More

    ಕಲಿಕೆಯ ಜತೆಗೆ ಇರಲಿ ಸಾಂಸ್ಕೃತಿಕ ಆಸಕ್ತಿ

    ದಾವಣಗೆರೆ : ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
     ನಮನ ಅಕಾಡೆಮಿ ಸಹಯೋಗದಲ್ಲಿ ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ವಿಶ್ವ ನೃತ್ಯ ದಿನದ ಅಂಗವಾಗಿ ಆಯೋಜಿಸಿದ್ದ, ‘ಭರತನಾಟ್ಯಂನ ನಟುವಾಂಗಂ ಮತ್ತು ದಶವಿಧ ಅಡುವುಗಳು’ ಕುರಿತ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರ‌್ಯಾಂಕ್ ಗಳಿಕೆಯ ಕಡೆಗೆ ಮಾತ್ರ ಗಮನ ಹರಿಸದೆ ಸಂಗೀತ, ನೃತ್ಯದಂಥ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು. ಮಾತುಗಾರಿಕೆ ಕಲಿಯಬೇಕು. ವಿದ್ಯಾರ್ಥಿಗಳು ತರಗತಿಯ ಹೊರಗೆ ಕಾಲೇಜು ಕಾರಿಡಾರ್‌ನಲ್ಲಿ, ಕ್ಯಾಂಪಸ್‌ನಲ್ಲಿ ಹೇಗಿರುತ್ತಾರೆ, ಪಠ್ಯಕ್ರಮದ ಆಚೆಗೆ ಮಕ್ಕಳು ಏನು ಕಲಿಯುತ್ತಾರೆ ಎಂಬುದೂ ಅಷ್ಟೇ ಮುಖ್ಯ. ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
     ಸಾಮಾಜಿಕ ಶಕ್ತಿಯಷ್ಟೆ ಸಾಂಸ್ಕೃತಿಕ ಶಕ್ತಿಯೂ ಅಷ್ಟೇ ಮುಖ್ಯ. ಸಾಂಸ್ಕೃತಿಕ ಹಿನ್ನೆಲೆ ಇದ್ದಾಗ ಜನರ ನಡೆ, ನುಡಿ, ಆಚಾರ, ವಿಚಾರ ಉತ್ತಮವಾಗಿರುತ್ತವೆ. ದೇಶದಲ್ಲಿ ಅದ್ಭುತ ಕಲಾವಿದರಿದ್ದಾರೆ. ಭರತನಾಟ್ಯ, ಕೂಚಿಪುಡಿ ಇನ್ನಿತರ ನೃತ್ಯ ಪ್ರಕಾರಗಳಲ್ಲಿ ನುರಿತವರಿದ್ದಾರೆ. ಸಾಂಸ್ಕೃತಿಕ ಶ್ರೀಮಂತಿಕೆಯಿದೆ ಎಂದು ತಿಳಿಸಿದರು. ವರ್ಷಗಳ ಹಿಂದೆ ಉಷಾ ದಾತಾರ್ ಎಂಬುವರು ದಾವಣಗೆರೆಯಲ್ಲಿ ನೀಡಿದ್ದ ಕಾರ್ಯಕ್ರಮವನ್ನು ನೆನಪಿಸಿಕೊಂಡರು.
     ಪತ್ರಕರ್ತ ಸಿದ್ದಯ್ಯ ಹಿರೇಮಠ ಮಾತನಾಡಿ, ಪಾಲಕರು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರಬೇಕು. ಅಧಿಕ ಅಂಕಗಳನ್ನು ಗಳಿಸಬೇಕು ಎಂದು ಒತ್ತಡ ಹೇರಬಾರದು ಎಂದರು.
     ಮಕ್ಕಳು ನೃತ್ಯ, ಸಾಹಿತ್ಯ, ಕ್ರೀಡೆಗಳ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಸು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದಾಗ ದುಶ್ಚಟಗಳು ಸುಳಿಯುವುದಿಲ್ಲ. ಆರೋಗ್ಯವೂ ಉತ್ತಮವಾಗಿರುತ್ತದೆ. ಮಕ್ಕಳಲ್ಲಿ ಕೀಳರಿಮೆ ಇರಬಾರದು, ಧೈರ್ಯ, ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
     ಜೆ.ಸಿ.ಐ.ನ ಅಂತಾರಾಷ್ಟ್ರೀಯ ತರಬೇತುದಾರರಾದ ಲತಿಕಾ ಶೆಟ್ಟಿ ಮಾತನಾಡಿ, ನಮ್ಮಲ್ಲಿ ಸಾಧಿಸಬೇಕೆಂಬ ಛಲ ಇರಬೇಕು. ಯಾವುದೇ ಸಾಧನೆಗೂ ಸಮಯ ಹಿಡಿಯುತ್ತದೆ, ಅದರ ಹಿಂದೆ ಪರಿಶ್ರಮ ಬೇಕಾಗುತ್ತದೆ. ಇದೆಲ್ಲ ಸಾಧ್ಯವಾಗಲು ಕುಟುಂಬದ ಸದಸ್ಯರ ಸಹಕಾರ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
     ನಮನ ಅಕಾಡೆಮಿಯ ಕಾರ್ಯದರ್ಶಿ ಡಿ.ಕೆ. ಮಾಧವಿ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಆರ್.ಆರ್. ಶಿವಕುಮಾರ್, ನಮನ ಅಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ, ಹಳೇ ವಿದ್ಯಾರ್ಥಿಗಳ ಸಂಘದ ಸಂಯೋಜಕಿ ಡಾ. ಕವಿತಾ ಇದ್ದರು. ರಕ್ಷಿತಾ ಸ್ವಾಗತಿಸಿದರು.
     ರಾಣೇಬೆನ್ನೂರಿನ ಪೂಜಾ ರುದ್ರೇಶ್ ಢಗೆ ಮತ್ತು ತಂಡ ಹಾಗೂ ನಮನ ಅಕಾಡೆಮಿ ವಿದ್ಯಾರ್ಥಿಗಳೀಮದ ನೃತ್ಯ ಪ್ರದರ್ಶನ ನಡೆಯಿತು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts