸ್ಟೈಲ್ನಿಂದ ಸಿಕ್ಕಿಬಿದ್ದಿದ್ದಾನೆ. ಜತೆಗೆ ಈತನ ಗಡ್ಡವೂ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ. ಈತನ ಜತೆಗೆ, ಈತನ ಸಹಚರನೂ ಸಿಕ್ಕಿಬಿದ್ದಿದ್ದು, ಸದ್ಯ ಬೆಂಗಳೂರಿನ ಹಲಸೂರು ಪೊಲೀಸರ ಸುಪರ್ದಿಯಲ್ಲಿದ್ದಾರೆ.
ಕಿರಣ್ ಹಾಗೂ ಅಶ್ವತ್ ಬಂಧಿತರು. ಗೌರಿಬಿದನೂರಿನ ಮೂಲದ ಕಿರಣ್ ಸಿಎಂಎಸ್ ಇನ್ಫೋ ಸಿಸ್ಟಮ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ ಈತ. ಬೆಂಗಳೂರಿನ ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಲ್ಲಿ ಹಣ ತುಂಬಿಸುವ ಜವಾಬ್ದಾರಿ ಈತನ ಮೇಲಿತ್ತು.
ಇತ್ತೀಚೆಗೆ ಕಂಪೆನಿಯು ಕಿರಣ್ ಹೋಗುವ ಮಾರ್ಗಕ್ಕೆ ಸೂರ್ಯ ಎನ್ನುವವರನ್ನು ನಿಯೋಜನೆ ಮಾಡಿತ್ತು. ಸೂರ್ಯ ಹಲಸೂರಿನ ಎರಡು ಬ್ಯಾಂಕ್ನ ಎಟಿಎಂಗಳಿಗೆ ಹಣ ತುಂಬಿಸಿದ್ದರು. ಹಣ ಹಾಕಿದ ಅರ್ಧ ಗಂಟೆಯಲ್ಲೇ ಹಣ ಮಾಯವಾಗಿಬಿಟ್ಟಿತ್ತು. ಅದರಲ್ಲಿದ್ದ 32,28,500 ಲಕ್ಷ ರೂಪಾಯಿ ಕಾಣೆಯಾಗಿತ್ತು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಮೊದಲ ಗಮನ ಹರಿಯುವುದು ಯಾರಿಗೆ ಎಟಿಎಂನಲ್ಲಿ ಹಣ ತುಂಬುವ ಪಾಸ್ವರ್ಡ್ ಗೊತ್ತಿರುತ್ತದೆಯೋ ಅವರ ಮೇಲೆ.
ಹಾಗೆಯೇ ಕಿರಣ್ ಮೇಲೆ ಪೊಲೀಸರ ಗಮನ ಹರಿಯಿತು. ಆದರೆ ಸಿಸಿಟಿಯಲ್ಲಿ ಮುಖ ಕಾಣದಂತೆ ಮರೆಮಾಚಿದ್ದರಿಂದ ಗುರುತು ಹಿಡಿಯಲು ಆಗಲಿಲ್ಲ. ಆದರೆ, ಅದರಲ್ಲಿ ಆರೋಪಿ ನಡೆಯುವ ಸ್ಟೈಲ್ ಹಾಗೂ ಅದರಲ್ಲಿರುವ ಗಡ್ಡದ ಮೇಲೆ ಪೊಲೀಸರ ಗಮನ ಹೋಗಿತ್ತು. ನಂತರ ಕಿರಣ್ ನಡೆಯೋ ಸ್ಟೈಲ್ ಹಾಗೂ ಗಡ್ಡವನ್ನು ಸಿಸಿಟಿಯ ದೃಶ್ಯಕ್ಕೆ ಹೋಲಿಕೆ ಮಾಡಿದ ಪೊಲೀಸರು ಈತನೇ ಕಳ್ಳ ಎನ್ನುವುದನ್ನು ಪತ್ತೆ ಹಚ್ಚಿದರು.
ಅನುಮಾನದಿಂದ ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಾಸ್ವರ್ಡ್ ಗೊತ್ತಿದ್ದರಿಂದ ಈ ಕೃತ್ಯ ಮಾಡಿರುವುದಾಗಿ ಹೇಳಿದ್ದಾನೆ. ಈ ಕೆಲಸಕ್ಕೆ ಅಶ್ವತ್ ಎಂಬಾತನ ಸಹಾಯ ಪಡೆದಿರುವುದಾಗಿಯೂ ಬಾಯಿ ಬಿಟ್ಟಿದ್ದಾನೆ. ಸದ್ಯ ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.