ಫುಟ್‌ಪಾಥ್‌ ಇರುವಾಗಲೂ ರಸ್ತೆ ಮೇಲೆ ನಡೆದಾತ ಈಗ ಸಖತ್ ಫೇಮಸ್‌!

luckeyman
Published on

ಚಾವರಾ (ಕೊಲ್ಲಂ): ಅದೃಷ್ಟ ನೆಟ್ಟಗಿದ್ದರೆ, ಆಯಸ್ಸು ಗಟ್ಟಿಯಿದ್ದರೆ ಎಷ್ಟೇ ಅಲ್ಲೋಲಕಲ್ಲೋಲವಾದರೂ ಸಾಯುವುದಿಲ್ಲ ಎನ್ನುತ್ತಾರೆ.

ಅಂಥದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಶ್ರೀಕುಮಾರ್‌ ಎಂಬ 52 ವರ್ಷದ ವ್ಯಕ್ತಿ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದು, ಇದೀಗ ಫೋಟೋ ಭಾರಿ ವೈರಲ್‌ ಆಗಿದೆ.

ಅಷ್ಟಕ್ಕೂ ಇಷ್ಟು ವೈರಲ್‌ ಆಗಲು ಕಾರಣವೇನೆಂದರೆ, ಫುಟ್‌ಪಾಥ್‌ ಇದ್ದರೂ ಶ್ರೀಕುಮಾರ್‌ ರಸ್ತೆಯ ಮೇಲೆ ನಡೆದುಹೋಗಿದ್ದಾರೆ. ಆದರೆ ಇದೇ ಅವರ ಅದೃಷ್ಟಕ್ಕೆ ಕಾರಣವಾಗಿದೆ.

ಫುಟ‌ಪಾಥ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ಶ್ರೀಕುಮಾರ್‌ ಅವರಿಗೆ ಏನನ್ನಿಸಿತ್ತೋ ಏನೋ, ರಸ್ತೆಯ ಮೇಲೆ ನಡೆದುಕೊಂಡು ಹೋದರು. ಅವರು ಇನ್ನೇನು ರಸ್ತೆಗೆ ಇಳಿಯುತ್ತಲೇ ಬ್ರೇಕ್‌ಫೇಲ್‌ ಆಗಿರುವ ವಾಹನವೊಂದು ಅವರು ನಡೆದುಕೊಂಡು ಹೋಗುತ್ತಿದ್ದ ಫುಟ್‌ಪಾಥ್‌ ಮೇಲೆ ಅತಿವೇಗದಲ್ಲಿ ಹಾದು ಹೋಗಿದೆ.

ಒಂದು ವೇಳೆ ಶ್ರೀಕುಮಾರ್‌ ಅಲ್ಲಿಯೇ ಫುಟ್‌ಪಾಥ್‌ ಮೇಲೆ ಹೋಗುತ್ತಿದ್ದರೆ, ಆ ವಾಹನ ಹೋಗಿರುವ ವೇಗವನ್ನು ನೋಡಿದರೆ ಪ್ರಾಣ ಉಳಿಯುತ್ತಿರಲಿಲ್ಲ.

ದೇವರೇ ನನ್ನನ್ನು ಕಾಪಾಡಿದ. ಆ ಕ್ಷಣಕ್ಕೆ ಏನೋ ಅನ್ನಿಸಿ ರಸ್ತೆಯ ಮೇಲೆ ಇಳಿದೆ. ಇದೊಂದು ನಿಜಕ್ಕೂ ವಿಚಿತ್ರವಾದುದು ಎಂದು ಶ್ರೀಕುಮಾರ್‌ ಹೇಳಿದ್ದಾರೆ.

ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯ ಈಗ ವೈರಲ್‌ ಆಗಿದ್ದು, ಅದೃಷ್ಟದ ಕುರಿತಂತೆ ಹಲವಾರು ಮಂದಿ ಕಮೆಂಟ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net