

ಬೆಂಗಳೂರು: ವಿಮಾನದಲ್ಲಿ ನೀಡುವ ಆಹಾರದಲ್ಲಿ ಜಿರಳೆ ಕಾಣಿಸಿಕೊಳ್ಳುವುದು, ಕೆಲವು ಪ್ರಯಾಣಿಕರ ಅಸಭ್ಯ ವರ್ತನೆ ಇತ್ಯಾದಿ ಮೂಲಕ ವಿಮಾನ ಪ್ರಯಾಣದ ವಿಚಾರಗಳು ಇತ್ತೀಚೆಗೆ ನಕಾರಾತ್ಮಕ ಸುದ್ದಿಗೆ ಒಳಗಾಗುತ್ತಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಚೇಳು ಕಡಿತಕ್ಕೆ ಒಳಗಾಗಿದ್ದಾರೆ. ಇವರು ಏರ್ ಇಂಡಿಯಾ ವಿಮಾನದಲ್ಲಿ ನವದೆಹಲಿಯಿಂದ ನಾಗಪುರಕ್ಕೆ ತೆರಳುವಾಗ ಈ ಘಟನೆ ನಡೆದಿದೆ. ಏರ್ ಇಂಡಿಯಾದ ಎಐ-630 ವಿಮಾನದಲ್ಲಿ ಏ. 23ರಂದು ಈ ಪ್ರಕರಣ ನಡೆದಿದೆ.
ಏ. 23ರ ಎಐ 630 ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಚೇಳು ಕಚ್ಚಿದ ದುರದೃಷ್ಟಕರ ಹಾಗೂ ಅತಿವಿರಳ ಘಟನೆ ನಡೆದಿದೆ. ಲ್ಯಾಂಡ್ ಆಗುತ್ತಿದ್ದಂತೆ ಆಕೆಯನ್ನು ವೈದ್ಯರು ಪರೀಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆ ಚೇತರಿಸಿಕೊಂಡಿದ್ದಾರೆ. ನಮ್ಮ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗುವುದರಿಂದ ಬಿಡುಗಡೆ ಆಗುವವರೆಗೂ ಆಕೆಯೊಂದಿಗೆ ಇದ್ದು ಕಾಳಜಿ ವಹಿಸಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆ ಬಳಿಕ ವಿಮಾನವನ್ನು ಸಂಪೂರ್ಣ ಪರಿಶೀಲಿಸಿ ಸ್ವಚ್ಛಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ಚೇಳು ಪತ್ತೆಯಾಗಿದೆ ಎಂದು ಒಪ್ಪಿಕೊಂಡಿರುವ ಏರ್ ಇಂಡಿಯಾ, ಪ್ರಯಾಣಿಕರಿಗೆ ಆಗ ಅನನುಕೂಲದ ಕುರಿತು ವಿಷಾದ ವ್ಯಕ್ತಪಡಿಸಿದೆ. ಈ ಹಿಂದೆ ವಿಮಾನದಲ್ಲಿ ಜಿರಳೆ, ಇಲಿ, ಹಕ್ಕಿ, ಕೀಟಗಳು ಕಂಡುಬಂದಿದ್ದರೂ ಈ ರೀತಿ ಚೇಳು ಕಚ್ಚಿದ್ದು ಇದೇ ಮೊದಲು ಎನ್ನಲಾಗುತ್ತಿದೆ.