

ಚೆನ್ನೈ: ಬೇರೆ ಬೇರೆ ದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ತರುವವರು ಹೊಸ ಹೊಸ ಮಾರ್ಗಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ. ಕೆಲವು ವೇಳೆ ಅವರ ಗ್ರಹಚಾರ ನೆಟ್ಟಗಿಲ್ಲದಿದ್ದರೆ ಸಿಕ್ಕಿಬೀಳುತ್ತಾರೆ.
ಅಂಥದ್ದೇ ಒಂದು ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಫೇಸ್ಕ್ರೀಮ್, ಉಗುರನ್ನು ಅಲಂಕಾರಗೊಳಿಸುವ ಕ್ಲಿಪ್ಪರ್‌ಗಳು ಮತ್ತು ಆಟಿಕೆ ಕಾರುಗಳಲ್ಲಿ ಚಿನ್ನವನ್ನು ಅಡಗಿಸಿಕೊಟ್ಟುಕೊಂಡು ವಿಮಾನ ಇಳಿದಿದ್ದ ಸೈಯದ್ ನದೀಮ್ ಉರ್ ರೆಹಮಾನ್ (33) ಎಂಬಾತನನ್ನು ಬಂಧಿಸಿರುವ ಏರ್ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 14.12 ಲಕ್ಷ ರೂ.ಗಳ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇಂಡಿಗೊ ಫ್ಲೈಟ್ನಲ್ಲಿ ಬಂದಿದ್ದ ಈತ ಗ್ರೀನ್ ಚಾನೆಲ್ ಮೂಲಕ ಈತ ಗಡಿಬಿಡಿಯಿಂದ ನಡೆದುಕೊಂಡು ಹೋಗುತ್ತಿದ್ದ. ಅನುಮಾನಗೊಂಡ ಪೊಲೀಸರು ಬಂಧಿಸಿ ತಪಾಸಣೆ ನಡೆಸಿದ್ದಾರೆ. ಈ ಸಮಯದಲ್ಲಿ ಚಿನ್ನದ ಅಕ್ರಮ ಸಾಗಾಣಿಕೆ ಪತ್ತೆಯಾಗಿದೆ.
ತಲೆನೋವಿನ ಐದು ಬಾಟಲಿಗಳಲ್ಲಿ, ಹಾಗೂ ಫೇಸ್ಕ್ರೀಮ್ ಮುಚ್ಚಳಗಳಲ್ಲಿ ಒಟ್ಟು 11 ಸುತ್ತಿನ ಚಿನ್ನದ ತುಂಡುಗಳನ್ನು ಅಡಗಿಸಿ ಇಡಲಾಗಿತ್ತು. ಮಾತ್ರವಲ್ಲದೇ ಮಿನಿ ಆಟಿಕೆ ಕಾರುಗಳಲ್ಲಿ ಮೂರು ಚಿನ್ನದ ತುಂಡುಗಳೂ ಪತ್ತೆಯಾಗಿವೆ. ಚಿನ್ನದಿಂದ ಮಾಡಿದ ನಾಲ್ಕು ಚಾಕು ಮತ್ತು ಬಾಟಲ್ ಓಪನರ್ ಮತ್ತು ಉಗುರು ಕ್ಲಿಪ್ಪರ್‌ಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇವೆಲ್ಲವುಗಳ ಮೌಲ್ಯ ಸುಮಾರು 14.12 ಲಕ್ಷ ರೂಪಾಯಿ ಆಗಿದೆ. 286 ಗ್ರಾಂ ತೂಕದ ಒಟ್ಟು 19 ಚಿನ್ನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.