ಬದುಕನ್ನು ಪ್ರೀತಿಸೋಣ, ಚಿಂತೆಯನ್ನಲ್ಲ...

Mental health
Published on

ಆಧುನಿಕ ಬದುಕಿನ ಒತ್ತಡ, ಅನಾರೋಗ್ಯಕರ ಸ್ಪರ್ಧೆ ಮನುಷ್ಯನ ಚಿಂತೆಯನ್ನು ಹೆಚ್ಚು ಮಾಡಿದ್ದರೆ ಇತ್ತೀಚೆಗೆ ಬಂದೆರಗಿದ ಕರೊನಾ ಸೋಂಕು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಖಿನ್ನತೆಗೆ ಜಾರುವವರ, ಆತ್ಮಹತ್ಯೆಗೆ ಯತ್ನಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ಇಂಥ ಹೊತ್ತಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳುವುದು ಹೇಗೆ, ಬದುಕನ್ನು ಸಕಾರಾತ್ಮಕವಾಗಿ ಕಾಣುವ ಪರಿ ಹೇಗೆ ಎಂಬುದರ ವಿವರಗಳನ್ನು ಮನೋವಿಜ್ಞಾನಿಗಳು, ಮನೋವೈದ್ಯರು, ಆಪ್ತ ಸಮಾಲೋಚಕರು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಅಬ್ಬಾ... ಈ ಜೀವನವೇ ಸಾಕಾಗಿ ಹೋಗಿದೆ...’  ಹೀಗೆ ಹೇಳಿದವರೆಲ್ಲರೂ ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದೇ ಆಗಿದ್ದಲ್ಲಿ ಬಹುಶಃ ಈ ಭೂಮಿಯ ಮೇಲೆ ಬೆರಳೆಣಿಕೆಯಷ್ಟು ಜನರೂ ಇರುತ್ತಿರಲಿಲ್ಲವೇನೋ. ರಾಷ್ಟ್ರದ ಪ್ರಥಮ ಪ್ರಜೆ ಎನಿಸಿಕೊಂಡಿರುವ ರಾಷ್ಟ್ರಪತಿಯಿಂದ ಹಿಡಿದು ಕಟ್ಟಕಡೆಯ ಭಿಕ್ಷುಕನವರೆಗೂ ಅವರದ್ದೇ ಆದ ಸಮಸ್ಯೆಗಳು ಇದ್ದೇ ಇವೆ. ಎಲ್ಲರೂ ಬಹುಶಃ ಒಂದಿಲ್ಲೊಂದು ದಿನ, ‘ಅಬ್ಬಾ... ಈ ಜೀವನವೇ...’ ಎಂದು ನಿಟ್ಟುಸಿರು ಬಿಟ್ಟವರೇ. ಅಸಂಖ್ಯ ಅಭಿಮಾನಿಗಳನ್ನು ಪಡೆದ ಚಿತ್ರತಾರೆಯರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ದಿಗ್ಗಜರನ್ನೂ ಖಿನ್ನತೆ ಬಿಟ್ಟಿಲ್ಲ. ಪರಿತಾಪ, ತಳಮಳ, ತಲ್ಲಣಕ್ಕೆ ಯಾರೂ ಹೊರತಲ್ಲ.  ಹಾಗಾದರೆ ಕೆಲವರು ಆತ್ಮಹತ್ಯೆಯ ದಾರಿ ತುಳಿಯಲು ಕಾರಣವೇನು? ಇದಕ್ಕೆ ಉತ್ತರವೇ ಉದ್ವೇಗ. ‘ಉದ್ವೇಗಗಳ ಸುನಾಮಿಯೇ ಸ್ವಹತ್ಯೆಗೆ ಪ್ರಚೋದನೆ’ ಎಂದಿದ್ದಾರೆ ಮನೋವಿಜ್ಞಾನಿ ಜೆಸ್ಸಿ ಬೀರಿಂಗ್.

ಜೀವನದಲ್ಲಿ ಹೇಳಿಕೊಳ್ಳಲಾರದ ಸಮಸ್ಯೆಗಳು ಎದುರಾದಾಗ, ತನ್ನವರು ಯಾರೂ ಇಲ್ಲ ಎಂದೆನಿಸಿದಾಗ, ನೋವನ್ನು ಹೇಳಿಕೊಳ್ಳಬೇಕೆನಿಸಿದರೂ ಯಾರೂ ಸಿಗದಾಗ... ಸಮಾಜ ಏನೆನ್ನುವುದೋ ಎಂಬ ಭಯವಾದಾಗ... ಭವಿಷ್ಯದ ಚಿಂತೆ ಕಾಡಿದಾಗ... ಹೀಗೆ ಆತ್ಮಹತ್ಯೆಗೆ ಕಾರಣಗಳು ನೂರಾರು. ‘ಇನ್ನು ಮುಂದೆ ನನ್ನಿಂದ ಬದುಕಲಾಗದು ಎನ್ನುವುದು ಆತ್ಮಹತ್ಯೆಗೆ ಕಾರಣವಲ್ಲ, ಬದಲಿಗೆ ಒಂಟಿಯಾಗಿ ಬದುಕಲಾಗದು’ ಎನ್ನುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಮನೋವಿಜ್ಞಾನಿಗಳು.

ಹೆಚ್ಚುತ್ತಿದೆ ಸಂಖ್ಯೆ

ವಿಶ್ವದಲ್ಲಿ ವರ್ಷಕ್ಕೆ 10 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 3 ಸಾವಿರ ಮಂದಿ! 2023ರ ವೇಳೆಗೆ ಈ ಪ್ರಮಾಣ 12.5 ಲಕ್ಷ ಆದೀತು ಎಂದು ಅಂದಾಜಿಸಿದೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್​ಸಿಆರ್​ಬಿ). ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚು ಎನ್ನುತ್ತವೆ ವರದಿಗಳು. ‘ಪತಿ ಮನೆಯಲ್ಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಇವುಗಳ ಹೊರತಾಗಿ ವಿವಾಹದ ಬಗ್ಗೆ ಅತಿಯಾದ ಕಲ್ಪನೆ ಇಟ್ಟುಕೊಂಡು, ತಮ್ಮದೇ ಭ್ರಮಾಲೋಕವನ್ನು ಸೃಷ್ಟಿಸಿಕೊಂಡಿರುವ ಯುವತಿಯರು ಮದುವೆಯಾಗುತ್ತಿದ್ದಂತೆ ತಮ್ಮ ಕನಸಿನ ಗೋಪುರ ಕಳಚಿಬೀಳುವುದನ್ನು ಸಹಿಸಲಾಗದೆ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಲೇಖಕಿ ಹಾಗೂ ಸಮಾಜವಿಜ್ಞಾನಿ ದೀಪಾ ನಾರಾಯಣ ಅವರು ‘ಚುಪ್: ಬ್ರೇಕಿಂಗ್ ದಿ ಸೈಲೆನ್ಸ್ ಎಬೌಟ್ ಇಂಡಿಯಾಸ್ ವಿಮೆನ್’ ಕೃತಿಯಲ್ಲಿ ವಿವರಿಸಿದ್ದಾರೆ.

ಕೊಂಚ ತಡವಾಗಿದ್ದರೆ ಶವವಾಗುತ್ತಿದ್ದಳಾಕೆ... ಆತ್ಮಹತ್ಯೆಯ ಯೋಚನೆ ಬಂದಾಗ, ಇನ್ನು ಬದುಕಿದ್ದು ಪ್ರಯೋಜನವೇ ಇಲ್ಲ ಎನ್ನಿಸಿದಾಗ ದಿಢೀರ್ ಅಂತ ನಿರ್ಧಾರಕ್ಕೆ ಬರುವ ಬದಲು ಆ ಒಂದು ಕೆಟ್ಟ ಕ್ಷಣದಲ್ಲಿ ಜೀವನದಲ್ಲಿ ನಡೆದಿರುವ ಯಾವುದೋ ಒಳ್ಳೆಯ ಘಟನೆಯನ್ನು ನೆನಪಿಸಿಕೊಂಡರೆ ಆತ್ಮಹತ್ಯೆ ತಡೆಗಟ್ಟಬಹುದು ಎನ್ನುವುದು ಮನೋವೈದ್ಯರು, ಆಪ್ತ ಸಮಾಲೋಚಕರ ಅಭಿಮತ. ಖ್ಯಾತ ಆಪ್ತ ಸಮಾಲೋಚಕ ಅಕ್ಷರ ದಾಮ್ಲೆ ಹೇಳಿದ ಒಂದು ಘಟನೆ: ಕೆಲ ವರ್ಷಗಳ ಹಿಂದಿನ ಪ್ರಸಂಗ. ದುಬೈನ ಮಹಿಳೆಯೊಬ್ಬರು ಕೌಟುಂಬಿಕ ತಾಪತ್ರಯಗಳಿಂದ ತೀರಾ ಜರ್ಜರಿತರಾಗಿ ಹೋಗಿದ್ದರು. ಒಮ್ಮೆ ಮಾತ್ರ ನನ್ನ ಬಳಿ ಕೆಲ ವಿಷಯ ಹೇಳಿಕೊಂಡಿದ್ದರು. ಸಮಾಧಾನ ಮಾಡಿ ಕಳಿಸಿದ್ದೆ. ನಂತರ ಆಕೆಯ ಪತ್ತೆಯೇ ಇರಲಿಲ್ಲ. ಅದೊಂದು ದಿನ, ‘ನನ್ನ ಬದುಕು ಮುಗಿಯಿತು, ನಾನಿನ್ನು ಹೊರಡುತ್ತಿದ್ದೇನೆ’ ಎಂದು ಮೆಸೇಜ್ ಮಾಡಿದರು. ಕೂಡಲೇ ಫೋನ್ ಮಾಡಿದೆ. ಹತ್ತು ಸಲ ಮಾಡಿದರೂ ಫೋನ್ ರಿಸೀವ್ ಮಾಡಲಿಲ್ಲ. ಆದರೂ ಕರೆ ಮಾಡುತ್ತಲೇ ಇದ್ದೆ. ಅದೊಮ್ಮೆ ಯಾರೋ ರಿಸೀವ್ ಮಾಡಿದರು. ಹಾಂ ಇಲ್ಲ... ಹೂಂ ಇಲ್ಲ... ಅವರ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಮಹಿಳೆಯೇ ಫೋನ್ ರಿಸೀವ್ ಮಾಡಿದ್ದರೆಂದು ತಿಳಿದ ನಾನು ಮುಕ್ಕಾಲು ಗಂಟೆ ಕೌನ್ಸೆಲಿಂಗ್ ಮಾಡಿದೆ. ಒಬ್ಬನೇ ಮಾತನಾಡಿದೆ. ಆಕೆ ಜೀವನದ ಕೆಲ ಘಟನೆಗಳನ್ನು ಅವರಿಂದಲೇ ತಿಳಿದಿದ್ದ ನಾನು ಸುಂದರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದೆ. ಮುಕ್ಕಾಲು ಗಂಟೆಯಾದ ಮೇಲೆ ಆ ಮಹಿಳೆ ಮೆಲ್ಲನೆ ಮಾತನಾಡಲು ಶುರು ಮಾಡಿದರು. ‘ಬಾಲ್ಕನಿಯ ತುದಿಯಲ್ಲಿ ನಿಂತು ಕಣ್ಣುಮುಚ್ಚಿ ಇನ್ನೇನು ಜಿಗಿಯಬೇಕು ಎಂದುಕೊಂಡಿದ್ದೆ ಸರ್. ಅಷ್ಟೊತ್ತಿಗೆ ಕರೆ ಬಂತು. ರಿಸೀವ್ ಮಾಡಲೇಬಾರದು ಎಂದುಕೊಂಡಿದ್ದೆ. ಆದರೆ ಇಷ್ಟೊಂದು ಸಲ ರಿಂಗ್ ಆಗುವುದನ್ನು ಕೇಳಿ ರಿಸೀವ್ ಮಾಡಿದೆ. ನಿಮ್ಮ ಮಾತನ್ನು ಕೇಳಿ ಇದೀಗ ನನ್ನ ಸುಂದರ ದಿನಗಳು ನೆನಪಿಗೆ ಬಂದವು. ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದು, ಜೀವಿಸಿ ತೋರಿಸಬೇಕು ಎಂದುಕೊಂಡಿದ್ದೇನೆ’ ಎಂದರು. ಆದರೂ ನಾನು ಬಿಡದೆ, ಇನ್ನೊಂದು ಗಂಟೆ ಮಾತನಾಡಿ ಆಕೆಯಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬಿ ಧೈರ್ಯ ಹೇಳಿದೆ, ಸಾಂತ್ವನ ಮಾಡಿದೆ. ಇಂದು ಅವರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಆದ್ದರಿಂದಲೇ ಇಂಥ ಯೋಚನೆ ಬಂದಾಗ ಯಾರ ಬಳಿಯಾದರೂ ಹೇಳಿಕೊಂಡು ಬಿಡಬೇಕು.

ಹೆಣ್ಣಿನ ಮೇಲಿರಲಿ ಕರುಣೆ...

ಕರೊನಾ ವೈರಸ್ ಹಾವಳಿಯಿಂದ ಬಹುತೇಕ ಎಲ್ಲ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ಕಲ್ಪಿಸಿವೆ. ಆದರೆ ಹೆಚ್ಚಿನ ಮಹಿಳೆಯರಿಗೆ ಇದು ನುಂಗಲಾರದ ತುತ್ತಾಗಿದೆ. ಮಾನಸಿಕ ಒತ್ತಡ ಹೆಚ್ಚಿರುವುದರಿಂದ ಆತ್ಮಹತ್ಯೆ ಕುರಿತು ಯೊಚನೆ ಮಾಡುತ್ತಿದ್ದಾರೆ ಎನ್ನುತ್ತಾರೆ ಮಾನಸಿಕ ತಜ್ಞೆ, ಆಪ್ತ ಸಮಾಲೋಚಕಿ ಡಾ.ಅನುರಾಧಾ ಶ್ರೀಧರ್.

ತೀವ್ರವಾಗಿ ಖಿನ್ನತೆಗೆ ಜಾರಿ ತಮಗೆ ಕರೆ ಮಾಡುತ್ತಿರುವವರ ಸಂಖ್ಯೆ ಈ ಸಮಯದಲ್ಲಿ ಹೆಚ್ಚುತ್ತಿದೆ ಎನ್ನುವ ಅವರು, ತಮ್ಮಲ್ಲಿ ನೋವು ತೋಡಿಕೊಳ್ಳುತ್ತಿರುವವರ ಕುರಿತು ಹೇಳುವುದು ಹೀಗೆ...

‘ಕಚೇರಿಯ ಕೆಲಸ ಮನೆಯಲ್ಲಿ ಮಾಡುತ್ತಿರುವಾಗಿನಿಂದ ಜೀವನದಲ್ಲಿ ಜಿಗುಪ್ಸೆ ಬಂದುಬಿಟ್ಟಿದೆ ಮೇಡಂ... ಮನೆಯಲ್ಲಿ ಇರುತ್ತೀರಿ, ಹೆಚ್ಚು ಅವಧಿ ಕೆಲಸ ಮಾಡಿ ಎಂದು ನಮ್ಮ ಬಾಸ್ ಹೇಳಿದರೆ, 24 ತಾಸು ಕಂಪ್ಯೂಟರ್ ಮುಂದೆ ಕುಳಿತರೆ ಮನೆಕೆಲಸ ಮಾಡೋರು ಯಾರು ಎಂಬುದು ಅತ್ತೆಯ ಕಿರಿಕಿರಿ.

ಮನೆಯಲ್ಲಿ ಇರುವ ಕಾರಣ ಎಷ್ಟು ಕೆಲಸ ಮಾಡಿದರೂ ಕುಟುಂಬದವರಿಗೆ ಸಮಾಧಾನವೇ ಇಲ್ಲ. ಮೀಟಿಂಗ್ ಅಂತ ವಿಡಿಯೋ ಕಾನ್ಪರೆನ್ಸ್​ಗೆ ಬಾಸ್ ಕರೆದರೆ, ಮಕ್ಕಳು ‘ಅಮ್ಮಾ ನನಗೆ ಅದು ಕೊಡು, ಇದು ಕೊಡು’ ಎನ್ನುತ್ತಾರೆ. ಗಂಡನೋ ಸ್ವಲ್ಪವೂ ಸಹಾಯ ಮಾಡುವುದಿಲ್ಲ. ‘ಕಂಪ್ಯೂಟರ್ ಆನ್ ಮಾಡಿಟ್ಟು ಬಾ, ನನಗೆ ಕಾಫಿ ಮಾಡಿಕೊಡು’ ಎಂದು ಪದೇಪದೆ ಹೇಳುತ್ತಾರೆ.

ಕಚೇರಿಗೆ ಹೋಗುವ ವೇಳೆ ಎಲ್ಲವೂ ಮ್ಯಾನೇಜ್ ಆಗುತ್ತಿತ್ತು. ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಎಲ್ಲರೂ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದರು. ಈಗ ಮನೆಯಲ್ಲಿ ಇರುವುದರಿಂದ ನಾನು ಕಚೇರಿ ಕೆಲಸ ಮಾಡುತ್ತಿದ್ದೇನೆ ಎಂದು ಯಾರೂ ಅಂದುಕೊಳ್ಳುವುದೇ ಇಲ್ಲ. ಅತ್ತ ಬಾಸ್​ಗೂ ಸಮಸ್ಯೆ ಅರ್ಥ ಆಗಲ್ಲ, ಇತ್ತ ಮನೆಯಲ್ಲೂ ನೆಮ್ಮದಿ ಇಲ್ಲ... ನನಗಂತೂ ಸತ್ತೇ ಹೋಗೋಣ ಎನ್ನಿಸುತ್ತಿದೆ...’

ಹೀಗೆ ದಿನವೂ ಅನೇಕ ಮಂದಿ ಕರೆ ಮಾಡುತ್ತಾರೆ. ಇವರು ಕೌನ್ಸೆಲಿಂಗ್ ತೆಗೆದುಕೊಂಡು ಸರಿಹೋಗುತ್ತಾರೆ. ಆದರೆ ಇನ್ನು ಕೆಲವರನ್ನು ಇದು ಸರಿಪಡಿಸಲಾರದಷ್ಟು ಖಿನ್ನತೆಗೆ ದೂಡುತ್ತಿದೆ. ಆತ್ಮಹತ್ಯೆಗೂ ಇದೇ ಕಾರಣವಾಗಬಲ್ಲದು ಎನ್ನುವ ಡಾ.ಅನುರಾಧಾ, ಎಲ್ಲವೂ ಮುಗಿದ ಮೇಲೆ ಗೋಳೋ ಎನ್ನುವ ಬದಲು ಕುಟುಂಬಸ್ಥರು ಆಕೆಗೆ, ಕಚೇರಿಯ ಒತ್ತಡದ ನಡುವೆ ಇನ್ನಷ್ಟು ಒತ್ತಡ ಹೇರದೆ, ಎಲ್ಲ ರೀತಿಯಲ್ಲಿ ನೆರವಾದರೆ ಎಲ್ಲರ ಬದುಕೂ ಸುಂದರವಾಗುತ್ತದೆ ಎನ್ನುತ್ತಾರೆ.

ಮಕ್ಕಳಲ್ಲಾಗುವ ಬದಲಾವಣೆ ಗಮನಿಸಿ...

ಇಂದಿನ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗುತ್ತಿದೆ. ಚಿಕ್ಕ ಚಿಕ್ಕ ವಿಷಯಗಳನ್ನೂ ಸಹಿಸಿಕೊಳ್ಳುವ ತಾಳ್ಮೆ ಮಕ್ಕಳಲ್ಲಿ ಇಲ್ಲದಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ಅವರ ಪಾಲಕರು ಹಾಗೂ ಇಂದಿನ ಶಿಕ್ಷಣ ವ್ಯವಸ್ಥೆ ಎನ್ನುತ್ತಾರೆ ಮನೋವಿಜ್ಞಾನಿಗಳು.

ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವುದು, ಅಕ್ಕ-ಪಕ್ಕದ, ಸಂಬಂಧಿಕರ ಅಥವಾ ತಮ್ಮದೇ ಇತರ ಮಕ್ಕಳ ಜತೆ ಕಂಪೇರ್ ಮಾಡುವುದು, ಹೀಗೇ ಮಾಡಬೇಕು, ಇಷ್ಟೇ ಅಂಕ ಪಡೆಯಬೇಕು, ಇದನ್ನೇ ಓದಬೇಕು, ಅಂಕ ಗಳಿಸಿದರಷ್ಟೇ ಭವಿಷ್ಯ ಎನ್ನುವ ಶಾಲೆಗಳು, ಶಿಕ್ಷಣ ವ್ಯವಸ್ಥೆ ಹಾಗೂ ಪಾಲಕರು ಮಕ್ಕಳ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನುವುದು ಇವರ ಅನಿಸಿಕೆ. ಒಂದೋ ಮಕ್ಕಳನ್ನು ತೀರಾ ಸ್ಟ್ರಿಕ್ಟ್ ಆಗಿ ಬೆಳೆಸುವುದು, ಇಲ್ಲವೇ ತೀರಾ ಸ್ವಾತಂತ್ರ್ಯ ಕೊಟ್ಟು ಬೆಳೆಸುವುದು ಎರಡೂ ಮಕ್ಕಳ ಕೆಟ್ಟ ಭವಿಷ್ಯಕ್ಕೆ ನಾಂದಿ ಹಾಡುತ್ತದೆ ಎನ್ನುತ್ತಾರೆ ತಜ್ಞರು.

ಮಕ್ಕಳಲ್ಲಿ ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ಗುರುತಿಸುವುದು ಹೇಗೆ? ಮಕ್ಕಳಲ್ಲಿ ಈ ಪ್ರವೃತ್ತಿ ತಡೆಗಟ್ಟುವುದು ಹೇಗೆ ಈಬಗ್ಗೆ ವಿವರಿಸಿದ್ದಾರೆ ಮನೋವೈದ್ಯ ಡಾ.ಎ.ಆರ್.ಕೃಷ್ಣಮೂರ್ತಿ.

ಮಕ್ಕಳು ಏಕಾಂಗಿಯಾಗಿ ಇರಲು ಬಯಸುವುದು, ಯಾವುದೋ ಸಮಸ್ಯೆ ಇದ್ದರೂ ಪಾಲಕರ ಜತೆ ಶೇರ್ ಮಾಡದೇ ಇರುವುದು, ತುಂಬ ಹೊತ್ತು ಮೊಬೈಲ್​ನಲ್ಲಿ ಎಂಗೇಜ್ ಆಗಿರುವುದು, ಎಲ್ಲ ಕೆಲಸಗಳಲ್ಲೂ ನಿರಾಸಕ್ತಿ ತೋರುವುದು ಇವೆಲ್ಲವೂ ಮಕ್ಕಳಲ್ಲಿ ಆತ್ಮಹತ್ಯೆ ಟೆಂಡೆನ್ಸಿ ಶುರುವಾಗಿದೆ ಎನ್ನುವುದಕ್ಕೆ ಸೂಚನೆ.

ಮಕ್ಕಳ ಬಗ್ಗೆ ಪಾಲಕರು ಕಾಳಜಿ ತೋರಬೇಕು. ಅವರಿಗೆ ಸ್ಪೂರ್ತಿದಾಯಕ ಕಥೆಗಳನ್ನು ಆಗಾಗ್ಗೆ ಹೇಳುತ್ತಿರಬೇಕು. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ, ಇಂದು ಸಾಧನೆ ಮಾಡಿದವರ ಬಗ್ಗೆ ಸುಮ್ಮನೇ ಹಾಗೆ ಕಥೆಗಳನ್ನು ಹೇಳುತ್ತಿರಿ. ಇವು ಮಕ್ಕಳ ಮನದಾಳದಲ್ಲಿ ನೆಲೆಯೂರಿಬಿಡುತ್ತವೆ. ಮುಂದೆ ಯಾವುದೋ ಕಾರಣಕ್ಕೆ ಆತ್ಮಹತ್ಯೆಯಂಥ ಯೋಚನೆ ಬಂದರೆ, ಈ ಕಥೆಗಳ ಸ್ಪೂರ್ತಿಯಿಂದ ಅವರು ಆ ಕ್ಷಣದಲ್ಲಿ ಕೆಟ್ಟ ಯೋಚನೆಯಿಂದ ಹೊರಕ್ಕೆ ಬರುತ್ತಾರೆ. ಅದೇ ರೀತಿ, ಕರೊನಾ ವೈರಸ್​ನ ಈ ಬಿಕ್ಕಟ್ಟಿನ ದಿನಗಳಲ್ಲಿಯೂ ಇಂಥದ್ದೇ ಡಿಪ್ರೆಷನ್ ಬಹುತೇಕರಿಗೆ ಕಾಡುತ್ತಿದೆ. ಆತಂಕದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಡಾ. ಕೃಷ್ಣಮೂರ್ತಿ.

21ನೇ ಸ್ಥಾನದಲ್ಲಿ ಭಾರತ
ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಭಾರತ ಅತಿ ಹೆಚ್ಚು ಆತ್ಮಹತ್ಯೆ ಪ್ರಮಾಣವನ್ನು ಹೊಂದಿದೆ. ಪ್ರತಿ ಒಂದು ಲಕ್ಷ ಜನರಿಗೆ 16 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಾಗತಿಕ ಮಟ್ಟಕ್ಕೆ ಬಂದರೆ ಭಾರತಕ್ಕೆ ಆತ್ಮಹತ್ಯೆಯಲ್ಲಿ 21ನೇ ಸ್ಥಾನವಿದೆ. ಲುಥಿಯಾನ, ರಷ್ಯಾ, ದಕ್ಷಿಣ ಅಮೆರಿಕದ ಗುಯಾನ ದೇಶಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆೆ. ಭಾರತದ ಒಟ್ಟು ಆತ್ಮಹತ್ಯೆಯ ಪ್ರಮಾಣ ಶೇಕಡ 16.3 ಇದ್ದು, ಇದರಲ್ಲಿ ಪುರುಷರ ಪ್ರಮಾಣ ಶೇ.17.8 ಮತ್ತು ಮಹಿಳೆಯರ ಪ್ರಮಾಣ ಶೇ.14.7.

ಕರ್ನಾಟಕ ನಂ.3

2019ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್​ಸಿಆರ್​ಬಿ) ಅಂಕಿಅಂಶದ ಪ್ರಕಾರ ಮಹಾರಾಷ್ಟ್ರದಲ್ಲಿ ಶೇಕಡ 14.2ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ತಮಿಳುನಾಡಿನ ಆತ್ಮಹತ್ಯೆ ಪ್ರಮಾಣ ಶೇ. 11.7 ಇದ್ದರೆ ಶೇ.9.7ರಷ್ಟು ಪ್ರಮಾಣ ಹೊಂದಿರುವ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಆಪ್ತ ಸಹಾಯವಾಣಿ

ಮಾನಸಿಕವಾಗಿ ಕುಗ್ಗಿರುವವರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ದಿನದ 24 ಗಂಟೆಗಳೂ ಸಹಾಯ ಮಾಡುವ ಮಾನಸಿಕ ಪುನರ್ವಸತಿ ಸಹಾಯವಾಣಿ ‘ಕಿರಣ್’ ಪ್ರಾರಂಭಿಸಿದೆ. ಇದರ ಸಂಖ್ಯೆ 1800-599-0019. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಸೇರಿ 13 ಭಾಷೆಗಳಲ್ಲಿ ಇದು ಲಭ್ಯ.

ಭಾರತದಲ್ಲಿ ಗಂಟೆಗೊಬ್ಬ ವಿದ್ಯಾರ್ಥಿ ಆತ್ಮಹತ್ಯೆ! 2019ರಲ್ಲಿ ಪ್ರತಿ ಒಂದು ತಾಸಿಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಅವಧಿಯಲ್ಲಿ ಒಟ್ಟು 10,335 ಮಂದಿ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದು, ಇದು 25 ವರ್ಷಗಳಲ್ಲೇ ಅತ್ಯಧಿಕ. 1995ರ ಜನವರಿ 1ರಿಂದ 2019ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ  1995-1999 27,359 2000-2004 27,880 2005-2009 30,064 2010-2014 38, 220 2015-2019 48,537

ಖಿನ್ನತೆ ಕಾಡಿದರೆ ಹೀಗೆ ಮಾಡಿ

ಮನಸ್ಸು ಭಾರವಾದಾಗ ಖಿನ್ನತೆಗೆ ಜಾರುವುದು, ಆತ್ಮಹತ್ಯೆಯ ಯೋಚನೆಗಳು ಬರುವುದು ಸಹಜ. ಇಂಥ ಸಂದರ್ಭದಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಮನೋವೈದ್ಯರು ಕೊಟ್ಟಿರುವ ಟಿಪ್ಸ್ ಇಲ್ಲಿದೆ.

* ಮನಸ್ಸು ಭಾರವಾದಾಗ ಒಂಟಿಯಾಗಿ ಇರಲೇಬೇಡಿ.

* ಯಾರ ಬಳಿಯಾದರೂ ಸಮಸ್ಯೆಗಳನ್ನು ಶೇರ್ ಮಾಡಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ. ಯಾರೂ ಇಲ್ಲದಿದ್ದರೆ ಕೊನೆಯ ಪಕ್ಷ ದೇವರ ಮುಂದಾದರೂ ಕೂತು ನಿಮ್ಮ ಮನಸ್ಸಿನ ದುಗುಡವನ್ನು ಹೊರಹಾಕಿ.

* ಮನಸ್ಸು ಅಲ್ಲೋಲ-ಕಲ್ಲೋಲ ಆಗುತ್ತಿದೆ ಎನ್ನಿಸಿದಾಗ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಿ. ಇದು ಆ ಸಂದರ್ಭದಲ್ಲಿ ಕಷ್ಟ ಎನಿಸಿದರೂ ನಿಮಗೆ ಆ ಕ್ಷಣಕ್ಕೆ ಮನಸ್ಸನ್ನು ಪರಿವರ್ತನೆಗೊಳಿಸಬಹುದು.

* ಬಹುಕಾಲದ ಸಮಸೆ್ಯೆಗಳು ಇದ್ದರೆ ತಜ್ಞರ ಜತೆ ಸಮಾಲೋಚನೆ ಮಾಡಿ.

* ಯಾರಾದರೂ ಸಮಸ್ಯೆ ಹೇಳಿಕೊಳ್ಳಲು ಬಂದರೆ, ಇದೇನು ಮಹಾ ಎಂದು ಅಸಡ್ಡೆ ತೋರಬೇಡಿ. ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಸಾಂತ್ವನ ಹೇಳಿ, ಕೊನೆಯ ಪಕ್ಷ ನಾಲ್ಕು ಒಳ್ಳೆಯ ಮಾತನಾಡಿ ಕಳುಹಿಸಿ. ಇಲ್ಲದಿದ್ದರೆ ಇದೇ ಆತ್ಮಹತ್ಯೆಗೆ ಕಾರಣವಾಗಬಹುದು.

ಹಿಂಜರಿಕೆ ಬೇಡ: ಹಿಂದೆಲ್ಲ ಕೌನ್ಸೆಲಿಂಗ್ಗೆ ಅಥವಾ ಮನೋವೈದ್ಯರ ಬಳಿ ಹೋಗಲು ಹಿಂಜರಿಯುತ್ತಿದ್ದರು. ಅಥವಾ ಯಾರನ್ನಾದರೂ ಹೋಗಿ ಎಂದರೆ ‘ನಾವೇನು ಹುಚ್ಚರೆ’ ಎಂದು ಪ್ರಶ್ನಿಸುತ್ತಿದ್ದರು. ಆದರೆ ಯಾಂತ್ರಿಕ ಬದುಕಿನ ಒತ್ತಡದ ಪರಿಣಾಮ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲೊಂದು ರೀತಿಯಲ್ಲಿ ಕೌನ್ಸೆಲಿಂಗ್ ಅಗತ್ಯವಿದೆ. ಧ್ಯಾನ, ಯೋಗ, ಪ್ರಾಣಾಯಾಮಗಳ ಮೂಲಕ ಅಥವಾ ಆಪ್ತ ಸಮಾಲೋಚನೆ ಮಾಡುವ ಮೂಲಕ ಕೌನ್ಸೆಲರ್​ಗಳು ಮನಸ್ಸಿನ ಭಾರ, ದುಗುಡಗಳನ್ನು ಕಳೆಯುತ್ತಾರೆ. ಇದರಿಂದಾಗಿ ಮನಸ್ಸು ನಿರಾಳವಾಗಿ, ಆತ್ಮಹತ್ಯೆಯಂಥ ಯೋಚನೆ ದೂರವಾಗಲು ನೆರವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೌನ್ಸೆಲಿಂಗ್ ಪಡೆಯಲು ಹಿಂಜರಿಕೆ ಸಲ್ಲ.

ಹಿನ್ನೆಲೆ: ವಿವಿಧ ಕಾರಣಗಳಿಂದಾಗಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯುವುದಕ್ಕಾಗಿ, ‘ಆತ್ಮಹತ್ಯಾ ತಡೆ ದಿನ’ವನ್ನು 2003ರಿಂದ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆ ಸಂಸ್ಥೆ ಮತ್ತು ವಿಶ್ವ ಮಾನಸಿಕ ಆರೋಗ್ಯಗಳ ಒಕ್ಕೂಟ ಜಂಟಿಯಾಗಿ ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕುರಿತಂತೆ ತಿಳಿವಳಿಕೆ ನೀಡುತ್ತವೆ. ಪ್ರತಿವರ್ಷವೂ ಒಂದೊಂದು ಘೊಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ‘ಆತ್ಯಹತ್ಯೆ ತಡೆಗಟ್ಟಲು ಎಲ್ಲರೂ ಒಟ್ಟಾಗಿ ದುಡಿಯೋಣ’ ((Working Together To Prevent Suicide) ಎಂಬ 2019ರ ಘೊಷವಾಕ್ಯವನ್ನೇ ಈ ವರ್ಷವೂ ಮುಂದುವರಿಸಲಾಗಿದೆ.

ಯುವಜನತೆಯಲ್ಲೇ ಅಧಿಕ ಯುವಜನತೆಯಲ್ಲೇ ಆತ್ಮಹತ್ಯೆ ಪ್ರಮಾಣ ಹೆಚ್ಚಿರುವುದು ಕಳವಳಕಾರಿ. ಡಬ್ಲ್ಯುಎಚ್​ಒ ವರದಿ ಪ್ರಕಾರ, ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ 15ರಿಂದ 29 ವಯೋಮಾನದವರ ಪ್ರಮಾಣ ಶೇಕಡ 36ರಷ್ಟು. ಪ್ರೇಮವೈಫಲ್ಯ, ಕೌಟುಂಬಿಕ ಸಮಸ್ಯೆ, ಹಣಕಾಸು ಸಮಸ್ಯೆ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವುದು ಸೇರಿ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕೀಳರಿಮೆ ಮೊದಲಾದ ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ.

ಬದುಕಿನ ಮಂತ್ರ * ಸಂಬಂಧಗಳಲ್ಲಿ ಆತ್ಮೀಯತೆ: ಆಪ್ತರು ತೊರೆದಾಗ, ಅಗಲಿದಾಗ ಹೆಚ್ಚಿನ ಜನರು ಖಿನ್ನತೆಗೆ ಒಳಗಾಗುವುದು ಸಹಜ. ಅಂಥವರನ್ನು ಖಿನ್ನತೆಯಿಂದ ಹೊರತರಲು ಮನೆಯವರು ಹಾಗೂ ಸ್ನೇಹಿತರು ಪ್ರಯತ್ನಿಸಬೇಕು. ಆತ್ಮೀಯರೊಂದಿಗೆ ದುಃಖದುಮ್ಮಾನಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಬೆನ್ನಿಗೆ ನಿಲ್ಲುವ ಒಬ್ಬಿಬ್ಬರಾದರೂ ಆತ್ಮೀಯರು ನಮಗಿರುವಂತೆ ನೋಡಿಕೊಳ್ಳಬೇಕು. * ಜೀವನಶೈಲಿಯಲ್ಲಿ ಬದಲಾವಣೆ: ಸರಿಯಾದ ಊಟ ಮತ್ತು ನಿದ್ದೆಯಿಂದ ಒತ್ತಡವನ್ನು ದೂರವಿಡಬಹುದು. ಅಲ್ಲದೆ, ವ್ಯಾಯಾಮ ಮತ್ತು ಕೆಲ ಆಟಗಳು ಇಂತಹ ಮನಸ್ಥಿತಿಯನ್ನು ಹೋಗಲಾಡಿಸಲು ಸಹಕಾರಿ. ಉತ್ತಮ ಸಂಬಂಧಗಳು ಮತ್ತು ಸರಿಯಾದ ಜೀವನಶೈಲಿಯ ಅಳವಡಿಕೆ ಸಮಸ್ಯೆಯಿಂದ ಹೊರಬರಲು ಸಹಕಾರಿ. * ಮಕ್ಕಳನ್ನು ದೂರವಿಡಿ: ಚಿಕ್ಕ ವಯಸ್ಸಿನ ಮಕ್ಕಳನ್ನು ಸಾಂಸಾರಿಕ ತಾಪತ್ರಯಗಳಿಂದ ದೂರವಿಡಬೇಕು. ಅಪ್ಪ, ಅಮ್ಮನ ಜಗಳದಂತಹ ಅಂಶಗಳು ಎಳೆಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ದೊಡ್ಡವರಾದ ಮೇಲೆ ಇವರಲ್ಲಿ ಆತ್ಮಹತ್ಯೆ ಮನಸ್ಥಿತಿ ಮೂಡಬಹುದು. * ಸಹಾಯವಾಣಿ: ತುರ್ತು ಪರಿಸ್ಥಿತಿಗಳಿಗೆ ಇರುವಂತೆ ಆತ್ಮಹತ್ಯೆ ಮನಸ್ಥಿತಿ ಉಳ್ಳವರಿಗಾಗಿಯೂ ಸಾರ್ವಜನಿಕ ಸಹಾಯವಾಣಿಗಳ ಅಗತ್ಯವಿದೆ. ಈಗಾಗಲೇ ಇದಕ್ಕಾಗಿ ಸರ್ಕಾರಗಳು ಹಾಗೂ ಕೆಲ ಎನ್​ಜಿಒಗಳು ಹೆಲ್ಪ್​ಲೈನ್ ತೆರೆದಿವೆ. ಆದರೆ, ಸಹಾಯವಾಣಿಗಳನ್ನು ಸಂರ್ಪಸುವ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಅರಿವು ಮೂಡಿಸಬೇಕಿದೆ. * ಆತ್ಮಹತ್ಯೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಿ, ಇದರ ನಿಯಂತ್ರಣಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net