More

    ಬಸವಣ್ಣನ ತತ್ವ ಪಾಲಿಸಿದರೆ ಸಮ ಸಮಾಜ ನಿರ್ಮಾಣ

    ದಾವಣಗೆರೆ : ಮಾತು ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಜಗಜ್ಯೋತಿ ಬಸವೇಶ್ವರರ ತತ್ವ, ಮೌಲ್ಯಗಳನ್ನು ನಾವು ಅನುಸರಿಸಿದರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
     ದಾವಣಗೆರೆ ವಿಶ್ವವಿದ್ಯಾಲಯದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಘಟಕದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಬಸವೇಶ್ವರರ 893ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಬಸವಣ್ಣ ತಮ್ಮ ಶರಣ ಸಮೂಹದ ವಚನಗಳ ಮೂಲಕ ಸಾಮಾಜಿಕ ಓರೆಕೋರೆಗಳನ್ನು ತಿದ್ದಿದರು. ಅವರ ವಚನಗಳನ್ನು ಪಚನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
     ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ನಿಂಗಪ್ಪ ಮುದೇನೂರು ವಿಶೇಷ ಉಪನ್ಯಾಸ ನೀಡಿ, ಬಸವಣ್ಣ ಅವರು ಹೋರಾಟ, ಚಳವಳಿ ಮೂಲಕ ಸಾಮಾಜಿಕ ಸಮಾನತೆಗೆ ಶ್ರಮಿಸಿದರು. ತಮ್ಮ ಜತೆಗೆ ಅನೇಕ ತಳ ಸಮುದಾಯಗಳ ಅನಕ್ಷರಸ್ಥರನ್ನು ಸೇರಿಸಿಕೊಂಡು ಹೋರಾಟ ನಡೆಸಿದ್ದು ಸ್ತುತ್ಯರ್ಹ, ಅದಕ್ಕೆ ಅವರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಕರೆಯುತ್ತಾರೆ. ಎನಗಿಂತ ಕಿರಿಯರಿಲ್ಲ ಎಂಬ ದೊಡ್ಡ ಮಾತು ಕಲಿಸಿದ ಗುರು ಬಸವಣ್ಣ ಎಂದರು.
     ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ್ ಮಾತನಾಡಿ, ಮಹಿಳೆಯರ ಏಳಿಗೆಗೆ ಬಸವೇಶ್ವರರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
     ಇನ್ನೊಬ್ಬ ಕುಲಸಚಿವ ಪ್ರೊ. ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡರ ಇದ್ದರು. ಘಟಕದ ಸಂಚಾಲಕ ಡಾ. ಪಿ. ನಾಗಭೂಷಣ ಗೌಡ ಸ್ವಾಗತಿಸಿದರು. ಡಾ. ಭೀಮಾ ಶಂಕರ್ ಜೋಶಿ ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಇದ್ದರು. ಪರಿಸರ ವಿಜ್ಞಾನ ವಿಭಾಗದ ಸುಪ್ರೀತಾ ಮತ್ತು ಪ್ರಿಯಾಂಕಾ ವಚನ ಗಾಯನ ನಡೆಸಿಕೊಟ್ಟರು. ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಚನ ಚಳವಳಿ ಕುರಿತ ಚಿತ್ರಕಲಾ ಪ್ರದರ್ಶನ ನಡೆಸಿಕೊಟ್ಟರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts