ನಾಳೆ ಪ್ರಧಾನಿಯಿಂದ ಐತಿಹಾಸಿಕ ಕಾರ್ಯಕ್ರಮ; ಕರ್ನಾಟಕದ 13 ಸೇರಿ ದೇಶದ 508 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಶಿಲಾನ್ಯಾಸ

Narendra Modi
Published on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಐತಿಹಾಸಿಕ ಕಾರ್ಯಕ್ರಮವೊಂದರ ಮೂಲಕ ಗಮನ ಸೆಳೆಯಲಿದ್ದಾರೆ. ಅರ್ಥಾತ್, ಕರ್ನಾಟಕ 13 ಸೇರಿ ದೇಶದ ಒಟ್ಟು 508 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅವರು ಶಿಲಾನ್ಯಾಸ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಈ ಐತಿಹಾಸಿಕ ಶಿಲಾನ್ಯಾಸ ನಡೆಯಲಿದೆ.

ದೇಶಾದ್ಯಂತ ಸಾರಿಗೆ ವ್ಯವಸ್ಥೆಯ ಆಯ್ಕೆಯಲ್ಲಿ ಜನತೆ ರೈಲ್ವೆಗೆ ಪ್ರಧಾನ ಆದ್ಯತೆ ನೀಡುತ್ತಿದ್ದು, ಇದರ ಮಹತ್ವನ್ನು ಮನಗಂಡು ರೈಲ್ವೆ ನಿಲ್ದಾಣಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ದೃಷ್ಟಿಕೋನದಡಿ ಅಮೃತ ಭಾರತ್ ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ರಮದಡಿ 1309 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ನಾಳೆ 508 ನಿಲ್ದಾಣಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ನಿಲ್ದಾಣಗಳನ್ನು 24,470 ಕೋಟಿ ರೂಪಾಯಿ ಮೊತ್ತದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದೆ. ರೈಲ್ವೆ ನಿಲ್ದಾಣದ ಸುತ್ತಲೂ ಕೇಂದ್ರೀಕೃತವಾಗಿರುವ ನಗರದ ಒಟ್ಟಾರೆ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ಹೊಂದಿರುವ ಯೋಜನೆ ಇದಾಗಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ವಿನ್ಯಾಸದೊಂದಿಗೆ ಈ ನಿಲ್ದಾಣಗಳ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನಿಲ್ದಾಣಗಳು ಬರಲಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಮ್​ನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್​ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ 21 ಮತ್ತು ಜಾರ್ಖಂಡ್​ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರ್ಯಾಣ 15 ಮತ್ತು ಕರ್ನಾಟಕದಲ್ಲಿ 13 ಸೇರಿದಂತೆ ಒಟ್ಟು 508 ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net