ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

Kerala Police
Published on

ಕೇರಳ: ಮಕ್ಕಳು ಮನೆ ಬಿಟ್ಟು ಹೋಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇಲ್ಲಿ ವಿವಾಹಿತನೇ ಮನೆ ಬಿಟ್ಟು ಹೋಗಿದ್ದಾನೆ. ಅದರಲ್ಲೂ ಆತ ಹೆಂಡತಿಗೆ ಹೆದರಿ ಮನೆ ಬಿಟ್ಟು ಹೋಗಿದ್ದ ಎಂಬುದು ಗಮನ ಸೆಳೆದಿದೆ. ಇಂಥದ್ದೊಂದು ಪ್ರಕರಣ ಕೇರಳದಲ್ಲಿ ನಡೆದಿದೆ.

ನೌಷಾದ್ ಎನ್ನುವ 34 ವರ್ಷದ ವ್ಯಕ್ತಿ 25 ವರ್ಷದ ಪತ್ನಿ ಅಫ್ಸಾನ ಎಂಬಾಕೆಗೆ ಹೆದರಿ ಮನೆ ಬಿಟ್ಟು ಹೋಗಿದ್ದು, ಒಂದೂವರೆ ವರ್ಷ ನಾಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನು ಬಂಧಿಸಿದ್ದ ಪೊಲೀಸರು, ಅದರ ಬೆನ್ನಿಗೇ ನೌಷಾದ್​ನನ್ನು ಕೂಡ ಪತ್ತೆ ಹಚ್ಚಿದ್ದಾರೆ.

ನೌಷಾದ್ ಕೇರಳದ ಪತನಂತಿಟ್ಟ ಜಿಲ್ಲೆಯಿಂದ 2021ರ ನವೆಂಬರ್​​ನಲ್ಲಿ ತನ್ನ ಬಾಡಿಗೆ ಮನೆಯಿಂದ ಕಾಣೆಯಾಗಿದ್ದ. ಮತ್ತೊಂದೆಡೆ ಪತ್ನಿ ಈ ಕುರಿತಂತೆ ಸುಳ್ಳು ಹೇಳಿ ಪೊಲೀಸರ ದಿಕ್ಕು ತಪ್ಪಿಸಿದ್ದಳು. ನೌಷಾದ್​​ನನ್ನು ಕೊಲೆ ಮಾಡಿ ಶವ ಹೂತು ಹಾಕಲಾಗಿದೆ ಎಂದು ಅಫ್ಸಾನ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶವ ತೋರಿಸುವಂತೆ ಹೇಳಿ ಕೆಲವು ಪ್ರದೇಶಗಳಿಗೆ ಕರೆದೊಯ್ದಿದ್ದರು.

ನೌಷಾದ್​ ತಂದೆ ನೀಡಿದ್ದ ನಾಪತ್ತೆ ದೂರಿನ ಮೇರೆಗೆ ಎರಡು ದಿನಗಳ ಹಿಂದೆ ಆಕೆಯನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನೌಷಾದ್​ನನ್ನು ಇತ್ತೀಚೆಗೊಮ್ಮೆ ನೋಡಿದ್ದೆ ಎಂಬುದಾಗಿ ಹೇಳಿದ್ದಳು. ಪತಿ ಸಾವಿನ ಕುರಿತಂತೆ ಆಕೆ ಸುಳ್ಳು ಹೇಳಿದ್ದಳು ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು, ತಪ್ಪು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಗುರುವಾರ ಬಂಧಿಸಿದ್ದರು. ಅದರ ಬೆನ್ನಿಗೇ ನೌಷಾದ್​​ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ತೊಡುಫ್ಜಾ ಬಳಿಯ ತೊಮ್ಮಂಕುತು ಎಂಬಲ್ಲಿ ಪೊಲೀಸರು ನೌಷಾದ್​ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನಾನು ಪತ್ನಿಗೆ ಹೆದರಿ ಮನೆ ಬಿಟ್ಟಿದ್ದೆ ಎಂದು ನೌಷಾದ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದ. ಅಲ್ಲದೆ ಹೆಂಡತಿ ಕರೆಸಿಕೊಳ್ಳುತ್ತಿದ್ದ ಕೆಲವು ವ್ಯಕ್ತಿಗಳು ನನಗೆ ಥಳಿಸುತ್ತಿದ್ದರು ಎಂದೂ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net