ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ...

brahmaputra
Published on

ಬೀಜಿಂಗ್: ಭಾರತ, ಅಮೆರಿಕ ಮಾತ್ರವಲ್ಲದೇ ಇದಾಗಲೇ ಹಲವಾರು ದೇಶಗಳ ವೈರತ್ವ ಕಟ್ಟಿಕೊಂಡಿರುವ ಕರೊನಾ ತವರು ಚೀನಾ ಇದೀಗ ಮತ್ತೊಂದು ಕುತಂತ್ರ ಕೆಲಸ ಮಾಡಲು ಹೊರಟಿಸಿದೆ. ನೆರೆಯ ಭಾರತ ಮತ್ತು ಬಾಂಗ್ಲಾದೇಶಕ್ಕೆ ಅಪಾಯ ತಂದೊಡ್ಡಬಲ್ಲುದಾದಂಥ ಅಣೆಕಟ್ಟಿನ ನಿರ್ಮಾಣಕ್ಕೆ ಇದು ಮುಂದಾಗಿದೆ.

ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ. ಈ ಮೂಲಕ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಉದ್ದೇಶಿಸಿದೆ. ಈ ಕುರಿತು ಚೀನಾದ ವಿದ್ಯುತ್ ಯೋಜನೆ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಯಾನ್ ಜಿಯಾಂಗ್ ಮಾಹಿತಿ ನೀಡಿದ್ದಾರೆ.

ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ಮುಂದಿರಿಸಲಾಗಿದ್ದು, ಮುಂದಿನ ವರ್ಷ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ. 2021-2025ರ ದೀರ್ಘಾವಧಿ ಯೋಜನೆಯ ಭಾಗವಾಗಿ ಮತ್ತು ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯು 2035ರವರೆಗೆ ರೂಪಿಸಿರುವ ಗುರಿಗಳ ಅಡಿಯಲ್ಲಿ ಈ ಪ್ರಸ್ತಾವವನ್ನು ಸ್ಪಷ್ಟವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಯಾನ್ ಜಿಯಾಂಗ್ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಗೆ ಟಿಬೆಟಿಯನ್ನರು ಯಾರ್ಲಂಗ್​ ಝಾಂಗ್ಬೋ ನದಿ ಎಂದು ಕರೆಯುತ್ತಾರೆ. ಈ ನದಿಯ ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ತೀರ್ಮಾನಿಸಿದೆ. ಇದರಿಂದ ಚೀನಾದ ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ಅಣೆಕಟ್ಟು ನಿರ್ಮಾಣವಾದರೆ ಪಕ್ಕದ ಭಾರತ ಮತ್ತು ಬಾಂಗ್ಲಾದೇಶಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಚೀನಾ, ಎಲ್ಲಾ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸುತ್ತಿರುವುದಾಗಿ ಹೇಳಿದೆ.

ಏನೇ ಹೇಳಿದರೂ ಅದು ಚೀನಾ. ಕುತಂತ್ರ ಬುದ್ಧಿಗೆ ಹೆಸರುವಾಸಿಯಾಗಿದ್ದೇ. ಬೇರೆ ದೇಶಗಳಿಗೆ ಅದರಲ್ಲಿಯೂ ಭಾರತದ ವಿರುದ್ಧ ಸಂಚುರೂಪಿಸುತ್ತಿರುವ ಉದ್ದೇಶಪೂರ್ವಕವಾಗಿಯಾದರೂ ಹಾನಿಯುಂಟು ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net