

ಧಾರವಾಡ: ಇಂದು ವಿಶ್ವದೆಲ್ಲೆಡೆ ಅಮ್ಮಂದಿರ ದಿನ. ಆದರೆ ಎರಡು ದಿನಗಳ ಹಿಂದೆಯಷ್ಟೇ ಕರೊನಾದಿಂದಾಗಿ ತಾಯಿಯನ್ನು ಕಳೆದುಕೊಂಡಿದ್ದ ಈ ಸಹೋದರರು ಅಮ್ಮಂದಿರ ದಿನವಾದ ಇಂದು ಏಕಕಾಲಕ್ಕೆ ನಿಧನರಾದರು. ಹೀಗಾಗಿ ಮೂರೇ ದಿನಗಳಲ್ಲಿ ಈ ಕುಟುಂಬದಲ್ಲಿ ಮೂವರು ಕೋವಿಡ್-19 ಸೋಂಕಿಗೆ ಬಲಿಯಾದಂತಾಗಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಕುಟುಂಬವೊಂದು ಇಂಥದ್ದೊಂದು ದುರಂತವನ್ನು ಕಂಡಿದೆ. ಹಾರೋಬೆಳವಡಿಯ ಕಡ್ಲಿ ಕುಟುಂಬದ ತಾಯಿಯೊಬ್ಬರ ಜತೆಗೆ ಇಬ್ಬರು ಮಕ್ಕಳನ್ನೂ ಕರೊನಾ ಬಲಿ ಪಡೆದಿದೆ. ಸಹೋದರರಿಬ್ಬರೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಾಂತಮ್ಮ ಕಡ್ಲಿ (75) ಅವರು ಎರಡು ದಿನಗಳ ಹಿಂದೆ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದರು. ಶಾಂತಮ್ಮ ಅವರ ಪುತ್ರರಾದ ಕಲ್ಲಪ್ಪ ಕಡ್ಲಿ (49), ನಾಗನಗೌಡ ಕಡ್ಲಿ (42) ಅವರು ಇಂದು ಬೆಳಗ್ಗೆ ಒಂದೇ ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ. ಶಾಂತಮ್ಮ ಅವರು ನಿಧನರಾದ ಬಳಿಕ ಮಕ್ಕಳಿಬ್ಬರಲ್ಲಿ ಕೋವಿಡ್-19 ಸೋಂಕು ಇರುವ ಕುರಿತು ವರದಿ ಬಂದಿತ್ತು.