ವಿಚ್ಛೇದನಕ್ಕೆ 11 ದಿನ ಇರುವಾಗ ಪತ್ನಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ: ಆಮೇಲೆ ಲಾಭ ಆಗಿದ್ಯಾರಿಗೆ?

mega millions
Published on

ನವದೆಹಲಿ: ವಿಚ್ಛೇದನ ಸಂದರ್ಭದಲ್ಲಿ ಹಣದ ವಿಚಾರದಲ್ಲಿ ಸೆಟಲ್​ಮೆಂಟ್ ಆಗುವುದು ಸಹಜ. ಪತಿ ಪತ್ನಿಗೆ ಜೀವನಾಂಶ ನೀಡಿ ದಾಂಪತ್ಯ ಸಂಬಂಧ ಕಡಿದುಕೊಳ್ಳಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಪತ್ನಿಯೇ ಪತಿಗೆ ಹಣ ಕೊಡಬೇಕಾಗಿ ಬಂದಿದೆ. ಅರ್ಥಾತ್​ ವಿಚ್ಛೇದನಕ್ಕೆ 11 ದಿನ ಇರುವಾಗ ಬಂದ ಬಂಪರ್ ಬಹುಮಾನ ಈಕೆ ಹಳೇ ಗಂಡಂಗೇ ಕೊಡಬೇಕಾಯ್ತು!

ಕ್ಯಾಲಿಪೋರ್ನಿಯಾದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಡೆನಿಸ್ ರೊಸ್ಸಿ ಎಂಬ ಈ ಮಹಿಳೆಗೆ 1.3 ಮಿಲಿಯನ್ ಡಾಲರ್ ಬಹುಮಾನ ಲಾಟರಿಯಲ್ಲಿ ಬಂದಿತ್ತು. ಆದರೆ ವಿಚ್ಛೇದನಕ್ಕೆ 11 ದಿನ ಇರುವಾಗ ಬಂದಿದ್ದ ಈ ಬಂಪರ್ ಬಹುಮಾನದ ವಿಷಯ ಗುಟ್ಟಾಗಿಟ್ಟಿದ್ದಳು. ಆದರೆ ಕೊನೆಗೆ ಪತಿಗೆ ಈ ವಿಷಯ ಗೊತ್ತಾಗಿದ್ದು, ಕೋರ್ಟ್ ಈಕೆ ಆ ಹಣವನ್ನು ಪತಿಗೆ ನೀಡಬೇಕು ಎಂದು ಆದೇಶಿಸಿದೆ.

ಡೆನಿಸ್ ರೊಸ್ಸಿ ಮತ್ತು ಥಾಮಸ್ ರೊಸ್ಸಿ 1996ರಲ್ಲಿ ವಿಚ್ಛೇದನ ಹೊಂದಿದ್ದರು. ಆದರೆ ಇತ್ತೀಚೆಗೆ ಲಾಟರಿ ಕಂಪನಿಯವರು ದೊಡ್ಡ ಮೊತ್ತದ ಪರಿವರ್ತನೆ ಕುರಿತು ವಿಜೇತರಿಗೆ ಕಳುಹಿಸಿದ್ದ ಪತ್ರ ಥಾಮಸ್ ವಿಳಾಸಕ್ಕೆ ಬಂದದ್ದರಿಂದ ಡೆನಿಸ್​ಗೆ ಬಂಪರ್ ಬಹುಮಾನ ಬಂದ ವಿಚಾರ ಆತನಿಗೆ ಗೊತ್ತಾಗಿತ್ತು.

ಈ ಹಿನ್ನೆಲೆಯಲ್ಲಿ ಥಾಮಸ್ ನ್ಯಾಯಾಲಯದ ಮೆಟ್ಟಿಲೇರಿದ್ದ. ವಿಚ್ಛೇದನ ಸಂದರ್ಭದಲ್ಲಿ ಆಸ್ತಿ ಮಾಹಿತಿ ಬಹಿರಂಗ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದ್ದ ಡೆನಿಸ್ ವಿರುದ್ಧ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅದರಲ್ಲೂ ಆಕೆ ಬಂಪರ್ ಬಹುಮಾನದ ಮಾಹಿತಿ ಬಹಿರಂಗಪಡಿಸದ್ದರಿಂದ ಅದು ಆಕೆಯದ್ದಲ್ಲ ಎಂದು ಕೋರ್ಟ್​ನಲ್ಲಿ ವಾದಿಸಲಾಗಿದೆ. ಅಲ್ಲದೆ 66,800 ಡಾಲರ್​ನಂತೆ ಅಷ್ಟೂ ಹಣವನ್ನು 20 ವಾರ್ಷಿಕ ಕಂತಿನಲ್ಲಿ ಥಾಮಸ್​​ಗೆ ಪಾವತಿಸುವಂತೆ ಡೆನಿಸ್​ಗೆ ಆದೇಶಿಸಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net