More

    ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಶೌಚಗೃಹದ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದಲೂ ಇರುವ ಈ ಸಮಸ್ಯೆ ಕುರಿತು ಆಗೊಮ್ಮೆ ಈಗೊಮ್ಮೆ ಅಲ್ಲೊಬ್ಬರು ಇಲ್ಲೊಬ್ಬರು ಬಹಿರಂಗವಾಗಿ ಕಷ್ಟ ತೋಡಿಕೊಳ್ಳುತ್ತಿರುತ್ತಾರೆ. ಅದಾಗ್ಯೂ ಸಮಸ್ಯೆ ಬಗೆಹರಿದಿಲ್ಲ.

    ರಾಜ್ಯದ ಅತ್ಯಂತ ಎತ್ತರ ಪ್ರದೇಶ, ಅಸಂಖ್ಯಾತ ಜನರು ಪ್ರವಾಸಕ್ಕೆ ಬಂದು ಹೋಗುವ, ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಬಾಬಾ ಬುಡನ್​ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಪ್ರದೇಶಕ್ಕೆ ಭೇಟಿ ನೀಡಿದ್ದ ಜಡೆಮ್ಮ ಎಂಬ ಮಹಿಳೆಯೊಬ್ಬರು ಅಲ್ಲಿ ಸಾರ್ವಜನಿಕ ಶೌಚವ್ಯವಸ್ಥೆ ಇರದೆ ಪರದಾಡಿದ್ದರು. ಶೌಚಕ್ಕೆ ಹೋಗಲು ತಾವು ಪಟ್ಟ ಕಷ್ಟದ ಕುರಿತು ಈಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇ ಪತ್ರ ಬರೆದು ವಿವರಿಸಿದ್ದಾರೆ. ಮಹಿಳೆಯ ಕಷ್ಟ ಮಹಿಳೆಗೇ ಅರ್ಥವಾಗುವಂಥದ್ದು ಎಂಬ ಹಿನ್ನೆಲೆಯಲ್ಲಿ ಅವರು ರಾಷ್ಟ್ರಪತಿಗೆ ಈ ಪತ್ರ ಬರೆದಿದ್ದು, ಇನ್ನಾದರೂ ಇಂಥ ಸಮಸ್ಯೆಗಳು ಬಗೆಹರಿದಾವು ಎಂಬ ಆಶಯ ಹೊಂದಿದ್ದಾರೆ.

    ಇದನ್ನೂ ಓದಿ: ವಿಂಗ್ ಹೆಸರಲ್ಲಿ ಅಮಾಯಕ ಹಿಂದು ಹುಡುಗರನ್ನು ತಡೆದರೆ ಪರಿಣಾಮ ನೆಟ್ಟಗಿರಲ್ಲ: ವಜ್ರದೇಹಿ ಸ್ವಾಮೀಜಿ

    ಜಡೆಮ್ಮ ಬರೆದ ಪತ್ರ ಹೀಗಿದೆ..

    ಘನವೆತ್ತ ರಾಷ್ಟ್ರಪತಿಯವರಿಗೆ,
    ರಾಷ್ಟ್ರಪತಿ ಭವನ, ನವದೆಹಲಿ, 110004

    ದೇಶದ ಪ್ರಥಮ ಪ್ರಜೆಯಾದ ಘನವೆತ್ತ ರಾಷ್ಟ್ರಪತಿ ಶ್ರೀಮತಿ ದೌಪದಿ ಮುರ್ಮುರವರಿಗೆ ನನ್ನ ಸಿರಿಗನ್ನಡದ ನಮಸ್ಕಾರಗಳು, ಬುಡಕಟ್ಟು ಸಮುದಾಯದಿಂದ ಬಂದು, ದೇಶದ ಅತ್ಯುನ್ನತ ಸ್ಥಾನಕ್ಕೆ ಹೋಗಿರುವುದು ನನ್ನಂತ ಸಾಮಾನ್ಯ ಮಹಿಳೆಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕ.

    ಈ ಪತ್ರದ ಮೂಲ ಮತ್ತು ಮೊದಲ ಉದ್ದೇಶ ಏನೆಂದರೆ ನನ್ನಂತ ಸಾಮಾನ್ಯ ಮಹಿಳೆಯರ ವೇದನೆಗಳನ್ನು ನಿವೇದಿಸಿಕೊಳ್ಳುವುದಾಗಿದೆ.

    ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರಿನ ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಕುಟುಂಬ ಸಮೇತ ಭೇಟಿ ಕೊಟ್ಟೆವು. ಬಾಬಾ ಬುಡನ್‌ಗಿರಿಯಲ್ಲಿ ಮೂತ್ರವಿಸರ್ಜನೆಯ ಒತ್ತಡ ಆರಂಭವಾಯಿತು, ಆದರೆ ಆ ಗಿರಿಯಲ್ಲಿ ಎಲ್ಲಿಯೂ ಶೌಚಾಲಯಗಳು ಇರಲಿಲ್ಲ. ಆಗಲಿ ಎಂದು ಆ ಒತ್ತಡವನ್ನು ತಡೆದುಕೊಂಡು ಮುಳ್ಳಯ್ಯನಗಿರಿ ಹತ್ತಿದ ಮೇಲೆ ಅಲ್ಲಿ ಶೌಚಾಲಯಕ್ಕೆ ಹುಡಿಕಿದೆ, ಅಲ್ಲಿಯೂ ಇಲ್ಲ. ಸೀತಾಳಯ್ಯನ ಗಿರಿಯಲ್ಲಿ ಹುಡುಕಿದೆ, ಅಲ್ಲಿಯೂ ಇಲ್ಲ.

    ಕ್ಷಣಕ್ಷಣಕ್ಕೂ ಮೂತ್ರ ವಿಸರ್ಜನೆಯ ಒತ್ತಡ ಹೆಚ್ಚಾಗುತ್ತಿತ್ತು. ಆದರೆ ಎಲ್ಲಿಯೂ ಶೌಚಾಲಯ ಇಲ್ಲ. ಕೊನೆಗೆ ನಾಚಿಕೆ ಮತ್ತು ಅವಮಾನವನ್ನು ಸಹಿಸಿಕೊಂಡು ಬಯಲಿನಲ್ಲಿ ದೇಹದ ಒತ್ತಡವನ್ನು ನಿವಾರಿಸಿಕೊಂಡೆ.

    ನನ್ನದು ಆ ಧರ್ಮ, ಈ ಧರ್ಮ, ಇದು ನನ್ನ ದೇವರು, ನಿನ್ನ ದೇವರು ಎಂದು ಬಡಿದಾಡಿಕೊಳ್ಳುವ ಈ ಜನರು, ಎಲ್ಲರಿಗೂ ಬೇಕಾಗಿರುವ ಶೌಚಾಲಯದ ಕಡೆ ದಿವ್ಯನಿರ್ಲಕ್ಷ್ಯ ವಹಿಸಿರುವುದನ್ನು ನೋಡಿದರೆ ತುಂಬಾ ಖೇದವಾಗುತ್ತದೆ. ದೇಹದಲ್ಲಿ ಒತ್ತಡ ಆರಂಭವಾದಾಗ ನಾವು ಯಾವ ಧರ್ಮ ಎನ್ನುವುದನ್ನು ಮರೆತು, ಮನುಷ್ಯ ಸಹಜ ಭಾವನೆಗಳಿಗೆ ಒಳಗಾಗಿ, ಒತ್ತಡವನ್ನು ನಿವಾರಿಸಿಕೊಳ್ಳುತ್ತೇವೆ. ಪ್ರಪಂಚದ ಸಾರ್ವಕಾಲಿಕ, ದೇಶಾತೀತ ಮತ್ತು ಕಾಲಾತೀತ ಜಾತ್ಯಾತೀತ ಸ್ಥಳ ಇದ್ದರೆ, ಅದು ಶೌಚಾಲಯ, ಎಲ್ಲಾ ಧರ್ಮದವರು ಉಪಯೋಗಿಸುವುದು ಒಂದೇ ಸ್ಥಳ, ಅದು ಶೌಚಾಲಯ.

    ತಾವು ನನ್ನಂತೆ ಮಹಿಳೆ, ಆದರೆ ನನಗಿರುವ ಕಷ್ಟಗಳು ನಿಮಗೆ ಇರಲಾರವು, ಯಾಕೆಂದರೆ ನೀವು ಅಧಿಕಾರದಲ್ಲಿ ಇರುವವರು, ಕೈಗೊಬ್ಬರು ಕಾಲಿಗೊಬ್ಬರು ಸೇವೆ ಮಾಡಲು ಇರುತ್ತಾರೆ. ಆದರೆ ನಮಗೆ ಶೌಚಾಲಯಗಳೇ ಸಿಗದಿರುವುದು. ಅದರಲ್ಲಿ ಪ್ರೇಕ್ಷಣೀಯ ಸ್ಥಳವಾದ ಬಾಬಾಬುಡನ್ ಗಿರಿಯಲ್ಲಿ ಶೌಚಾಲಯ ಇಲ್ಲದಿರುವುದು ನನ್ನಂತ ಅನೇಕ ಮಹಿಳೆಯರ ಖಾಸಗಿತನ ಮತ್ತು ಘನತೆಗೆ ಚ್ಯುತಿ ಬಂದಿರುತ್ತದೆ.

    ನೈಸರ್ಗಿಕ ಕರೆಗಳ ಒತ್ತಡವನ್ನು, ನಿಮಗಿಂತ ಚೆನ್ನಾಗಿ ಅರಿತವರು ಬೇರೆ ಯಾರೂ ಇರುವುದಿಲ್ಲ. ಯಾಕೆಂದರೆ ಮಹಿಳೆಯರ ಕಷ್ಟ ಮಹಿಳೆಯರಿಗೆ ತಿಳಿದಿರುತ್ತದೆ.

    ಒಂದೇ ಒಂದು ಶೌಚಾಲಯ ಇಲ್ಲದಿರುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ನಾವಿನ್ನು ಶೌಚಾಲಯದ ಕುರಿತು ಮಾತನಾಡುತ್ತಿದ್ದೇವೆ, ಬೇರೆ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬ್ಲಾಕ್​ಚೈನ್ ಟೆಕ್ನಾಲಜಿ, ಇಂಡಸ್ಟ್ರಿ 4.0 ಕುರಿತು ಮಾತನಾಡುತ್ತಿವೆ.

    ಘನವೆತ್ತ ರಾಷ್ಟ್ರಪತಿಗಳೇ, ಪ್ರತಿವರ್ಷ ಲಕ್ಷಾಂತರ ಜನಗಳು ಭೇಟಿ ನೀಡುವ ಈ ಮೂರು ಬೆಟ್ಟಗಳಲ್ಲಿ ಈ ಕೂಡಲೇ ಶೌಚಾಲಯಗಳನ್ನು ನಿರ್ಮಿಸುವಂತೆ ಆದೇಶ ಮಾಡಿ. ಮಂಗಳನ ಅಂಗಳವನ್ನು ತಲುಪಿರುವ ನಾವು ಮುಳ್ಳಯ್ಯನಗಿರಿಯಲ್ಲಿ ಶೌಚಾಲಯ ನಿರ್ಮಿಸದೇ ಇರುವುದು ದುರಂತ.

    ಬೇಗ ಶೌಚಾಲಯ ನಿರ್ಮಾಣ ಆಗುವುದರಿಂದ ಹಲವು ಜನರ ಯಾತನೆಗೆ ಕೊನೆ ಬೀಳುತ್ತದೆ. ಸಾಮಾನ್ಯ ಜನರ ಈ ಸಂಕಷ್ಟವನ್ನು ತಾವು ತಕ್ಷಣ ಬಗೆಹರಿಸುತ್ತೀರಿ ಎಂಬ ಭರವಸೆ ಇದೆ. ಮೂರು ಬೆಟ್ಟಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ದೇವರ ಕೃಪೆಗೆ ಪಾತ್ರರಾಗಿ.

    ಪ್ರಪಂಚದಲ್ಲಿ ಭಾರತ ಡಯಾಬಿಟಿಸ್‌ನ ರಾಜಧಾನಿಯಾಗಿದೆ. ಮಧುಮೇಹದ ರೋಗಿಗಳು ಸಹ ಶೌಚಾಲಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಇಲ್ಲಿ ಶೌಚಾಲಯ ನಿರ್ಮಿಸಲು ತಾವು ದೃಢ ಸಂಕಲ್ಪ ಮಾಡಿದರೆ, ಕರ್ನಾಟಕದ ಜನತೆ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ.

    ಜೈ ಭುವನೇಶ್ವರಿ
    ಇಂತಿ ಸಾಮಾನ್ಯ ಮಹಿಳೆ
    ಜಡೆಮ್ಮ

    ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts