

ಬೆಂಗಳೂರು: ಮುಖ್ಯಮಂತ್ರಿಯನ್ನು ಪದೇಪದೆ ಮುಜುಗರಕ್ಕೆ ತಳ್ಳುವ ಕಾರ್ಯತಂತ್ರವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದುವರಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ, ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಹಣ ಬಿಡುಗಡೆ ವಿಚಾರ ಪ್ರಸ್ತಾಪಿಸಿದ ಯತ್ನಾಳ್ ಮುಖ್ಯಮಂತ್ರಿಯನ್ನು ಕುಟುಕಿದರು. ವಿಜಯಪುರ- ಬಾಗಲಕೋಟೆ ಪ್ರವಾಸೋದ್ಯಮ, ತೋಟಗಾರಿಕೆ ಉತ್ಪನ್ನಕ್ಕೆ ಪ್ರಸಿದ್ಧ. ಬಾದಾಮಿ- ಐಹೊಳೆ- ಪಟ್ಟದಕಲ್ಲಿನಂತಹ ಪ್ರವಾಸಿ ತಾಣವಿದೆ. ಪ್ರಪಂಚದ ಏಳು ವಿಸ್ಮಯದಲ್ಲಿ ಒಂದು ಇಲ್ಲೇ ಇದೆ. ಇಂತಹ ಊರಿನ ವಿಮಾನ ನಿಲ್ದಾಣಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಕಾರ್ಗೊ ಇಲ್ಲ, ದೊಡ್ಡ ವಿಮಾನ ಇಳಿಯುವ ವ್ಯವಸ್ಥೆ ಮಾಡುತ್ತಿಲ್ಲ. ಶಿವಮೊಗ್ಗಕ್ಕಾದರೆ ರಾತ್ರಿಯೂ ವಿಮಾನ ಇಳಿಯುವ ವ್ಯವಸ್ಥೆ, ಕಾರ್ಗೊ ಸಹಿತ ದೊಡ್ಡ ವಿಮಾನಕ್ಕೆ ಅವಕಾಶವಾಗುವಂತೆ ಅವಕಾಶ ಮಾಡಿಕೊಳ್ಳಲಾಗಿದೆ. ಇದು ತಾರತಮ್ಯ. ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ ಎಂದು ಕಿಡಿಕಾರಿದರು. ಇದನ್ನೂ ಓದಿರಿ ಇದೇ ಗ್ಯಾಂಗ್ ಕೈಯಲ್ಲಿದೆ ಕಾಂಗ್ರೆಸ್ ನಾಯಕರ ಸಿಡಿ! ಲಕ್ಷ ಲಕ್ಷ ಕೊಟ್ಟು ಬಚಾವಾದ ಆ ನಾಯಕರು ಯಾರು ಗೊತ್ತಾ?
ಈ ಸರ್ಕಾರ ಉತ್ತರ ಕರ್ನಾಟಕದಿಂದ ರಚನೆಯಾಗಿದೆ. ಉತ್ತರ ಕರ್ನಾಟಕದ ಜನರನ್ನು ಕೆರಳಿಸಬೇಡಿ ಎಂದ ಯತ್ನಾಳ್, ನಾನು ಪ್ರಶ್ನೆ ಕೇಳುವಾಗ ಸಿಎಂ ಎದ್ದು ಹೊರಗೆ ಹೋಗಿರುತ್ತಾರೆ ಎಂದು ಲೇವಡಿ ಮಾಡಿದರು.
ಈ ಟೀಕೆಗೆ ಉತ್ತರಿಸಿದ ಮೂಲಸೌಕರ್ಯ ಖಾತೆ ಸಚಿವ ಆನಂದ್ ಸಿಂಗ್, ವಿಜಯಪುರದ ಅವಶ್ಯಕತೆ ಹೇಳಿದ್ದೀರಿ. ಅವು ನ್ಯಾಯಬದ್ಧವಾಗಿವೆ. ಈ ಕೆಲಸ ಮಾಡುವುದು ಸರ್ಕಾರದ ಜವಾಬ್ದಾರಿ, ಬೆಣ್ಣೆ ರೀತಿಯ ತೀರ್ಮಾನ ಮಾಡುತ್ತೇವೆ, ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದರು.