

ನವದೆಹಲಿ: ಸರ್ಕಾರಿ ವ್ಯವಸ್ಥೆಯ ದುರವಸ್ಥೆ ಹಾಗೂ ಬಡತನದ ಕಾರಣದಿಂದಾಗಿ ವ್ಯಕ್ತಿಯೊಬ್ಬ ತನ್ನ ಮಗಳ ಶವವನ್ನು ಮಂಚದ ಮೇಲೆ ಇರಿಸಿ ಹೊತ್ತುಕೊಂಡು ಮರಣೋತ್ತರ ಪರೀಕ್ಷೆಗಾಗಿ 35 ಕಿಲೋಮೀಟರ್ ದೂರ ನಡೆದೇ ಸಾಗಿದ ದಯನೀಯ ಪ್ರಸಂಗವೊಂದು ನಡೆದಿದೆ.
ಈ ವ್ಯಕ್ತಿಯ 16 ವರ್ಷದ ಮಗಳು ಮೇ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂದರ್ಭದಲ್ಲಿ ಮನೆಗೆ ಬಂದಿದ್ದ ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಕೆಯ ಶವವನ್ನು ತರುವಂತೆ ಕುಟುಂಬಸ್ಥರಿಗೆ ಆದೇಶಿಸಿದ್ದರು. ವಾಹನ ಮಾಡಿಕೊಂಡು ಹೋಗುವಷ್ಟು ಆರ್ಥಿಕ ಚೈತನ್ಯವಿರದ ಈ ಕುಟುಂಬಕ್ಕೆ ಬೇರೆ ಯಾರೂ ವಾಹನದ ವ್ಯವಸ್ಥೆ ಮಾಡಿಕೊಡಲೂ ಇಲ್ಲ. ಕೊನೆಗೆ ಬೇರೆ ದಾರಿ ಕಾಣದ ತಂದೆ ಗ್ರಾಮದ ಕೆಲವರ ಸಹಾಯದಿಂದ ಮಗಳ ಶವವನ್ನು ಮಂಚದ ಮೇಲೆ ಇರಿಸಿ ಹೊತ್ತುಕೊಂಡೇ 35 ಕಿ.ಮೀ. ದೂರದಲ್ಲಿರುವ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.
ಹೀಗೆ ಸಂಕಷ್ಟವನ್ನು ಎದುರಿಸಿದ ಆ ತಂದೆಯ ಹೆಸರು ಧೀರಾಪತಿ ಸಿಂಗ್ ಗೊಂಡ್. ಮಧ್ಯಪ್ರದೇಶದ ಗಡಾಯಿ ಎಂಬ ಗ್ರಾಮದ ಇವರು ಮಗಳ ಶವ ಹೊತ್ತುಕೊಂಡು ಸಿಂಗ್ರಾಲಿ ಆಸ್ಪತ್ರೆಗೆ ತೆರಳಿದ್ದಾರೆ. ನಾವು ಬೆಳಗ್ಗೆ 9 ಗಂಟೆಗೆ ಹೊರಟು ಸಂಜೆ 4ಕ್ಕೆ ಆಸ್ಪತ್ರೆಗೆ ತಲುಪಿದ್ದೇವೆ. ಅಷ್ಟು ದೂರ ಮಂಚವನ್ನು ಹೊತ್ತುಕೊಂಡು ಬಂದ ನಮಗೇ ಈಗ ಅಸೌಖ್ಯ ಅನಿಸುತ್ತಿದೆ. ಅಷ್ಟು ಸಮಸ್ಯೆಯಾದರೂ ನಮಗೆ ಯಾರೂ ಪರಿಹಾರ ಸೂಚಿಸಲಿಲ್ಲ ಎಂದು ಗೊಂಡ್ ಹೇಳಿದ್ದಾರೆ.
ಈ ವ್ಯಕ್ತಿಯ ಮನೆಯಿಂದ ಒಂದು ಕಿ.ಮೀ. ದೂರದಲ್ಲಿ ರಸ್ತೆ ವ್ಯವಸ್ಥೆ ಇದ್ದು, ಯಾರಾದರೂ ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದರೆ ಈ ಸಮಸ್ಯೆ ಬಂದಿರುತ್ತಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಅರುಣ್ ಸಿಂಗ್, ಶವಗಳ ಸಾಗಣಿಕೆಗಾಗಿ ಇಲಾಖೆಗೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಶವ ಸಾಗಿಸಲು ವಾಹನದ ವ್ಯವಸ್ಥೆ ಮಾಡಲು ಆಗಿಲ್ಲ ಎಂದು ಹೇಳಿದ್ದಾರೆ.