

ನವದೆಹಲಿ: ಕರೊನಾ ವಾರಿಯರ್ಸ್ ಸಂಕಷ್ಟ ಅಷ್ಟಿಷ್ಟಲ್ಲ. ಸದಾ ಕರೊನಾ ಸೋಂಕಿತರ ಜತೆಗೆ ಸೆಣೆಸಾಡುವ ಇವರ ಬದುಕು ನೋವಿನಿಂದ ತುಂಬಿದೆ. ಅದರಲ್ಲಿಯೂ ಅಡಿಯಿಂದ ಮುಡಿಯವರೆಗೆ ಪಿಪಿಇ ಕಿಟ್ ಧರಿಸಿ ದಿನಪೂರ್ತಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸುಲಭದ ಮಾತಲ್ಲ.
ಇದು ಒಂದೆಡೆಯಾದರೆ, ಋತುಸ್ರಾವದ ದಿನಗಳಲ್ಲಿ ಮಹಿಳಾ ಕರೊನಾ ವಾರಿಯರ್ಸ್ ಪರಿಸ್ಥಿತಿ ಹೇಗಿರಬೇಡ? ಅದರಲ್ಲಿಯೂ ಕೆಲವರಿಗೆ ಮೊದಲ 2-3 ದಿನಗಳು ಅತಿಯಾದ ರಕ್ತಸ್ರಾವ ಆಗುವುದುಂಟು. ಆ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ದಿನವೊಂದಕ್ಕೆ 2-3 ಬಾರಿ ಬದಲಿಸುವುದು ಅನಿವಾರ್ಯ. ಆದರೆ ಪಿಪಿಇ ಕಿಟ್ ಧರಿಸಿರುವ ಕರೊನಾ ವಾರಿಯರ್ಸ್‌ಗಳಿಗೆ ಇದು ಸಾಧ್ಯವಾಗುವುದಿಲ್ಲ.
ಆ ದಿನಗಳಲ್ಲಿ ತಾವು ಅನುಭವಿಸುವ ನೋವುಗಳು, ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ ಪಂಚಕುಲದ ಪ್ಯಾರಾಸ್ ಆಸ್ಪತ್ರೆಯ ನರವಿಜ್ಞಾನಿ ಡಾ. ಜಸ್ಲೋವ್ಲೀನ್ ಕೌರ್.
ಅವರು ಹೇಳಿರುವುದು ಹೀಗೆ...
ಪಿಪಿಇ ಕಿಟ್ ಧರಿಸಿದಾಗ ಮೂತ್ರ ವಿಸರ್ಜನೆಗೆ ಹೋಗುವುದು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಡಯಾಪರ್‌ಗಳನ್ನು ಧರಿಸಿರುತ್ತೇವೆ. ಆದರೆ ಋತುಸ್ರಾವದ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸಬೇಕಾದಾಗ ಅದರ ಜತೆ ಡಯಾಪರ್ ಧರಿಸುವುದು ಒಂದು ರೀತಿಯ ಹಿಂಸೆಯನ್ನು ನೀಡುತ್ತದೆ.
ಏನಿಲ್ಲವೆಂದರೂ ದಿನಕ್ಕೆ 8-10 ಗಂಟೆ ಕಾಲ ಪಿಪಿಇ ಕಿಟ್ ಧರಿಸಿ ಇರಬೇಕಾದ ಅನಿವಾರ್ಯತೆ ಇದೆ. ಆಗ ಅಧಿಕ ರಕ್ತಸ್ರಾವವಾದರೂ ಅದನ್ನು ಪದೇ ಪದೇ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಚಿಕಿತ್ಸೆ ನೀಡುವ 8-10 ಗಂಟೆಗಳವರೆಗೆ ನಾವು ಪಿಪಿಇ ಕಿಟ್ ತೆಗೆಯುವಂತೆ ಇಲ್ಲ. ಆ ಸಂದರ್ಭದಲ್ಲಿ ರಕ್ತಸ್ರಾವ ಆಗುತ್ತಿದ್ದರೂ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕಡೆಗೆ ಗಮನ ಹರಿಸುವುದು ಭಾರಿ ಮುಖ್ಯವಾಗುತ್ತದೆ.
ಇದೇ ಕಾರಣಕ್ಕೆ ಡಯಾಪರ್ ಜತೆಗೆ 2-3 ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸಿ ಹಿಂಸೆ ಅನುಭವಿಸುವುದು ಮಹಿಳಾ ಕರೊನಾ ವಾರಿಯರರ್ಸ್‌ಗೆ ಅನಿವಾರ್ಯವಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ಅಧಿಕ ಋತುಸ್ರಾವದ ದಿನಗಳಲ್ಲಿ ರಕ್ತವನ್ನು ಹೀರುವ ಟ್ಯಾಂಪೂನ್‌ಗಳನ್ನು ಎಂದಿಗೂ ಜೀವಮಾನದಲ್ಲಿ ಬಳಸಿಯೇ ಇಲ್ಲ. ಆದರೆ ಇದೀಗ ಅದು ಅನಿವಾರ್ಯವಾಗಿದೆ. ಎಲ್ಲದಕ್ಕೂ ನಾವು ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ಥಿತಿ ಇದೆ.
ಅದೇ ಇನ್ನೊಂದೆಡೆ, ದೀರ್ಘಕಾಲದವರೆಗೆ ಪ್ಯಾಡ್ ಧರಿಸುವುದರಿಂದ ಅದರಲ್ಲಿಯೂ ಅಧಿಕವಾಗಿ ಸ್ರಾವವಾದ ಸಂದರ್ಭದಲ್ಲಿ ಆರೋಗ್ಯದ ಅಪಾಯಗಳು ಹೆಚ್ಚಾಗುತ್ತವೆ. ಆದರೆ ಅವುಗಳ ಬಗ್ಗೆ ನಾವು ಕರೊನಾ ವಾರಿಯರ್ಸ್ ಆಗಿರುವವರೆಗೆ ಯೋಚನೆ ಮಾಡುವಂತಿಲ್ಲ ಎಂದಿದ್ದಾರೆ.
ಇದಕ್ಕೆ ದನಿಗೂಡಿಸುವ ಫೋರ್ಟಿಸ್ ಆಸ್ಪತ್ರೆಯ ವಸಂತ್ ಕುಂಜ್, ಪಲ್ಮನೊಲಜಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಸಲಹೆಗಾರ್ತಿ ಡಾ. ರಿಚಾ ಸರೀನ್ , ನಮ್ಮ ಸ್ಥಿತಿಯೂ ಇದೇ ರೀತಿ ಇದೆ. ಬೇಸಿಗೆಯ ಕಾಲದಲ್ಲಿ ಅಥವಾ ಬಿಸಿಲಿನ ವೇಳೆಯಂತೂ ಮಹಿಳಾ ವಾರಿಯರ್ಸ್ ಸ್ಥಿತಿ ಕೇಳುವುದೇ ಬೇಡ. ಅಷ್ಟು ಹಿಂಸೆಯನ್ನು ತಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ.