

ತೆಲಂಗಾಣ: ಕೊವಿಡ್-19 ಸೋಂಕಿಗೆ ಒಳಗಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಪತ್ರಕರ್ತನಿಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಸಹಾಯ ಮಾಡಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ಕೊವಿಡ್-19 ಸೋಂಕಿಗೆ ಒಳಗಾಗಿದ್ದ. ತೆಲಂಗಾಣದ ಜಂಗಾಂವ್ ಜಿಲ್ಲೆಯ ಮಚುಪಹಾದ್ ಗ್ರಾಮದ ನಿವಾಸಿ ಈತ. ಪತ್ರಕರ್ತನಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಮನೆಯವರನ್ನೆಲ್ಲ ಐಸೋಲೇಟ್ ಮಾಡಲಾಗಿತ್ತು. ಆ ಊರಿನವರಂತೂ ಪತ್ರಕರ್ತನ ಮನೆಯ ಬಳಿಯೂ ಸುಳಿಯುತ್ತಿರಲಿಲ್ಲ. ಹೊರಗಿನವರಿಗೂ ಅಲ್ಲಿಗೆ ಪ್ರವೇಶ ನಿಷೇಧಿಸಿದ್ದರು. ಇದರಿಂದ ಪತ್ರಕರ್ತನ ಕುಟುಂಬದವರಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದೂ ಕಷ್ಟವಾಗಿತ್ತು.
ಬೇರೆ ಏನೂ ತೋಚದ ಪತ್ರಕರ್ತ ಟ್ವಿಟರ್ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದು. ಹಾಗೇ ಟಿಆರ್ಎಸ್ ನಾಯಕಿ, ಸಂಸದೆ ಕವಿತಾ ಅವರನ್ನೂ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: VIDEO: ಸರ್ಫಿಂಗ್ ಆಡಲು ಹೋಗಿದ್ದ ಕರೊನಾ ಸೋಂಕಿತಳನ್ನು ಬೆನ್ನಟ್ಟಿದ ಪೊಲೀಸರು; ಆಕೆ ಮಾಡಿದ್ದೇನು?
ಪತ್ರಕರ್ತ ಟ್ವೀಟ್ ಮಾಡಿದ ಒಂದೇ ತಾಸಿನಲ್ಲಿ ಅವರ ಮನೆಗೆ ಅಗತ್ಯ ವಸ್ತುಗಳೆಲ್ಲ ಬಂದಿವೆ. ಅಷ್ಟೇ ಅಲ್ಲ, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ತೆಲಂಗಾಣ ಮೀಡಿಯಾ ಅಸೋಸಿಯೇಟ್ನ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದಾರೆ. ಕೊವಿಡ್-19 ಸೋಂಕಿತ ಪತ್ರಕರ್ತರಿಗೆ ನೆರವಾಗಿ ಎಂದೂ ಸೂಚಿಸಿದ್ದಾರೆ.
ಕೆ.ಕವಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕರೊನಾ ಲಾಕ್ಡೌನ್ ಸಮಯದಲ್ಲಿ ಹಲವರಿಗೆ ಸಹಾಯ ಹಸ್ತ ಚಾಚಿದ್ದಾರೆ. ವಲಸೆ ಕಾರ್ಮಿಕರು ಅವರ ಊರುಗಳಿಗೆ ಸೇರಲೂ ಸಾರಿಗೆ ವ್ಯವಸ್ಥೆ ಮಾಡಿದ್ದರು.(ಏಜೆನ್ಸೀಸ್)