

ನವದೆಹಲಿ: ಈಗ ಎಲ್ಲೆಂದರಲ್ಲಿ ಹೃದಯಾಘಾತದ ಸುದ್ದಿ ಕೇಳಿ ಬರುತ್ತಿದೆ. ಚಿಕ್ಕವರು-ದೊಡ್ಡವರು, ಆರೋಗ್ಯವಂತರು ಎನ್ನುವ ಭೇದವಿಲ್ಲದೆ ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದಿನ್ನೂ ನಿಗೂಢವಾಗಿದೆ. ಈ ಮಧ್ಯೆ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಉಪಾಯವೊಂದು ಬಹಿರಂಗಗೊಂಡಿದೆ.
ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಜತೆಗೆ ಸ್ಟೆಂಟ್ ಅಳವಡಿಸಿಕೊಂಡಿರುವ ಹೃದ್ರೋಗಿಗಳ ಸಂಕೀರ್ಣತೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಉಪಾಯ ಪ್ರಯೋಜನಕಾರಿ ಎಂಬುದು ಕಂಡುಬಂದಿದೆ. ಲಂಡನ್ನ ಕ್ವೀನ್ ಮೇರಿ ಯೂನಿವರ್ಸಿಟಿಯವರು ಈ ಉಪಾಯವನ್ನು ಕಂಡುಹಿಡಿದಿದ್ದಾರೆ.
ಅಂದಹಾಗೆ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸುವ ಈ ಉಪಾಯ ಬೇರೇನೂ ಅಲ್ಲ, ಬೀಟ್ರೂಟ್ ಜ್ಯೂಸ್. ನಿಜ.. ಬೀಟ್ರೂಟ್ ಜ್ಯೂಸ್ ಮೂಲಕ ಹೃದಯಾಘಾತದ ಸಾಧ್ಯತೆಯನ್ನು ಬಹಳಷ್ಟು ತಗ್ಗಿಸಬಹುದಂತೆ.
ಪ್ರತಿದಿನ ಬರೀ 70 ಎಂ.ಎಲ್.ನಷ್ಟು ಬೀಟ್ರೂಟ್ ಜ್ಯೂಸನ್ನು ಕುಡಿದರೆ ಅಂಥವರಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಎಂದರೂ ಅರ್ಧಕ್ಕರ್ಧದಷ್ಟು ತಗ್ಗುತ್ತದೆ. ಮಾತ್ರವಲ್ಲ, ಸ್ಟೆಂಟ್ ಹಾಕಿಸಿಕೊಂಡ ಹೃದ್ರೋಗಿಗಳು ಕನಿಷ್ಠ ಆರು ತಿಂಗಳ ವರೆಗೆ ಬೀಟ್ರೂಟ್ ಜ್ಯೂಸ್ ಕುಡಿದರೆ ಸ್ಟೆಂಟ್ನಿಂದ ಉಂಟಾಗಬಹುದಾದ ಸಂಕೀರ್ಣತೆಗಳು ಕೂಡ ದೂರವಾಗುತ್ತವೆ ಎಂಬುದಾಗಿ ಕ್ವೀನ್ ಮೇರಿ ಯೂನಿವರ್ಸಿಟಿ ತಿಳಿಸಿದೆ.
ಬೀಟ್ರೂಟ್ ಜ್ಯೂಸ್ನಲ್ಲಿರುವ ನೈಟ್ರೇಟ್ಸ್ ರಕ್ತನಾಳವನ್ನು ವಿಕಸಿತಗೊಳಿಸುವ ಜತೆಗೆ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ರಕ್ತದೊತ್ತಡ ಹಾಗೂ ಆ ಸಂಬಂಧಿತ ಹಾನಿಗಳನ್ನು ತಡೆದು ಹೃದಯಾಘಾತದ ಸಾಧ್ಯತೆಗಳನ್ನು ದೂರಗೊಳಿಸುತ್ತದೆ ಎಂದು ಯೂನಿವರ್ಸಿಟಿ ತಿಳಿಸಿದೆ.