

ಅಹಮಾದಾಬಾದ್: ನನಗೆ ಗೊತ್ತು, ವಿಷಯ ಬಹಿರಂಗವಾಗಿ ಹೇಳಿದರೆ ಭಯಾನಕ ಟೀಕೆ ಎದುರಿಸಬೇಕಾಗುತ್ತದೆ, ಎಲ್ಲರೂ ನನ್ನ ನೋಡುವ ದೃಷ್ಟಿಯೇ ಬದಲಾಗುತ್ತದೆ, ಕೆಲವರು ಅಸಹ್ಯವಾಗಿಯೂ ನೋಡಬಹುದು. ಆದರೂ ನಾನು ನಿಜ ಹೇಳುತ್ತಿದ್ದೇನೆ. ಒಂದಲ್ಲೊಂದು ದಿನ ಸಮಾಜದ ಮುಂದೆ ಇದು ಬರಲೇಬೇಕು, ಆದ್ದರಿಂದ ಯಾವುದೇ ಅಳುಕಿಲ್ಲದೇ ಹೇಳುತ್ತಿದ್ದೇನೆ...
ಹೀಗೆ ಹೇಳಿದವರು ಗುಜರಾತಿನ 26 ವರ್ಷದ ಗಾಯಕಿ ಅಮಿತಾ. ಈಕೆ ಹೀಗೆ ಹೇಳಲು ಕಾರಣ, ಇವಳೀಗ ಈಕೆಯಾಗಿ ಉಳಿದಿಲ್ಲ...ಬದಲಿಗೆ ಈತನಾಗಿದ್ದಾನೆ. ಅಮಿತಾಳಿಂದ ಆದಿತ್ಯನಾಗಿದ್ದಾನೆ!
ಹೌದು. ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ನಿವಾಸಿ ಅಮಿತಾ, ಪ್ರಸಿದ್ಧ ಗಾಯಕಿಯರ ಪಟ್ಟಿಯಲ್ಲಿ ಗುರುತಿಸಿಕೊಂಡಾಕೆ. ಇದೀಗ ಲಿಂಗ ಪರಿವರ್ತನೆಗೊಳಗಾಗಿದ್ದು, ಹುಡುಗನಾಗಿದ್ದಾಳೆ.
ಅಮಿತಾ ಕಾಲೇಜಿನ ದಿನಗಳವರೆಗೂ ಹುಡುಗಿಯಂತೆಯೇ ಇದ್ದಳು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಅಮಿತಾ ತಮ್ಮ ಹಾಡುಗಳಿಂದ ಸ್ಥಳೀಯವಾಗಿ ಗುರುತಿಸಿಕೊಂಡಿದ್ದಳು. ದೇಹವೂ ಹುಡುಗಿಯಂತೆಯೇ ಇತ್ತು. ಮನಸ್ಸು ಹುಡುಗಿಯಂತೆಯೇ ಯೋಚಿಸುತ್ತಿತ್ತು.
ಹಾವ-ಭಾವ, ಬಟ್ಟೆ ಧರಿಸುವಿಕೆ, ನಡವಳಿಕೆ ಹುಡುಗಿಯರಂತೆಯೇ ಇತ್ತು. ತಮ್ಮ ಭಜನೆ ಹಾಡುಗಳಿಂದ ಸ್ಥಳೀಯ ಮಟ್ಟದಲ್ಲಿ ಅಮಿತಾ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲಿ ತಮ್ಮಲ್ಲಾದ ಕೆಲ ಬದಲಾವಣೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನೀಡಿರುವ ಅಮಿತಾ, ಕಾಲೇಜು ಮುಗಿಯುತ್ತಿದ್ದಂತೆಯೇ ನನ್ನ ಮನಸ್ಸಿನಲ್ಲಿ ನಾನು ಹುಡುಗಿ ಅಲ್ಲ... ಹುಡುಗ ಎನ್ನಿಸತೊಡಗಿತು. ನನ್ನೊಳಗೊಬ್ಬ ಹುಡುಗ ಇರೋದು ನನ್ನ ಅರಿವಿಗೆ ಬಂತು ಎಂದಿದ್ದಾರೆ.
ಸಮಾಜದಲ್ಲಿ ಕೆಲವು ಟೀಕೆಗಳನ್ನು ಎದುರಿಸಬೇಕು ಎಂಬುವುದು ನನಗೆ ಗೊತ್ತು. ಸಮಾಜ ಸಹ ನಮ್ಮಂತಹವರನ್ನ ತಾರತಮ್ಯದಿಂದ ನೋಡುವುದನ್ನ ಬಿಡಬೇಕು. ನಮ್ಮನ್ನ ಎಲ್ಲರಂತೆ ಕಾಣಬೇಕಿದೆ. ಲಿಂಗ ಬದಲಾವಣೆಗೆ ಒಳಗಾಗುವರಿಗೆ ಪೋಷಕರು ಬೆಂಬಲ ಬೇಕು ಎನ್ನುತ್ತಾನೆ ಆದಿತ್ಯಾ.