ಮದುವೆಯಾಗುವುದಾಗಿ ಸಂಪರ್ಕ ಬೆಳೆಸಿ ವಂಚಿಸಿದ ಉದ್ಯಮಿ?: ನಟಿಯಿಂದ ಪೊಲೀಸರಿಗೆ ದೂರು

Actress
Published on

ಮುಂಬೈ: ಅನೈತಿಕ ಸಂಪರ್ಕ, ಲೈಂಗಿಕ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಟಿಯೊಬ್ಬರು ಉದ್ಯಮಿಯೊಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಂಜಾನಿಯಾದ ಅನಿವಾಸಿ ಭಾರತೀಯ ಉದ್ಯಮಿ ವಿರೇನ್ ಪಟೇಲ್ (41) ಆರೋಪಿ. ಈತನ ವಿರುದ್ಧ ನಟಿ ಹಾಗೂ ನಿರೂಪಕಿಯೂ ಆಗಿರುವ 34 ವರ್ಷದ ಮಹಿಳೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವಾರ ಈ ದೂರು ನೀಡಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಮುಂಬೈನ ಅಂಧೇರಿ ಪ್ರದೇಶದಲ್ಲಿ 2022ರ ಅಕ್ಟೋಬರ್​ನಲ್ಲಿ ಫ್ರೆಂಡ್ ಬರ್ತ್​ಡೇ ಪಾರ್ಟಿಯಲ್ಲಿ ನಾನು ವಿರೇನ್​ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ದಿನ ನನ್ನ ಕಾಂಟ್ಯಾಕ್ಟ್​ ನಂಬರ್ ತೆಗೆದುಕೊಂಡಿದ್ದ ವಿರೇನ್​, ಬಳಿಕ ಮೆಸೇಜ್-ಕಾಲ್ ಮಾಡಲು ಆರಂಭಿಸಿದ್ದ. ನಂತರ ಸ್ನೇಹಿತರಾದ ನಾವು ಪರಸ್ಪರ ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದೆವು, ಒಬ್ಬರಿಗೊಬ್ಬರು ನೆರವಾಗುತ್ತಿದ್ದೆವು. ಇದರಿಂದ ನಮ್ಮ ನಡುವಿನ ಬಂಧ ಗಾಢವಾಯಿತು ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.

ಆತ 2023ರ ಫೆ. 14ರಂದು ನನ್ನನ್ನು ಫ್ಲ್ಯಾಟ್​ಗೆ ಕರೆಸಿಕೊಂಡು ತನ್ನ ಜತೆಗಿರುವಂತೆ ಹೇಳಿದ್ದಲ್ಲದೆ ಮದುವೆ ಆಗುವುದಾಗಿ ಪ್ರಪೋಸ್ ಮಾಡಿದ. ನಾವಿಬ್ಬರೂ ಸಿಂಗಲ್ ಆಗಿದ್ದರಿಂದ ಹಾಗೂ ಇಬ್ಬರೂ ಗುಜರಾತಿ ಸಮುದಾಯದವರೇ ಆಗಿರುವುದರಿಂದ ನಾನು ಒಪ್ಪಿದ್ದು, ನನ್ನ ಮನೆಯವರಿಗೂ ವಿಷಯ ತಿಳಿಸಿದ್ದೆ ಎಂದೂ ನಟಿ ವಿವರಿಸಿದ್ದಾರೆ.

ನಂತರ ಇದೇ ಮಾರ್ಚ್ 28ರಂದು ಪಾನಮತ್ತನಾಗಿ ಮನೆಗೆ ಬಂದಿದ್ದ ವಿರೇನ್ ಕೊಠಡಿಗೆ ಹೋಗಿ ಮಲಗಿದ್ದ. ಸ್ವಲ್ಪ ಹೊತ್ತಿನ ಬಳಿಕ ನನ್ನ ಬೆಡ್​ರೂಮ್​ಗೆ ಬಂದ ವಿರೇನ್, ನನ್ನನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನನ್ನ ಬೆಡ್​ನಲ್ಲೇ ಮಲಗಿದ. ನಂತರ ಎಚ್ಚರಗೊಂಡ ಆತ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ. ರಾತ್ರಿ ಆಗಿದ್ದರ ಕುರಿತು ನಾನು ಬೆಳಗ್ಗೆ ಅಳುತ್ತಿದ್ದಾಗ, ಡಿಸೆಂಬರ್​ನಲ್ಲಿ ನಾವು ಮದುವೆ ಆಗಲಿದ್ದೇವಲ್ಲ ಎಂದು ಹೇಳಿ ಸಂತೈಸಿದ್ದ ಎಂದೂ ನಟಿ ವಿವರಿಸಿದ್ದಾರೆ.

ಏಪ್ರಿಲ್ 11ರಂದು ನನ್ನನ್ನು ಅಲಿಬಾಗ್​ನಲ್ಲಿರುವ ಆತನ ಗೆಳೆಯನ ಫಾರ್ಮ್​ಹೌಸ್​ಗೆ ಕರೆದೊಯ್ದಿದ್ದ ವಿರೇನ್​, ಅಲ್ಲಿ ಕೂಡ ನನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಮುಂದಾದ. ನಾನು ನಿರಾಕರಿಸಿದ್ದಕ್ಕೆ, ನನಗೆ ಹೊಡೆದು ಹಿಂಸಿಸಿದ. ಇದೇ ರೀತಿ ಆತ ನನ್ನೊಂದಿಗೆ ಹಲವು ಬಾರಿ ನಡೆದುಕೊಂಡಿದ್ದ ಎಂದು ನಟಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮುಂಬೈನ ಎನ್​ಎಂ ಜೋಶಿಮಾರ್ಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net