ಈ ಕಾರ್ 'ರೇಂಜೇ' ಬೇರೆ!: ಬ್ಯಾಟರಿ ಫುಲ್ ಚಾರ್ಜ್ ಮಾಡಲು ಹತ್ತೇ ನಿಮಿಷ, ಒಮ್ಮೆ ಚಾರ್ಜ್​ ಮಾಡಿದ್ರೆ 1,200 ಕಿ.ಮೀ. ಪ್ರಯಾಣ!

EV Toyota
Published on

ನವದೆಹಲಿ: ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳತ್ತ ಒಲವು ಹೆಚ್ಚಾಗಿದೆ. ದ್ವಿಚಕ್ರವಾಹನ, ಕಾರು ಮಾತ್ರವಲ್ಲದೆ, ಬಸ್​​ಗಳೂ ಬ್ಯಾಟರಿಯಿಂದ ಚಲಿಸಲಾರಂಭಿಸಿವೆ. ಆದರೆ ಎಲೆಕ್ಟ್ರಿಕ್ ವಾಹನಗಳ ಪೈಕಿ ಅತಿಮುಖ್ಯವಾದದ್ದು ಎಂದರೆ ರೇಂಜ್ ಹಾಗೂ ಚಾರ್ಜಿಂಗ್ ಸಮಯ. ಇವರೆರಡರ ಕಾರಣಕ್ಕೆ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದಾರೆ.

ಆದರೆ ಇಲ್ಲೊಂದು ಕಂಪನಿ ತಮ್ಮ ಕಾರಿನ ರೇಂಜೇ ಬೇರೆ ಎನ್ನಲಾರಂಭಿಸಿದೆ. ಅರ್ಥಾತ್, ಈ ಕಾರಿನ ಬ್ಯಾಟರಿ ಫುಲ್ ಚಾರ್ಜ್ ಮಾಡಲು ಬರೀ ಹತ್ತೇ ನಿಮಿಷ ಸಾಕು. ಮಾತ್ರವಲ್ಲ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ಬ್ಯಾಟರಿಯಿಂದ ಈ ಕಾರು 1,200 ಕಿ.ಮೀ. ದೂರ ಚಲಿಸಬಲ್ಲದು. ಇಂಥದ್ದೊಂದು ಕಾರನ್ನು ರೋಡಿಗಿಳಿಸಲಿರುವುದಾಗಿ ಟೊಯೊಟ ಕಂಪನಿ ಹೇಳಿಕೊಂಡಿದೆ.

ಜಪಾನಿನ ದಿಗ್ಗಜ ಆಟೋಮೊಬೈಲ್​ ಕಂಪನಿಗಳಲ್ಲಿ ಒಂದಾಗಿರುವ ಟೊಯೊಟ, ಸಾಲಿಡ್​ ಸ್ಟೇಟ್ ಬ್ಯಾಟರಿಯಿಂದ ಚಲಿಸಲಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡಲು ಯೋಜನೆ ಹಾಕಿಕೊಂಡಿದೆ. ಬರೀ ಹತ್ತೇ ನಿಮಿಷಗಳಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಆಗಲಿರುವ ಈ ಕಾರಿನ ರೇಂಜ್ 1,200 ಕಿ.ಮೀ. ಅಂದರೆ ಇದು ಒಂದು ಸಲದ ಚಾರ್ಜ್​ನಿಂದ 1,200 ಕಿ.ಮೀ. ದೂರ ಚಲಿಸಲಿದೆ ಎಂದು ಕಂಪನಿ ಹೇಳಿದೆ. 2027ರ ಸುಮಾರಿಗೆ ಕಂಪನಿ ಈ ಕಾರನ್ನು ಮಾರುಕಟ್ಟೆಗೆ ಬಿಡುವ ಗುರಿ ಇರಿಸಿಕೊಂಡಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net