

ನವದೆಹಲಿ: 'ಏಯ್.. ಎಲ್ಲಿಗೆ ಬಂತು ಎಐ(AI)?' ಎಂದು ಅಚ್ಚರಿಪಡುವಂತಾದರೂ ಆಶ್ಚರ್ಯವೇನಲ್ಲ. ಏಕೆಂದರೆ ಸದ್ಯದಲ್ಲೇ ಸೆಕ್ಸ್ ರೋಬೋಟ್ಗಳಲ್ಲೂ ಕೃತಕಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್- AI) ಬರಲಿದೆಯಂತೆ. ಅಂಥದ್ದೊಂದು ಸಾಧ್ಯತೆ ಕುರಿತು ಪರಿಣತರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಗೂಗಲ್ನ ಕ್ಲ್ಯಾಂಡೆಸ್ಟೈನ್ ರಿಸರ್ಸ್ ಆ್ಯಂಡ್ ಡೆವೆಲಪ್ಮೆಂಟ್ ವಿಭಾಗವಾದ ಎಕ್ಸ್ನ ಮಾಜಿ ಚೀಫ್ ಬಿಜಿನೆಸ್ ಆಫೀಸರ್ ಆಗಿರುವ ಮೊಹಮ್ಮದ್ ಮೊ ಗವ್ಡಟ್ ಎಂಬವರು ಇಂಥದ್ದೊಂದು ಸಾಧ್ಯತೆ ಕುರಿತು ಬೆಳಕು ಚೆಲ್ಲಿದ್ದಾರೆ.
ಕೃತಕ ಬುದ್ಧಿಮತ್ತೆ ಪ್ರೀತಿ ಮತ್ತು ಸಂಬಂಧಗಳಲ್ಲಿ ಮಹತ್ವದ ಬದಲಾವಣೆ ತರಲಿದ್ದು, ಜನರು ನೈಜ ಹಾಗೂ ಕೃತಕ ಅನುಭವಗಳ ನಡುವಿನ ವ್ಯತ್ಯಾಸ ಗುರುತಿಸಲಾಗದಂಥ ರೀತಿಯಲ್ಲಿ ಈ ಬದಲಾವಣೆಗಳು ಆಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಎಷ್ಟರಮಟ್ಟಿಗೆ ನೈಜ ಎನಿಸುವಂತೆ ಇರುತ್ತದೆ ಎಂದರೆ, ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಲೈಂಗಿಕ ರೋಬೋಟ್ಗಳು ಜೀವಂತ ಎಂಬಂತೆ ಕಾಣುತ್ತವೆ ಮತ್ತು ಮಲಗುವ ಕೋಣೆಯಲ್ಲಿ ಮಾನವಸಂಗಾತಿಯ ಅಗತ್ಯವನ್ನೇ ತೆಗೆದುಹಾಕುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ವರ್ಚುವಲ್ ರಿಯಾಲಿಟಿ ಮತ್ತು ಆ್ಯಪಲ್ ವಿಷನ್ ಪ್ರೊ ಅಥವಾ ಕ್ವೆಸ್ಟ್ 3 ಅಂತಹ ವರ್ಧಿತ ರಿಯಾಲಿಟಿ ಹೆಡ್ಸೆಟ್ಗಳನ್ನು ಬಳಸಿಕೊಂಡು ಮನುಷ್ಯರು ನೈಜ ಎನಿಸುವಂಥ ಲೈಂಗಿಕ ಅನುಭವ ಪಡೆಯುವುದು ಸಾಧ್ಯವಾಗಲಿದೆ. ಎಐ ಚಾಲಿತ ಬಾಟ್ ಹಾಗೂ ಸಂಯೋಜಿಸಲಾದ ಹೆಡ್ಸೆಟ್ಗಳು ಜನರು ಲೈಂಗಿಕ ರೋಬೋಟನ್ನೂ ಕೂಡ ನಿಜ ಎಂದು ಭಾವಿಸಿ ಮಾರು ಹೋಗುವಂತೆ ಮಾಡಬಲ್ಲವು ಎಂದು ಅವರು ಹೇಳಿದ್ದಾರೆ.
ಈ ತಾಂತ್ರಿಕ ಪ್ರಗತಿಯು ಕಂಪ್ಯೂಟರ್ ಬೆಂಬಲಿತ ವ್ಯವಸ್ಥೆಗಳನ್ನು ಮಾನವ ಮೆದುಳಿನೊಂದಿಗೆ ಇಂಟರ್ಫೇಸ್ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಮನುಷ್ಯ ಸಮಾನಮನಸ್ಕರೊಂದಿಗೇ ಸಂವಹನ ನಡೆಸುತ್ತಿರುವಂಥ ಭಾವನೆಗಳನ್ನು ಉಂಟು ಮಾಡಬಲ್ಲವು ಎಂದೂ ಹೇಳಿದ್ದಾರೆ. - ಏಜೆನ್ಸೀಸ್